ವಿನತೆ ಶರ್ಮ
ಅದೇನೋ ಹೊಸತನ, ಮರಗಟ್ಟಿದ ಕ್ಷಣ
ಹೆಪ್ಪುಗಟ್ಟಲಿಲ್ಲವೇಕೆ? ಮತ್ತೆ ಕುವರಿಯಾದಂತೆ
ಮೌನ ಮುಗುಳ್ನಕ್ಕಿತು, ಕನಸು ಕೆನೆಕಟ್ಟಿದೆ
ಆಸೆಗೆ ಹಕ್ಕಿ ರೆಕ್ಕೆಯ ರಂಗೇರಿದೆ
ಅವನಲ್ಲ ನೀನು, ನೀನಾಗಿದ್ದರೂ ಸರಿ
ಒಂದಿಷ್ಟು ಉಪೇಕ್ಷೆ, ಬೇರೆಯವನೆಂಬ ಅರಿವು
ಇದ್ದರೂ ನಾ ನಿನ್ನದನ್ನ ಬೇಡುವ ಅಪೇಕ್ಷೆ
ಒಡೆತನದ ಹಂಗಿಲ್ಲ ಹಕ್ಕಿ ಹಾಡಿಗೆ
ವಿನಿಮಯದ ಮಾಯಾವಿ ತಪಸ್ವಿ ಹಾಡುವನೇ?
ಹಾಡಲಾರದ ಗಂಡು ಹಕ್ಕಿಗಿಲ್ಲ ಆಹ್ವಾನದ
ಹಕ್ಕು, ಒಡೆತನ. ಅವಳ ರಾಗ ಪಲ್ಲವಿ
ಕೇಳುಗನಿಗೆ ಕಾಯುವಿಕೆಯ ವಿಹ್ವಲ

ಅವನಲ್ಲವೆಂದರಿತರೂ ಬೇಕಿಲ್ಲದ
ಪ್ರಶ್ನೆಯ ತೊಡರು, ಚಿಗುರ ಸಾಲ,
ಕನಸಿಲ್ಲ ಎನಗೆ, ಕಲ್ಲಾಗುವೆನೆಂಬ
ಭಯವಿಲ್ಲ, ನನ್ನೊಳ ನಾ ಬೇರಿಟ್ಟ ಆಲ
ಮುಂದೊಂದು ದಿನ ಬಂದು ಒದೆಯುವವನಿಗೆ
ಕೂಡ ನನ್ನಷ್ಟೇ ಧರ್ಮವ್ಯಾಕುಲ, ಇಂದು
ಮೈಮನಸು ಕಾಪಿಟ್ಟ ಅಂತರಂಗ
ಇಂದಷ್ಟೇ ಚಿರ, ಕತೆಯಾಗುವ ದಿನ ಮುಂದು
ಮೋಡ ಕಪ್ಪಿಟ್ಟು ಹನಿ ಬೀಳುವ ವರವಾಗು
ಬರಡಲ್ಲದ ನನ್ನೀ ಒಡಲ ತಲ್ಲಣಕೆ
ಮಳೆಬಿದ್ದ ಮಣ್ಣ ವಾಸನೆಯ ಬಿಡುಗಡೆಯಾಗು
ನೆಲ ಬಿರುಕಾಗುವ ಮುನ್ನ ಧಗೆಯಾಗು
ಒಮ್ಮೆ ಬಾ ಅಷ್ಟೇ ಸಾಕು ನನ್ನ ಬಿಳಿಲುಗಳ ತೂಕು
ಸುಖದ ಬಾಗಿಲು ತೆರೆಯಲಿ, ಸಾವಿರ ಬಿಸಿಬುಗ್ಗೆ
ಹರಿಯಲಿ, ನನ್ನರಿವು ನೊರೆ ಮದಿರೆ
ಚೆಲ್ಲಲಿ, ಧಗೆಯ ತಂಪಾಗಲಿ ಒಮ್ಮೆ ಬಾ
ನೀ ಬಂದೆ ಒಡೆಯನಾಗಲಲ್ಲ ಬಯಕೆಯ
ಹಾಡ ಆಹ್ವಾನವ ಮನ್ನಿಸಿ ಲಾವಣ್ಯದ
ನದಿ ಸಾಗರವ ಸೇರುವ ಕ್ಷಣವನ್ನು ಅಳಿಸಿ
ಭುವಿಗರ್ಭದ ಕರೆಗೆ ಜೊತೆಯಾಗು ಬಾ
ಪ್ರೇಮಪ್ರೀತಿಯ ಹೂಹಾರ ಬಿಟ್ಟುಬಿಡು
ಶಾಪವಿಮೋಚನೆಗಳ ತಾತ್ಪರ್ಯವಿರದ
ಅಳಿಸಿಹೋಗದ ಚಿರನೆನಪಾಗಿ, ನನ್ನ
ಹಸ್ತದ ಗೆರೆಯಾಗಿ ಇದ್ದುಬಿಡು ಬಾ
ಜಗದ ನಿಯಮವದ ನೆನಪಿಸುವಂತೆ
ನನ್ನವನಾಗಿ ಉಳಿಯದೆ ದೀಪ ಕರಗುವಂತೆ
ನನ್ನೊಳ ಆಳದಲಿ ಲೀನವಾಗುವಂತೆ
ಹಾರಾಡುವ ಬಿಳಿಲುಗಳ ತಡಿಕೆಯಾಗದೆ ಬಾ






0 Comments