ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಘಟನೆ ಹೇಳುತ್ತೇನೆ ಕೇಳಿ..

ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ!

ಶ್ರೀನಿವಾಸ್ ಕಾರ್ಕಳ ಮತ್ತು ಗುಲಾಬಿ ಬಿಳಿಮಲೆ ದಂಪತಿಗಳ ನೈಜ ಬದುಕಿನ ಕತೆ

gauri lankesh

ಗೌರಿ ಲಂಕೇಶ್

ಕನ್ನಡಕ್ಕೆ: ಕಿರಣ್ ಎಂ ಗಾಜನೂರು

ಇತ್ತೀಚೆಗೆ ನಮ್ಮ ನಡುವೆ ಘಟಿಸಿದ ಆತ್ಮಹತ್ಯೆಗಳ ಹಿನ್ನೆಲೆಯಲ್ಲಿ ಬದುಕಲು ಭಯಪಡುವ ಜನರಿಗೆ ನಾನೊಂದು ಉತ್ಸಾಹ ತುಂಬಬಲ್ಲ ನೈಜ ಘಟನೆಯನ್ನು ಹೇಳುತ್ತೇನೆ.

srinivasa karkalaಇದು ತೀರಾ ವೈಯಕ್ತಿಕ ವಿಷಯವಾದರೂ ನಾನಿದನ್ನು ಹೇಳಲೇಬೇಕಿದೆ. ನನಗೆ ನನ್ನ ಅಪ್ಪನ ಮನೆ ಕಡೆಯಿಂದ ಬಹುತೇಕರು ಬದುಕಿನ ಹಲವು ಹೊಡೆತಗಳನ್ನು ಎದುರಿಸಿಯೂ ಗೆದ್ದ ಹಿನ್ನಲೆ ಇದ್ದರೆ, ನನ್ನ ತಾಯಿಯ ಕುಟುಂಬದ ಕಡೆಯಿಂದ ಬದುಕಿನ ಅನಿರೀಕ್ಷಿತ ಆಘಾತಗಳಿಗೆ ತಮ್ಮ ಜೀವವನ್ನೇ ಕಳೆದುಕೊಂಡ ಹಲವಾರು ವ್ಯಕ್ತಿಗಳ ಹಿನ್ನೆಲೆ ಇದೆ.

ಅಷ್ಟೇ ಏಕೆ, ಒಮ್ಮೆ ಸ್ವತಃ ನನ್ನ ತಾಯಿ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದರು!

ಆದರೆ ಅದೃಷ್ಟವಶಾತ್ ನಾನು ನನ್ನ ಅಪ್ಪನ ಕಡೆಯವರ ಮನೋಭಾವವನ್ನು ಬೆಳೆಸಿಕೊಂಡಿದ್ದೇನೆ. ಹೇಗೆಂದರೆ, ನನಗೆ ಯಾರಾದರೂ ಸಮಸ್ಯೆ ಕಿರುಕುಳ ಇತ್ಯಾದಿಗಳನ್ನು ಒಡ್ಡಿದರೆ ನನ್ನ ಸ್ವಭಾವ ಅವರ ಮುಖಕ್ಕೆ ಇಕ್ಕುವಂತದ್ದೇ ಹೊರತು ಹೇಡಿಯಂತೆ ಆತ್ಮಹತ್ಯೆಗೆ ಶರಣಾಗುವ ಪ್ರವೃತ್ತಿ ನನ್ನದಲ್ಲ.

ನಾನಿಲ್ಲಿ ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ, ಡಿ.ವೈ.ಎಸ್.ಪಿ ಕಲ್ಲಪ್ಪ ಹಂಡಿಬಾಗ್ ಮತ್ತು ಕೆ.ಎಮ್ ಗಣಪತಿಯವರ ಆತ್ಮಹತ್ಯೆಗಳ ಹಿನ್ನಲೆಯಲ್ಲಿ ಹೇಗೆ ಈ ರೀತಿಯ ಸ್ವ -ಹತ್ಯೆಗಳು ಅಪ್ರಯೋಜಕವಾಗುತ್ತವೆ ಎಂಬುದರ ಕುರಿತು ಬರೆಯುತ್ತಿದ್ದೇನೆ.

ಒಂದು ಕ್ಷಣದ ಮಟ್ಟಿಗೆ ಈ ಅಧಿಕಾರಿಗಳ ಸಾವಿನ ಸುತ್ತ ಇರುವ ರಾಜಕೀಯ ಪಿತೂರಿ ಮತ್ತು ಷಡ್ಯಂತ್ರಗಳ ಆರೋಪಗಳನ್ನು ಮರೆತು ಹಾಗೆ ಸುಮ್ಮನೆ ಯೋಚಿಸಿ. ಅವರೆಲ್ಲರೂ ತಮ್ಮ ಏಳಿಗೆಗಾಗಿ ಹಲವಾರು ತ್ಯಾಗಗಳನ್ನು ಮಾಡಿದ ತಮ್ಮ ಪೋಷಕರನ್ನು, ತಮ್ಮ ಬದುಕಿನಲ್ಲಿ ಜೊತೆಯಾಗಿ ನಿಂತ ಸಂಗಾತಿಗಳನ್ನು, ಉತ್ತಮ ಭವಿಷ್ಯವನ್ನು ರೂಪಿಸಬೇಕಾಗಿದ್ದ ಮಕ್ಕಳನ್ನು ಹೊಂದಿದ್ದರು ಎಂಬುದನ್ನು ನೆನಪಿಸಿಕೊಳ್ಳಿ.

ಈ ಮೂವರು ಅಧಿಕಾರಿಗಳು ತಮ್ಮ ಬದುಕಿನ ಭಾಗವಾಗಿರುವ ಈ ಎಲ್ಲರನ್ನೂ ನೆನಪಿಸಿಕೊಂಡಿದ್ದರೆ ಖಂಡಿತಾ ಅವರು ತಮ್ಮದೇ ಜೀವಗಳನ್ನು ತೆಗೆದುಕೊಳ್ಳುವ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ! ಅಬ್ಬಬ್ಬಾ ಅಂದರೆ ಅವರು ಏನನ್ನು ಕಳೆದುಕೊಳ್ಳುತ್ತಿದ್ದರು? ಹೆಚ್ಚೆಂದರೆ ಅವರ ಕೆಲಸವನ್ನು ಅಷ್ಟೇ! ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ಪರೀಕ್ಷೆಗಳನ್ನು ಪಾಸು ಮಾಡಿದ ಬುದ್ಧಿವಂತರಾದ ಇವರುಗಳು ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಬೇಕಾದ ನೂರಾರು ದಾರಿಗಳನ್ನು ಹುಡುಕಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರು.

2010 ರಲ್ಲಿ ನಮ್ಮ ಕುಟುಂಬಕ್ಕೆ ಆತ್ಮೀಯನಾಗಿದ್ದ ಸಂಗಮೇಶ್ ಎಂಬ ಯುವಕ ಹೀಗೆಯೇ ತನ್ನ ಜೀವವನ್ನು ಕಳೆದುಕೊಂಡಿದ್ದ. ಆತನ ಅಗಲಿಕೆಯಿಂದ ತುಂಬ ನೊಂದ ನಾನು ನನ್ನ ಪತ್ರಿಕೆಯಲ್ಲಿ  ”ನಾವು ಬದುಕುತ್ತಿರುವ ಈ ಜಗತ್ತು ಎಷ್ಟು ಅದ್ಭುತ ಎಂದರೆ, ನಾವು ಎಲ್ಲವನ್ನೂ ಕಳೆದುಕೊಂಡು ನಿಂತಾಗ, ನಾವು ನಿರೀಕ್ಷಿಸಿರದ ಕಡೆಯಿಂದ ನೆರವು ಬರುತ್ತದೆ. ಸಮಯ ಕಳೆದಂತೆ ನಾವು ಬಗೆಹರಿಸಲು ಅಸಾಧ್ಯ ಎಂದುಕೊಂಡ ಸಮಸ್ಯೆಗಳು ನಿವಾರಣೆಯಾಗುವುದು ನಮ್ಮ ಅರಿವಿಗೆ ಬರುತ್ತದೆ. ಆತ್ಮಹತ್ಯೆ ಯಾವ ಸಮಸ್ಯೆಗಳಿಗೂ ಪರಿಹಾರವಲ್ಲ” ಎಂದು ಬರೆದಿದ್ದೆ.

ಆ ಲೇಖನಕ್ಕೆ ಶ್ರೀನಿವಾಸ್ ಕಾರ್ಕಳ ಎಂಬ ವ್ಯಕ್ತಿ ಒಂದು ಅದ್ಭುತವಾದ ಪ್ರತಿಕ್ರಿಯೆಯನ್ನು ಬರೆದಿದ್ದರು….

srinivasa karkala nele homeಕಾರ್ಕಳ ಅವರು 1961 ರಲ್ಲಿ ಜನಿಸಿದ್ದರು. ಅವರು ಒಬ್ಬ ಉತ್ಸಾಹಿ ಪರ್ವತಾರೋಹಿ, ಸಾಹಿತ್ಯದ ವಿದ್ಯಾರ್ಥಿ, ರಂಗ ನಟ ಹಾಗೂ ಮಂಗಳೂರಿನ ಪ್ರಗತಿಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರು. ಅವರದು ಪತ್ನಿ ಗುಲಾಬಿ ಬಿಳಿಮಲೆ ಮತ್ತು ಮಗ ವಿಶ್ವಾಸ್ ಅವರನ್ನೊಳಗೊಂಡ ಚಂದದ ಸಂಸಾರ. ಆಗ ಅವರು ಮಂಗಳೂರಿನ ಒಂದು ಸರ್ಕಾರಿ ರಾಸಾಯನಿಕ ಸಂಸ್ಕರಣಾ ಘಟಕದಲ್ಲಿ ಉದ್ಯೋಗಿಯಾಗಿದ್ದರು. ನಂತರ ಆ ಕಾರ್ಖಾನೆ ಖಾಸಗೀಕರಣಕ್ಕೆ ಒಳಪಟ್ಟು ಮದ್ಯ ವ್ಯಾಪಾರಿ ವಿಜಯ ಮಲ್ಯನ ಪಾಲಾಗಿತ್ತು.

1988 ರಲ್ಲಿ ಕಾರ್ಕಳ ಅವರು ಒಂದು ಅಪಘಾತಕ್ಕೆ ಈಡಾಗಿ ತಮ್ಮ ದೇಹದ ನಡುಭಾಗದ ಸ್ವಾಧೀನ ಕಳೆದುಕೊಂಡರು.

ಆ ಸಮಯದಲ್ಲಿ ಕಾರ್ಕಳ ಅವರ ಪತ್ನಿ ನಿರುದ್ಯೋಗಿಯಾಗಿದ್ದರು ಮತ್ತು ಮಗ ವಿಶ್ವಾಸ್ 5ನೇ ತರಗತಿಯಲ್ಲಿ ಓದುತ್ತಿದ್ದ. ಅಪಘಾತ ಸಂಭವಿಸಿದ ದಿನದಿಂದ ಕಾರ್ಕಳ ಅವರು ಗಾಲಿ ಕುರ್ಚಿಯನ್ನು ಆಧರಿಸಿ ಬದುಕು ನಡೆಸಬೇಕಾಯಿತು. ಅವರು ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಖಾನೆಯಲ್ಲಿ ಕುಳಿತು ಮಾಡಬಹುದಾದ ಕೆಲಸಕ್ಕೆ ಕೋರಿಕೆಯನ್ನು ಸಲ್ಲಿಸಿದ್ದರು.

ಮಾನವೀಯ ನೆಲೆಯಲ್ಲಿ ಇವರ ಮನವಿಗೆ ಸ್ಪಂದಿಸಬೇಕಾಗಿದ್ದ ವಿಜಯ ಮಲ್ಯ, ಕಾರ್ಕಳ ಅವರನ್ನು ಕೆಲಸದಿಂದಷ್ಟೇ ಅಲ್ಲ, ಅವರ ವಸತಿ ಗೃಹದಿಂದಲೂ ಹೊರಹಾಕಿದ. ಅದಕ್ಕೆ ಮುಖ್ಯ ಕಾರಣ ಕಾರ್ಕಳ ಅವರು ಹಿಂದಿನಿಂದಲೂ ಕಾರ್ಮಿಕರ ಹಕ್ಕುಗಳ ಪರವಾಗಿ ದನಿ ಎತ್ತುತ್ತಿದ್ದದ್ದು. ಹೀಗೆ ಇದ್ದಕ್ಕಿದ್ದಂತೆ ಕೆಲಸ ಇಲ್ಲ, ಆದಾಯ ಇಲ್ಲ, ಭವಿಷ್ಯವೇ ಇಲ್ಲದಂತಹ ಪರಿಸ್ಥಿತಿಗೆ ಕಾರ್ಕಳ ಮತ್ತು ಅವರ ಕುಟುಂಬ ದೂಡಲ್ಪಟ್ಟಿತ್ತು. ಇಲ್ಲಿಂದ ನಾನು ಕಾರ್ಕಳ ಅವರು ಬರೆದಿದ್ದ ಪತ್ರವನ್ನು ಯಥಾವತ್ತಾಗಿ ಓದುಗರಿಗೆ ನೀಡುತ್ತೇನೆ.

”ಬದುಕುವುದು ಹೇಗೆ ಎಂಬ ಭಯಂಕರ ಪ್ರಶ್ನೆ ನಿರಂತರವಾಗಿ ಕಾಡತೊಡಗಿತು. ಆಗ ಮಹಾ ಸ್ವಾಭಿಮಾನಿಗಳಾದ ನಮ್ಮ ಮುಂದಿದ್ದದ್ದು ಎರಡೇ ದಾರಿ. ಕಾಡಿ ಬೇಡಿ ಬದುಕುವ ಬದಲು, ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದು ಅಥವಾ ಧೈರ್ಯವಾಗಿ ಬದುಕನ್ನು ಎದುರಿಸುವುದು. ಹೆಣ್ಣಿನ ಶಕ್ತಿಯ ಪರಿಚಯವಾದುದು ಆಗಲೇ. `ನೀವೇಕೆ ಚಿಂತಿಸುತ್ತೀರಿ? ನಿಮ್ಮಲ್ಲಿ ಬರೆವಣಿಗೆಯ ಪ್ರತಿಭೆಯಿದೆ, ನಾನೂ ಏನಾದರೂ ಕೆಲಸ ಮಾಡುತ್ತೇನೆ, ಹೇಗಾದರೂ ಬದುಕೋಣ, ಮಗನನ್ನು ಓದಿಸೋಣ ಎಂದು ನನ್ನ ಸಂಗಾತಿ ಅಂದಳು.

gulabiಆ ಮಾತೇ ಒಂದು ಟರ್ನಿಂಗ್ ಪಾಯಿಂಟ್ ಆಯಿತು.

ಸಂಗಾತಿ ಒಂದು ಎನ್ ಜಿ ಓ ದಲ್ಲಿ ಸಮಾಜ ಕಾರ್ಯಕರ್ತೆಯಾಗಿ ಸೇರಿಕೊಂಡಳು. ನಾನು ಗಾಲಿ ಕುರ್ಚಿಯಲ್ಲಿದ್ದುಕೊಂಡೇ ಪತ್ರಿಕೆಗಳಿಗೆ ಲೇಖನ ಬರೆಯುವುದು, ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರಿಸುವುದು ಮೊದಲಾದ ಕೆಲಸಗಳಲ್ಲಿ ತೊಡಗಿಕೊಂಡೆ. ಕಂಪ್ಯೂಟರ್ ಕಲಿತೆ. ಬಿಡುವಿಲ್ಲದಷ್ಟು ಕಾರ್ಯನಿರತನಾದೆ. ಕ್ರೈ (ಚೈಲ್ಡ್ ರಿಲೀಫ್ ಅಂಡ್ ಯು) ಸಹಿತ ಅನೇಕ ಸ್ವಯಂಸೇವಾ ಸಂಸ್ಥೆಗಳಿಂದ ಧಾರಾಳ ಕೆಲಸ ಸಿಗಲಾರಂಭಿಸಿತು. ಇಬ್ಬರೂ ಸಂಪಾದಿಸತೊಡಗಿದೆವು.

ನೆಲಸಮವಾದ ಬದುಕನ್ನು ಅನೂಹ್ಯ ರೀತಿಯಲ್ಲಿ ಎತ್ತಿ ಕಟ್ಟಿದೆವು. ಸ್ವಂತ ಮನೆ ಮಾಡಿಕೊಂಡೆವು (ಅನೇಕ ಗೆಳೆಯರು ಆರ್ಥಿಕ ಸಹಿತ ನಾನಾ ನೆಲೆಯಲ್ಲಿ ನೆರವಾದರು), ಮಗನನ್ನು ಓದಿಸಿದೆವು (ಎಂಜೀನಿಯರಿಂಗ್ ಓದಿ ಈಗ ಆತ ಇನ್ಫೋಸಿಸ್ ನಲ್ಲಿ ಉದ್ಯೋಗಿ). ಈ 18 ವರ್ಷಗಳ ಬಳಿಕ ಹಿಂದಿರುಗಿ ನೋಡಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ; ಬದುಕನ್ನು ಹೀಗೂ ಕಟ್ಟಿಕೊಳ್ಳಲು ಸಾಧ್ಯವೇ ಎಂದು.

ಇಲ್ಲಿ ನಾನು ಹೇಳಬೇಕೆಂದುಕೊಂಡಿರುವ ಮುಖ್ಯ ಸಂಗತಿಯೆಂದರೆ ನಾನು ಚೆನ್ನಾಗಿದ್ದಾಗ ನನ್ನೊಂದಿಗೆ ಭಾರೀ ಸ್ನೇಹಿತರಂತಿದ್ದ, ಸ್ನೇಹಕೂಟಗಳಲ್ಲಿ ನನ್ನೊಂದಿಗೆ ಕುಡಿಯುತ್ತಿದ್ದ, ಕುಣಿಯುತ್ತಿದ್ದ ಅನೇಕಾನೇಕ ಗೆಳೆಯರಲ್ಲಿ ಎಷ್ಟು ಜನ ನಿಜವಾದ ಗೆಳೆಯರು, ಹಿತೈಷಿಗಳು ಎನ್ನುವುದು ಸತ್ವಪರೀಕ್ಷೆಯ ಕಾಲದಲ್ಲಿ ನನಗೆ ಅರ್ಥವಾಯಿತು. ನೂರಾರರಲ್ಲಿದ್ದ ಗೆಳೆಯರು, ನಾನು ಕೆಲಸ ಕಳೆದುಕೊಂಡು ಗಾಲಿ ಕುರ್ಚಿ ಸೇರಿದಾಗ ಹತ್ತಾರಕ್ಕಿಳಿದರು. ಇನ್ನೂ ಕೆಲವು ವರ್ಷ ಕಳೆದಾಗ ಔಟ್ ಆಫ್ ಸೈಟ್ ಈಸ್ ಔಟ್ ಆಫ್ ಮೈಂಡ್ ಎನ್ನುವುದು ರುಜುವಾತಾಗಿ ಗೆಳೆಯರ ಸಂಖ್ಯೆ ಬೆರಳೆಣಿಕೆಗೆ ಇಳಿಯಿತು.

ಆದರೆ ವಿಸ್ಮಯ ಎಂದರೆ ನನಗೆ ಏನೇನೂ ಸಂಬಂಧವಿಲ್ಲದ, ಕಿಂಚಿತ್ತೂ ಪರಿಚಿತಲ್ಲದ `ಯಾರ್ಯಾರೋ ಎನಿಸಿಕೊಂಡವರು, ಎಲ್ಲೆಲ್ಲಿಂದಲೋ ಬಂದವರು ನನ್ನ ನೆರವಿಗೆ ಬಂದರು. ಊಹಿಸದಂತಹ ಸಹಾಯ ಮಾಡಿದರು. ಜೀವವಿಮಾ ಸಂಸ್ಥೆಯಿಂದ ನನ್ನಂತೆ ಅವಘಡಕ್ಕೀಡಾದವರಿಗೆ ಏನೇನು ಅನುಕೂಲಗಳಿವೆ ಎಂಬ ಪ್ರಾಥಮಿಕ ಮಾಹಿತಿಗಳೂ ನಮಗಿರಲಿಲ್ಲ. ಆಗ ದೇವರಂತೆ ಒದಗಿಬಂದ ಎಂ.ಜಿ.ಭಟ್ ಎಂಬ ವಕೀಲರೊಬ್ಬರು ಆ ಸಂಸ್ಥೆಯಿಂದ ಲಕ್ಷಕ್ಕೂ ಮೀರಿದ ಮೊತ್ತ ಸಿಗುವಂತೆ ಮಾಡಿದರು.

`ಇಷ್ಟು ಸಹಾಯ ಮಾಡಿದ್ದೀರಲ್ಲ, ನಿಮ್ಮ ಈ ಉಪಕಾರಕ್ಕೆ ಎಷ್ಟು ಶುಲ್ಕ ಕೊಡಬೇಕು ಹೇಳಿ ಎಂದು ಕೇಳಿದಾಗ, `ನನಗೆ ಚಿಕ್ಕಾಸೂ ಬೇಡ, ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವುದಾದರೆ ಒಂದು ರೂಪಾಯಿ ಕೊಡಿ ಎಂದರು. ನಮ್ಮ ಕಣ್ಣು ತೇವಗೊಂಡಿತು. ಇಂತಹ ಅನೇಕ ಘಟನೆಗಳು ಒಂದು ಬಾಗಿಲು ಮುಚ್ಚಿದಾಗ ಇನ್ನೊಂದು ಬಾಗಿಲು ತೆರೆದುಕೊಳ್ಳುತ್ತದೆ ಎಂಬುದನ್ನು ನಮ್ಮ ಬದುಕಿನಲ್ಲಿ ಸಾಬೀತುಪಡಿಸಿದವು. ಬದುಕಿನಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ವಿಶ್ವಾಸ ಮೂಡುವಂತೆ ಮಾಡಿದವು.

trekking srinivasa karkalaಮೊದಲಿನಿಂದಲೂ ನನ್ನಿಂದ ದೇವರು ದಿಂಡರು ಬಹುದೂರ. ಬಾಳ್ವೆಯೇ ಬೆಳಕು ಎಂದುಕೊಂಡವನು ನಾನು. ನನ್ನ ಅಪಘಾತವಾದಾಗ ಅನೇಕರು, `ಆ ಪ್ರಾರ್ಥನಾ ಕೇಂದ್ರಕ್ಕೆ ಹೋಗಿ, ಈ ಮಂತ್ರವಾದಿಯಲ್ಲಿಗೆ ಹೋಗಿ, ಆ ಎಣ್ಣೆ ತಿಕ್ಕುವವನಲ್ಲಿಗೆ ಹೋಗಿ ಎಲ್ಲವೂ ಸರಿಯಾಗುತ್ತದೆ ಎಂದೆಲ್ಲ ಪುಕ್ಕಟೆ ಸಲಹೆ ನೀಡಿದರು. ಆದರೆ ನಾವು ಅ ಸಲಹೆಗಳನ್ನೆಲ್ಲ ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಹೊರಬಿಟ್ಟೆವು.

ವೈದ್ಯರ ಮೇಲೆ ಸಂಪೂರ್ಣ ನಂಬಿಕೆ ಇರಿಸಿ ಅವರು ಹೇಳಿದಂತೆ ಕೇಳಿದೆವು. ವೈದ್ಯರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿದ್ದರಿಂದ ಮತ್ತು ನಿಯಮಿತವಾಗಿ ಫಿಸಿಯೋತೆರಪಿ ಪಡೆದುದರಿಂದ ನನ್ನ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆ ಕಂಡಿತು. ಕ್ಯಾಲಿಪರ್ಸ್ ತೊಟ್ಟು ಇನ್ನೊಬ್ಬರ ಸಹಾಯದೊಂದಿಗೆ ನಡೆದಾಡುವ ಸಾಮರ್ಥ್ಯವನ್ನೂ ಗಳಿಸಿದೆ. ಸ್ವಾವಲಂಬಿಯಾಗಿ ನನ್ನ ಬಹುತೇಕ ಕೆಲಸಗಳನ್ನು ನಾನೇ ಮಾಡಿಕೊಳ್ಳಲೂ ಸಮರ್ಥನಾದೆ. ಸ್ವತಂತ್ರವಾಗಿ ನಡೆದಾಡಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಹೊರತು ಪಡಿಸಿದರೆ ಇತರ ವಿಚಾರಗಳಲ್ಲಿ ನಾನೀಗ ಬೇರೆ ಎಲ್ಲರಂತೆಯೇ ಇದ್ದೇನೆ.

ಬದುಕು ಮತ್ತು ಜಗತ್ತು ನಾವು ಅಂದುಕೊಂಡಷ್ಟು ಕೆಟ್ಟದಾಗಿಲ್ಲ. ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನಮಗಿಂತ ಸುಖವಾಗಿರುವ ಮೇಲಿನವರನ್ನು ನೋಡುವುದಲ್ಲ, ನಮಗಿಂತ ಕಷ್ಟದಲ್ಲಿರುವ ಕೆಳಗಿನವರನ್ನು ನೋಡಿ ನಾವು ಬದುಕಬೇಕು. ಸಾಯುವುದು ಬಹಳ ಸುಲಭ, ಅದರೆ ಬದುಕುವುದು ಸುಲಭವಲ್ಲ. ಸವಾಲುಗಳನ್ನು ಎದುರಿಸಿ, ಸುಲಭವಲ್ಲದ ಇಂತಹ ಬದುಕನ್ನು ಗೆದ್ದಾಗ ಸಿಗುವ ಆತ್ಮಸಂತೋಷ ಇದೆಯಲ್ಲ ಅದು ಬೆಲೆಕಟ್ಟಲಾಗದ್ದು. ಆ ಆತ್ಮಸಂತೋಷದೊಂದಿಗೆ ಈಗ ನಾವು ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ.

ನಮ್ಮೆದುರು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳು ಅನುಭವಿಸಿದ ಪರಿಸ್ಥಿತಿ ಮತ್ತು ಕಷ್ಟ ಖಂಡಿತವಾಗಿಯೂ ಕಾರ್ಕಳ ಅವರು ಎದುರಿಸಿ, ಅದರಿಂದ ಅವರು ಹೊರಬಂದ ಕಷ್ಟಗಳಷ್ಟಿರಲು ಸಾಧ್ಯವಿಲ್ಲ. ಕಾರ್ಕಳ ಅವರು ಗೆದ್ದರು. ಆದರೆ ಮಿಕ್ಕವರು ತಮ್ಮ ಜೀವ ಕಳೆದುಕೊಂಡು ತಮ್ಮ ಕುಟುಂಬಗಳನ್ನು ಸೋಲಿಸಿದರು. ಬದುಕುವ ಕುರಿತು ಭಯವುಳ್ಳ ಎಲ್ಲರಿಗೂ ಕಾರ್ಕಳ ಅವರ ಬದುಕು ಒಂದು ಸ್ಫೂರ್ತಿ ಎಂಬ ಕಾರಣಕ್ಕೆ ಅದನ್ನು ನಾನು ಇಲ್ಲಿ ಹಂಚಿಕೊಂಡಿದ್ದೇನೆ.

‍ಲೇಖಕರು Admin

14 July, 2016

8 Comments

  1. Shama, Nandibetta

    ವಾಹ್ ಆತ್ಮವಿಶ್ವಾಸದ ಅಮೃತಬಳ್ಳಿ ಕಾರ್ಕಳ ಅವರ ಕುಟುಂಬಕ್ಕೆ ಸಲಾಂ

    ಹಂಚಿಕೊಂಡ ನಿಮಗೂ

  2. ಅಮರದೀಪ್.ಪಿ.ಎಸ್.

    ತುಂಬಾ ಪ್ರೇರಣೆಯಾಗುವಂಥ ದಿಟ್ಟತನ ಶ್ರೀನಿವಾಸ್ ಸರ್ ಅವರದು…..

  3. smitha

    Gulabi akka… shreenuvasa Anna… namagellarigooo preraneyaaguvantha baduku nimmadu.

  4. Atturu Chaiyabba

    ಅತ್ಯಂತ ಅನುಕರನೀಯ ಆನುಭವ
    ಮುಂದಿನ ಪೀಳಿಗೆಗೆ ಇಂಥಹ ಲೇಖನಗಳು ಬದುಕನ್ನು ಎದುರಿಸಿ ಮುನ್ನಡೆಯಲು ಸಹಕಾರಿ

  5. Anonymous

    “ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನೀವು ನಿಮ್ಮನ್ನು ನೆಚ್ಚಿಕೊಂಡ ಕುಟುಂಬವನ್ನ ನೆನೆಯಿರಿ” ಅನ್ನುವಂತ ಮಾತನ್ನ ಇತ್ತೀಚೆಗೆ ಅನುಪಮಾ ಶೈಣೈ ಸಹಿತ ಹೇಳಿದ್ದಾರೆ. ಶ್ರೀನಿವಾಸ್ ಕಾರ್ಕಳ ಸಂವೇದಿಯಲ್ಲಿ ಪುಟ್ಟ ಆತ್ಮಕಥೆ ಬರೆದಿದ್ದಾರೆ. ಓದಿ ತಿಳಿಯಬೇಕು ಅದರ ಸತ್ವವನ್ನ. ಬದುಕಿಗೆ ಬೇರು ಕೊಟ್ಟು ಗುಲಾಬಿ ನಿಂತ ಪರಿ ಇದೆಯಲ್ಲ ಅದು ನಿಜವಾದ ಜೀವನ ಪ್ರೀತಿ.
    ಅನುಪಮಾ ಪ್ರಸಾದ್.

  6. Anonymous

    ಜೀವನ ಆತ್ಮಹತ್ಯೆಗಲ್ಲ ಹೋರಾಡಿ ಬದುಕುವುದಕ್ಕೆ ಎಂಬ ಸಂದೇಶ ಮಾರ್ಮಿಕವಾಗಿದೆ.

  7. Prabha N Belavangala

    ನನಗೆ ಶ್ರೀನಿವಾಸ ಕಾರ್ಕಳ ಅವರ ಬಗೆಗಿನ ಈ ವಿವರಗಳೆಲ್ಲ ತಿಳಿದಿರಲಿಲ್ಲ. ಪ್ರಜಾವಾಣಿಗೆ ಅವರು ಬರೆಯುತ್ತಿದ್ದ ಅನಿಸಿಕೆಗಳು, ಪ್ರತಿಕ್ರಿಯೆಗಳ ಕುರಿತು ಮನದುಂಬಿ ಅಭಿನಂದಿಸಬೇಕೆಂಬ ಆಸೆಯಾಗುತ್ತಿತ್ತು. ಇವರ ರೀತಿಯಲ್ಲಿ ಆಲೋಚಿಸಿ, ವಿಶ್ಲೇಷಿಸಿ ಪತ್ರಿಕೆಗಳಿಗೆ ಬರೆಯುವ ರೂಢಿ ಬೆಳೆಸಿಕೊಂಡಿರುವವರು ನಮ್ಮಲ್ಲಿ ಬೆರಳೆಣಿಕೆಯಷ್ಟು ಜನ ತಾನೇ? ಬಾವುಟ ಹಿಡಿಯಲು ರೆಡಿ, ಘೋಷಣೆ ಕೂಗಲೂ ಸೈ. ಬರೆಯುವುದೆಂದರೆ? ಅದು ಖಂಡಿತವಾಗಲೂ ದೃಢತೆ ಇದ್ದವರಿಗೆ ಮಾತ್ರ ಸಾಧ್ಯ. ಈ ಅಪರೂಪದವರ ಗುಂಪಿಗೆ ಸೇರಿದವರಲ್ಲಿ ಕಾರ್ಕಳ ಅವರೂ ಒಬ್ಬರು. ಅವರ ಒಂದು ಬರವಣಿಗೆ ಒಂದು ಹೋರಾಟಕ್ಕೆ ಸಮ ಎನಿಸುತ್ತಿತ್ತು ನನಗೆ. ಮನೆಯಲ್ಲಿಯೇ ಕುಳಿತು ನೂರಾರು ಜೀವಪರ ಹೋರಾಟಗಳನ್ನು ನಡೆಸಿರುವ ಅವರನ್ನು ಅಭಿನಂದಿಸಲು ಈಗ ನನ್ನ ಬಳಿ ಪದಗಳೇ ಇಲ್ಲ. ಹಲವು ರೀತಿಯ ಒತ್ತಡಗಳಿಗೆ ಸಿಲುಕಿ ನಾನು ಸಹ ಹಲವು ತಿಂಗಳುಗಳಿಂದ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಸದ್ಯಕ್ಕೆ ನನ್ನದು ಉತ್ಸಾಹದ ಬದುಕಲ್ಲದೆ ಹೋದರು, ನನ್ನ ಕುಟುಂಬದವರಲ್ಲಿ ಮನೆ ಮಾಡಿರುವ ಸಮಾನತೆಯ ಮೌಲ್ಯಗಳು, ನನ್ನ ಬಗೆಗೆ ನನ್ನ ಹೆತ್ತವರಿಗಿರುವ ಅಪಾರ ಗೌರವ, ಕಾಳಜಿ, ನನ್ನ ಬಗೆಗೆ ಉತ್ತಮ ಒಲವಿರಿಸಿಕೊಂಡಿರುವ ನನ್ನ ಸಂಗಾತಿಗಳ ಒಡನಾಟ, ನನ್ನೂರಿನಲ್ಲಿರುವಾಗ ಜನ ನನ್ನ ಬಗ್ಗೆ ತೋರುವ ಪ್ರೀತಿ ಇವುಗಳೆಲ್ಲವೂ ಔಷದದ ಜೊತೆಗೆ ಔಷದಗಳಾಗಿ ಜೊತೆಗೂಡಿ ಮರಳಿ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗಿವೆ. ನನ್ನ ಶ್ರಮವೆಲ್ಲ ನಿರರ್ಥಕ, ನನ್ನ ಬದುಕೇ ವ್ಯರ್ಥವಾಗುತ್ತಿದೆ ಎನ್ನುವಂತಹ ಭಾವನೆಗಳು ಹಗಲು ರಾತ್ರಿ ಕಾಡಿದ್ದಿದೆ. ಇಷ್ಟರ ನಡುವೆಯೂ ನನ್ನ ಪ್ರಪಂಚ ದೊಡ್ಡದಿದೆ ಎನ್ನುವ ಮೊಳಕೆಗಳು ನನ್ನೊಳಗೆ ಉದಯಿಸಲು ಪ್ರಾರಂಭಿಸಿ ಚೇತರಿಕೆಯ ಕಡೆಗೆ ನಡೆದಿದ್ದೇನೆ. ನಿಮ್ಮ ಬದುಕಿನ ಹೋರಾಟದೆದುರು ನನ್ನದು ಸಾಸಿವೆ ಪ್ರಮಾಣದ್ದು ಎನಿಸಿದರೂ ಬದುಕಬೇಕೆನ್ನುವ ಚೈತನ್ಯ ಎಂಥದೇ ಸಂದರ್ಭದಲ್ಲೂ ಅತೀ ಮುಖ್ಯ ಎನ್ನುವುದನ್ನು ತಿಳಿಸಬೇಕೆನ್ನುವ ನನ್ನದೂ ಆಸೆಯಿಂದ ಇಷ್ಟನ್ನು ಬರೆಯಬೇಕೆನಿಸಿತು ಬರೆದೆ. ಹೋದವರು ಸಮಸ್ಯೆಗಳಿಂದ ಮುಕ್ತ. ಆದರೆ ನಮ್ಮನ್ನು ಪ್ರೀತಿಸುವವರ ಗತಿ. ಮೊನ್ನೆ, ಗೆಳೆಯರಾದ ಅಜೀಜ್ ಕಿರುಗುಂಡಾ ರವರ ಅನಾರೋಗ್ಯದ ಕುರಿತು ಮಾಹಿತಿ ಬಂದಾಗ ನನಗರಿವಿಲ್ಲದೆ ನನ್ನ ಕಣ್ಣುಗಳು ಹನಿಗೂಡಿದ್ದವು. ಈವರೆಗೆ ನಾನವರನ್ನು ಭೇಟಿಯಾದದ್ದೇ ಇಲ್ಲ.
    “ಸಂಬಂಜಗಳು ದೊಡ್ಡವು” ಅವುಗಳ ಸರಪಳಿಗಳನ್ನು ನಾವೇ ಕೈಯ್ಯಾರ ಕಡಿಯಬಾರದು. ಅದು ಹೃದಯ ಹೀನ ನಡವಳಿಕೆ. ನಾವೆಂದು ಆ ದಾರಿ ತುಳಿಯಬಾರದು.

  8. ಡಾ.ಸಿದ್ದರಾಜು ಕೊತ್ತತ್ತಿ

    ಬದುಕು ಸುಖದ ತೇರು ಎಂದು ನಾವೇಕೆ ಅಂದುಕೊಳ್ಳಬೇಕು? ಕಷ್ಟ ಕಾರ್ಪಣ್ಯಗಳನ್ನು ಸವಾಲುಗಲು ಎಂದುಕೊಂಡು, ಆತ್ಮ ವಿಶ್ವಾಸದ ಚೈತನ್ಯದೊಡನೆ ಗುರಿಯೆಡೆಗೆ ಸಾಗಿದರೆ ಯಶಸ್ಸು ನಿಶ್ಚಿತ ಎಂಬುದನ್ನು ಕಾರ್ಕಳರವರು ಬದುಕಿ ತೋರಿಸಿದ್ದಾರೆ? ಉತ್ತಮ ಹುದ್ದೆಯಲ್ಲಿದ್ದರೂ ಸವಾಲನ್ನು ಎದುರಿಸಲಾಗದೆ ಸೋತು ಹೋಗುವ ಮಂದಿಗೆ ಇದೊಂದು ಜೀವನ ಪಾಠ. ಕಷ್ಟಗಳು ಎಡತಾಕಿದಾಗ ಸ್ನೇಹಿತರೇ ಏಕೆ? ಬಂಧು ಬಳಗದವರೂ ಕೂಡ ದೂರವಾಗುತ್ತಾರೆ. ಆದರೆ ಕಾರ್ಕಳರವರಿಗೆ ನೆರವಾದಂತಹ ವಕೀಲರಂತಹ ಮಾನವೀಯತೆಯ ಜನ ಕೂಡ ನಮ್ಮೊಡನಿರುತ್ತಾರೆ. ತಾಳ್ಮೆಯಿಂದ ಕಾಯ್ದು ಬದುಕನ್ನು ರೂಪಿಸಿಕೊಳ್ಳಬೇಕಷ್ಟೇ! ಕಾರ್ಕಳರವರನ್ನು ಪರಿಚಯಿಸಿದ ಗೌರಿ ಲಂಕೇಶ್ ರವರಿಗೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading