ಡಾ. ಪ್ರೇಮಲತ ಬಿ / ಇಂಗ್ಲಂಡ್
ಪಕ್ಕದಲಿ ಕುಳಿತು ಎದ್ದು ಹೋದವರು
ಎದುರು ನಿಂತು ಮುಗುಳ್ನಕ್ಕವರು
’ಹಲೋ ’,”ಹಾಯ್ ’,”ನಮಸ್ಕಾರ’ಗಳ
ಉಸುರಿದವರು ಸಾವಿರ ಮಂದಿ
ಒಂದೊಮ್ಮೆಯೂ ನಿನ್ನೊಡನೆ ಮಾತಾಗಿಲ್ಲ
ಮೌನಕ್ಕೂ ಬಣ್ಣ ಹಚ್ಚುವ
ಕಲ್ಪನೆಗಳ ಪಕ್ಕಕ್ಕೆ ಸರಿಸಿ
ಎಂದೋ ಆಗಿದ್ದ ಪರಿಚಯಕ್ಕೆ
ಸಂಭಂದದ ಮುದ್ರೆ ಬೇಕಿರಲಿಲ್ಲ
ಹಾಗಿರುವಾಗ,
ಬಚಾವಾಗಿಬಿಟ್ಟೆ ನೀನು
ಜೇನಗೂಡಿಗೆ ಕಲ್ಲು ತೂರಿ
ಕಲರವವೋ, ಗಲಿಬಿಲಿಯೋ, ಗೊಂದಲವೋ
ಮುಚ್ಚಿದ ಮನೆಯ ಗೋಡೆಯ ಹಿಂದೆ
ತಪಿಸುತ್ತ ಧ್ಯಾನದಲ್ಲಿದ್ದ
ಮನದಲ್ಲಿ ಎದ್ದಿದೆ ನೂರು ಭುಗಿಲು
ಆವತ್ತು,

ಸಾವಿರ ಜನರಂತೆ ನಾನೂ ನಂಬಿದ್ದೆ
ನೀವಾಳಿಸಿ ಬಿಸಾಕಿ ನಕ್ಕಿದ್ದೆ
ನನಗೆ ಹೀಗಾಗಲು ಸಾಧ್ಯವಿಲ್ಲ
ಇದೀಗ,
ಆಯ್ಕೆ ನನ್ನದಲ್ಲ, ಬಹುಶಃ ನಿನ್ನದೂ ಅಲ್ಲ
ಕಣ್ಣಿಗಿಲ್ಲದ ಕಾಣ್ಕೆಯ ಕಲ್ಪನೆ
ಕಾಲಿಗೆಡರುವ ಸುಶಾಂತ ಸುಖ
ಹಂಗಿಲ್ಲದ ಜೊತೆಯಲ್ಲಿ
ಮನದ ತುಂಬ ಹೂ ದೋಟ
ಗೊತ್ತಿಲ್ಲ,
ನಿನಗೆ ಗುರಿಯಿತ್ತೋ, ನೀ ನೆಟ್ಟ
ಗುರಿಗೆ ನನ್ನ ಮನದ ಗೂಡೋ
ನಿಮಿತ್ತಗಳ ಹುಡುಕುವ ಚಿತ್ತ
ಕಳೆದುಹೋಗಿದೆ, ಉಕ್ಕುವ ನಗುವಿನಲಿ
ಹುಚ್ಚಾಪಟ್ಟೆ ಹಸಿರಿದೆ !






0 Comments