ನಿಶಾ ಗೋಪಿನಾಥ್
ಮಂಜಿನ ನಗರಿ ಕೊಡಗಿನಲ್ಲಿ ನಡೆದ ಅಖಿಲ ಭಾರತ 80ನೇ ಸಾಹಿತ್ಯ ಸಮ್ಮೇಳನ ತನ್ನ ಎಲ್ಲ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿದೆ ಎಂದರೆ ತಪ್ಪಿಲ್ಲ. ಸಮ್ಮೇಳನ ಶುರುವಾದ ಮೊದಲ ದಿನ ಈ ಪುಟ್ಟ ನಗರಿಯಲ್ಲಿ ಅದು ಸಮ್ಮೇಳನ ನಡೆಯುತ್ತದೆ? ಅದು ಯಶ ಕಾಣುವುದಾ? ಎನ್ನುವ ಹಲವು ಸಂದೇಹಗಳಿದ್ದವು. ಸಾರ್ವಜನಿಕರ ಊಟಕ್ಕೆ ತುಸು ದೂರದಲ್ಲಿಯೇ ವ್ಯವಸ್ಥೆಯಾಗಿತ್ತು. ಸಾಹಿತಿಗಳು, ಪತ್ರಕರ್ತರಿಗೆ ಮತ್ತೊಂದು ಕಡೆ ವ ವ್ಯವಸ್ಥೆಯಾಗಿತ್ತು. ಇಷ್ಟಾದರೂ ಪ್ರತಿ ಸಾರಿ ಕೇಳಿಬರುತ್ತಿದ್ದ ಊಟದ ಕೂಗು ಈ ಬಾರಿ ಕೇಳಿಬರಲೇ ಇಲ್ಲ. ಉಳಿದಂತೆ ಇಡೀ ಮೂರು ದಿನದ ಸಮ್ಮೇಳನ ನಿಜಕ್ಕೂ “ಜಾತ್ರೆ”ಯಂತೆಯೇ ನಡೆಯಿತು.
ಕೊಡಗಿನಲ್ಲಿ ಕೇಳಿ ಬರುತ್ತಿದ್ದ ಪ್ರತ್ಯೇಕತೆಯ ಕೂಗು ತಣ್ಣಗೆ ಮಲಗಿತು. ಆದರೂ ಕಸ್ತೂರಿ ರಂಗನ್ ವರದಿ ಜಾರಿಗೆ ಒತ್ತಾಯಿಸಿ ನಡೆದ ಬಿಜೆಪಿ ಪ್ರತಿಭಟನೆ ಸಾಹಿತ್ಯಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ಸಮ್ಮೇಳನದಲ್ಲಿ ಎಲ್ಲ ವ್ಯವಸ್ಥಿತವಾಗಿ ನಡೆದರೂ ಮೊದಲ ದಿನವೇ ಒಒಡಿಗಾಗಿ ಸರ್ಕಾರಿ ನೌಕರರು ನಡೆಸಿದ ಪ್ರತಿಭಟನೆ ಅವರನ್ನೇ ಅವಹೇಳನಕ್ಕೆ ಈಡು ಮಾಡಿತು.
ಮಡಿಕೇರಿಯಲ್ಲಿ ಒಂದು ಕನ್ನಡದ ವಾತಾವರಣ ಸೃಷ್ಟಿಯಾಗಬೇಕು ಎಂಬ ಉದ್ದೇಶದಿಂದ ಕಳೆದ ಇಲ್ಲಿಗೆ ಸಾಹಿತ್ಯದ ತೇರನ್ನು ಹೊತ್ತು ತಂದದ್ದು ಸಾರ್ಥಕವಾಯಿತು. ಚಂಪಾ ಅವರ “ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ” ಎನ್ನುವ ಕೂಗು 35 ಸಾವಿರ ಜನಸಂಖ್ಯೆಯನ್ನು ಹೊದಿರುವ ಮಡಿಕೇರಿಯಲ್ಲಿ ಆರಂಭದಿಂದಲೂ ಶಾಲಾ ಮಕ್ಕಳಾಧಿಯಾಗಿ ಎಲ್ಲರ ಹೃದಯಾಳದಲ್ಲಿ ಮೊಳಗಿತು. ಕರ್ನಾಟಕದ ಎಲ್ಲ ಶಾಲೆಗಳನ್ನು ಸರ್ಕಾರವೇ ನಡೆಸಲಿ, ಆಗ ಡೋನೇಷನ್ ಹಾವಳಿ ತಪ್ಪಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನೂ ಸುಧಾರಿಸಬಹುದು ಎನ್ನುವ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರ ಆಶಯದ ಮಾತಿಗೆ ಎಲ್ಲರಿಂದ ಒಮ್ಮತದ ಬೆಂಬಲ ದೊರೆಯಿತು.
ನಮ್ಮ ಯೋಜನೆಗಳು ಕೇವಲ ಅಭಿವೃದ್ಧಿ ಪರವಾಗದೆ ನಿಸರ್ಗದ ಉಳಿವಿನ ನೆಲೆಯಲ್ಲಿಯೇ ಯೋಜನೆಗಳು ಜಾರಿಯಾಗಬೇಕು, ಮುಳುಗಡೆ ತಪ್ಪಿಸಬೇಕು. ದೇಶೀಯತೆ ಬೆಳೆಸಿಕೊಳ್ಳಬೇಕು. ನಮ್ಮತನವನು ಬಿಟ್ಟು ಇಂಗ್ಲಿಷ್ ಗೆ ದಾಸರಾಗುವುದನ್ನು ಕೈ ಬಿಡಬೇಕು ಎಂದು ಸಮ್ಮೇಳನಾಧ್ಯಕ್ಷರು ಹೇಳಿದ ಮಾತು ಅರ್ಥಪೂರ್ಣವಾಗಿತ್ತು.
ಇನ್ನು ಪುಸ್ತಕ ಕೊಳ್ಳುವವರು ತಮ್ಮ ನೆಚ್ಚಿನ ಲೇಖಕರ ಪುಸ್ತಕಗಳನ್ನು ಕೊಂಡು ಹೊತ್ತೊಯುವ, ದೇಶಿ ಬಟ್ಟೆಗೆ ಮುಗಿಬಿದ್ದು ಖರೀದಿಸುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿತ್ತು.
ಸಮ್ಮೇಳನಾಧ್ಯಕ್ಷರ ಜೊತೆಗೆ ನಡೆದ ವಿವಿಧ ವಿದ್ವಾಂಸರ ಅರ್ಥಪೂರ್ಣ ಪ್ರಶ್ನೆಗಳಿಗೆ “ನಾಡಿ” ಸಮಾಧಾನದಿಂದಲೇ ಉತ್ತರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಸ್ತೂರಿ ರಂಗನ್ ವರದಿ ಬಗ್ಗೆ ನಾಡಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಅದನ್ನು ಮೂರನೇ ದಿನ ನಡೆದ ಕವಿಗೋಷ್ಠಿಯಲ್ಲಿ ಹಲವು ಕವಿಗಳು ವಿರೋಧಿಸಿ, ಖಂಡಿಸುವ ಮೂಲಕ ಕವಿತೆಗಳನ್ನು ಓದಿದರು. ಒಟ್ಟಾರೆ ಸಾಹಿತ್ಯ ಸಮ್ಮೇಳನದ ಒಟ್ಟು ಆಶಯ ಈಡೇರಿದಂತಾಯಿತು..




ಚೆನ್ನಾಗಿದೆ, ನಿಜಕ್ಕೂ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ ನಿಶಾಗೋಪಿನಾಥ್ ಅವರೆ… ಒಳ್ಳೆಯ ಬರಹ
ಹೌದು. ನಾನು ಈ ಎಲ್ಲವಕ್ಕೂ ಪ್ರತ್ಯಕ್ಷ ಸಾಕ್ಷಿ. ಪುಸ್ತಕ ಮಳಿಗೆಯ ವ್ಯವಸ್ಥಾಪನೆ ಸಹ ಸೊಗಸಾಗಿತ್ತು. ಇದು ಎಲ್ಲ ಸಮ್ಮೇಳನಗಳಿಗೆ ಮಾದರಿಯಾಗಬೇಕು. ಜೊತೆಗೆ ಶೌಚಾಲಯಗಳು ಅಚ್ಚುಕಟ್ಟಾಗಿದ್ದವು!! ಇದು ಇನ್ನೊಂದು ಅದ್ಭುತ! ಏನೇ ಇರಲಿ ಇವೆಲ್ಲಕ್ಕೂ ಕಾರಣರಾದ ಎಲ್ಲರಿಗೂ ಅದರಲ್ಲಿಯೂ ಸಮವಸ್ತ್ರದ ಅಂಗಿ ತೊಟ್ಟು ಸಹಕರಿಸುತ್ತಿದ್ದ ಪುಟ್ಟ ಪುಟ್ಟ ಶಾಲಾ ವಿದ್ಯಾರ್ಥಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು – ಕೆ ಎಸ್ ನವೀನ್