ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ವಿಚಿತ್ರ ದಿನ..

ಇಂದು ಅಂತರರಾಷ್ಟ್ರೀಯ ಅನುವಾದ ದಿನ.

ಎಸ್ ಜಯಶ್ರೀನಿವಾಸ ರಾವ್ ಅವರ ವಿಶೇಷ ಅನುವಾದಿತ ಕವಿತೆಗಳು ಇಲ್ಲಿವೆ.

ಮೂಲ : ಕುಂವರ್ ನಾರಾಯಣ್ (ಹಿಂದಿ ಕವಿ)

ಸಮಕಾಲೀನ ಆಧುನಿಕ ಹಿಂದಿ ಕಾವ್ಯದ ಖ್ಯಾತ ಕವಿ ಕುಂವರ್ ನಾರಾಯಣ್ ಅವರು 1927 ಸೆಪ್ಟೆಂಬರ್ 19 ರಂದು ಅಯೋಧ್ಯೆಯಲ್ಲಿ ಜನಿಸಿದರು. 

1951-ರಲ್ಲಿ, ಅವರು ಲಖ್‌ನೌ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ಹಿಂದಿ ಕಾವ್ಯದಲ್ಲಿ ಕುಂವರ್ ನಾರಾಯಣ್ ಅವರ ಸ್ಥಾನವು ಒಬ್ಬ ಅದ್ಭುತ ಪ್ರತಿಭೆಯ ಕವಿಯೆಂಬ ಖ್ಯಾತಿಯಲ್ಲಿದೆ.  ಅವರ ಕಾವ್ಯವು ಇತರ ಕವಿಗಳಿಗಿಂತ ಭಿನ್ನವಾಗಿವೆ. 

ಕಾವ್ಯದ ಜೊತೆಗೆ, ಅವರು ಇತಿಹಾಸ, ಪುರಾತತ್ತ್ವ ಶಾಸ್ತ್ರ, ಸಿನೆಮಾ, ಕಲೆ, ಶಾಸ್ತ್ರೀಯ ಸಾಹಿತ್ಯ, ಆಧುನಿಕ ಚಿಂತನೆ, ಸಮಕಾಲೀನ ವಿಶ್ವ ಸಾಹಿತ್ಯ, ಸಾಂಸ್ಕೃತಿಕ ವಿಮರ್ಶೆ ಇತ್ಯಾದಿಗಳಲ್ಲಿ ಆಸಕ್ತಿ ಹೊಂದಿದ್ದರು.  ಅವರು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದಲ್ಲೂ ತೀವ್ರ ಆಸಕ್ತಿಯನ್ನು ಹೊಂದಿದ್ದರು.  ಚಲನಚಿತ್ರ ವಿಮರ್ಶೆಗಳಲ್ಲಿ ಕೆಲಸ ಮಾಡಿದ ಕೆಲವೇ ಕೆಲವು ಹಿಂದಿ ಬರಹಗಾರರಲ್ಲಿ ಕುಂವರ್ ನಾರಾಯಣ್ ಒಬ್ಬರಾಗಿದ್ದಾರೆ.  ಅವರ ಸಭ್ಯತೆ, ಪ್ರಾಮಾಣಿಕತೆ, ನಮ್ರತೆ ಮತ್ತು ತಾಳ್ಮೆಯಿಂದಾಗಿ ಅವರನ್ನು “ಮಧ್ಯಮಮಾರ್ಗ ಸಿದ್ಧಾಂತದ ಕವಿ” ಎಂದೂ ಕರೆಯಲಾಗುತ್ತದೆ.

ಕುಂವರ್ ನಾರಾಯಣ್ ಅವರ ಪ್ರಮುಖ ಕವನ ಸಂಕಲನಗಳಲ್ಲಿ ಚಕ್ರವ್ಯೂಹ್ (1956), ಪರಿವೇಷ್: ಹಮ್ ತುಮ್ (1961), ಅಪ್ನೆ ಸಾಮ್ನೆ (1979). ಕೊಯಿ ದೂಸ್ರಾ ನಹಿಂ (1993), ಇನ್ ದಿನೋಂ (2002), ಹಾಶಿಯೆ ಕಾ ಗವಾಹ್ (2009) ಸೇರಿವೆ ಹಾಗೂ ಆತ್ಮಜಯಿ (1965), ವಾಜಶ್ರವಾ ಕೆ ಬೆಹನೇಂ (2008), ಕುಮಾರಜೀವ್ (2015) ಇವರು ರಚಿಸಿದ ಖಂಡಕಾವ್ಯಗಳಾಗಿವೆ.  1971-ರಲ್ಲಿ ಇವರ ಕಥಾ ಸಂಕಲನ ಆಕಾರೋಂ ಕೆ ಆಸ್‌ಪಾಸ್ ಪ್ರಕಟವಾಯಿತು. 

ಕವಾಫಿ, ಬೋರ್ಹೆಸ್, ಮಲಾರ್ಮೆ, ಪಾಬ್ಲೋ ನೆರೂಡ, ಗುಂಟರ್ ಗ್ರಾಸ್, ಟಾಡೆಉಷ್ ರೂಜ಼ಾವೀಚ್, ಜ಼್ಬಿಗ್ನಿಎಫ಼್ ಹೆರ್ಬೆರ್ತ್ ಮುಂತಾದ ಅನೇಕ ವಿದೇಶಿ ಭಾಷೆಯ ಕವಿಗಳ ಪ್ರಬಂಧಗಳು ಮತ್ತು ಕವಿತೆಗಳನ್ನು ನಾರಾಯಣ್ ಅವರು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ ಹಾಗೂ ನಾರಾಯಣ್ ಅವರ ಕೃತಿಗಳು ವಿವಿಧ ಭಾರತೀಯ ಭಾಷೆಗಳಿಗೆ ಮತ್ತು ಇಂಗ್ಲಿಷ್, ಇಟಾಲಿಯನ್, ಪೋಲಿಷ್, ಎಸ್ಟೋನಿಯನ್ ಮುಂತಾದ ವಿದೇಶಿ ಭಾಷೆಗಳಿಗೆ ಅನುವಾದಗೊಂಡಿವೆ.

1995-ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 2008-ರಲ್ಲಿ ಜ್ಞಾನಪೀಠ ಪ್ರಶಸ್ತಿ ಜೊತೆಗೆ 2009-ರಲ್ಲಿ ಭಾರತ ಸರ್ಕಾರವು ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.

*

ಕನ್ನಡಕ್ಕೆ : ಎಸ್. ಜಯಶ್ರೀನಿವಾಸ ರಾವ್

ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು ಹಾಗೂ ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನಕ್ಕಾಗಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. 

ಕೇರೂರ ವಾಸುದೇವಾಚಾರ್ಯರ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಸ್ವರಚಿತ ಶರ್ಲಾಕ್ ಹೋಮ್ಸ್ ಕತೆಯನ್ನು ಹಾಗೂ ದೀಪಾ ಹಿರೇಗುತ್ತಿಯವರ ತಪ್ತ  ಎಂಬ ಕತೆಯನ್ನು ಸಹ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಕನ್ನಡದ ಮೇರು ಕವಿ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ,’ ‘ಮ್ಯೂಜ಼್ ಇಂಡಿಯ,’ ಹಾಗೂ ‘ಮೈದಾನಂ’-ನಲ್ಲಿ ಪ್ರಕಟವಾಗಿವೆ. 

ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತ ವಿದೇಶಿ ಕವಿಗಳ ಕವನಗಳು ಕನ್ನಡ ಸಾಹಿತ್ಯ ಪತ್ರಿಕೆಗಳಾದ ಭಾಷಾ ಭಾರತಿ, ಅವಧಿ, ಕೆಂಡಸಂಪಿಗೆ, ಋತುಮಾನ, ಅಕ್ಷರ ಸಂಗಾತ, ಹಾಗೂ ಮಿಂಚುಳ್ಳಿ-ಯಲ್ಲಿ ಪ್ರಕಟವಾಗಿವೆ.  

ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದಿಸಿದ ಪೋಲಂಡ್ ದೇಶದ ಕವನಗಳ ಸಂಕಲನ, “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’,” ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಏಪ್ರಿಲ್ 2022-ರಲ್ಲಿ ಪ್ರಕಟಿಸಿತು. “ಬಾಲ್ಟಿಕ್ ಕಡಲ ಗಾಳಿ” ಎಂಬ ಹೆಸರಿನಲ್ಲಿ ಇವರು ಕನ್ನಡಕ್ಕೆ ಅನುವಾದ ಮಾಡಿದ ಎಸ್ಟೋನಿಯಾ, ಲ್ಯಾಟ್ವಿಯಾ, ಹಾಗೂ ಲಿಥುವೇನಿಯಾ ದೇಶದ ಕವನಗಳ ಸಂಕಲನವನ್ನು ಮಸ್ಕಿಯ ಬಂಡಾರ ಪ್ರಕಾಶನವು ಡಿಸೆಂಬರ್ 2024-ರಲ್ಲಿ ಪ್ರಕಟಿಸಿತು. 

ದ ಹಿಂದು’ ದಿನಪತ್ರಿಕೆಯು ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿಯನ್ನು ಜನವರಿ-ಡಿಸೆಂಬರ್ 2020-ರ ಅವಧಿಯಲ್ಲಿ ಪ್ರಕಟಿಸಿತ್ತು.  ಜಯಶ್ರೀನಿವಾಸ ರಾವ್ ಅವರು ಕನ್ನಡ ಅರುಣೋದಯ ಸಾಹಿತ್ಯ ಹಾಗೂ ಅನುವಾದ ವಿಷಯಗಳ ಬಗ್ಗೆ ಬರೆದ ಪ್ರಬಂಧಗಳು ದೇಶದ ಹೆಸರಾಂತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.        

ಹೈದರಾಬಾದಿನ CIEFL-ನಲ್ಲಿ (ಈಗ The EFL University) PGDES ಹಾಗೂ M.Phil. ಪದವಿಗಳನ್ನು ಪಡೆದು, ಅದೇ ವಿಶ್ವವಿದ್ಯಾಲಯದಲ್ಲಿ ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003-ರಲ್ಲಿ PhD ಪದವಿ ಪಡೆದರು.

೧. ಚಿಟ್ಟೆಗಳ ನಾಡಿನಲ್ಲಿ (ಹಿಂದಿ ಮೂಲ: ತಿತ್ಲಿಯೋಂ ಕೆ ದೇಶ್ ಮೆ)

ಒಂದಾನೊಂದು ಸಲ
ನಾನು ಚಿಟ್ಟೆಗಳ ನಾಡನ್ನು ತಲುಪಿದೆನೆಂದು
ಅಲ್ಲಿ ಒಂದು ಚಿಟ್ಟೆ ನನ್ನನ್ನು
ಅಟ್ಟಿಸಿಕೊಂಡು ಬರುತ್ತಿದೆಯೆಂದು
ಭ್ರಮೆಯಾಯಿತು.

ನಾನು ನಿಂತು ಬಿಟ್ಟೆ
ಅದೂ ನಿಂತಿತು,
ನಾನು ತಿರುಗಿ ನನ್ನ ಹಿಂದೆ ನೋಡಿದೆ
ಅದೂ ತಿರುಗಿ ತನ್ನ ಹಿಂದೆ ನೋಡಿತು,
ಮತ್ತೆ ನಾನು ಅದರ ಹಿಂದೆ ಓಡತೊಡಗಿದಾಗ
ಅದೂ ತಾನು ತಿರುಗಿದ ದಿಕ್ಕಿನಲ್ಲಿ ಓಡತೊಡಗಿತು.

ನಿಜ ಸಂಗತಿಯೇನೆಂದರೆ
ತಾನು ಚಿಟ್ಟೆಗಳ ನಾಡಿನಲ್ಲಿದ್ದೇನೆಂದು
ತನ್ನನ್ನು ಯಾರೋ ಅಟ್ಟಿಸಿಕೊಂಡು ಬರುತ್ತಿದ್ದಾರೆಂದು
ನನ್ನ ಹಾಗೇ ಅದೂ ಭ್ರಮೆಯಲ್ಲಿತ್ತು.

. ಕವಿತೆ (ಹಿಂದಿ ಮೂಲ: ಕವಿತಾ)

ಕವಿತೆ ಒಂದು ಹೇಳಿಕೆಯಲ್ಲ, ಅದು ಸಾಕ್ಷಿಯ ಹಾಗೆ
ಕೆಲವೊಮ್ಮೆ ನಮ್ಮ ಎದುರಿಗೆ ನಿಂತಿರುತ್ತೆ
ಕೆಲವೊಮ್ಮೆ ನಮ್ಮನ್ನು ದಾಟಿ ಮುಂದಕ್ಕೆ ಹೋಗಿರುತ್ತೆ
ಕೆಲವೊಮ್ಮೆ ನಮ್ಮ ಹಿಂದೆ ಇರುತ್ತೆ

ನುಡಿಯಲ್ಲಿ ಅದು ನೀಡುವ ಸಾಕ್ಷಿವಾಕ್ಯವನ್ನು
ಯಾರು ಎಷ್ಟು ಬಯಸಿದರೂ ತಡೆಯಲಿಕ್ಕಾಗಲ್ಲ
ಅದರ ಒಟ್ಟಾರೆ ಉದ್ದೇಶ ಸತ್ಯ ಸಾರುವುದು
ಅದರ ಪುರ್ಣ ಪ್ರಯತ್ನ ಮನುಜರನ್ನು ಉತ್ತಮರನ್ನಾಗಿಸುವುದು

ಅದಕ್ಕೆ ಯಾವುದೇ ತರಹದ ಹಪಹಪಿಯಿಲ್ಲ
ತಾನು ಜಾಹೀರಾತುಗಳ ತರಹ ಅಂಟಬೇಕು
ಮೆರವಣಿಗೆಗಳ ತರಹ ಹೊರಡಬೇಕು
ಘೋಷಣೆಗಳ ತರಹ ಮೊಳಗಬೇಕು
ಅಥವಾ ಚುನಾವಣೆಗಳ ತರಹ ಗೆಲ್ಲಬೇಕು ಅಂತ

ತಾನು ಮನುಜರ ನುಡಿಯಲ್ಲಿ
ಎಲ್ಲಾದರೂ ಹೇಗಾದರೂ
ಜೀವಂತವಾಗಿರಬೇಕು, ಅಷ್ಟೇ …

೩. ಒಂದು ವಿಚಿತ್ರ ದಿನ (ಮೂಲ: ಏಕ್ ಅಜೀಬ್ ದಿನ್ )

ಇವತ್ತು ಇಡೀ ದಿನ ಹೊರಗೆ ಸುತ್ತುತ್ತಲಿದ್ದೆ
ಯಾವುದೇ ಅನಾಹುತ ಘಟಿಸಲಿಲ್ಲ.

ಇವತ್ತು ಇಡಿ ದಿನ ಜನರನ್ನು ಭೇಟಿಯಾಗುತ್ತಲಿದ್ದೆ
ಎಲ್ಲೂ ಅಪಮಾನಿತನಾಗಲಿಲ್ಲ.

ಇವತ್ತು ಇಡೀ ದಿನ ನಿಜ ಹೇಳುತ್ತಲಿದ್ದೆ
ಯಾರೂ ತಪ್ಪಾಗಿ ತೆಗೆದುಕೊಳ್ಳಲಿಲ್ಲ.

ಇವತ್ತು ಎಲ್ಲರನ್ನೂ ನಂಬಿದೆ
ಎಲ್ಲೂ ಮೋಸಹೋಗಲಿಲ್ಲ.

ಮತ್ತೆ ಇವೆಲ್ಲವನ್ನೂ ಮೀರಿದ ದೊಡ್ಡ ಚಮತ್ಕಾರವೇನೆಂದರೆ
ಮನೆಗೆ ಮರಳಿ ಬಂದಾಗ ನಾನು ಬೇರೆ ಯಾರನ್ನೂ ಅಲ್ಲ

ನನ್ನನ್ನೇ ನಾನು ಕಂಡೆ ಹಿಂದಿರುಗಿ ಬಂದಂತೆ.

೪. ಕೊನೆಯ ಶಿಖರ (ಮೂಲ: ಅಂತಿಮ್ ಊಂಚಾಯಿ)

ಮುಂದೆ ಸಾಗುವುದರ ಉದ್ದೇಶ ಎಷ್ಟೊಂದು ಸ್ಪಷ್ಟವಾಗುವುದು
ಹತ್ತೂ ದಿಕ್ಕುಗಳು ನಮ್ಮ ಸುತ್ತಮುತ್ತ ಇರದೆ
ನಮ್ಮ ಎದುರೇ ಇರುವುದಾದರೆ.

ನಡೆಯುತ್ತ ಹೋಗುವುದು ಎಷ್ಟೊಂದು ಸುಲಭವಾಗುವುದು
ನಾನು ಮಾತ್ರ ನಡೆಯುತ್ತಾ
ಉಳಿದವರೆಲ್ಲರೂ ನಿಂತೇ ಇರುವುದಾದರೆ.

ಈ ತಲೆಬುಡವಿಲ್ಲದ ಜಗತ್ತನ್ನು ನಾನು ಹಲವು ಸಲ
ಹತ್ತು ತಲೆಗಳಿಂದ ಯೋಚಿಸುವ ಹಾಗೂ
ಇಪ್ಪತ್ತು ಕೈಗಳಿಂದ ಪಡೆಯುವ ಪ್ರಯತ್ನದಲ್ಲಿ
ನನಗಾಗಿ ನಾನು ಬಹಳ ಕಷ್ಟಗಳನ್ನು ಕಟ್ಟಿಕೊಂಡಿರುವೆ.

ಮೊದಮೊದಲು ಎಲ್ಲರೂ ಬಯಸುತ್ತಾರೆ
ಎಲ್ಲವೂ ಮೊದಲಿನಿಂದ ಮೊದಲಾಗಲಿ ಎಂದು,
ಆದರೆ ಕೊನೆ ತಲುಪುತ್ತಾ ತಲುಪುತ್ತಾ ಧೈರ್ಯ ಕಳೆದುಕೊಳ್ಳುತ್ತಾರೆ.
ನಮ್ಮ ಇಚ್ಛೆಯ ಮೇರೆಗೆ
ಇಷ್ಟು ಸಡಗರದಿಂದ ಪ್ರಾರಂಭವಾದ ಇವೆಲ್ಲ
ಹೇಗೆ ಕೊನೆಯಾಗುವುದೆಂದು ಅರಿಯಲು
ನನಗೆ ಯಾವ ಆಸಕ್ತಿಯೂ ಉಳಿದಿಲ್ಲ.

ದುರ್ಗಮ ಕಾಡುಗಳು ಹಾಗೂ ಎತ್ತರದ ಪರ್ವತಗಳನ್ನು ಜಯಿಸುತ್ತಾ
ನೀನು ಕೊನೆಯ ಶಿಖರವನ್ನು ಸಹ ಜಯಿಸಿದಾಗ –
ಆಗ ನಿನಗನಿಸುತ್ತೆ ಯಾವ ಅಂತರವೂ ಉಳಿದಿಲ್ಲ ಈಗ
ನಿನ್ನ ಮತ್ತು ನೀನು ಜಯಿಸಿದ ಆ ಕಲ್ಲುಗಳ ಕಠೋರತೆಯ ನಡುವೆ –
ನಿನ್ನ ತಲೆಗೆ ಬಡಿದ ಮೊದಲ ಹಿಮಬಿರುಗಾಳಿಯನ್ನು ತಾಳಿಕೊಂಡು
ನಡುಗದೇ ನಿಂತಾಗ –
ಆಗ ನಿನಗರಿವಾಗುತ್ತದೆ ಎಲ್ಲವನ್ನೂ ಜಯಿಸಿವುದರಲ್ಲಿ
ಹಾಗು ಕೊನೆಯವರೆಗೆ ಧೈರ್ಯ ಕಳಕೊಳ್ಳದೇ ಇರುವುದರಲ್ಲಿ
ಯಾವ ವ್ಯತ್ಯಾಸವೂ ಇಲ್ಲವೆಂದು.

೫. ಅಪೂರ್ಣ ಕವಿತೆಗಳು (ಮೂಲ: ಅಧೂರಿ ಕವಿತಾಯೇಂ)

ಬಿಟ್ಟುಹೋಗುತ್ತವೆ ಕವಿತೆಗಳು
ಒಮ್ಮೊಮ್ಮೆ
ಜೀವನದ ಹಾಗೆ
ಎಲ್ಲಾದರೂ ಎಂತಾದರೂ

ಅವನ್ನು ಪೂರ್ಣಗೊಳಿಸಬೇಕೆಂಬ
ಒಂದು ಸಣ್ಣ ಆಸೆ ಸಹ
ಬಹು ದೊಡ್ಡ ಲಕ್ಷ್ಯದಂತನಿಸುತ್ತದೆ

ಬರಿಸಲು ಬಯಸುವುದಿಲ್ಲ ನಾನು
ಕವಿತೆಗಳ ಅಂತ್ಯವನ್ನು

ಅಂತ್ಯ ಮುಗಿಸಿಬಿಡುವ
ಆ ಜೀವಂತ ಸಂಬಂಧವನ್ನು
ಹಿಡಿದಿಡಲು ಬಯಸುವೆ

ಬರೆಯಲು ಬಯಸುವೆ ನಾನು
ಆರಂಭಗಳಿಂದ, ಭರವಸೆಗಳಿಂದ
ಹೊಳೆಯುವ ಕವಿತೆಗಳನ್ನು,
ಇಷ್ಟೇ ನನ್ನ ಬಯಕೆ.

ಓದಬಹುದು ಅವನ್ನು
ಕ್ರಮಾನುಸಾರವಾಗಲ್ಲ
ವ್ಯತಿಕ್ರಮಾನುಸಾರವಾಗಿ

ಆರಂಭದಿಂದ ಅಂತ್ಯದವರೆಗಲ್ಲ
ಅಂತ್ಯದಿಂದ ಆರಂಭದ ತನಕ
ಅಥವಾ ಮಧ್ಯದಿಂದ ಮಧ್ಯದ ತನಕ

ಅಡವಿಗಳಲ್ಲಿ ಅಲೆದಾಡಿದಂತೆ
ಎಲ್ಲಾದರೂ ಎಂತಾದರೂ, ಹೀಗೆ ಸುಮ್ಮನೆ …

‍ಲೇಖಕರು Admin

30 September, 2025

1 Comment

  1. ಕಮಲಾಕರ ಕಡವೆ Kamalakar Bhat

    Lovely poems. Excellent translation

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading