ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’..ಒಬ್ಬನೇ ಹಾಡಿಕೊಳ್ಳುವೆ, ಬಡವನಾದರೆ ಏನು ಪ್ರಿಯೆ, ಕೈತುತ್ತು ತಿನಿಸುವೆ..’

ಕವಿ ಸತ್ಯಾನಂದ ಪಾತ್ರೋಟ ಅವರ ಕವಿತೆಗಳಿಗೆ ಮಾರು ಹೋಗಿ ಸಹಕವಿ ಬರೆದ ಮೆಚ್ಚುಗೆಯ ಕವಿತೆಯೊಂದು ಇಲ್ಲಿದೆ

ಪ್ರವೀಣಕುಮಾರ ದೈವಜ್ಞಾಚಾರ್ಯ

ಬಿಸಿಲ ಕವಿಯ ಹಾಡು – ಪಾಡು

 

ಅದೊಂದು ಸುಂದರ ತೋಟ

ಸತ್ಯಾನಂದ ಪಾತ್ರೋಟ
 
ಇಲ್ಲಿ ಜಾಜಿಮಲ್ಲೆ, ಸೇವಂತಿಗೆ
ಬಗೆಬಗೆಯ ಹೂಗಳು ಸದಾ ನಗುತ್ತವೆ
ಅರಳುತ್ತವೆ, ಮಳೆ ಇದ್ದರೂ
ಇರದಿದ್ದರೂ-
ಮನುಷ್ಯ ಪ್ರೀತಿಯ ಅಂತಃಕರಣದಲ್ಲಿ

ಬಿಸಿಲ ಝಳ ಕಾದ ನೆಲ
ಒಲೆಯ ಮೇಲೆ
ಯಾರೋ ಮಗುಚಿ ಹಾಕಿದಂತಿದೆ
ಸುಡುವ ರೊಟ್ಟಿಯನು
ತಳಕ್ಕಂಟಿದ ಕಪ್ಪು ಹಾಗೇ
ಕಾಣುತ್ತಿದೆ ಮೇಲೆ ಮೇಲೆ..
 
ಹರೆಯದ ಮೋಡಕ್ಕೆ ಬುಧ್ಧ ತಿಳಿದಿಲ್ಲ
ಕಿಂಚಿತ್ತೂ ಕರುಣೆಯಿಲ್ಲ ಅದಕೆ
ಎದುರಿಗಿದ್ದರೂ ನೆಲ, ಕಾಣುವದೇ ಇಲ್ಲ
ಉಳ್ಳವರ ಮನೆಯ ಮುಂದೆ ಸುರಿದು
ಚಿತ್ತಾರ ಬರೆದ ಮಳೆಯ ಹನಿಗಳು
ನನ್ನನ್ನು ಮತ್ತಷ್ಟೂ ಬಡವನನ್ನಾಗಿಸಿವೆ..
 
ಹಸಿದ ಹೊಟ್ಟೆಯಲಿ ಒಬ್ಬನೇ ಹಾಡಿಕೊಳ್ಳುವೆ-
‘ಬಡವನಾದರೆ ಏನು ಪ್ರಿಯೆ, ಕೈತುತ್ತು ತಿನಿಸುವೆ..’
 
ಈ ನಿರ್ದಯಿ ರಾತ್ರಿಗೆ
ನನ್ನ ಹಾಡು ಬೇಕು; ನಾನು ಬೇಡ
ಕನಸು ಬೇಕು, ಕಣ್ಣು ಬೇಡ
ಹರಕು ಚಪ್ಪರದಲಿ ದಿಗ್ಗನೆದ್ದು
ಕತ್ತಲೊಡೆಯನ ಕೇಳುತ್ತೇನೆ
ನನ್ನ ನೆಲ ಹಸಿರಾಗುವದು ಎಂದು?
 
ಮೂಕನಂತೆ ಮೋಡಗಟ್ಟುವ ಮೋಡ
ಹೇಳಲಾಗದೆ ಉಳಿಸಿಕೊಂಡ
ಅಸಂಖ್ಯ ನೋವುಗಳಂತೆ
ಘನೀಕರಿಸಿಕೊಂಡಿದ್ದೇನೆ ನನ್ನನ್ನು
ಮಾತು ಹುಟ್ಟಿ ಕವಿತೆ ಸುರಿವ ಪ್ರತಿದಿನ
ವೂ ನಾನು ವರ್ಗಾವಣೆಗೊಳ್ಳುತ್ತೇನೆ
ನಿಮ್ಮ ಒಳಗೆ ಮತ್ತು ಇಳೆಗೆ
 
ಈ ಜಗದ ಎಲ್ಲ ಸೋಂಕುಗಳಿಂದಲೂ
ದೂರ ಉಳಿದೆ,
ದೂರ ಉಳಿಯುತ್ತಲೇ ಹೋದೆ.
ಎಷ್ಟೆಂದರೆ,
ಯಾರಿಗೂ ಬೇಡದ ಬೇಸರ
ಒಂಟಿತನಗಳೇ ಒಮ್ಮೆ ಎದುರಾಗಿ
ಹೇಳಿದವು:
‘ನೀನು ನಮಗಿಂತಲೂ ದೊಡ್ಡವ
ಅಲ್ಲಮ, ಬುಧ್ಧ, ಬಸವ..!’
 

‍ಲೇಖಕರು avadhi

21 August, 2013

6 Comments

  1. ಹನುಮಂತ ಹಾಲಿಗೇರಿ

    ನಮ್ಮೂರ ಸೀಮೆಯ ಕವಿಯನ್ನು ಮತ್ತಷ್ಟು ಅರ್ಥ ಮಾಡಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.

    • praveenkumar daivajnacharya

      ಧನ್ಯವಾದಗಳು ಸರ್ ತಮಗೂ.

    • praveenkumar daivajnacharya

      Thank you Guru..

  2. Anonymous

    ಬಾಗಲಕೋಟೆಯ ಕಾಳಿದಾಸ ವಿದ್ಯಾಲಯಕ್ಕೆ ಹೋಗಿ ಮುಖತಃ ಬೇಟಿಯಾಗಿ ಬಂದಿದ್ದೆ. ಅವರ ಕವಿತೆಗಳಲ್ಲಿ ನಿಜದನಿ ಅಡಗಿದೆ. ಅವರ ಅಂತರಂಗದ ತುಡಿತ ನೋವಿನ ತರಂಗಗಳು.. ಅವರ ಸಾಹಿತ್ಯ ಪ್ರೇಮಿ ನಾನು. ಅವರ ಬಗ್ಗೆ ನೀವು ಬರೆದ ಕವಿತೆ ತುಂಬಾ ಚೆನ್ನಾಗಿದೆ. ನಿಮಗೆ ಮತ್ತು ಜಾಜಿ ಕವಿಗೆ ನಮ್ಮ ಧನ್ಯವಾದಗಳು.
    -ಹುಡೇಂ ಕೃಷ್ಣಮೂರ್ತಿ, ವರದಿಗಾರರು, ವಿಜಯವಾಣಿ,ಕೂಡ್ಲಿಗಿ, ಬಳ್ಳಾರಿ ಜಿಲ್ಲೆ.

    • praveenkumar daivajnacharya

      ನಾನೂ ಸಹ ಕಾಳಿದಾಸ ವಿದ್ಯಾಲಯಕ್ಕೆ ಹೋಗಿ ಪಾತ್ರೋಟರನ್ನೆ ‘ಪಾತ್ರೋಟ ಸರ್ ಎಲ್ಲಿದಾರೆ?’ ಅಂತ ಕೇಳಿದ್ದೆ. ಒಳಗೆ ಕರೆದೊಯ್ದು ನಾನೇ ಎಂದರು. ಪಕ್ಕದ ಚಾಲುಕ್ಯ ಹೋಟೆಲ್ನಲ್ಲಿ ಚಹಾ ಸೇವನೆಯೂ ಆಯಿತು. ಅವರ ಸರಳತನಕ್ಕೆ ನಾನು ಮಾರು ಹೋದೆ.ಈ ಜಗದ ಸೋಜಿಗದ ಕವಿ ಅವರು.ಅನೇಕ ಕಾರಣಗಳಿಗೆ ನನಗೆ ಅವರು ತುಂಬಾ ಇಷ್ಟ. ಧನ್ಯವಾದಗಳು ಕೃಷ್ಣಮೂರ್ತಿ ಅವರೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading