
ಅದು ಊರ್ಮಿಳೆ ನಾಟಕದ ಮೊದಲ ಪ್ರದರ್ಶನ. ಗೆಳತಿ , ರಂಗಾಯಣವನ್ನು ಗೆದ್ದ ಮಂಗಳಾ ಏಕವ್ಯಕ್ತಿ ಪ್ರದರ್ಶನಕ್ಕೆ ಅಣಿಯಾಗಿದ್ದಳು. ಅದಕ್ಕೆ ಆಯ್ದುಕೊಂಡದ್ದು ಕನ್ನಡದ ಮಹತ್ವದ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ‘ಊರ್ಮಿಳೆ’ ನಾಟಕವನ್ನು. ನಯನದಲ್ಲಿ ಈ ನಾಟಕ ನೋಡುತ್ತಾ ನೋಡುತ್ತಾ, ಊರ್ಮಿಳೆಯ ಸಂಭ್ರಮ, ನೋವು, ನಿಟ್ಟುಸಿರು ನನ್ನೊಳಗೆ ಯಾಕೆ ಇಳಿಯುತ್ತಾ ಹೋಯಿತು?
ಯಾಕೆ ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಅದು ಕವಿತೆಯಾಗಿ ಹೊರಳಿದ್ದು ನಿಜ. ಆ ಕವಿತೆ ಇಲ್ಲಿದೆ.
ಈ ನಾಟಕ ಜನವರಿ ಎರಡರಂದು ‘ರಂಗಶಂಕರ’ದಲ್ಲಿದೆ. ಮಿಸ್ ಮಾಡಬೇಡಿ
ಊರ್ಮಿಳೆಗೆ ಕಾಯುವುದೇ ಕೆಲಸ
-ಜಿ ಎನ್ ಮೋಹನ್
ಕಣ್ಣಲ್ಲಿ ಕಡಲು
ಎದೆಯಲ್ಲಿ ಕರಗದ ಯಾತನೆ
ನಿಟ್ಟುಸಿರುಗಳ ಮೆರವಣಿಗೆ.
ಎಂದು ಬರುತ್ತಾನೆ ಆತ
ಎಂದು ನನ್ನ ಕಣ್ಣ ಕೊಳದಲ್ಲಿ
ಇಣುಕುತ್ತಾನೆ: ನೇವರಿಸುತ್ತಾನೆ
ಬಾಡಿಹೋದ ಮುಂಗುರುಳ
ಲಾಲಿಹಾಡು ಹಾಡುತ್ತಾನೆ
ಇಲ್ಲವಾಗಿದ್ದ ರಾತ್ರಿಗಳಿಗೆ.
—
ಇನ್ನೂ ಕಾಯುವ ಕೆಲಸ ನಿಂತಿಲ್ಲ
ಈಗ ಬರುತ್ತಾನೆ ಆಗ ಬರುತ್ತಾನೆ
ಏರಿ ಬರುತ್ತಾನೆ ಕಡಲತಡಿಯಲ್ಲಿ
ಸಾಗುವ ಹಾಯಿದೋಣಿಗಳ
ಕಾಡಿನೊಳಗೆ ಮೂಡುತ್ತಿರುವ
ಸದ್ದಿಲ್ಲದ ಸದ್ದುಗಳ
ಆಲಿಸಿ ಕೇಳಿಕೊಳ್ಳುತ್ತಾಳೆ
—
ಊರ್ಮಿಳೆಗೆ ಕಾಯುವುದೇ ಕೆಲಸ
ಈಗ ಬರುತ್ತೇನೆ ಎಂದು ಹೋದವನು
ಹಾಡು ಹುಡುಕಿ ಬರುತ್ತೇನೆ ಎಂದು
ಕುದುರೆ ಏರಿದವನು
ಚಂದ್ರನ ಒಂದು ತುಣುಕು ನಿನಗಾಗಿ
ತರುತ್ತೇನೆ ಎಂದವನು ಎಲ್ಲಿದ್ದಾನೆ
—
ದಿನ ನಿತ್ಯ ಎದೆಯೊಳಗೆ
ಒಂದೇ ಪಲ್ಲವಿ
ನಿಟ್ಟುಸಿರುಗಳ ಒರೆಸುವ
ಆ ಕೈಗಳೆಲ್ಲಿವೆ
—
ಮಡಿಕೆ ಮೂಡದ ಹಾಸಿಗೆ ನೂರು
ಕಥೆ ಹೇಳುತ್ತಿದೆ
—
ಊರ್ಮಿಳೆ ಕಾಯುತ್ತಿದ್ದಾಳೆ
ಲಕ್ಷ್ಮಣನಿಗಾಗಿ..
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments