ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದೊಳ್ಳೇ ಸಿನಿಮಾ ನೋಡಿದೆ..

ರಾಮಾ ರಾಮಾ ರೇ…

amruta-hegde

ಅಮೃತಾ ಹೆಗ್ಡೆ 

ಬಹಳ ದಿನಗಳ ನಂತರ ಫ್ರೆಂಡ್‌ ಯಶಸ್ವಿನಿ ಜೊತೆ ಒಂದೊಳ್ಳೇ ಸಿನಿಮಾ ನೋಡಿದೆ.

ಆತ ಅಪರಾಧಿ. . ಅವನಿನ್ನು ಬದುಕೋದಕ್ಕೆ ಲಾಯಕ್ಕಿಲ್ಲ ಅಂತ ಕೋರ್ಟ್ ನಿರ್ಧರಿಸಿಯಾಗಿದೆ. ಇಷ್ಟರಲ್ಲೇ ಗಲ್ಲಿಗೇರಿಸುವ ಆದೇಶವನ್ನೂ ನೀಡಿಯಾಗಿದೆ. ಆದರೆ ಆ ಪಾಪಿ ಜೀವಕ್ಕಿನ್ನೂ ಬದುಕೋ ಆಸೆ. ಜೈಲು ಬಿಟ್ಟು ಓಡಿ ಬರೋ ಆತನ ಪಾಡು, ಪರಿಸ್ಥಿತಿಯ ಸುತ್ತ ಸುತ್ತುವ ಕಥೆ ಇದು. ಅವಕಾಶ ಸಿಕ್ಕರೆ ರಕ್ಕಸ ಮನಸ್ಸೂ ಕೂಡ ಮೃದುವಾಗಬಹುದು ಅನ್ನೋದನ್ನ ತಿಳಿಸಿಕೊಡುವ ಪ್ರಯತ್ನ ಇಲ್ಲಿ ಕಾಣುತ್ತೆ.

rama-rama-re3ತಾನು ಬದುಕಬೇಕು ಅನ್ನೋ ಆಸೆಯಿಂದ ಸೆರೆಮನೆಯಿಂದ ಓಡಿ ಬಂದಿದ್ದ ಪಾಪಿ, ತಾನೇ ತಾನಾಗಿ ಶರಣಾಗುವ ಹಾಗೆ ಪರಿಸ್ಥಿತಿಯೇ ಆತನನ್ನ ತಿದ್ದುತ್ತದೆ. ಇಲ್ಲಿ ಆತನ ಪರಿವರ್ತನೆಗೆ ಪ್ರಯತ್ನ ಪಡುವವರಾರೂ ಇಲ್ಲ. ಬದಲಾಗಿ ಅವನನ್ನ ಎದುರಾಗೋ ಪರಿಸ್ಥಿತಿಯೇ ಆತನನ್ನ ಮೃದುವಾಗಿಸಿಬಿಡುತ್ತೆ. ಮಾನವೀಯತೆ, ಪ್ರೀತಿ, ಅಕ್ಕರೆ, ಮಮತೆ, ಆಗತಾನೇ ಹುಟ್ಟಿದ ಮಗುವಿನ ಮೊದಲ ಕೂಗು ಎಲ್ಲವನ್ನೂ ಅತಿ ಹತ್ತಿರದಿಂದ ಕಾಣೋ ಅವಕಾಶ ಮಾಡಿಕೊಡುತ್ತೆ.

ಬದುಕೋ ಆಸೆಯಿಂದ ಕಾಡು, ಮೇಡು, ಹಳ್ಳ, ಕೊಳ್ಳ, ಪೇಟೆ ಪಟ್ಟಣ ಅಲೆಯೋ ಆ ಪಾಪಿ ಜೀವಕ್ಕೆ ಪಾಪಕೃತ್ಯದ ಹೊರತಾದ ಒಂದೊಂದೇ ಸಂಗತಿಗಳ ಪರಿಚಯವಾಗ್ತಾ ಹೋಗುತ್ತೆ. ಆತನ ಪಯಣದಲ್ಲಿ ಸೇರಿಕೊಳ್ಳೋ ಲಾರಿ ಡ್ರೈವರ್‌, ತಾತ, ಪ್ರೇಮಿಗಳು, ಗರ್ಭಿಣಿ, ಅಜ್ಜಿ, ಶಿಶು, ನಾಟಕದ ಪಾತ್ರಧಾರಿಗಳು ಎಲ್ಲರೂ ಮಾನವನ ಬದುಕಿನ ವಿವಿಧ ಮಜಲುಗಳನ್ನ ಪಾಪಿಯ ಅಂತರಂಗವನ್ನ ಸ್ಪರ್ಷಿಸ್ತಾರೆ.

ಹೆರಿಗೆ ನೋವಿನಲ್ಲಿ ಒದ್ದಾಡ್ತಿರೋ ತಾಯಿ ಕಷ್ಟಪಟ್ಟು ಮಗುವಿಗೆ ಜನ್ಮ ಕೊಟ್ಟಾಗ ಪಾಪಿ ಕಣ್ಣಾಲಿಗಳು ಒದ್ದೆಯಾಗುತ್ವೆ. ನವಜಾತ ಮಗುವಿನ ಅಳು ಕೇಳಿಬಂದ ಆ ಸನ್ನಿವೇಷ ಮಾತ್ರ ನಮ್ಮ ಕಣ್ಣಲ್ಲೂ ನೀರು ತರಿಸುತ್ತೆ . ತಾನು ಬದುಕಬೇಕು ಅನ್ನೋ ಕಾರಣಕ್ಕೆ ಮತ್ತೊಬ್ಬರ ಜೀವ ತೆಗೆಯೋಕೂ ಹೇಸದ ಮನಸ್ಥಿತಿಯಲ್ಲಿದ್ದ ಆತ, ತನ್ನ ಜತೆಗಿದ್ದ ಪ್ರೇಮಿಗಳಿಗೆ ಮದುವೆ ಮಾಡಿಸುವಷ್ಟು ಬದಲಾಗ್ತಾನೆ.

ಪ್ರೀತಿ, ಮಮತೆ, ಮಾನವತೆಗೆ ಕ್ರೌರ್ಯವನ್ನೂ ಕರಗಿಸುವ ಶಕ್ತಿ ಇದೆ ಅನ್ನೋದನ್ನ ಸೂಕ್ಷ್ಮವಾಗಿ ಹೇಳುತ್ತೆ ಈ ಕಥೆ. ಕಲಾತ್ಮಕತೆಯ ಸ್ಪರ್ಷವಿರೋ ಈ ಸಿನಿಮಾ ನಂಗಂತೂ ಖುಷಿಕೊಟ್ಟಿದೆ.

‍ಲೇಖಕರು Admin

7 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading