ಒಂದು ಪೀಳಿಗೆಯ ಋಣ ತೀರಿತು!

ಜಾನುವಾರಗಳಲ್ಲಿ ಕೊಟ್ಟ ಹೆಣ್ಣಷ್ಟೇ ಅಲ್ಲ, ಗಂಡೂ ಕುಲದಿಂದ ಹೊರಕ್ಕೆ…

-ಸ್ಕಂದ ಆಗುಂಬೆ

ಹದಿನೈದು ದಿನಗಳ ಹಿಂದೆ ಬೇರೆಡೆಗೆ ಹೊರಟು ಹೋದ ಪುಣ್ಯಕೋಟಿಯ ಕಳೆದ ವರ್ಷದ ಮಗನನ್ನು ಇಂದು ಕಳುಹಿಸಿ ಕೊಡಲಾಯಿತು. ತಂಟೆ, ತಕರಾರು ಮಾಡುವ ಗಂಡು ಕರುವಿನ ಬಗ್ಗೆ ತೋರ್ಪಡಿಕೆಗೆಂಬಂತೆ ಸಿಟ್ಟು ಬಂದರೂ, ಮನಸ್ಸಿನಾಳದಲ್ಲಿ ಸದ್ದಿಲ್ಲದೇ ಬಲವಾದ ಪ್ರೀತಿ ಬೆಳೆದಿತ್ತು. ಅವನ ಗತ್ತು, ಗಾಂಭೀರ್ಯ, ಸಿಟ್ಟು, ಲೂಟಿ ಇವೆಲ್ಲವೂ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಅವನನ್ನು ಪ್ರೀತಿಸಲು ಕಾರಣಗಳಾಗಿದ್ದವು.

ಇಂದು ಅವನನ್ನು (ಬೆಳ್ಳು) ಕಳುಹಿಸಿ ಕೊಡುವ ಮೂಲಕ  ನಮ್ಮ ಮನೆಯಿಂದ ಒಂದು ಪೀಳಿಗೆಯನ್ನೇ ಕಳುಹಿಸಿಕೊಟ್ಟಂತಾಯಿತು.

ಈ ನೆಪದಲ್ಲಿ ಒಂದಷ್ಟು ಮೆಲುಕು.

ನಮ್ಮ ಮನೆಯ ಜಾನುವಾರುಗಳಲ್ಲಿ ಎರಡು ಕುಟುಂಬ.‌ ಒಂದು ಕಾವೇರಿಯದ್ದು, ಇನ್ನೊಂದು ಮಂಜಿಯದ್ದು. ಇವೆರಡೂ ನಮ್ಮ ಮನೆಯಲ್ಲಿಯೇ ಹುಟ್ಟಿದ ಮಲೆನಾಡು ಗಿಡ್ಡ ತಳಿಯವೇ ಆದರೂ ಎರಡರ ಮೂಲವೂ ಬೇರೆ ಬೇರೆ.

ಕಾವೇರಿ: ಕಾವೇರಿಯ ಅಮ್ಮ ಸುಮಾರು ವರ್ಷವಾದರೂ ಗರ್ಭ ಧರಿಸದಿದ್ದಾಗ ಅವಳಿಗೆ ತಲಕಾವೇರಿಯಿಂದ ತಂದ ಹುಲ್ಲನ್ನು ಹಾಕಲಾಯಿತಂತೆ. ಅದರ ಫಲವಾಗಿಯೇ ಕರು ಹುಟ್ಟಿತೆಂಬ ನಂಬಿಕೆಯಿಂದ ಆ ಹೆಣ್ಣು ಕರುವಿಗೆ “ಕಾವೇರಿ” ಎಂಬ ನಾಮಕಾರಣವಾಯಿತು. ನನಗೆ ಕಾವೇರಿಯ ಅಮ್ಮ ಲಕ್ಷ್ಮಿಯನ್ನು ನೋಡಿದ ನೆನಪಿಲ್ಲವಾದ್ದರಿಂದ ಲಕ್ಷ್ಮಿ ಕುಟುಂಬ ಎನ್ನುವ ಬದಲು, ಕಾವೇರಿ ಕುಟುಂಬ ಎನ್ನುವುದೇ ರೂಢಿ.

ಕಾವೇರಿಯ ವಿಶೇಷತೆ ಎಂದರೆ ಅವಳಿಗಿದ್ದಿದ್ದು ಒಂದೇ ಕೋಡು (ಕೊಂಬು). ಇನ್ನೊಂದು ಬದಿಯ ಕೋಡು ಮೂಡಬೇಕಾದ ಜಾಗವನ್ನು ಮುಟ್ಟಿದರೆ ಚರ್ಮದ ಕೆಳಗೆ ಟೊಳ್ಳಾಗಿರುವಂತೆ ಅನ್ನಿಸುತ್ತಿತ್ತು. ವಯಸ್ಸಿನಲ್ಲಿ ಕಾವೇರಿ ನನಗಿಂತ ಹೆಚ್ಚೂ ಕಡಿಮೆ ಒಂಬತ್ತು ವರ್ಷ ದೊಡ್ಡವಳು. ನನಗೆ ಬುದ್ದಿ ಬರುವಷ್ಟರಲ್ಲಿ ಅವಳಿಗೆ ಸುಮಾರು ಹದಿಮೂರು ಹದಿನಾಲ್ಕು ವರ್ಷ. ಅಷ್ಟು ದೊಡ್ಡವಳಾದರೂ ಅವಳೊಂದಿಗೆ ಎಷ್ಟು ಸಲುಗೆ ಇತ್ತೆಂದರೆ ಅವಳ ಹೊಟ್ಟೆ ಅಡಿ ನುಸುಳುವುದು, ಕುತ್ತಿಗೆಗೆ ಜೋತು ಬೀಳುವುದು ಮಾಡುತ್ತಿದ್ದೆ. ಒಂದೇ ಒಂದು ದಿನವೂ ಅವಳಿಂದ ಹಾಯಿಸಿಕೊಂಡಿದ್ದಾಗಲೀ, ಒದೆಸಿಕೊಂಡಿದ್ದಾಗಲೀ ಇಲ್ಲವೇ ಇಲ್ಲ. ನಾನು ಮೊಟ್ಟಮೊದಲು ಹಾಲು ಕರೆದದ್ದು ಕೂಡ ಕಾವೇರಿಯದ್ದೇ.

ಸುಮಾರು ಕರುಗಳನ್ನು ಹೆತ್ತ ನಂತರ ಕಾವೇರಿ ಇನ್ನುಮುಂದೆ ಕರು ಹಾಕಲಿಕ್ಕಿಲ್ಲ ಎಂದು ನಾವು ಭಾವಿಸುವುದು ಮತ್ತು ಇದೇ ಕೊನೆಯ ಕರುವೇನು ಎಂಬಂತೆ ಅವಳು ಹೆರುವುದು ಸುಮಾರು ಮೂರ್ನಾಲ್ಕು ಬಾರಿ ಆಯಿತು. ಹಾಗೆ ಅವಳು ಇನ್ನೇನು ಕರು ಹಾಕುವುದು ನಿಂತು ಹೋಯಿತು ಎನ್ನುವಷ್ಟರಲ್ಲಿ ಗರ್ಭಧರಿಸಿ ಸಂಕ್ರಾಂತಿ ಹಬ್ಬದ ದಿನವೇ ಹೆಣ್ಣು ಕರುವೊಂದಕ್ಕೆ ಜನ್ಮವಿತ್ತಳು‌. ಆ ಕರುವಿಗೆ ನಾವು “ಸಂಕ್ರಾಂತಿ” ಅಂತಲೇ ಹೆಸರಿಟ್ಟು, ಅದನ್ನು ಕಾವೇರಿಯ ಸಂತತಿಯ ಪ್ರತೀಕವಾಗಿ ಮನೆಯಲ್ಲೇ ಇಟ್ಟುಕೊಳ್ಳುವುದೆಂದು ತೀರ್ಮಾನವಾಯಿತು. ಆದರೆ, ಅಷ್ಟರಲ್ಲೇ ಕಾವೇರಿ ಮತ್ತೊಮ್ಮೆ ಗರ್ಭ ಧರಿಸಿದ್ದರಿಂದ ಮುಂದೆ ಹುಟ್ಟಲಿರುವ ಕರುವೇ ಕೊನೆಯ ಕರುವಾಗಬಹುದು ಹಾಗೂ ಅದನ್ನೇ ಇಟ್ಟುಕೊಂಡರಾಯಿತು ಎಂದುಕೊಂಡು “ಸಂಕ್ರಾಂತಿ”ಯನ್ನು ಇಲ್ಲೇ ಮನೆಯ‌ ಹತ್ತಿರದಲ್ಲೇ ಒಬ್ಬರಿಗೆ ಕೊಡುವ ನಿರ್ಧಾರವಾಯಿತು.

ಅದರಂತೆ ಅದೊಂದು ದಿನ ಬೆಳಗ್ಗೆ “ಸಂಕ್ರಾಂತಿ”ಯನ್ನು ಹೊಡೆದುಕೊಂಡು ಹೋಗ ಬಯಸಿದ್ದವರು ಹಗ್ಗ ಸಮೇತ ಬಂದರು. ಅವತ್ತು ನನಗೆ ದುಃಖ ತಡೆಯಲಾಗದೆ ಸಂಕ್ರಾಂತಿಯ ಕುತ್ತಿಗೆಯನ್ನು ಒತ್ತಿ ಹಿಡಿದು, ಇವಳನ್ನು ಕೊಡುವುದು ಬೇಡವೆಂದು ಜೋರಾಗಿ ಅತ್ತುಬಿಟ್ಟಿದ್ದೆ. ನನ್ನ ಅಳುವನ್ನು ನೋಡಿ, ಕರುವನ್ನು ತೆಗೆದುಕೊಂಡು ಹೋಗಲು ಬಂದವರು “ಈ ಮಾಣಿ ಮನ್ಸಿಗೆ ಬೇಜಾರ್ ಮಾಡಿ ಕರು ತಗೊಂಡ್ ಹೋದ್ರೆ ಒಳ್ಳೇದಾಗಲ್ಲ. ಅದ್ಕೆ ನಿಮ್ಮನೆ ಋಣವೇ ಇದೆ. ನೀವೇ ಸಾಕಿ” ಎಂದು ಹೇಳಿ ಬರಿಗೈಯಲ್ಲಿ ವಾಪಾಸು ಹೋದರು. ಅದಾಗಿ ಸ್ವಲ್ಪ ದಿನಕ್ಕೆ ಕಾವೇರಿ ಮತ್ತೊಂದು ಕರುವನ್ನು ಹೆತ್ತು ಬಿಟ್ಟಳು. ಹೋಗಿ ನೋಡಿದರೆ ಗಂಡು ಕರು‌. ಮತ್ತು ಅದು ಅವಳ ಕೊನೆಯ ಹೆರಿಗೆ ಆಗಿತ್ತು! ಅಪ್ಪಿತಪ್ಪಿ ಒಂದು ವೇಳೆ “ಸಂಕ್ರಾಂತಿ”ಯನ್ನು ಕೊಟ್ಟಿದ್ದರೆ, ಕಾವೇರಿಯ ಸಂತತಿ ಅವಳೊಂದಿಗೇ ಮುಗಿದು ಹೋಗುತ್ತಿತ್ತು.

ಕರು ಹಾಕುವುದನ್ನು ನಿಲ್ಲಿಸಿದ ನಂತರವೂ ಕಾವೇರಿ ಸುಮಾರು ಏಳೆಂಟು ವರ್ಷಗಳ ಕಾಲ ಬದುಕಿದ್ದಳು, ಕೊನೆಗೆ ತನ್ನ ಇಪ್ಪತ್ತೆಂಟನೇ ವಯಸ್ಸಿನಲ್ಲಿ ಕೊಟ್ಟಿಗೆಯಲ್ಲಿ ಮಲಗಿದ್ದವಳು ಸದ್ದಿಲ್ಲದೇ ಚಿರನಿದ್ರೆಗೆ ಜಾರಿದಳು ಮತ್ತು ಎರಡೂವರೆ ದಶಕಕ್ಕೂ ಮೀರಿದ ತನ್ನ ಬಾಂಧವ್ಯವನ್ನು ಸಂಕ್ರಾಂತಿಯ ರೂಪದಲ್ಲಿ ಉಳಿಸಿ ಹೋದಳು.

ಇದೀಗ ಸಂಕ್ರಾಂತಿಗೂ ನಿಧಾನಕ್ಕೆ ವಯಸ್ಸಾಗುತ್ತಾ ಬಂತು. ಜೊತೆಗೆ ಅವಳ ಇಬ್ಬರು ಮಕ್ಕಳು ಕೊಟ್ಟಿಗೆಯಲ್ಲಿದ್ದಾರೆ. ಒಬ್ಬಳು -ನಮ್ಮ ಅಜ್ಜ, ದೊಡ್ಡಮ್ಮ ಕಾಶಿಯಾತ್ರೆ ಮುಗಿಸಿಕೊಂಡು ಬಂದ ಸಂದರ್ಭದಲ್ಲಿ ಹುಟ್ಟಿದ್ದರಿಂದ ಅವಳಿಗೆ “ಕಾಶಿ” ಎಂದೇ ಹೆಸರಿಡಲಾಗಿದೆ. ಚಿಕ್ಕವಳಿಗೆ “ಕಾವೇರಿ” ಎಂದು ಅಜ್ಜಿಯ ಹೆಸರೇ ನಾಮಕರಣವಾಗಿದೆ. ಒಂದೂವರೆ ತಿಂಗಳ ಹಿಂದೆ “ಕುಮಾರಿ” ಎನ್ನುವವಳೊಬ್ಬಳನ್ನು ಕಳುಹಿಸಿಕೊಡಲಾಯಿತು, ಅವಳು ನಮ್ಮ ಅಜ್ಜ (ಕುಮಾರಯ್ಯ) ಹೋದ ಒಂದು ತಿಂಗಳಿಗೆ ಸರಿಯಾಗಿ ಹುಟ್ಟಿದ್ದರಿಂದ ಕುಮಾರಿ ಎಂಬ ಹೆಸರಿಡಲಾಗಿತ್ತು.

ಈಗ ಕೊಟ್ಟಿಗೆಯಲ್ಲಿರುವುದು ಸಂಕ್ರಾಂತಿ ಮತ್ತು ಅವಳ ಇಬ್ಬರು ಹೆಣ್ಣುಮಕ್ಕಳು ಮತ್ತು ಇವರೀಗ ನಮ್ಮ‌ ಮನೆಯಲ್ಲಿರುವ ಕಾವೇರಿಯ ಕುಡಿಗಳು.

ಮಂಜಿ: ಬರೀ ಕಪ್ಪು ಬಣ್ಣದ ದನಗಳೇ ಇದ್ದ ಕೊಟ್ಟಿಗೆಯಲ್ಲಿ ಹಾಲು ಬಣ್ಣದ ಗಲ್ಲವನ್ನು ಹೊತ್ತು ಹುಟ್ಟಿದ ಹುಡುಗಿ ಮಂಜಿ. ಇವಳು ವಯಸ್ಸಿನಲ್ಲಿ ನನಗಿಂತ ಒಂದೆರೆಡು ವರ್ಷ ದೊಡ್ಡವಳು. ಗುಣದಲ್ಲಿ ಕಾವೇರಿಯಷ್ಟು ಸಾಧುವಲ್ಲದಿದ್ದರೂ ತೀರಾ ಸಿಡುಕಿಯೇನಲ್ಲ‌. ತನ್ನ ತಂಟೆಗೆ ಯಾರಾದರೂ ಬಂದರೆ ಅದಕ್ಕೆ ಪ್ರತಿರೋಧ ಒಡ್ಡುವಷ್ಟು ಸಿಟ್ಟು ಇದ್ದುದ್ದರಿಂದ ಅವಳೊಂದಿಗೆ ತಲೆಹರಟೆ ಮಾಡುವುದು ಸುಲಭವಿರಲಿಲ್ಲ. ನಾನು ಚಿಕ್ಕವನಿದ್ದಾಗೊಮ್ಮೆ ತಮಾಷೆಗೆಂದು ಅಪ್ಪ ನನ್ನನ್ನು ಮಂಜಿಯ ಬೆನ್ನ ಮೇಲೆ ಕೂರಿಸಿದಾಗ ಅವಳು ಬುಡುಬುಡು ಓಡಿ‌ ನನ್ನನ್ನು ಕಂಗಾಲಾಗಿಸಿದ್ದಳು. ಮಂಜಿಯ ಕರುಗಳ ಪೈಕಿ ಸೋಮಿಯೊಬ್ಬಳನ್ನು ಬಿಟ್ಟು ಮತ್ಯಾರನ್ನೂ ನಾವು ಇಟ್ಟುಕೊಳ್ಳಲಿಲ್ಲ. ದೊಡ್ಡವರಾಗುತ್ತಿದ್ದಂತೆ ಯಾರಾದರೂ ಸಾಕುವವರು ಸಿಕ್ಕರೆ ಕಳುಹಿಸಿಕೊಡುತ್ತಿದ್ದೆವು.

ಮಂಜಿಯ ಮಕ್ಕಳಲ್ಲಿ ನನಗೆ ತೀರಾ ಇಷ್ಟವಾದವಳೊಬ್ಬಳಿದ್ದಳು. ಮಂಜಿಗಿಂತಲೂ ತುಸು ಹೆಚ್ಚೇ ಬೆಳ್ಳಗಿನ ಮುಖ, ಹೊಟ್ಟೆಯ ಅಡಿ ಹಾಲು ಚೆಲ್ಲಿದಂತ ಬಿಳುಪು, ಅವಳಿಗೆ “ದಾಸಿ” ಎಂದು ಹೆಸರಿಡಲಾಗಿತ್ತು. ಸಂಕ್ರಾಂತಿಯನ್ನು ಕೊಡಬಾರದೆಂದು ರಂಪ ಮಾಡಿದಂತೆಯೇ ದಾಸಿಯನ್ನು ಕೊಡುವ ಮಾತೆತ್ತಿದಾಗ ಕೊಂಯ್, ಕೊಂಯ್ ಎಂದು ತಗಾದೆ ತೆಗೆಯುತ್ತಿದ್ದರಿಂದ ಅವಳನ್ನು ಇಟ್ಟುಕೊಳ್ಳಲಾಗಿತ್ತು. ಕೊನೆಗೆ ಅವಳಿಗೆ ಚೊಚ್ಚಲ ಹೆರಿಗೆಯಾದಾಗ ಯಾರೋ ಒಬ್ಬರು ನಿಮ್ಮ ಮನೆಯಲ್ಲಿ ದನ ಕೊಡುವುದುಂಟಾ ಎಂದು ಕೇಳಿ, ನನ್ನ ಯಾವ ತಗಾದೆಯನ್ನೂ ಲೆಕ್ಕಿಸದೆ ಅವಳನ್ನು ಕೊಡುವಂತಾಯಿತು. ಅವಳನ್ನು ಕೊಡುವ ದಿನ ನನಗೆ ಸ್ಪೆಷಲ್ ಕ್ಲಾಸ್ ಇದ್ದರೂ, ದಾಸಿಯನ್ನು ಗೂಡ್ಸ್ ಹತ್ತಿಸಿಯೇ ಹೊರಡುವುದೆಂದು ಹಠ ಹಿಡಿದಿದ್ದೆ ಮತ್ತು ಅವಳು ಗೂಡ್ಸ್ ಹತ್ತುವ ಕಡೇ ಗಳಿಗೆಯ ತನಕವೂ ಹಗ್ಗ ಕಳಚಿಕೊಂಡು ಓಡಲಿ ಎಂದು ಕಾತರದಿಂದ ಕಾಯುತ್ತಿದ್ದೆ. ಆದರೆ, ನನ್ನ ಯಾವ ಯೋಚನೆಗಳೂ ಸಫಲವಾಗಲಿಲ್ಲ. ಕೊನೆಗೆ ಬೇಸರದ ಮುಖ ಹೊತ್ತು ಕ್ಲಾಸಿಗೆ ತಡವಾಗಿ ಹೋದಾಗ ಕರು ಕೊಡುವುದಿತ್ತು ಎಂಬ ಕಾರಣವನ್ನು ಹೇಳಿ ಮಂಗಳಾರತಿಯನ್ನೂ ಮಾಡಿಸಿಕೊಂಡಿದ್ದೆ.

ಮಂಜಿಗೆ ಕೃತಕ ಗರ್ಭಧಾರಣೆ ಮಾಡಿಸಿದ ಪರಿಣಾಮವಾಗಿ ಹುಟ್ಟಿದ ಸೋಮಿ ಮತ್ತು ಅವಳ ಮಕ್ಕಳು ಮಲೆನಾಡು ಗಿಡ್ಡ ತಳಿಯಿಂದ ಜರ್ಸಿಗೆ ‘ಮತಾಂತರ’ವಾದರಾದರೂ ಮಂಜಿಯ ಪೀಳಿಗೆ ಎಂಬ ಬಾಂಧವ್ಯ ಕಡಿದು ಹೋಗಲಿಲ್ಲ. ಹದಿನೈದು ದಿನಗಳ ಹಿಂದೆ ಪುಣ್ಯಕೋಟಿಯನ್ನು ಕೊಟ್ಟಾಗಲೇ ಮಂಜಿ ಪೀಳಿಗೆಯ ಋಣ ತೀರಿತೆಂದು ಬರೆಯಲು ಹೊರಟಿದ್ದೆ. ಆದರೆ, ಕೊಟ್ಟಿಗೆಯಲ್ಲಿ ಉಳಿದುಕೊಂಡಿದ್ದ ‘ಬೆಳ್ಳು’ ಋಣ ಇನ್ನೂ ತೀರಿಲ್ಲವೆಂಬಂತೆ ಮೆಲುಕು ಹಾಕುತ್ತಾ ಮುಖ ನೋಡಿದಾಗ ಅವನಿನ್ನೂ ಮನೆಯಲ್ಲಿರುವಾಗ ಆ ಮಾತು ಹೇಳುವುದು ಸರಿಯಲ್ಲವೆನ್ನಿಸಿತ್ತು.

ಇವತ್ತು ಮಂಜಿ ಪೀಳಿಗೆಯ ಕೊನೆಯ ಅಂಶವಾಗಿ ನಮ್ಮ ಕೊಟ್ಟಿಗೆಯಲ್ಲಿ ಉಳಿದಿದ್ದ ಬೆಳ್ಳುವನ್ನು ಕಳುಹಿಸಿಕೊಡಲಾಯಿತು. ಸ್ವಲ್ಪ ಸಿಡುಕು ಸ್ವಭಾವದವನಾಗಿದ್ದ ಅವನನ್ನು ಗಾಡಿಗೆ ಹತ್ತಿಸುವುದು ಹೇಗೆ ಎಂದು ಇಷ್ಟು ದಿನಗಳ ಕಾಲ ಮನೆಯಲ್ಲಿ ದೊಡ್ಡ ತಲೆಬಿಸಿಯೇ ಸೃಷ್ಟಿಯಾಗಿತ್ತು. ಪುಣ್ಯಾತ್ಮ, ನಮ್ಮೆಲ್ಲಾ ಭಯವನ್ನು ತಲೆಕೆಳಗೆ ಮಾಡಿ ಒಂಚೂರೂ ತಂಟೆ, ತಕರಾರು ಮಾಡದೇ ಗಾಡಿ ಹತ್ತಿಬಿಟ್ಟ. ಕಡೇಪಕ್ಷ ಸ್ವಲ್ಪ ಕೊಸರಾಡಿದ್ದರೂ ನಮಗೆ ಸಮಾಧಾನವಾಗುತ್ತಿತ್ತೇನು. ಆದರೆ, ಏನೇನೂ ತಲೆಹರಟೆ ಮಾಡದೇ “ನಿಮಗೆ ನಾನು ಭಾರವಾಗುವುದಿಲ್ಲ” ಎಂಬಂತೆ ತಣ್ಣಗೆ ಹೊರಟು ಸಂಕಟವನ್ನುಂಟು ಮಾಡಿಬಿಟ್ಟ. ಅಲ್ಲಿಗೆ, ಮಂಜಿಯ ವಂಶದ ಕೊನೆಯ ತಂತು ಮನೆಯಿಂದ ದೂರವಾದಂತಾಯಿತು.

ಋಣ ತೀರಿತು ಎನ್ನುವಾಗ ಮನಸ್ಸಿನಾಳದಲ್ಲೆಲ್ಲೋ ಚುರುಗುಟ್ಟಿದಂತಾಗುತ್ತದೆ.
ಆದರೆ, ಜಾನುವಾರುಗಳ ವಿಚಾರದಲ್ಲಿ – “ಕೊಟ್ಟ ಹೆಣ್ಣಷ್ಟೇ ಅಲ್ಲ, ಗಂಡೂ ಕುಲದಿಂದ ಹೊರಕ್ಕೆ!”

ಮಂಜಿ ಹಾಗೂ ಅವಳ ಮಗಳು, ಮೊಮ್ಮಗಳ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ತಿಂದು ಬೆಳೆದಿರುವಾಗ ಇಷ್ಟಾದರೂ ಹೇಳಿ ಮನಸ್ಸಿನ ಭಾರ ಇಳಿಸಿಕೊಳ್ಳದಿದ್ದರೆ ಹೇಗೆ? ಇನ್ನು ಸದ್ಯಕ್ಕೆ ಹೀಗೆ ವಿದಾಯ ಹೇಳುವ ಪರಿಸ್ಥಿತಿ ಬಾರದಿರಲಿ ಮತ್ತು ಹೊರಟು ಹೋದವರೆಲ್ಲಾ ಹೋದ ಕಡೆಯಲ್ಲಿ ಖುಷಿಯಿಂದರಲಿ ಎಂಬುದಷ್ಟೇ ಈ ಕ್ಷಣದ ಪ್ರಾರ್ಥನೆ.

‍ಲೇಖಕರು nalike

July 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Vasundhara k m

    ಬಹಳ ಆಪ್ಯಾಯಮಾನ ಬರಹ. ಕುಟುಂಬದ ಸದಸ್ಯರ ಬಗ್ಗೆಯೋ ಸ್ನೇಹಿತರ ಬಗ್ಗೆಯೋ ಬರೆದಷ್ಟು ಪ್ರೀತಿಯಿಂದ ಬರೆದ್ದಿದ್ದೀರಿ. ಸಾಕು ಪ್ರಾಣಿಗಳ ಮೇಲೆ ಅಕ್ಕರೆ ತೋರುವ ನೀವು ಬಾಲ್ಯದ ಮತ್ತಷ್ಟು ಅನುಭವಗಳನ್ನು ಕುರಿತು ಬರೆಯಬಹುದು.

    ಪ್ರತಿಕ್ರಿಯೆ
    • Skanda K N

      ಧನ್ಯವಾದಗಳು…
      ಖಂಡಿತಾ ಇನ್ನಷ್ಟು ಬರೆಯಲು ಪ್ರಯತ್ನಿಸುವೆ.

      ಪ್ರತಿಕ್ರಿಯೆ
    • ಸಂಸ್ಕೃತಿ ಸುಬ್ರಹ್ಮಣ್ಯ ಮೈಸೂರು

      ಅಯ್ಯಾ, ಸ್ಕಂದ, ಅದೆಷ್ಟು ಚೆನ್ನಾಗಿ ಬರೆದಿದ್ದೀಯೋ! ಇದನ್ನು ಓದಿದವರಿಗೆ ತಮ್ಮ ಮನೆಯಲ್ಲೂ ಇದೇ ರೀತಿ ಹಸು, ಹೋರಿಗರು, ನಾಯಿ ಬೆಕ್ಕುಗಳನ್ನು ಕಳಿಸಿಕೊಟ್ಟಾಗ ಆಗಿರಬಹುದಾದ ಭಾವನೆಗಳು ನೆನಪಿಗೆ ಬಾರದಿರದು. ಹೀಗೇ ಮುಂದುವರೆಯಲಿ ನಿನ್ನ ಅಭಿವ್ಯಕ್ತಿ! ಅಭಿನಂದನೆಗಳು.

      ಪ್ರತಿಕ್ರಿಯೆ
  2. Prajna Mattihalli

    Skanda you have good writing skill. Just go on writing whatever you feel. All the best

    ಪ್ರತಿಕ್ರಿಯೆ
    • Skanda K N

      ಧನ್ಯವಾದಗಳು…❤
      ಖಂಡಿತಾ ಇನ್ನಷ್ಟು ಬರೆಯಲು ಪ್ರಯತ್ನಿಸುವೆ.

      ಪ್ರತಿಕ್ರಿಯೆ
  3. Nishi

    ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ ನಮ್ಮ ತಾತ ಮತ್ತು ಅಜ್ಜಿ ಹಸು ಸಾಕಿದ್ಧರು. ಅದು ನೆನಪಾಯಿತು. ತುಂಬ ಸೊಗಸಾಗಿದೆ ನಿಮ್ಮ ಬರಹ. ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: