ಒಂದೇ ಉಸಿರಿನಲ್ಲಿ ಓದಿದ ‘ನಿರ್ಗಮನ’

ಫಣಿಕುಮಾರ್.ಟಿ.ಎಸ್.

**

ಜೋಗಿಯವರ ನಿರ್ಗಮನವನ್ನು ಒಂದೇ ಉಸಿರಿನಲ್ಲಿಯೇ ಓದಬೇಕು. ಅವರ ಎಂದಿನ ಕೃತಿಗಳನ್ನು ಓದುವ ರೀತಿಯಲ್ಲಿಯೇ. ಆಗಷ್ಟೇ ಅದರ ಗತಿ; ಆಂತರ್ಯದ ವಿಷಾದ; ಅದರ ಕುರಿತಾದ ಅವರ ನಿರ್ಲಿಪ್ತತೆ ಎಲ್ಲವೂ ನಿಚ್ಚಳವಾಗಿ ಅಭಿವ್ಯಕ್ತವಾಗುವುದು. ಹೀಗೆ ತನ್ನದೇ ಕೃತಿಯ ಕುರಿತಾದ ಲೇಖಕನ ಅನಾಸಕ್ತಿ ಓದುಗನಿಗೆ ಸ್ವಾತಂತ್ರ್ಯವೊಂದನ್ನು ಕಲ್ಪಿಸುತ್ತಲೇ ಅದರಲ್ಲಿ ಒಂದು ನೈತಿಕ ಅಂತಃಪ್ರಜ್ಞೆಯನ್ನು ಜಾರಿಯಲ್ಲಿಡುತ್ತದೆ. ನಾನು ಓದಿದ, ಜೋಗಿಯವರ ಬಹುಪಾಲು ಕೃತಿಗಳಲ್ಲಿ ಈ ಅನಾಸಕ್ತಿಯ ಒಂದು ಅವ್ಯಕ್ತ ಸ್ಥಾಯಿಭಾವವನ್ನು, ಅದಕ್ಕೆ ಪೂರಕವಾದ ಒಂದು ಮಿದು-ವಿಷಾದದ ಅನುಭೂತಿಯನ್ನು ನಿರಂತರ ಕಂಡಿದ್ದೇನೆ.

ಪ್ರಾಯಶ: ಅವರ ಮೊದಲ ಕೃತಿಯಾದ ‘ನದಿಯ ನೆನಪಿನ ಹಂಗು’ ಕೂಡಾ ಅವರ ಈ ಸ್ಥಾಯಿಭಾವಕ್ಕೆ ಭಿನ್ನವಲ್ಲ. ಅದರಲ್ಲಿ ಅವರು ಒಂದು ಕಡೆ “ಹಾಗೆ ನೋಡಿದರೆ ಯಾವ ಕತೆಯೂ ಮುಗಿಯುವುದಿಲ್ಲ. ನಿಲ್ಲುವುದು ನಮ್ಮ ಕತೆ ಹೇಳುವ ಅಥವಾ ಕೇಳುವ ಕುತೂಹಲ ಮಾತ್ರ” ಎನ್ನುತ್ತಾರೆ.  ಹಾಗಾಗಿ ಓದುಗನಿಗೆ ರೋಚಕತೆಯ ಸುಖವನ್ನು ಉಣಬಡಿಸಿ, ಅದರಲ್ಲಿ ಅವನಿಗೆ ದಿಕ್ಕೊಂದು ಸಿಕ್ಕ ಮರುಕ್ಷಣವೇ ತನ್ನ ದಿವ್ಯ ಉಪೇಕ್ಷೆಯನ್ನು ರುಜುವಾತು ಮಾಡುವ ಮೂಲಕ ಲೇಖಕ ಅವನಿಗೆ ಆಲೋಚನೆಯ ಸ್ವಾತಂತ್ರವನ್ನು ಕಲ್ಪಿಸುವುದು ಒಂದು ಕತೆಯ ದೃಷ್ಟಿಕೋನದಿಂದ ಮಹತ್ತರ ಸಂಗತಿಯಾಗುತ್ತದೆ. ಅದು ಭಾರತದ ಕೃಷ್ಣನ ಇಡೀ ಮನೋಧರ್ಮದಂತೆ, ದೊರೆಯ ಕುರಿತಾದ ಲಾವೊತ್ಸುವಿನ ಉದಾಸೀನದಂತೆ – ಒಂದು  ನಿರ್ದೇಶನ, ಕಡೆಗೆ ನಿರ್ಲಿಪ್ತತೆ ! 

ಹೊಸದಾಗಿ ಬಿಡುಗಡೆಯಾಗಿರುವ ಅವರ ಕೃತಿ- ನಿರ್ಗಮನವೂ ಕೂಡಾ ಅಷ್ಟೇ ವಿಷಾದಯುಕ್ತವಾದ, ಅಷ್ಟೇ ರೋಚಕವೂ ಆದ, ದೊಡ್ಡ canvas ಇರುವ ಕೃತಿಯಾಗಿದೆ. ನಗರ ಪ್ರಜ್ಞೆಯನ್ನು; ಸಮಷ್ಠಿಪ್ರಜ್ಞೆಯನ್ನು ತಮ್ಮೆಲ್ಲ ರೋಚಕತೆಯೊಂದಿಗೆ ಇಲ್ಲಿ ಅಭಿವ್ಯಕ್ತಿಸಲಾಗಿದೆ. ಎಷ್ಟು ರೋಚಕವೆಂದರೆ ಪಾತ್ರಗಳು ನಿಮ್ಮ ಸನಿಹದಲ್ಲೇ ಕೂತು, ನಿಮ್ಮೊಂದಿಗೆ ಕ್ಷಣಕ್ಷಣ ಒಡನಾಡುವಷ್ಟು! ಅವುಗಳು ಆಚೀಚೆ ಹೋದಾಗ ನೀವು ಬೆಚ್ಚಿ ಎಚ್ಚರವಾಗಿಯೇ ಉಳಿಯುವಷ್ಟು! 

ಕತೆಯಲ್ಲಿ ಪ್ರಕರಣವೊಂದು ಬರುತ್ತದೆ. ಅಪ್ಪ ಕಾಣೆಯಾಗಿದ್ದಾರೆ. ಮಗ ಟೀವಿ ಚಾನೆಲೊಂದರ ಸಂಪಾದಕ. ಪೊಲೀಸ್ ಇನ್ಸ್ಪೆಕ್ಟರ್ ಮುಂದೆ ಕೂತಿದ್ದಾನೆ. 

…ಹೀಗ್ಯಾಕೆ ಮತ್ತೆ ಮತ್ತೆ ಕೇಳ್ತೀನಿ ಗೊತ್ತೇನು? ಆಗಲೇ ನೀವು ಸತ್ಯ ಹೇಳೋದು.

ನಾವ್ಯಾಕೆ ಸುಳ್ಳು ಹೇಳೋಣ. ಅಪ್ಪನಿಂದ ನಮಗೆ ಆಗಬೇಕಾದ್ದೇನೂ ಇರಲಿಲ್ಲ. 

ಇದು ಸತ್ಯ. ಅಪ್ಪನಿಂದ ನಿಮಗೆ ಆಗಬೇಕಾದ್ದೇನೂ ಇರಲಿಲ್ಲ. ಅದಕ್ಕೇ ಅವರನ್ನು ಒಂಟಿಯಾಗಿರಲು ಬಿಟ್ಟಿದ್ರಿ. ಅದಕ್ಕೇ ನೀವು ಅವರನ್ನು ಸೀರಿಯಸ್ಸಾಗಿ ಹುಡುಕೋ ಪ್ರಯತ್ನ ಮಾಡ್ಲಿಲ್ಲ.

ಇನ್ನೊಂದು ಘಟನೆಯಲ್ಲಿ ಅಪ್ಪ ಕಾಣೆಯಾಗಿ ಎರಡು ದಿನಗಳಾಗಿವೆ. 

“ಅಪ್ಪ ಕಾಣೆಯಾದ ಎರಡು ದಿನಗಳಲ್ಲಿ ತನ್ನ ದಿನಚರಿ ಬದಲಾಗಿದೆ. ಮನಸ್ಸು ಹಗುರವಾಗಿದೆ. ಅಪ್ಪನಿಗೋಸ್ಕರ ತಾನೇನೂ ಮಾಡಿರಲಿಲ್ಲ. ಈಗ ಅಪ್ಪನ ಹುಡುಕಾಟದಲ್ಲಿದ್ದೇನೆ. ಸಂತೋಷಕ್ಕೆ ಅದೇ ಕಾರಣವಿರಬಹುದೇ? ಈ ಹುಡುಕಾಟದಲ್ಲೇ ನಿಜವಾದ ಸಾರ್ಥಕತೆಯಿರುವುದು. ನಾವು ಯಾರನ್ನಾದರೂ ಹುಡುಕುತ್ತಲೇ ಇರುತ್ತೇವೆ. ಅವರು ಸಿಕ್ಕಿದ ಮೇಲೂ ಹುಡುಕಾಟ ಮುಂದುವರೆಯುತ್ತದೆ. ಅವರು ನಿಜವಾಗಲೂ ಸಿಗುತ್ತಾರೆನ್ನುವುದು ಗೊತ್ತೇ ಇರುವುದಿಲ್ಲ.”

ನಿರ್ಗಮನದಲ್ಲಿ ನಿರ್ಗಮನವೇ ಪ್ರಧಾನ ಅಭಿವ್ಯಕ್ತಿಯಾದರೂ, ಅಲ್ಲಿ ಆಗಮನವಾಗಲೇಬೇಕೆಂಬ ಪ್ರಗಾಢ ನಿರೀಕ್ಷೆಯಿದೆ. ಅದರ ಮಿದು ಮಿಡಿತವಾಗಿ ನಿರಂತರ ಕುತೂಹಲವಿದೆ. ಆದರೆ ಕುತೂಹಲದ ಪರಾಕಾಷ್ಠೆಯಾಗಿ ಕಡೆಗೂ ಸಂಭವಿಸುವ ಆಗಮನದ ನವಿರು ಮಾತ್ರ ಓದುಗನಿಗೆ ದಕ್ಕುತ್ತದೆ. ಅದು ಹೆಚ್ಚಿನದರ ಅವಶ್ಯಕತೆಯಿಲ್ಲವೆನ್ನುವುದನ್ನು ಶೃತಪಡಿಸುತ್ತದೆ. 

ಜೋಗಿಯವರು ‘ನಿರ್ಗಮನ’ವನ್ನು ಏಕೆ ಬರೆದೆ ಎಂದು ಪ್ರತ್ಯೇಕವಾಗಿ ಹೇಳುತ್ತಾರೆ. “ವೃದ್ಧರು ಇಷ್ಟು ಪ್ರಮಾಣದಲ್ಲಿರುತ್ತಾರೆಂದು ಮಹಾನಗರಗಳು ನಿರೀಕ್ಷಿಸಿರಲಿಲ್ಲ. ಹಳ್ಳಿಗಳಲ್ಲಿನ ವೃದ್ಧರು ಹಾಗೋಹೀಗೋ ಕೆಲಸ ಮಾಡಿಕೊಂಡು ಬದುಕುತ್ತಾ ವರುಷಕ್ಕೊಮ್ಮೆಯೋ ಎರಡು ಸಲವೋ ಬರುವ ಮಕ್ಕಳ ಆಗಮನದಲ್ಲಿ ಸಂತೋಷ ಕಾಣುತ್ತಾ ತಮ್ಮ ಓರಗೆಯ ತಮ್ಮದೇ ವಯಸ್ಸಿನವರ ಜೊತೆ ಓಡಾಡುತ್ತಾ ಸುಖವಾಗಿಯೇ ಇದ್ದರು. ಅವರಿಗೆ ಇದ್ದ ಸಖ್ಯ ಅವರನ್ನು ಖುಷಿಯಾಗಿಟ್ಟಿತ್ತು. ಹೆಂಡದ ಅಂಗಡಿಯಲ್ಲಿಯೋ, ಸತ್ಯನಾರಾಯಣ ಪೂಜೆಯಲ್ಲಿಯೋ, ಮದುವೆಯಲ್ಲಿಯೋ, ಸಾರ್ವಜನಿಕ ಕಾರ್ಯಕ್ರಮದಲ್ಲಿಯೋ  ವೃದ್ಧರೆಲ್ಲಾ ಸಿಗುತ್ತಿದ್ದರು. ಮಾತಾಡುತ್ತಿದ್ದರು. ಅವರು ಇವರ ಮನೆಗೂ, ಇವರು ಅವರ ಮನೆಗೂ ಹೋಗಿ ಬಂದು ಹೇಗೋ ಬದುಕುತ್ತಿದ್ದರು. ಕ್ರಮೇಣ ಆ ವೃದ್ಧಾಶ್ರಮ ನಗರಕ್ಕೆ ಶಿಫ್ಟಾಯಿತು. ಮಗನೂ ಸೊಸೆಯೂ ಮಗಳೂ ಅಳಿಯನೂ ದುಡಿಯಲು ಶುರು ಮಾಡಿದ ನಂತರ ವೃದ್ಧರು ನಗರಗಳಿಗೆ ಅನಿವಾರ್ಯವಾದರು. ಏನಿಲ್ಲವೆಂದರೂ ಅವರು ಮನೆ ಕಾಯುತ್ತಿದ್ದರು. ತಡವಾಗಿ ಬರುವ ಕೆಲಸದಾಕೆಯನ್ನು ನಿಭಾಯಿಸುತ್ತಿದ್ದರು. ಬೀದಿಯಲ್ಲಿ ಬರುವ ತರಕಾರಿ ಗಾಡಿಯವನ ಜೊತೆ ಚೌಕಾಸಿ ಮಾಡಬಲ್ಲವರಾಗಿದ್ದರು. ದೇವರ ಮನೆಯನ್ನು ಬೆಳಗುತ್ತಿದ್ದರು. ಮೊಮ್ಮಗುವಿಗೆ ಕೆಮ್ಮು ಬಂದರೆ ಅದ್ಯಾವುದೋ ಕಷಾಯ ಕೊಟ್ಟು ಗಾಬರಿಯಾದವರನ್ನು ಸಂತೈಸುತ್ತಿದ್ದರು.” ಅವರು ಕೃತಿಯ ಬಿಡುಗಡೆಯ ದಿನ ಯಾಕಾದರೂ ಇದನ್ನು ಬರೆಯಲು ಆರಂಭಿಸಿದೆನೋ ಎನ್ನುವ ಸಂಕಟವಿತ್ತು ಎಂದರು. 

ಇಷ್ಟು ಸಾಕು ನಿರ್ಗಮನವನ್ನು ಅರ್ಥ ಮಾಡಿಕೊಳ್ಳಲು. ವ್ಯಕ್ತ-ಅವ್ಯಕ್ತಗಳನ್ನು ಉಪೇಕ್ಷಿಸಿ ಕೇವಲ ಆಗಮನವನ್ನು ಆನಂದಿಸಲು!

‍ಲೇಖಕರು avadhi

March 4, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: