’ಒಡನಾಡಿಯ ಒಡಲಾಳ’ – ಜಿ ರಾಜಶೇಖರ್ ಬರೀತಾರೆ

ಸಿಜಿಕೆ ಅವರ ಆತ್ಮಚರಿತ್ರೆ ’ಕತ್ತಾಲೆ ಬೆಳದಿಂಗಳೊಳಗ’ ಓದಿ ಜಿ ರಾಜಶೇಖರ್ ಬರೆದದ್ದು ಹೀಗೆ…


ಪ್ರಿಯ ಸಿ.ಜಿ.ಕೆ.
ನಿಮ್ಮ ಆತ್ಮಚರಿತ್ರೆ ಓದಿ ಈ ಪತ್ರ ಬರೆಯುತ್ತಿದ್ದೇನೆ. ಕನಸುಗಳು ಹಳವಂಡವಾಗುವುದು ಮತ್ತು ಅದರ ಬಗ್ಗೆ ಬರೆಯುವುದು, ಎರಡೂ ನೋವಿನ ಅನುಭವಗಳು. ನಿಮ್ಮ ಯೌವ್ವನದ ದಿನಗಳಲ್ಲಿ ಕೆಲಕಾಲ ನಿಮ್ಮ ಜೊತೆ ಓಡಾಡಿದ್ದರಿಂದ, ನಿಮ್ಮ ಅನುಭವಗಳಲ್ಲಿ ನಾನೂ ಪಾಲುದಾರನಾಗಿದ್ದೇನೆ. ಈ ಕೃತಿಯ ಬಗ್ಗೆ ನನ್ನದೊಂದು ತಕರಾರನ್ನು ಮೊದಲಿಗೇ ಹೇಳಿಬಿಡುತ್ತೇನೆ. ನಿಮ್ಮ ಆತ್ಮಚರಿತ್ರೆಯಲ್ಲಿ ಅನೇಕ ಕಡೆ ಆತ್ಮವಿಮರ್ಶೆಗಿಂತ ಆತ್ಮ ಮರುಕವೇ ಹೆಚ್ಚಾಗಿದೆ..ನಾನು ನಿಮ್ಮ ವೈಯಕ್ತಿಕ ಬದುಕಿನ ದುಃಖ ದುಮ್ಮಾನಗಳ ಬಗ್ಗೆ ಹೇಳುತ್ತಿಲ್ಲ. ವಾಸ್ತವವಾಗಿ ನಿಮ್ಮ ಬರವಣಿಗೆಯ ಆ ಭಾಗಗಳು ವಸ್ತುನಿಷ್ಠವಾಗಿಯೇ ಇವೆ. ಜೊತೆಗೆ ನಿಮ್ಮನ್ನು ನೀವು ವ್ಯಂಗ್ಯ, ಹಾಸ್ಯಗಳ್ಲ್ಲಿಯೂ ಅನೇಕ ಕಡೆ ಚಿತ್ರಿಸಿಕೊಂಡಿದ್ದೀರಿ. ಆದರೆ, ನೀವು ಮತ್ತು ನಮ್ಮ ವಯಸ್ಸಿನ ಅನೇಕರು ಪಾಲುಗೊಂಡಿದ್ದ ಸಮುದಾಯ, ಬಂಡಾಯ ಚಳವಳಿಗಳ ಬಗ್ಗೆ ನಿಮ್ಮ ಬರವಣಿಗೆ ಹೆಚ್ಚು ವಿಮರ್ಶಾತ್ಮಕವಾಗಿ ಇರಬೇಕಾಗಿತ್ತು. ನಮಗಾದ ಭ್ರಮನಿರಸನ ನಿಜಕ್ಕೂ ಅಷ್ಟು ದೊಡ್ಡ ಸಂಗತಿಯಾಗಬೇಕಾದ್ದಿಲ್ಲ. ಭ್ರಮೆಗಳನ್ನು ಇಟ್ಟುಕೊಳ್ಳಲು ನಮಗೆ ಯಾರೂ ಹೇಳಲಿಲ್ಲ: ಅಥವಾ ಕನ್ನಡ ಸಂಸ್ಕೃತಿಯ ದಿಕ್ಕುದೆಸೆಗಳನ್ನು ಬದಲಿಸುವ ಗುತ್ತಿಗೆಯನ್ನು ನಮಗೆ ಯಾರೂ ಕೊಟ್ಟಿರಲಿಲ್ಲ. ಈ ಜವಾಬ್ದಾರಿಯನ್ನು ನಮಗೆ ನಾವೇ ಆರೋಪಿಸಿಕೊಂಡಿದ್ದೆವು. ನಾವು ಬದಲಿಸಲು ಹೊರಟ ಕನ್ನಡ ಸಂಸ್ಕೃತಿ ನಮ್ಮೆಲ್ಲರಿಗಿಂತ ದೊಡ್ಡದು ಎಂಬ ವಿನಯ ನಮ್ಮಲ್ಲಿ ಯಾರಿಗೂ ಇರಲಿಲ್ಲ. ಕನ್ನಡದ ಜನಪದ, ನಮ್ಮ ಕಾಳಜಿ ಇಲ್ಲದೆಯೇ ಸಾವಿರಾರು ವರ್ಷಗಳಿಂದ ಬಾಳುವೆ ಮಾಡಿಕೊಂಡು ಬಂದಿದೆ. ಸಮುದಾಯ, ಬಂಡಾಯ ಚಳವಳಿಗಳನ್ನು ವರ್ಣಿಸುವ ನಿಮ್ಮ ಬರವಣಿಗೆಯ ರಾಜಕೀಯ ವಿಶ್ಲೇಷಣೆ ಹೆಚ್ಚು ನಿಷ್ಠುರವಾಗಿ ಇರಬೇಕಾಗಿತ್ತು.
ಆದರೆ ಸಮುದಾಯದ ಜಾಥಾ ಮತ್ತಿತರ ಚಟುವಟಿಕೆಗಳಲ್ಲಿ ಮಗ್ನರಾಗಿ ನೀವು ನಿಮ್ಮ ಆರೋಗ್ಯ ಮತ್ತು ಕುಟುಂಬದ ಬಗ್ಗೆ ತೋರಿಸಿದ ಅಲಕ್ಷ್ಯ, ಬೇಜವಾಬ್ದಾರಿಗಳು ನೈಜವಾಗಿ ಮೂಡಿವೆ. ನಾಟಕದ ಅಬ್ಬರವೆಲ್ಲ ಇಳಿದು ನೀವು ಒಂಟಿಯಾಗಿ ಮನೆಗೆ ಮರಳಿದಾಗ, ಹಾಸಿಗೆ ಹಿಡಿದಿದ್ದ ನಿಮ್ಮ ಮಗ, ನಿಮ್ಮನ್ನು ಮುಖಕೊಟ್ಟು ಮಾತನಾಡಿಸದ ನಿಮ್ಮ ಬಂಧುಗಳು ಮತ್ತು ಬಣಗುಟ್ಟುವ ನಿಮ್ಮ ಮನೆಯ ಚಿತ್ರಣ, ನಿಮ್ಮ ತಾತ್ವಿಕ ವಿಶ್ಲೇಷಣೆಗಿಂತ ಹೆಚ್ಚು ಆಸಕ್ತಿ ಹುಟ್ಟಿಸುತ್ತದೆ. ಹಾಗೆಯೇ, ನಿಮ್ಮ ಬಾಲ್ಯ ಮತ್ತು ಕಾಲೇಜಿನ ದಿನಗಳು, ನಿಮ್ಮ ಅಸಂಖ್ಯ ಗೆಳೆಯರು, ನಿಮ್ಮ ತಂದೆತಾಯಿ ಮತ್ತು ಕುಟುಂಬದ ಇತರ ಹಿರಿಯರು ನಿಮ್ಮ ಬರವಣಿಗೆಯಲ್ಲಿ ಜೀವಂತವಾಗಿ ಮೈ ತಳೆದಿದ್ದಾರೆ. ನೀವು ಕೊಡುವ ಕೆಲವು ವಿವರಗಳೂ ಅಷ್ಟೆ: ಚಳ್ಳಕೆರೆಯ ಜನ, ಮಂಡ್ಯಕ್ಕೆ ಸಕ್ಕರೆ ನೋಡಲು ಬಂದದ್ದು ಮಾರ್ಕ್ಚೆಜ್ ನ ಒಂದು ಕಾದಂಬರಿಯ ಹಳ್ಳಿಯವರು ಮೊದಲಬಾರಿ ಐಸ್ ನೋಡಲು ಪೇಟೆಗೆ ಬಂದದ್ದುನ್ನು ನೆನಪಿಸುತ್ತದೆ. ನಿಮ್ಮ ರಷ್ಯಾ ಪ್ರವಾಸ ಮತ್ತು ಅದನ್ನು ಮುಗಿಸಿಕೊಂಡು ವಾಪಸ್ಸಾಗುವಾಗ, ದೆಹಲಿಯಲ್ಲಿ ನೀವು ನೋಡಿದ ಸಿಖ್ಖರ ಹತ್ಯಾಕಾಂಡವನ್ನು ನೀವು ವರ್ಣಿಸಿದ್ದು ಕೂಡ ಏಕಾಗ್ರತೆಯಲ್ಲಿ ಓದಿಸಿಕೊಳ್ಳುತ್ತದೆ. ನಿಮ್ಮ ಬರವಣಿಗೆಯ ಈ ವ್ಯತ್ಯಾಸದಿಂದ ಆಶ್ಚರ್ಯ ಪಡಬೇಕಾದದ್ದು ಏನೂ ಇಲ್ಲ. ಅದು ನಿಮ್ಮ ಸ್ವಭಾವಕ್ಕೆ ಸರಿಯಾಗಿಯೇ ಇದೆ. ಶಾಸ್ತ್ರ, ಸಿದ್ಧಾಂತ ಇತ್ಯಾದಿ ಬದನೇಕಾಯಿ ನಿಮಗೆ ಹೇಳಿಸಿದ್ದಲ್ಲ.
“ಯುಗವೊಂದನ್ನು ಹೂತ ನಂತರ ಯಾರೂ
ಅದರ ಗೋರಿಯ ಮುಂದೆ ಶೋಕ ಗೀತೆ ಹಾಡುವುದಿಲ್ಲ
ಮುಳ್ಳುಕಳ್ಳಿಗಳು
ಆ ಸ್ಥಳವನ್ನು ಆವರಿಸಲು ಮುಂದಾಗುತ್ತವೆ”
(ರಿಕ್ಟಿಯಂ ಮತ್ತಿತರ ನೂರು ಕವಿತೆಗಳು – ಅನಾ ಅಹ್ಮತೋವಾ, ಅಕ್ಷರ ಪ್ರಕಾಶನ-1991 ಪುಟ 70)
ನಿಮ್ಮ ಆತ್ಮಚರಿತ್ರೆಯಲ್ಲಿ ಒಂದೆಡೆ, ನೀವು ಬೆಂಗಳೂರಿನ ರುದ್ರಭೂಮಿಗಳಲ್ಲಿ ಕೂತು ಚಿಂತಿಸುತ್ತಿದ್ದುದನ್ನು ಓದಿದಾಗ ನನಗೆ ಎಂದೋ ಓದಿದ ಸಾಲುಗಳು ನೆನಪಾದವು. ಅನಾ ಅಹ್ಮತೋವಾ ನಿಮಗೆ ಗೊತ್ತಿರಬಹುದು. ಆಕೆ ಸ್ಟಾಲಿನ್ ಆಳ್ವಿಕೆಯಲ್ಲಿ ಯಮಯಾತನೆ ಅನುಭವಿಸಿದ ಕವಯಿತ್ರಿ: ರಷ್ಯದ ಶ್ರೇಷ್ಠ ಕವಿಗಳಲ್ಲಿ ಒಬ್ಬಳು. ಸಮುದಾಯ ಸಂಘಟನೆಯಲ್ಲಿ ನಾವೆಲ್ಲ, ‘ತಾಯಿ’, ‘ಚಿರಸ್ಮರಣೆ’ ಇತ್ಯಾದಿಗಳ ಬಗ್ಗೆ ಸಂಭ್ರಮ ಪಡುತ್ತಿದ್ದ ಕಾಲಕ್ಕಾಗಲೇ ರಷ್ಯದ ಸಮಾಜವಾದದ ಕ್ರೌರ್ಯ ಜಗಜ್ಜಾಹಿರಾಗಿತ್ತು. ಚೋಮ್ಸ್ಕಿಯಂತಹ ಚಿಂತಕರ ರಷ್ಯದ ಅವಸಾನದ ಕುರಿತು ನಿಖರವಾಗಿ ಹೇಳಿದ್ದರು. ಅದು ಹೇಗೆ ನಾವು ಇಂತಹ ಸಂಗತಿಗಳನ್ನು ನಮ್ಮ ಹತ್ತಿರ ಕೂಡ ಬಿಟ್ಟುಕೊಳ್ಳಲಿಲ್ಲ ? ಮೂರ್ಖತನ ಮತ್ತು ಅದಕ್ಕಿಂತ ಹೆಚ್ಚಾಗಿ ರಾಜಕೀಯದ ಹಿಂಸೆಯ ಕುರಿತ ಬೇಜವಾಬ್ದಾರೀ ಅಲಕ್ಷ್ಯ- ಈ ಸರಳ ವಿವರಣೆ ಬಿಟ್ಟು ಥರಹಾವರಿ ಬಣ್ಣದ ಮಾತುಗಳಲ್ಲಿ ಸಮುದಾಯದ ಆಗಿನ ಧೋರಣೆಗಳನ್ನು ವರ್ಣಿಸಲು ನನಗೆ ಮನಸ್ಸು ಬರುವುದಿಲ್ಲ. ನಿಮ್ಮ ಕೃತಿಯಲ್ಲಿ ಅನೇಕ ಕಡೆ ಸಮಾಜವಾದೀ ಆಶಯಗಳ ಪ್ರಸ್ತಾಪವಿದೆ: ಆದರೆ ಎಲ್ಲಲಿಯೂ’ಅಸ್ತಿತ್ವದಲ್ಲಿರುವ ಸಮಾಜವಾದ’ದ ಕರಾಳ ಮುಖಗಳ ವಿವರವಿಲ್ಲ.
ಈ ರಾಜಕೀಯವೆಲ್ಲ ಹಾಗಿರಲಿ. ನಿಮ್ಮೊಡನೆ ಮಾತಾಡಿ ಬಹಳ ವರ್ಷಗಳಾದವು. ಉಡುಪಿಯ ಹೋಟೆಲ್ ಒಂದರ ಮಹಡಿಯ ಮೆಟ್ಟಿಲಲ್ಲಿ ಕೈಯಲ್ಲಿ ರಮ್ಮಿನ ಬಾಟಲಿ, ಉರಿಯುವ ಸಿಗರೇಟ್ ಹಿಡಿದು, ನಡುರಾತ್ರಿಯಲ್ಲಿ ನಿಮ್ಮನ್ನು ಕಡೆಯ ಬಾರಿ ನೋಡಿದ್ದು. ಬಾಟಲಿ ಮತ್ತು ಸಿಗರೇಟ್ ಇಲ್ಲದೆ ಸಿ.ಜಿ.ಕೆ.ಯನ್ನು ಕಲ್ಪಿಸಿಕೊಳ್ಳಲು ಕೂಡ ನನಗೆ ಸಾಧ್ಯವಿಲ್ಲ. ಆದರೆ ನೀವು ಈಗ ಅದೆಲ್ಲ ಬಿಟ್ಟು ಸಜ್ಜನರಾಗಿದ್ದೀರಿ ಎಂದು ಕೇಳಿದ್ದೇನೆ. ದುರಭ್ಯಾಸಗಳಿಲ್ಲ ಎನ್ನುವುದನ್ನು ಬಿಟ್ಟರೆ, ನೀವು ನೊದಲಿನ ಸಿ.ಜಿ.ಕೆ.ಯಾಗಿಯೇ ಉಳಿದಿದ್ದೀರಿ ಎಂದು ನನಗೆ ಹಳೆಯ ಸಲುಗೆಯಲ್ಲೇ ಮಾತಾಡಿಸುವವನು. ನೀವು ಸಹ ನಿಮ್ಮ ಮೊದಲಿನ ಮಂಡ್ಯದ ಸಂಸ್ಕೃತ ಬಿಟ್ಟು ತಿದ್ದಿದ ಕನ್ನಡದಲ್ಲಿ ನನ್ನನ್ನು ಮಾತಾಡಿಸಲಾರಿರಿ ಎಂಬ ಭರವಸೆ ನನಗೆ ಇದೆ.ನಿಮ್ಮ ಆತ್ಮಚರಿತ್ರೆ ಓದಿ ನನಗೆ ಸಂತೋಷವಾಗಿದೆ. ಆದರೆ ನೀವು ಕನ್ನಡದ ಕೆಲವು ನಾಟಕಕಾರರು ಮತ್ತು ನಾಟಕ ಸಂಸ್ಥೆಗಳ ಬಗ್ಗೆ ಬರೆದ ಮುಸುಕಿನೊಳಗಿನ ಗುದ್ದಿನಂತಹ ಮಾತುಗಳ ಬಗ್ಗೆ ನನ್ನ ಆಕ್ಷೇಪವಿದೆ. ಅವು ನಿಮ್ಮ ತೆರೆದ ಮನಸ್ಸು, ಬಿಚ್ಚುಮಾತುಗಳ ಜಾಯಮಾನಕ್ಕೆ ಸರಿಹೊಂದುವುದಿಲ್ಲ. ನಾಟಕ ಜನರ ಕಣ್ಣಿಗೆ ಒಡ್ಡಿಕೊಂಡಿರುವಂತಹದ್ದು. ಅದು ಸದಾ ತೆರೆದ ಪಠ್ಯ. ಇದನ್ನು ನಾನು ನಿಮಗೆ ಹೇಳಬೇಕಾ? ನಾಟಕ ಮತ್ತು ನಾಟಕ ಸಂಸ್ಥೆಗಳ ವಿಮರ್ಶೆಯಲ್ಲಿ ಮುಚ್ಚುಮರೆ ಇರಕೂಡದು.
ಹೆಗ್ಗೋಡು, ರಂಗಾಯಣಗಳ ಬಗ್ಗೆ ಅಥವಾ ಕಾರಂತ, ಕಾರ್ನಾಡರ ಬಗ್ಗೆ ನಿಮಗೆ ಏನು ಹೇಳುವುದಿದೆ ಅದನ್ನು ನೀವು ನೇರವಾಗಿ ಮತ್ತು ಸೂಕ್ತ ಆಧಾರಗಳೊಡನೆ ಹೇಳಬೇಕು. ಕಾರಂತರು ಮತ್ತು ಕಾರ್ನಾಡರು ನಿಸ್ಸಂದೇಹವಾಗಿ ಪ್ರತಿಭಾವಂತರು. ಹೆಗ್ಗೋಡು, ಕಳೆದ 50 ವರ್ಷಗಳಿಂದ ಕನ್ನಡ ಸಾಂಸ್ಕೃತಿಕ ರಂಗದಲ್ಲಿ ಕ್ರಿಯಾಶೀಲವಾಗಿದೆ. ನನಗೆ ಗೊತ್ತಿರುವ ಮಟ್ಟಿಗೆ ಆ ಸಂಸ್ಥೆಯನ್ನು ನಡೆಸುತ್ತಿರುವವರು ಸಭ್ಯರು ಮತ್ತು ಸಜ್ಜನರು. ವ್ಯಕ್ತಿಗಳು ಮತ್ತು ಸಂಸ್ಥೆಗಳ ಬಗ್ಗೆ ನಾವು ಸಾರ್ವಜನಿಕವಾಗಿ ಆಡುವ ಮಾತುಗಳಿಗೆ ಆಧಾರವಿರಬೇಕು. ಮಾತ್ರವಲ್ಲ: ಸಾರ್ವಜನಿಕರಿಗೆ ಅದು ಸಂಬಂಧಿಸಿದ್ದೂ ಆಗಿರಬೇಕು. ಆದರೆ ನಿಮ್ಮ ಮಾತುಗಳು ಹೀಗಿಲ್ಲ. ನನ್ನ ಆಕ್ಷೇಪ ದೊಣ್ಣೆ ಹಿಡಿದ ಸ್ಕೂಲುಮೇಸ್ಟರನ್ನು ನಿಮಗೆ ನೆನಪಿಸಬಹುದು. ನೀವು ಅನ್ಯಥಾಭಾವಿಸುವುದಿಲ್ಲ ಎಂದು ನನಗೆ ಅನ್ನಿಸಿದ್ದರಿಂದಲೇ ಮಾತು ಇಷ್ಟು ಬೆಳೆಸಿದೆ. ಕ್ಷಮೆ ಇರಲಿ
ನಿಮ್ಮ ಪ್ರೀತಿ, ವಿಶ್ವಾಸಗಳಿಗೆ ಕೃತಜ್ಞತೆಗಳು. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
ನಿಮ್ಮ
ಜಿ.ರಾಜಶೇಖರ್

‍ಲೇಖಕರು G

January 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: