ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಒಂದು ರೈಲು, ರೈಲು ನಿಲ್ದಾಣ ಒನ್ ವೇ ಬದುಕು…’ – ಪ್ರವರ ಕೊಟ್ಟೂರ್ ಕವನ

ರೈಲು ನಿಲ್ದಾಣ

ಪ್ರವರ ಕೊಟ್ಟೂರ್

ಆ ರೈಲು ನಿಲ್ದಾಣ್ದಲ್ಲಿ
ತುಕ್ಕು ಹಿಡಿದ ರೈಲುಗಳೇ
ಒಂಟಿಯಾಗಿಯೋ, ಅಪರಿಚಿತವಾಗಿಯೋ
ಕಾಣಿಸುವಾಗೆಲ್ಲಾ
ನೋಟೀಸು ಬೇರ್ಡು ನೋಡಿಕೊಳ್ಳುತ್ತೇನೆ
 
ಸರತಿ ಬಂದಾಗಲೆಲ್ಲಾ
ತೆಗೆದುಕೊಳ್ಳುವ ಟಿಕೇಟಿಗೆ ಒಂದೊಂದು ನಂಬರ್
ನಿನ್ನದೊಂದು ನಂಬರ್
ನನ್ನದೊಂದು ನಂಬರ್
 
ಹಿಂದುಗಡೆ ನೋಡಿದರೆ
ಸುಖಕರ ಪ್ರಯಾಣದ ವಿಶ್ ಇದೆ,
ಪುಣ್ಯಕ್ಕೆ
ಅಳುತ್ತಾ ಮೂಗು ಸೀಟುತಿದ್ದ
ಹೆಣ್ಣುಮಗಳಿಗೆ ಓದಲು ಬರುವುದಿಲ್ಲ
ಆಕೆಯ ಗಂಟಿನಲ್ಲಿ ಮುಗ್ಗು ವಾಸನೆಯ
ಸೀರೆಗಳು

ಅದ್ಯಾಕೆ ಸಾವಿರ ಸುಕ್ಕಿನ ಮುದುಕಿ
ಬೆಂಚಿನ ಮೇಲೆ ಕೂರುವುದಿಲ್ಲ?
ರೈಲು ಕಾಯುತ್ತಿಲ್ಲ ಅದು
ಮುಂದಿಟ್ಟ ತಟ್ಟೆಗೆ ಬಿದ್ದ
ಚಿಲ್ಲರೆ ಕಾಸು ಹಾರುತ್ತವೋ ಹೇಗೆ ಎಂದು
ಒಂದು ಕಣ್ಣಿಟ್ಟಿದ್ದಾಳೆ
ಹತ್ತಿಪ್ಪತ್ತು ಪೈಸೆ ನಡೆಯುವುದಿಲ್ಲ
ಹಾಗಾಗಿ ಹಾರಬಹುದೋ ಏನೋ
 
ಚಲಾವಣೆಯಿಲ್ಲದ ಚಿಲ್ಲರೆ ಕಾಸೂ ಮತ್ತು
ಹರಿದ ನೋಟಿನಂಥಾ ಮುದುಕಿಗೆ
ಖಂಡಿತಾ ಒಂದು ದಿನ ಹಾರಲು ರೆಕ್ಕೆ ಬರಬೇಕೆಂದು
ಅನ್ನಿಸಿತು
 
ನನಗೆ ಆಶ್ಚರ್ಯ ಅನ್ನಿಸಿದ್ದು
ಗೋಡೆ ಗಡಿಯಾರ
ಜೇಡದ ಬಲೆಯೊಳಗೆ
ಗಂಟೆಗಳನ್ನೂ
ಸೆಕೆಂಡುಗಳನ್ನೂ
ಬಿಡಿ ಬಿಡಿಯಾಗಿ ಹರಡಿಕೊಂಡಿದೆ,
ಜೇಡರ ಹುಳದ ನೆತ್ತಿಗೆ ನಾಲ್ಕು ಕಣ್ಣುಗಳು
ಪ್ರಯಾಣಿಕನ ಮೇಲೆ
ನಿಗಾ ಇಟ್ಟಿರಬಹುದು
 
ಎಷ್ಟು ದೂರ ನಡೆಯುವುದು
ಹೆಜ್ಜೆಗಳಲ್ಲಿ ಮತ್ತೆ ಮತ್ತೆ ಹಳಿಗಳದ್ದೇ
ನೆರಳು
ಹಸಿರು ಬಾವುಟ ಹಿಡಿದವನ
ಮುಖದಲ್ಲಿ ಬೇನಾಮಿ ಬೆವರು
ಹೆಂಡತಿಯನ್ನು ಪಿಟಿಪಿಟಿ ಎಂದು ಬಯ್ದುಕೊಳ್ಳದೇ
ಬೇರೆ ವಿಧಿಯಿಲ್ಲ,
ರೈಲು, ನಿಲ್ದಾಣ ಬಿಡುವವರೆಗೂ
ಆಕಾಶಕ್ಕೆ ಮುಖಮಾಡಿ ನಿಂತ ಬೋಳು ಮರ
ಮೈಯಿಗೆ ಅದ್ಯಾವುದೋ ಕಾಮಬಳ್ಳಿ
ಹಬ್ಬಿಕೊಂಡಿದೆಯಂತೆ
 
ನಿನ್ನ ಮುಖದಲ್ಲಿ
ಒಂದು ಹಿಡಿ ನಗು ನೋಡಬೇಕಲ್ಲ
ರೈಲಿನ ಕೂಗು ಕಿವಿಯಲ್ಲಿ
ಊದಿ ಓಡುತ್ತೇನೆ
ಮುಟ್ಟಾಟವಾಡುವ ನೆವದಲ್ಲಿ
ಊರು ಸೇರಿಬಿಡುವ
 
ಮನೆ ಕಿಡಕಿಯಿಂದ ರೈಲಿನ ಸದ್ದು ಮತ್ತು
ಹೊಗೆ ಎರಡೂ ನಿಚ್ಚಳವಾಗಿ ಕಾಣುತ್ತವೆ
ಮನಸ್ಸಿನಲ್ಲಿ ಅಚ್ಚು ಒತ್ತಿಕೊಳ್ಳುತ್ತೇನೆ
 
ಒಂದು ರೈಲು, ರೈಲು ನಿಲ್ದಾಣ
ಒನ್ ವೇ ಬದುಕು
 
 

‍ಲೇಖಕರು G

5 November, 2013

7 Comments

  1. sunil rao

    Beautiful

  2. Rajendra Prasad

    ಚೆನ್ನಾಗಿದೆ ಪ್ರವರ.. ನಿನ್ನರೂಪಕಕ್ಕೆ ನಾನು ಬೆರಗಾಗಿದ್ದೇನೆ…

  3. Chidambar Narendra

    Excellent Pravara.

  4. bharathi b v

    Alle jotheyalli ninthu kaanthiddeeveno an so Haage intense

  5. Vidyashankar H

    ಹೊಸಪೇಟೆ-ಹಗರಿಬೊಮ್ಮನಹಳ್ಳಿ-ಕೊಟ್ಟುರ್ ನೆನಪಾಯಿತು… ಬಾಲ್ಯ ನೆನಪಾಗಿ ಕಣ್ಣು ನೀರಾಡಿತು

  6. Vidyashankar H

    ಹೊಸಪೇಟೆ-ಹಗರಿಬೊಮ್ಮನಹಳ್ಳಿ-ಕೊಟ್ಟುರ್ ರೈಲು ನೆನಪಾಯಿತು… ಬಾಲ್ಯ ನೆನಪಾಗಿ ಕಣ್ಣು ನೀರಾಡಿತು

  7. Shidram Talawar

    tumba chennagide pravar, Notice Board badalagi berd antha irodn swalp tidkobeku aste

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading