ಅವ್ವನನ್ನು ನೆನಪಿಸಿಕೊಂಡಿದ್ದಾರೆ ಪ್ರಜ್ಞಾ ಮತ್ತಿಹಳ್ಳಿ

ಪ್ರಜ್ಞಾ ಮತ್ತಿಹಳ್ಳಿ

ಇಷ್ಟಕ್ಕೂ ಅವಳಿಗೆ ತನ್ನದೊಂದು ಸ್ವಂತದ ಗಂಡ-ಮಕ್ಕಳು-ಮನೆ ಅಂತ ಇರದಿರುವ ಬಗ್ಗೆ ಆಕ್ರೋಶ ಇತ್ತಾ ಅಂತ ಒಂದು ದಿನಕ್ಕೂ ನಾನು ಯೋಚಿಸಲೇ ಇಲ್ಲವಲ್ಲ? ಅಂತಹ ಯೋಚನೆ ಮಾಡಲಾರದಿರುವಷ್ಟು ಸಣ್ಣವಳಾಗಿದ್ದೆನಾ ನಾನು? ಛೇ ಏಳು ಕತ್ತೆಯ ವಯಸ್ಸಾಗಿತ್ತಲ್ಲ.

ಆಗಲೇ ನನ್ನ ಮದುವೆಯಾಗಿ ಹತ್ತು ವರ್ಷದ ಮೇಲಾಗಿತ್ತು. ಒಂದಲ್ಲ, ಎರಡು ಮಕ್ಕಳ ತಾಯಿಯಾಗಿದ್ದೆ. ಅವಳ ಜೊತೆಗೆ ಸರಿ ಸುಮಾರು ಮೂವತ್ತೈದು ವರ್ಷ ಬದುಕಿದ್ದೆ. ಅವಳು ಆ ಮೂವತ್ತೈದು ವರ್ಷದಲ್ಲಿ ಏನು ಮಾಡಿದಳು ಅಂತ ಯೋಚಿಸಿದರೆ… ಉತ್ತರಿಸುವುದೇ ಕಷ್ಟ. ಅದಕ್ಕಿಂತಲೂ ಹಿಂದಿನ ಮೂವತ್ತೈದು ವರ್ಷಗಳಲ್ಲಿ ಏನು ಮಾಡಿದಳು ಅಂತ ಕೇಳಿದರೆ ಉತ್ತರಿಸುವುದು ಇನ್ನೂ ಕಷ್ಟ. ಏಕೆಂದರೆ ಆಗ ಅವಳು ವಾಸಿಸುತ್ತಿದ್ದ ಆ ಸಣ್ಣ ಊರಿನ ಅತಿ ಸಣ್ಣ ಕೇರಿಯ ಮಣ್ಣಿನ ಮನೆಯಲ್ಲಾಗಲೀ, ಮನೆಯ ಹಿಂದಿನ ತೆಂಗಿನ ಮರಗಳ ಹಿತ್ತಿಲಲ್ಲಾಗಲೀ, ಅಥವಾ ಹಿತ್ತಿಲಾಚೆಯ ಕೋಟೆಯ ಕೆಳಗಿನ ನದಿ ದಡದಲ್ಲಾಗಲೀ, ಮೆಟ್ಟಿಲುಗಳ ಮೇಲಿನ ದೇವಸ್ಥಾನದ ಪೌಳಿಯಲ್ಲಾಗಲೀ ಯಾರೂ ವಿಶೇಷವಾಗಿ ಏನೂ ಮಾಡಬೇಕಾಗಿಯೇ ಇರಲಿಲ್ಲ.

ಹೆಚ್ಚಿನ ಬದಲಾವಣೆಗಳೇನೂ ಇರದ ಒಂದು ಸಾಮಾನ್ಯ ದಿನಚರಿಯೊಂದಿಗೆ ಕಾಲ ಕಳೆದು ಹೋಗುತ್ತಿತ್ತು. ಅವಳಂತೆಯೇ ಕಾಣುವ, ಹೆಚ್ಚು-ಕಡಿಮೆ ಹಾಗೆಯೇ ವಾಸಿಸುವ ಅನೇಕ ಹೆಣ್ಣು ಹಾಗೂ ಗಂಡು ಜನರು ಆ ಸಣ್ಣ ಊರಿನ ಹೆಂಚಿನ ಮನೆಗಳಲ್ಲಿ ವಾಸಿಸುತ್ತಿದ್ದರು. ಅವರೆಲ್ಲರಿಗೂ ವಯಸ್ಸಾಗಿತ್ತು. ಆದರೆ ಅವರು ಸಣ್ಣ ಪ್ರಾಯದವರಿದ್ದಾಗಲೂ ವಯಸ್ಸಾದವರ ಹಾಗೆಯೇ ಬದುಕುತ್ತಿದ್ದರು. ಎಲ್ಲರೂ ಬಡವರೇ ಆಗಿದ್ದರು. ಕೆಲವರು ಹೆಚ್ಚಿಗೆ ಮತ್ತು ಕೆಲವರು ಕಡಿಮೆ. ಆದರೆ ಎಲ್ಲರೂ ದುಡ್ಡನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆದರೆ ಪ್ರೀತಿಗಿಂತಲೂ ಹೆದರಿಕೆಯೇ ಜಾಸ್ತಿ ಇತ್ತು. ದುಡ್ಡನ್ನು ಕೊಡದೇ ಅಥವಾ ಕಡಿಮೆ ಕೊಟ್ಟು ಬದುಕುವುದು ಹೇಗೆ ಎಂಬ ವಿಷಯದ ಕುರಿತೇ ಎಲ್ಲರೂ ಆಲೋಚಿಸುತ್ತಿದ್ದರು. ಅವರವರ ಗದ್ದೆಯ ಅಕ್ಕಿ, ಅವಲಕ್ಕಿ, ಶೇಂಗಾ ಹಾಗೂ ಅವರವರ ಹಿತ್ತಿಲ ತೆಂಗಿನಕಾಯಿ, ತರಕಾರಿಗಳನ್ನು ಉಪಯೋಗಿಸಿ ಅಡಿಗೆ ಮಾಡಿಕೊಳ್ಳುತ್ತಿದ್ದರು.

ಯಾರೂ ಹೊರಗಿನ ಪೇಟೆಯ ತರಕಾರಿಗಳನ್ನಾಗಲೀ, ವಿಶೇಷ ತಿನಿಸುಗಳನ್ನಾಗಲೀ ಕೊಳ್ಳುತ್ತಿರಲಿಲ್ಲ. ಅಕಸ್ಮಾತ್ತಾಗಿ ಕೊಂಡರೂ ಅದನ್ನು ಯಾರಿಗೂ ಕಾಣದಂತೆ ಮುಚ್ಚಿ ತಂದು ಬಳಸುತ್ತಿದ್ದರು. ಯಾರ ಜೊತೆಗೂ ಹಂಚಿ ತಿನ್ನುವ ಸಂಪ್ರದಾಯ ಇರಲಿಲ್ಲ. ಅವರ ಬಡತನದಿಂದಲೋ ಏನೋ ಹೆಚ್ಚಿನವರೆಲ್ಲ ಸಣ್ಣ ಮನಸ್ಸಿನವರೂ ಹಾಗೂ ಜುಗ್ಗರೂ ಆಗಿದ್ದರು. ಆದರೆ ಜುಗ್ಗತನವನ್ನು ಬದುಕುವ ಕಲೆಯೆಂದೂ, ಅನುಕರಣೀಯ ಆದರ್ಶವೆಂದೂ ಭಾವಿಸಲಾಗುತ್ತಿತ್ತು. ಹೆಚ್ಚೆಚ್ಚು ಜುಗ್ಗರಾದವರನ್ನು ʼಭಾರೀ ಶಾಣೆʼ ಎಂದು ಕರೆದು ಮೆಚ್ಚುಗೆಯ ಮಾತಾಡುತ್ತಿದ್ದರು. ಎಲ್ಲರ ಮನೆಗಳಲ್ಲೂ ಬಾವಿಯಿದ್ದು ಆಳದಲ್ಲಿ ನೀರು ಇರುತ್ತಿತ್ತು. ಹೆಣ್ಣು ಗಂಡೆನ್ನದೇ ಎಲ್ಲರೂ ಬಾವಿಯಿಂದ ನೀರು ಸೇದುತ್ತಿದ್ದರು. ಒಂದು ಕೊಡ ನೀರು ಮೇಲೆ ಬರಲು ತುಂಬಾ ಸಲ ಜಗ್ಗಬೇಕಾದ ನಿಮಿತ್ತ ನೀರನ್ನೂ ಮನಸೋ ಇಚ್ಛೆ ಬಳಸುತ್ತಿರಲಿಲ್ಲ. ಕಡಿಮೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿದ್ದರು.

ಯಾರಾದರೂ ಮುಖ ತೊಳೆಯುವಾಗ ಹೆಚ್ಚಿಗೆ ನೀರು ಬಳಸಿದರೆ ಅಥವಾ ಪದೇ ಪದೇ ಮುಖ ಕಾಲು ಇತ್ಯಾದಿ ತೊಳೆಯುವ ರೂಢಿಯಿದ್ದವರಿದ್ದರೆ ಅವರನ್ನು ನೀರು ದಂಡ ಮಾಡುವವರೆಂದು ಅಪಾರವಾಗಿ ನಿಂದಿಸಲಾಗುತ್ತಿತ್ತು. ಯಾರಾದರೂ ಪಾತ್ರೆ ಅಥವಾ ಕೈ ತೊಳೆಯುವಾಗ ಗಿಡವೊಂದರ ಕೆಳಗೆ ಹೋಗಿ ತನ್ಮೂಲಕ ತಾವು ಚೆಲ್ಲುವ ನೀರು ಗಿಡಕ್ಕೆ ಸಲ್ಲುವ ಹಾಗೆ ನೋಡಿಕೊಳ್ಳಬೇಕಾಗಿತ್ತು. ಬೆಳಗ್ಗೆ ಎದ್ದು ಹೊಳೆಗೆ ಹೋಗಿ ಬಟ್ಟೆ ಒಗೆದುಕೊಂಡು ಸ್ನಾನ ಮಾಡಿಕೊಂಡು ಬರುತ್ತಿದ್ದ ಕಾರಣವೂ ನೀರು ಸೇದುವುದನ್ನು ಉಳಿಸುವ ಆಲೋಚನೆಯೇ ಆಗಿತ್ತು. ಹೀಗೆ ಅದೇ ಊರಿನಲ್ಲಿ ನದಿಯಿದ್ದರೂ ಅದು ತೀರಾ ನೂರಡಿ ಕೆಳಗೆ ಹರಿದು, ಅಲ್ಲಿಂದ ಮೇಲೆ ಕೋಟೆಯ ತುದಿಗೆ ಜನಜೀವನ ಹಬ್ಬಿಕೊಂಡು ತಮ್ಮ ನೀರಿನ ಅಗತ್ಯಕ್ಕೆ ಆಳದ ಬಾವಿಗಳಿಗೆ ಬಿಂದಿಗೆ ಇಳಿಸಿ ಪರದಾಡುವ ಸ್ಥಿತಿ ಮತ್ತಿನ್ಯಾವುದಾದರೂ ಊರಿಗೆ ಇದೆಯಾ ಗೊತ್ತಿಲ್ಲ.

ಅವರ ಬಡತನಕ್ಕೋ ಏನೋ ಯಾರಿಗೂ ನೆಂಟರಿಷ್ಟರು ಮನೆಗೆ ಬರುವ ವಿಷಯ ಅಷ್ಟು ಖುಷಿಯ ಸಂಗತಿ ಆಗಿರಲೇ ಇಲ್ಲ. ಒಂದೊಮ್ಮೆ ಯಾರ ಮನೆಗಾದರೂ ಜನ ಬಂದರೆ ಉಳಿದವರು ತಮ್ಮ ತಮ್ಮಲ್ಲಿ ಮಾತಾಡಿಕೊಂಡು ʼಯಾರೋ ಬಂದು ಧುಮುಕಿದಾರಲ್ಲ ಪಾಪʼ ಎಂದು ಕರುಣೆ ತೋರಿಸುತ್ತಿದ್ದರು. ಆದಷ್ಟು ಬೇಗ ಹೋಗಲಿ ಎಂದು ಶುಭ ಹಾರೈಸುತ್ತಿದ್ದರು. ಮನೆಗಳಿಗೆ ಕರೆಂಟು ಕನೆಕ್ಷನ್ ಇದ್ದರೂ ಅಷ್ಟಾಗಿ ಲೈಟು ಹಚ್ಚುವ ರೂಢಿ ಇರಲಿಲ್ಲ. ಬೀದಿ ದೀಪದ ಬೆಳಕು ಇದ್ದ ಮನೆಯ ಹೊರ ಭಾಗದಲ್ಲೇ ಕುಳಿತು ವೇಳೆ ಕಳೆದು ಆಮೇಲೆ ಬೇಗ ಉಂಡು ಮಲಗುತ್ತಿದ್ದರು. ಎಲ್ಲ ಕಡೆ ಲೈಟು ಹಚ್ಚಿ ತಿರುಗಾಡುವವರನ್ನು ʼಕಾರ್ತಿಕ ಮಾಡುತ್ತಾನೆʼ ಎಂದು ಬೈಯುತ್ತಿದ್ದರು. ಹೆಚ್ಚಿಗೆ ಬಟ್ಟೆಗಳನ್ನೂ ಕೊಳ್ಳುತ್ತಿರಲಿಲ್ಲ. ಹರಿದರೆ ಹೊಲಿದುಕೊಂಡು ತೊಟ್ಟುಕೊಳ್ಳುತ್ತಿದ್ದರು.

ಹರಿದೊಡನೆ ಅವನ್ನು ಯಾರಾದರೂ ಎಸೆಯುತ್ತಾರೆ ಅಥವಾ ಕೆಲಸದವರಿಗೆ ಕೊಡುತ್ತಾರೆ ಅಂತ ತಿಳಿದರೆ ಅಂತಹವರ ಬಗ್ಗೆ ಬಹಳ ಕಟುವಾದ ನಿಂದನೆಯ ಮಾತುಗಳನ್ನಾಡಿ ಪೇಚಾಡಿಕೊಳ್ಳುತ್ತಿದ್ದರು. ಯಾವುದೇ ತರಕಾರಿ ಇದ್ದರೂ ಅದರ ತಿರುಳಿನಿಂದ ಒಂದು ಮೇಲೋಗರ ಮಾಡಿದರೆ ಅದರ ಸಿಪ್ಪೆಯಿಂದ ಒಂದು ಮೇಲೋಗರ ಮಾಡುತ್ತಿದ್ದರು. ಒಟ್ಟಿನಲ್ಲಿ ಒಗೆಯುವ ಕ್ರಮ ಇರಲಿಲ್ಲ. ಹೀಗೆಲ್ಲ ಕಸದಿಂದ ರಸ ಮಾಡುವ ತಿಳುವಳಿಕೆ ಇರುವವರಿಗೆ ಹೆಚ್ಚಿನ ಪ್ರಶಂಸೆ-ಮರ್ಯಾದೆಗಳು ಸಲ್ಲುತ್ತಿದ್ದವು. ಅನ್ನ ಬಾಗಿಸಿದ ತಿಳಿಯಿಂದ ಪಳದ್ಯ ಮಾಡುತ್ತಿದ್ದರು. ಹೀಗೆ ಒಂದು ಬಗೆಯ ಸಂಪತ್ತು ಹೀನತೆ, ಅದರಿಂದ ಬಂದ ಹೃದಯ ಹೀನತೆ ಹಾಗೂ ಸುಖ ಹೀನತೆಗಳಿಂದಾಗಿ ಇಡೀ ಊರೇ ಭಣಗುಡುವ ಹತಾಶೆಯಲ್ಲಿ ಅದ್ದಿ ತೆಗೆದಿಟ್ಟ ಹಾಗೆ ಕಾಣುತ್ತಿತ್ತು. ಚಪ್ಪಲಿಯಿಲ್ಲದ ಕಾಲು, ಒಡೆದ ಕನ್ನಡಕದ ಕಣ್ಣುಗಳು, ಹೊಲಿಗೆ ತುಂಬಿದ ಸೀರೆ-ಪಂಚೆಗಳು, ಗೆರೆಗಳೆಲ್ಲ ಸವೆದ ಅಂಗೈಗಳು ಕಡೆಗೆ ದೇವಸ್ಥಾನದ ದೇವರಿಗೂ ಹೇಳಿಕೊಳ್ಳುವಷ್ಟು ಒಡವೆಗಳಿಲ್ಲದೇ, ದೊಡ್ಡ-ದೊಡ್ಡ ಸೇವೆ-ಪೂಜೆಗಳಿಲ್ಲದೇ ಅವನೂ ಬರಿಮೈಯಲ್ಲಿ ಕೊಡನೀರಿನ ಅಭಿಷೇಕ-ಮುಷ್ಟಿ ಪತ್ರೆಗಳಲ್ಲಿಯೇ ಸಂತೃಪ್ತಿ ಕಾಣ ಬೇಕಾಗಿತ್ತು.

ಇಂತಿಪ್ಪ ಊರಿನಲ್ಲಿ ಹುಟ್ಟಿ, ಬಡತನದ ಬಾಲ್ಯದಲ್ಲೇ ಮದುವೆಯಾಗಿ, ಒಂದೇ ವರ್ಷದಲ್ಲಿ ವಿಧವೆಯಾಗಿ, ತಿರುಗಿ ಬಂದು ಆಮೇಲೆ ಎಪ್ಪತ್ತು ವರ್ಷಗಳನ್ನು ಹಾಗೇ ಒಂದೇ ನಮೂನಿ ಕಳೆಯುವುದೆಂದರೆ ಅದೆಂತಹ ಬದುಕಪ್ಪ ದೇವರೇ. ಅಣ್ಣನ ಸಂಸಾರಕ್ಕೆ ನೆರವಾಗುತ್ತ ಅವನ ಹೆಂಡತಿ ಸತ್ತ ಮೇಲೆ ಆ ಮಕ್ಕಳಿಗೆ ತಾಯಿಯಾಗಿ ಸಾಕಿ ಬೆಳೆಸಿ ದೊಡ್ಡವರನ್ನಾಗಿಸುವ ಕೆಲಸದಲ್ಲೇ ಸವೆಯುವುದೆಂದರೆ ಅದಕ್ಕೇನು ಪ್ರಶಸ್ತಿಯೇ? ಪುರಸ್ಕಾರವೇ? ಹೋಗಲಿ ಕಡೆಗೊಂದು ಒಳ್ಳೆಯ ಮಾತೆ? ಆ ಅಷ್ಟೂ ವರ್ಷಗಳಲ್ಲಿ ಯಾರಾದರೂ ಮನಸ್ಸಿಗೆ ನೋವಾಗುವ ಹಾಗೆ ಅನ್ನದೇ ಇರುತ್ತಾರಾ? ಅಣ್ಣ ಅಥವಾ ಅವನ ಮಕ್ಕಳು ಹೀಗಲ್ಲ ಹೀಗೆ ಅಂದರೆ ಇದು ನಿನ್ನ ಮನೆಯಲ್ಲ ಅನ್ನುವ ಅರ್ಥ ಬಂದೇ ಬಿಡುತ್ತದೆ. ಅನ್ನುವವರ ಮನಸ್ಸಲ್ಲಿ ಏನೇ ಇದ್ದರೂ ಅನ್ನಿಸಿಕೊಳ್ಳುವವನಿಗೆ ಅದು ಧ್ವನಿಸುವುದು ಹಾಗೆಯೇ. ಕಡೆಗೆ ಅಣ್ಣನ ಮಗನಿಗೆ ಮದುವೆಯಾಗಿ ಸೊಸೆ ಬಂದ ಮೇಲೆ, ಮೊಮ್ಮಕ್ಕಳಾದ ಮೇಲೆ ಆಗೊಮ್ಮೆ ಈಗೊಮ್ಮೆ ಯಾರು ಏನೇ ಎಂದರೂ ಅದು ಕೇಳಿಸುವುದೇ ಹಾಗೆ.

ಸೊಸೆಯ ತವರಿನವರು ಬಂದಾಗ ಹೋದಾಗ, ಕಾರ್ಯ-ಕಟ್ಟಲೆ ಅಂತ ಜನ ಸೇರಿದಾಗ ಈ ಊರಿನ ಜಿಪುಣತನವನ್ನು ಗೇಲಿ ಮಾಡಿದಾಗ ಥಟ್ಟನೆ ಅದೇ ಭಾವ ಬಂದು ಬಿಡುತ್ತದೆ. ಅಣ್ಣನ ಮಗ ಕಲಿತು ಬೇರೆ ಊರಲ್ಲಿ ನೌಕರಿ ಹಿಡಿದು ಸಂಬಳ ಸಿಕ್ಕಿದ್ದೇ ಜುಂ ಅಂತ ಚೈನಿ ಮಾಡಲು ಕಲಿತು ಇಲ್ಲಿಯವರ ಜಿಪುಣತನಕ್ಕೆ ಆಕ್ರೋಶ ತೋರಿಸಿದಾಗ ಏನೆನ್ನಿಸುತ್ತದೆ? ಅದಾಗಲೇ ಐವತ್ತು ವರ್ಷಗಳಿಂದ ಜೀವನಕಲೆಯಾಗಿದ್ದನ್ನು ನಿಂದನೀಯವೆಂದು ಒಪ್ಪಲಾದೀತಾ? ಅವನ ಹೆಂಡತಿ ಒತ್ತಾಯದಿಂದ ಕೊಡಿಸಿದ ಸೀರೆ-ಹೊಲಿಸಿದ ರವಿಕೆಗಳನ್ನು ಉಟ್ಟರೂ ತನ್ನ ಹರಿದ ಸೀರೆ ಒಗೆಯಲು ಕೈ ಬರುತ್ತದೆಯೇ?

ಅವಳಿಗಾಗಿದ್ದೇ ಹಾಗೆ. ಅವಳ ಅಣ್ಣ ಸತ್ತ ಮೇಲೆ, ನಿನಗೆ ವಯಸ್ಸಾಯಿತು ಒಬ್ಬಳೇ ಇರಬೇಡ, ನೀನೇ ಸಾಕಿದವನು ಮಗನ ಸಮಾನವೇ ಅಲ್ಲವೇ ನಮ್ಮೊಂದಿಗೆ ಬಾ ಎಂದು ಕರೆದೊಯ್ದು ಇಟ್ಟುಕೊಂಡರೂ ಆ ಅಷ್ಟೂ ವರ್ಷಗಳ ರೂಢಿಗಳನ್ನು ಬಿಡಲು ಆಗುತ್ತಿರಲಿಲ್ಲ. ಕೇವಲ ಕಟ್ಟಿಗೆ ಒಲೆಯ ಮೇಲೆ ಅಡಿಗೆ ಮಾಡಿ ಗೊತ್ತಿದ್ದಾದ್ದರಿಂದ ಗ್ಯಾಸಿನ ಒಲೆ ಅಂಜಿಕೆ ತರಿಸುತ್ತಿತ್ತು. ಹೊಸ ಹೊಸ ಬಗೆಯ ತರಕಾರಿ ಮಸಾಲೆ ಜಿನಿಸಿನ ಅಡಿಗೆಗಳನ್ನು ಮಾಡುವ ಕ್ರಮವೂ ಗೊತ್ತಿರಲಿಲ್ಲ.

ಅಡಿಗೆ ಮನೆಯ ಮೂಲೆಯ ಒರಳು ಕಲ್ಲಿನಲ್ಲಿ ರುಬ್ಬಿ, ಹಗ್ಗ ಎಳದೆಳೆದು ಮಜ್ಜಿಗೆ ಕಡೆದು, ಆಳದ ಬಾವಿಯ ನೀರೆಳೆದು, ಗಡಿಗೆಗಳ ಮುಸುರೆ ತೊಳೆಯುವ ಅವಳ ಮನೆವಾರ್ತೆಗೆ ಪೇಟೆಯಲ್ಲಿ ಅವಕಾಶವೇ ಇಲ್ಲ. ಸಣ್ಣ ಊರಿನ ಕೆಲವೇ ಮನೆಗಳಿಗೆ ಹೊತ್ತು ಗೊತ್ತೆನ್ನದೇ ಒಳ ಹೋಗಿ ಬರುತ್ತ, ಇರುವ ಒಂದೇ ರಥಬೀದಿಯ ಪೌಳಿಯ ಕಟ್ಟೆಯ ಮೇಲೆ ಕೂತು ತನ್ನ ವಾರಿಗೆಯ ಅಜ್ಜಿಯರ ಜೊತೆ ಊರಿನ ಸಕಲೆಂಟು ಆಗು-ಹೋಗುಗಳನ್ನು ಹರಟುತ್ತ, ಅಲ್ಲಿಗೇ ಬಂದು ಮಾತಾಡಿಸುವ ಪರಿಚಯದ ಗಂಡು ಹುಡುಗರಿಂದ ಪೇಟೆಯ ಸುದ್ದಿಗಳನ್ನೂ ಸಂಗ್ರಹಿಸಿ, ಮಧ್ಯಾಹ್ನ ನಾಕರಿಂದ ರಾತ್ರಿ ಏಳರತನಕದ ಸಮಯ ಕಳೆದು, ಒಂದು ಬಗೆಯ ನಿಶ್ಚಿಂತೆಯಿಂದ ಬದುಕಿದ್ದ ಅವಳಿಗೆ ಈಗ ಹೋಗಿ ಬರಲೂ ಜಾಗವಿಲ್ಲದ ಪೇಟೆ ಬದುಕಿನ ಬೇಸರ ಕಳೆಯಲು ಟೀವಿಯ ಕನ್ನಡ ಧಾರಾವಾಹಿಗಳು ಹಾಗೂ ಕನ್ನಡ ಸಿನಿಮಾಗಳೇ ಆಧಾರವಾಗಿದ್ದವು.

ಆದರೆ ಟೀವಿ ಇಟ್ಟಿದ್ದ ಹಾಲು ನೆಂಟರು ಬಂದರೆ ಕೂರಿಸುವ ಸ್ಥಳವೂ ಆಗಿತ್ತು. ಅವಳ ಧಾರಾವಾಹಿಯ ಸಮಯದಲ್ಲಿ ಯಾರಾದರೂ ಅತಿಥಿ ಬಂದು, ಅದರಿಂದಾಗಿ ಟೀವಿ ಹಚ್ಚದಿದ್ದರೆ ಅಥವಾ ಹಚ್ಚಿದರೂ ಅವರ ಜೋರಾದ ಮಾತಿನಿಂದ ಅವಳಿಗೆ ಸಂಭಾಷಣೆ ಕೇಳದಿದ್ದರೆ ಅಪಾರವಾದ ಹತಾಶೆಯೊಂದು ಅವಳನ್ನು ಆವರಿಸುತ್ತಿತ್ತು. ಕರೆಂಟು ಹೋದರೂ ಹಾಗೇ. ಭೂಮಿಯೇ ಮುಳುಗಿ ಹೋದವರಂತೆ ತಲೆ ಮೇಲೆ ಕೈ ಹೊತ್ತು ಕುಳಿತಿರುತ್ತಿದ್ದಳು.

ಆಹಾ ಎಷ್ಟುದ್ದ ಕೂದಲಿತ್ತು! ಐದೂವರಡಿ ಎತ್ತರದ ಅವಳ ಮಂಡಿಗಿಂತಲೂ ಕೆಳಗಿಳಿಯುತ್ತಿದ್ದ ಕಪ್ಪು ಜಲಪಾತದಂತಹ ನೀಳ ಕೂದಲು. ಆದರೆ ಹನ್ನೆರಡು ವರ್ಷಕ್ಕೆ ವಿಧವೆಯಾದ ನಂತರ ಒಂದು ದಿನವೂ ಅಲಂಕರಿಸದೇ, ಹೂ ಮುಡಿಯದೇ ಹಾಗೇ ಸುಮ್ಮನೆ ಕಾಡು ಮರದ ಚೆಲುವಂತೆ ಉಳಿದು ಅವಳ ಎಂಬತ್ತನೆಯ ವಯಸ್ಸಿನಲ್ಲೂ ಉದುರದೇ ತಲೆತುಂಬ ಬೆಳ್ಳಿ ಕವಚದಂತೆ ಇದ್ದ ಕೇಶರಾಶಿ. ಉದ್ದುದ್ದವಿದ್ದ ಬೆರಳುಗಳು. ಬೆರಳು ಉದ್ದವಿದ್ದರೆ ಒಳ್ಳೆ ವೀಣಾವಾದಕರಾಗುತ್ತಾರೆ ಅಂತ ಆ ಊರಿನ ಜನ ಬಾಯಲ್ಲಿ ಹೇಳುತ್ತಿದ್ದರೂ ಕೂಡ ವೀಣೆ ಕಲಿತವರಾಗಲೀ, ಕಲಿಸುವವರಾಗಲೀ ಆಸುಪಾಸಿನಲ್ಲೆಲ್ಲೂ ಇದ್ದಿರಲಿಲ್ಲ.

ಎಂತಹ ಮೈ ಬಣ್ಣವಿತ್ತು. ನಿಂಬೆಹಣ್ಣಿನ ಬಣ್ಣ. ಅಗಲವಾದ ಹಣೆ. ಕುಂಕುಮ ಇಟ್ಟಿದ್ದರೆ ಎಷ್ಟು ಚೆಂದ ಕಾಣುತ್ತಿತ್ತೋ ಗೊತ್ತಿಲ್ಲ. ಕುಂಕುಮ, ಕಾಡಿಗೆ, ಬಳೆ-ಸರ-ಓಲೆ ಉಹೂಂ ಇವ್ಯಾವವೂ ಅವಳಿಗೆ ಗೊತ್ತಿಲ್ಲ. ಅವಳಿಗೆ ಬೇಕಿತ್ತೇ ಅಂತ ನಾನು ಅಥವಾ ನಾವ್ಯಾರೂ ಕೇಳಲೇ ಇಲ್ಲ. ಅವಳಿಗೆ ಹಾಗೆ ಇರುವುದೇ ಇಷ್ಟ ಅನ್ನುವಂತೆ, ತುಂಬ ಸಹಜವಾಗಿ, ಅವಳ ಬರಿದಾದ ಸ್ಥಿತಿಯನ್ನು ಗಮನಿಸಿಯೇ ಇರದವರಂತೆ, ಯಾಕಾದರೂ ಅಥವಾ ಹೇಗಾದರೂ ಬದುಕಿದೆವು ಅಂತ ಈಗ ಅನ್ನಿಸುತ್ತದೆ.

ಅವಳ ಬೇಕು-ಬೇಡಗಳೆಲ್ಲ ಎಷ್ಟು ದೃಢವಾಗಿದ್ದವೆಂದರೆ ಒಮ್ಮೆ ಇಷ್ಟವಾಗಿದ್ದು ಬದುಕಿಡೀ ಉಪಯೋಗಿಸಿದರೂ ಬೇಡವಾಗುತ್ತಿರಲಿಲ್ಲ. ತನಗೆ ಗೊತ್ತಿರದ ಯಾವ ಹೊಸತನ್ನೂ ಅವಳು ಇಷ್ಟಪಡುತ್ತಿರಲಿಲ್ಲ. ಒಮ್ಮೆ ಬಳಸಿ ನೋಡು ಎಂದು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಹೊಸ ತಿಂಡಿ, ಹೊಸ ವಸ್ತು, ಹೊಸ ವ್ಯಕ್ತಿ ಎಲ್ಲರೆಡೆಗೂ ಅದೇ ಪ್ರತಿಕ್ರಿಯೆ. ಅಬ್ಬಾ ಅದೆಂತಹ ಪುಕ್ಕಲು ಹೃದಯವಾಗಿತ್ತೆಂದರೆ ರಿಕ್ಷಾದಲ್ಲಿ ಕೂತರೆ ಒಬ್ಬಳೇ ಕೂರಲು ಭಯ. ಅವಳನ್ನು ನಡುವೆ ಕೂರಿಸಿಕೊಂಡು ಆಚೀಚೆ ಬೇರೆಯವರು ಕೂತರೆ ತಾನು ಕಣ್ಣು ಮುಚ್ಚಿಕೊಂಡು ಬಿಗಿಯಾಗಿ ಹಿಡಿದು ಕೂರುತ್ತಿದ್ದಳು. ʼತಮಾ ಸಾವಕಾಶ ಹೊಗೋʼ ಎಂದು ಹೇಳಿ ಹೇಳಿ ಡ್ರೈವರನ ತಲೆ ಚಿಟ್ಟು ಹಿಡಿಯುತ್ತಿತ್ತು. ಬೈಕುಗಳನ್ನಂತೂ ಹತ್ತುತ್ಲೇ ಇರಲಿಲ್ಲ. ಬಹಳ ಎತ್ತರದ ಜಾಗಕ್ಕೆ ಹೋದರೆ ತಲೆ ತಿರುಗುತ್ತಿತ್ತು. ದೊಡ್ಡ ಸಪ್ಪಳಕ್ಕೂ ತಾನು ಹೆದರುತ್ತೇನೆ ಎನ್ನುತ್ತಿದ್ದಳು.

ಆ ಕಾಲಕ್ಕೆ ತೀರಾ ವಿರಳವಾದ ಎಂ.ಬಿ.ಬಿ.ಎಸ್ ಓದಿದ ರೂಪವಂತ ಡಾಕ್ಟರ್ ಅವಳ ಗಂಡನಾಗಿದ್ದ. ಹಾಗೊಮ್ಮೆ ಅವನು ಎಲ್ಲರಂತೆ ಬದುಕಿ ಬಾಳಿದ್ದರೆ ಅದಿನ್ನೆಂತಹ ಚೆಂದದ ಸಂಸಾರವಾಗುತ್ತಿತ್ತೋ ಎನೋ. ಅದಿನ್ನೆಂತಹ ರೂಪವಂತ, ಬುದ್ಧಿವಂತ ಮಕ್ಕಳು ಹುಟ್ಟಿ ಬೆಳೆದು ತುಂಬು ಬಾಳು ದೊರಕುತ್ತಿತ್ತೊ ಗೊತ್ತಿಲ್ಲ. ಹಾವು ಕಚ್ಚಿ ಡಾಕ್ಟರು ತೀರಿಕೊಂಡು ಬಿಟ್ಟರು. ಪ್ರಾಯ ಬರುವ ಮೊದಲೇ ವೈಧವ್ಯ ಬಂದಾಗಿತ್ತು. ಆಮೇಲಿನದು ಯಥಾಪ್ರಕಾರದ ಬದುಕು. ಅಣ್ಣನ ಮಕ್ಕಳನ್ನು ತಾಯಿ ಸತ್ತ ಹಸುಗೂಸುಗಳೆಂಬ ಅಂತಃಕರಣದ ವಾರಿಧಿಯಲ್ಲಿ ಮೀಯಿಸಿ ತನ್ನ ಕಣ್ರೆಪ್ಪೆಗಳಂತೆ ಕಾಪಾಡಿದ ಕತೆ. ಇಡೀ ಊರವರು ಒಕ್ಕೊರಲಿನಿಂದ ಹೇಳುವಂತೆ ಇನ್ಯಾರೂ ಮಕ್ಕಳನ್ನೇ ಕಂಡಿಲ್ಲವೇನೋ, ಈ ಹುಡುಗರೇ ಭುವನದ ಭಾಗ್ಯವೇನೋ ಎಂಬಂತೆ ಸಾಕಿದ ರೀತಿ.

ಆ ಮಕ್ಕಳು ಬಾಯಿ ತೆಗೆದು ತಮಗಿಂತಹ ತಿಂಡಿ ಬೇಕು ಎಂದರೆ ಅದನ್ನು ಮಾಡಿ ತಿನ್ನಿಸುವ ಸಡಗರ, ಅವಕ್ಕೆ ಹುಷಾರು ತಪ್ಪಿದರೆ ರಾತ್ರಿಯಿಡೀ ನಿದ್ದೆಗೆಟ್ಟು ಉಪಚರಿಸುವ ಸಂಭ್ರಮ ಒಂದೇ ಎರಡೇ. ಶಾಲೆಯ ಟೀಚರು ತನ್ನ ಮಕ್ಕಳಿಗೆ ಒಂದೂ ಹೊಡೆತ ಕೊಡುವಂತಿಲ್ಲ. ಹಾಗೊಮ್ಮೆ ಹೊಡೆದರೆ ತಕ್ಷಣ ರುದ್ರಾವತಾರ ತಾಳಿ ಶಾಲೆಗೆ ನುಗ್ಗಿ, ಆ ಶಿಕ್ಷಕರ ಮೇಲೆ ಕೂಗಾಡಿ ತನ್ನ ಮಕ್ಕಳ ಗಾಯವಲ್ಲದ ಪುಡಿ ಗಾಯಗಳಿಗೇ ಎಣ್ಣೆ ಹಚ್ಚಿ ಲಲ್ಲೆಗರೆದು ಅಬ್ಬಬ್ಬಾ ಆಚೀಚೆಯವರು ಒಳಗೊಳಗೇ ನಗುತ್ತ ಎಷ್ಟೆಲ್ಲ ವರ್ಷದ ತನಕ ವರ್ಣಿಸುತ್ತಿದ್ದರು ಅವಳು ಮಕ್ಕಳನ್ನು ಸಾಕುವ ಕೊಂಡಾಟವನ್ನು.

ತನ್ನದಲ್ಲದ ಮಕ್ಕಳು ಎಂದರೆ ಯಾರದ್ದೋ ನಿಧಿಯನ್ನು ಕಾಯುವ ಆತಂಕದಿಂದ ಹಾಗಾಡುತ್ತಿದ್ದಳಾ? ಅಥವಾ ಅವಳ ಸ್ವಭಾವದಲ್ಲಿಯೇ ಈ ಅತಿ ಪ್ರೀತಿ ಹೆಪ್ಪುಗಟ್ಟಿತ್ತಾ? ಅವಳಿಗೆ ಸ್ವಂತ ಮಕ್ಕಳು ಹುಟ್ಟಿದ್ದರೆ ಅವರನ್ನೂ ಹೀಗೆ ಇನ್ನಿಲ್ಲದ ಅತಿ ಕಾಳಜಿಯಲ್ಲಿ ಮುಳುಗಿಸುತ್ತಿದ್ದಳಾ? ಕಾಲನ ಕಡಲ ದಂಡೆಯ ಬಂಡೆಗೆ ಬಡಿದು ನನ್ನ ಪ್ರಶ್ನೆ ತಿರುಗಿ ಬರುತ್ತದೆ.

ಏಕೆಂದರೆ ಪ್ರಶ್ನೆಗಳು ತಲುಪದ ಲೋಕಕ್ಕೆ ಅವಳನ್ನು ಬೀಳ್ಕೊಟ್ಟು ಅದಾಗಲೇ ಭರ್ತಿ ಹದಿನೆಂಟು ವರ್ಷಗಳೇ ಕಳೆದವು.

‍ಲೇಖಕರು nalike

July 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vasundhara k m

    ತುಂಬಾ ಪ್ರೀತಿಯಿಂದ ನೆನೆದುಕೊಂಡಿದ್ದೀರಿ. ಅವ್ವನ ನೆನಪಿನೊಡನೆ ಆ ಕಾಲದ ಒಟ್ಟಾರೆ ಬದುಕಿನ ಚಿತ್ರಣವೂ ಹಾಸುಹೊಕ್ಕಿದೆ. ಓದುತ್ತಾ ಬರಹ ಧ್ವನಿಸಿದ ಭಾವಕ್ಕೆ ಎದೆ ಭಾರವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: