ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕವಿತೆ ಸಶಕ್ತವಾಗಿದೆ ಎನ್ನೋದಕ್ಕೆ ಏನು ಬೇಕು?

ಇಂದು ಅಂಕೋಲಾದಲ್ಲಿ ನೀತಾ ತೋರಣೆ ಅವರ ಕವನ ಸಂಕಲನದ ಬಿಡುಗಡೆ ಸಮಾರಂಭವಿದೆ. ಪ್ರೊ ಮೋಹನ ಹಬ್ಬು ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ನನಗೆ ಪಿ.ಯು.ಸಿ. ಎರಡು ವರ್ಷ ಪಾಠ ಮಾಡಿದ ಗುರುಗಳು ಇವರು. ಗುರುವಿನ ಪುಸ್ತಕವನ್ನು ಬಿಡುಗಡೆ ಮಾಡುವ ಅದೃಷ್ಟ ಅದೆಷ್ಟು ಶಿಷ್ಯರಿಗೆ… ಅದರಲ್ಲೂ ಶಿಷ್ಯೆಯಂದಿರಿಗೆ ಸಿಗುತ್ತದೆ ಹೇಳಿ? ಅಂತಹ ಅದೃಷ್ಟ ನನ್ನದಾಗಿದೆ. ನನ್ನ ಬಗ್ಗೆ ಹೆಮ್ಮೆ ಪಡುವ ನನ್ನ ಗುರುಗಳ ಪ್ರೀತಿಗೆ ತಲೆಬಾಗಿ
ವಂದಿಸುತ್ತ ಈ ಗೌರವ ಸ್ವೀಕರಿಸುತ್ತಿದ್ದೇನೆ.

ಮರಾಠಿ ಕವನಗಳ ಕನ್ನಡ ಅನುವಾದವಷ್ಟೇ ಅಲ್ಲ ಇಂಗ್ಲಿಷ್ ಅನುವಾದವನ್ನೂ ಗುರುಗಳು ಮಾಡಿದ್ದಾರೆ. ಬನ್ನಿ ಶುಭ ಹಾರೈಸಿ

shreedevi keremane

ಶ್ರೀದೇವಿ ಕೆರೆಮನೆ 

ಒಂದು ಕವಿತೆ ಸಶಕ್ತವಾಗಿದೆ ಎನ್ನೋದಕ್ಕೆ ಏನು ಬೇಕು? ಅಕ್ಷರ ಗಣ ಸಮರ್ಪಕವಾಗಿರಬೇಕೆ? ಛಂದಸ್ಸಿಗೆ ಅನುಗುಣವಾಗಿರಬೇಕೆ? ವಿಮರ್ಶಕರು ಮೆಚ್ಚುವಂತೆ ಇರಬೇಕೆ? ಮನದ ಭಾವನೆಗಳು ಓದುಗರಿಗೆ, ಸಹೃದಯರಿಗೆ ತಟ್ಟುವಂತಿದ್ದರೆ ಸಾಕೆ? ನೀತಾ ತೋರಣೆಯವರ ಕವನ ಸಂಕಲನವನ್ನು ಓದುವಾಗ ನನಗೆ ಕಾಡಿದ ಪ್ರಶ್ನೆ ಇದು.

8437983a-c996-4c39-88f2-6e43cae16e7dಕೆಲವು ದಿನಗಳ ಹಿಂದೆ ಒಂದು ಕಾವ್ಯ ಕಮ್ಮಟಕ್ಕೆ ಹಾಜರಿ ಹಾಕಿದ್ದೆ. ಅಲ್ಲಿನ ಸಂಪನ್ಮೂಲ ವ್ಯಕ್ತಿಗಳ ಮಾತು ಬೇಡವೆಂದರೂ ನೀತಾ ತೋರಣೆಯವರ ಕವನಗಳನ್ನು ಓದುವಾಗ ನೆನಪಿಗೆ ಬರುತ್ತಿವೆ. ‘ಬರೆಯುವ ಮೊದಲು ಅಕ್ಷರ ಗಣಗಳನ್ನು ಅಭ್ಯಾಸ ಮಾಡಿ, ಛಂದಸ್ಸಿನ ಪ್ರಕಾರ ಬರೆಯುವುದು ಹೇಗೆ ಎಂಬುದನ್ನು ಅಭ್ಯಾಸ ಮಾಡಿಕೊಳ್ಳಿ. ಆದಿ ಪ್ರಾಸ ಅಂತ್ಯ ಪ್ರಾಸದ ಕಡೆ ಗಮನ ಕೊಡಿ ಅವೆಲ್ಲ ರೂಢಿಯಾದ ನಂತರವಷ್ಟೇ ನಿಮ್ಮ ಸ್ವಂತ ಕವನಗಳನ್ನು ಬರೆಯಲು ಪ್ರಾರಂಭಿಸಿ.’ ಎಂಬ ಮಾತು ನಿಜವಾಗಿದ್ದರೆ ಇದಾವುದೂ ಹಿಡಿತಕ್ಕೆ ಒಳಪಡದ ಇಲ್ಲಿನ ಕವಿತೆಗಳು ಕವಿತೆಗಳೇ ಆಗಲು ಸಾದ್ಯವಿಲ್ಲ.

ಆಕ್ರೋಶದಿಂದ ಕೂಡಿದ, ವಿರೋಧವನ್ನು ವ್ಯಕ್ತಪಡಿಸುವ ಕವನಗಳು ಉತ್ತಮ ಕವನಗಳಾಗಲು ಸಾಧ್ಯವಿಲ್ಲವೆಂದ ಮಾತಿಗೆ ಬದ್ಧವಾಗಿ ನೋಡಿದರೆ ನೀತಾ ತೋರಣೆಯವರ ಕವನಗಳು ಕವನಗಳಾಗಲೇ ಸಾಧ್ಯವಿಲ್ಲವೇನೋ ಎಂಬ ಭಾವನೆ ಹುಟ್ಟಿದ್ದಂತೂ ನಿಜ. ಆದರೆ ಈ ಎಲ್ಲ ಸಾಂಪ್ರದಾಯಿಕ ಹಾಗೂ ಸಂಕುಚಿತ ಮನಸ್ಥಿತಿಗೆ ನೀತಾ ತೋರಣೆಯವರ ಕವನಗಳು ಉತ್ತರದಂತಿದೆ.

ಮೇಲ್ನೋಟಕ್ಕೆ ನೋಡಿದರೆ ದಿನಬಳಕೆಯ ಶಬ್ಧದ, ಸಹಜ ನಿರೂಪಣೆಯ ನೀತಾ ತೋರಣೆಯವರ ಕವನಗಳು ತೀರಾ ಸರಳ ಎನ್ನಿಸಿ ಬಿಡಬಹುದಾಗಿದ್ದರೂ ಆಳಕ್ಕಿಳಿದಂತೆ ಹೊಸತೇ ಆದ ಅರ್ಥವಿವರಣೆಯನ್ನು ನೀಡುತ್ತಾ ಹೋಗುತ್ತದೆ. ತೋರಣೆಯವರ ಸಂಕಲನದ ಕೇಂದ್ರ ಸ್ತ್ರೀ. ಇಲ್ಲಿನ ಎಲ್ಲಾ ಕವಿತೆಗಳೂ ಹೆಣ್ಣಿನ ನೆಲೆಯಿಂದಲೇ ನೋಡಿ, ಆ ನೆಲೆಯಿಂದಲೇ ಬರೆದಿರುವುದನ್ನು ಕಾಣಬಹುದು ಹೆಣ್ಣೆಂದರೆ… ಎನ್ನುವ ಸಿದ್ಧ ರೂಪದಲ್ಲಿಟ್ಟು ನೋಡುವ ಎಲ್ಲಾ ಪುರುಷಾಹಂಕಾರಕ್ಕೊಂದು ತಣ್ಣನೆಯ ನಿರ್ಲಕ್ಷಿಸಿದ ಸಾಲುಗಳಲ್ಲಿ ನೀತಾ ತೋರಣೆ ಉತ್ತರಿಸುತ್ತಾರೆ. ಅವರ ಸಾಲುಗಳಲ್ಲಿ ಹೆಚ್ಚಿನ ಆಕ್ರೋಶ ಕಾಣದಿದ್ದರೂ ಹೇಳಬೇಕಾದುದನ್ನು ಯಾವ ಮುಲಾಜೂ ಇಟ್ಟುಕೊಳ್ಳದೇ ಹೇಳಿಬಿಡುವುದನ್ನು ಕಾಣಬಹುದು ಅವರ ಸಾಲುಗಳು ಒಮ್ಮೆ ಮುಟ್ಟಿ ನೋಡಿಕೊಳ್ಳುವ ಹಾಗೆ ಗುದಮುರಿಗೆ ನೀಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ.

ಇಡೀ ಸಂಕಲನದಲ್ಲಿ ಹೆಣ್ತನವನ್ನು ಬಿಂಬಿಸುವ ಕವನಗಳು, ಪ್ರೇಮ ಕವನಗಳು ಮತ್ತು ಬದುಕನ್ನು ಸ್ತ್ರೀವಾದಿ ನೆಲೆಯಿಂದ ನೋಡುವ ಕವನಗಳಿದ್ದರೂ ಎಲ್ಲವೂ ಹೆಣ್ತನವನ್ನು ಬಿಂಬಿಸುವ ಕವನಗಳೇ ಆಗಿರುವುದೊಂದು ವಿಶೇಷ. ‘ನಿರ್ಮಿತಿಯ ಕ್ಷಣ’ ಎನ್ನುವ ಕವನದಲ್ಲಿ ಪ್ರಸವ ಮತ್ತು ನಿರ್ಮಿತಿಯ ಬಗ್ಗೆ ಮಾತನಾಡುತ್ತ ‘ಒಂದರ ಮುಂದೆ ನನ್ನ ಹೆಸರು , ಇನ್ನೊಂದಕ್ಕೆ ನಿನ್ನ ಹೆಸರು’ ಎನ್ನುತ್ತಾರೆ. ಹೆಣ್ಣು ಹೊತ್ತು, ಎಷ್ಟೇ ಪ್ರಸವ ವೇದನೆ ಅನುಭವಿಸಿದರೂ ನಂತರ ಆ ಮಗು ಎಂಬ ನಿರ್ಮಿತಿಯ ಮುಂದೆ ಜೋಡಿಸಲ್ಪಡುವುದು ಗಂಡಿನ ಹೆಸರು ಹೆಸರು ಎಂಬ ವ್ಯಂಗ್ಯ ತಾನೇ ತಾನಾಗಿ ಮೂಡಿಬಂದಿದೆ. `ಸ್ತ್ರೀತ್ವದಿಂದ ಮಾನವತೆಯೆಡೆಗೆ’ ಎಂಬ ಕವಿತೆ ಸ್ತ್ರೀತ್ವದ ಧ್ವನಿಯನ್ನು ಪ್ರಭಲವಾಗಿ ಪ್ರತಿಪಾದಿಸುತ್ತದೆ.

mohan habbu2ಬರುತ್ತಾರೆ ನಿನ್ನ ಬಳಿ ಬದುಕಿನ ಪಯಣದಲಿ
ಒಮ್ಮೊಮ್ಮೆ ಆತ್ಮೀಯತೆಯ ನೆಪದಲ್ಲಿ
ಮತ್ತೊಮ್ಮೆ ಆಪ್ತ ಸಂಬಂಧದ ನೆಪದಲ್ಲಿ
ಕೆಲವೊಮ್ಮೆ ನೆರವಿನ ನೆಪದಲ್ಲಿ
ಕಾಣದಿರಬಹುದು, ಮಾಯಾವಿ ರಕ್ಕಸರ ಹಾಗೆ
ಆದರೆ ರಚಿಸುತ್ತಾರವರು ಮಾತಿನ ಮಾಯಾಜಾಲ
ನಿನ್ನ ಬೇಟೆಯಾಡಲು
ಅವರ ಪಾಲಿಗೆ ನೀನೊಂದು ಬೇಟೆ

ಎಂದು ಹೆಣ್ಣಿನ ಪಾಲಿಗೆ ಸಮಾಜ ಕಂಟಕವಾಗುವ ಬಗೆಯನ್ನು ನೇರಾ ನೇರಾ ನುಡಿಯುತ್ತಾರೆ ಆದರೆ ಕವನದ ಕೊನೆಯಲ್ಲಿ

ಕಲಿಯಬೇಕು ನೀನು ಈ ಜಗದಲ್ಲಿ
ಮನುಷ್ಯರನ್ನರಿವ ಪರಿ
ಅಷ್ಟೇ ಬಲಶಾಲಿಯಾಗಿ, ಆತ್ಮಾಭಿಮಾನಿಯಾಗಿ
ಎನ್ನುತ್ತಾರೆ. ಅಂದರೆ ಹೆಣ್ಣು ಕೇವಲ ಅಮಾಯಕಳಾಗಿ ಬೇಟೆಯ ಬಲಿಯಾಗಿದ್ದರೆ ಆಗದು. ಈ ಸಮಾಜದಲ್ಲಿ ಬದುಕುವುದಕ್ಕೆ ಆತ್ಮಾಭಿಮಾನಿಯಾಗಬೇಕು ಎಂದು ಮುಗಿಸುವುದು ನಿಜಕ್ಕೂ ಆಶಾದಾಯಕವಾಗಿದೆ.

ನನ್ನದು ತಾಯ್ತನ ನಿನ್ನದು ಬೀಜ
ಪ್ರಶ್ನೆ ಸಂತಾನದ ಕುರಿತಾದ ಬದ್ಧತೆಯದು (ನಾನು ಮತ್ತು ನೀನು)
ಎನ್ನುವ ಸಾಲು ಗಂಡು ಮತ್ತು ಹೆಣ್ಣು ಇಬ್ಬರ ಮರ್ಮಕ್ಕೂ ತಾಗುವಂತಿದೆ.
ನನ್ನ ಉದಾಸ ಮನಕೆ
ಉಲ್ಲಾಸ ತುಂಬುವ ಮಳೆ
ಅದೆಷ್ಟು ನನ್ನದು ಅನ್ನಿಸುತ್ತದೆ
ಅದೆಷ್ಟು ಬೇಕು ಅನ್ನಿಸುತ್ತದೆ
ಮತ್ತೆ,
ನನ್ನ ಕಣ್ಣಂಚಿನಲ್ಲಿ ಜಿನುಗುವ ಮಳೆ
ಅದೆಷ್ಟು ದುರ ಅನ್ನಿಸುತ್ತದೆ
ಅದೆಷ್ಟು ಪರಕೀಯ ಅನ್ನಿಸುತ್ತದೆ {ಮಳೆ)

ಎನ್ನುವ ಸಾಲುಗಳಲ್ಲಿ ಅಡಗಿರುವ ವೇದನೆಯನ್ನೊಮ್ಮೆ ನೋಡಿ. ನಮ್ಮದೇ ಕಣ್ಣೀರು ನಮಗೆ ನೋವು ಕೊಡುವ ಕ್ರೀಯೆ. ಇದು ಎಲ್ಲ ಹೆಣ್ಣಿನ ಪಾಡು. ಗಂಡು ಪ್ರಪಂಚಕ್ಕೆ ಕೊನೆಯವರೆಗೂ ಇದು ಅರಿವಾಗದಿರುವುದೇ ಒಮದು ವಿಪರ್ಯಾಸ. ಹೊರಗೆ ಸುರಿವ ಮಳೆ ಆಹ್ಲಾದ ತಂದರೆ ಒಳಗಿನ ಮಳೆ ತರುವುದು ಬರೀ ದುಃಖವನ್ನು. ಆದರೆ ಆ ದುಃಖ ‘ಹೆಂಗಸರ ಕಣ್ಣಿರು… ಎಂದು ನಿರ್ಲಕ್ಷಿತವಾಗಿ ಬಿಡುವುದೇ ಹೆಚ್ಚು. ಗಾಯ ಎನ್ನುವ ಕವನ ಕೂಡ ಇದೇ ಧ್ವನಿಯನ್ನು ಹೊರಡಿಸುತ್ತದೆ. ಹೆಣ್ಣಿನ ಮನಸ್ಸಿಗೆ ದೇಹಕ್ಕೆ ಆಗಾಗ್ಗೆ ಗಾಯವಾಗುವುದು ಹೊಸತೇನೂ ಅಲ್ಲ. ಆದರೆ ಹೆಣ್ಣು ಮಾತ್ರ ತನಗೇನೂ ನೋವೆ ಆಗಿಲ್ಲ ಎಂಬಂತೆ ನಗುವಿನ ಮುಖವಾಡ ಹಾಕಿ ಹೊಸತೇ ಆದ ಗಾಯಕ್ಕೆ ಸಿದ್ಧವಾಗಿ ಬಿಡುವುವ ಹೆಣ್ಣಿನ ಮನಸ್ಥಿತಿಯ ಅನಾವರಣ ಇಲ್ಲಿದೆ

ಶಾಂತವಾಯಿತು
ಮೊದಲಿನ ಹಾಗೆ
ಇನ್ನೊಂದು ಗಾಯ
ಸಹಿಸಲೋಸುಗಎಂದು ಕೆಲವೇ ಶಬ್ಧಗಳಲ್ಲಿ ಗಹನವಾದುದನ್ನು ಕಟ್ಟಿಕೊಡುತ್ತಾರೆ.

ಅದೆಷು ಎಚ್ಚರವಿರದವಳಂತಿದ್ದರೂ
ನಿನ್ನ ಅಸ್ತಿತ್ವದ ತೀವೃತೆ ಕಣ್ಣೆದುರಿಗೆ ಬರುತ್ತದೆ

ಅನ್ನುತ್ತಾರೆ.ಹೆಣ್ಣು ಸಂಸಾರವನ್ನು, ಪ್ರೇಮವನ್ನು ಸರಿದೂಗಿಸಿಕೊಳ್ಳಬೇಕೆಂದರೆ ಯಾವುದೂ ಎಚ್ಚರವಿಲ್ಲದಂತೆಯೇ ವರ್ತಿಸಬೇಕಾಗಿದೆ. ಆಕೆಗಾದ ಅವಮಾನ, ನೋವು, ಅಪಮಾನಗಳ ಲೆಕ್ಕ ಇಡುವಂತಿಲ್ಲ. ಆದರೂ ಗಂಡಸಿನ ಅಸ್ತಿತ್ವ ಅವಳ ಅಸ್ತಿತ್ವವನ್ನೇ ಮರೆಮಾಚಿಬಿಡುವುದು ಎಂದಿಗೂ ತಪ್ಪುವುದಿಲ್ಲ.
ಸಂಕಲನದಲ್ಲಿ ಬರುವ ಪ್ರೇಮಕವನಗಳೂ ಕೂಡ ಇತ್ತ ಪ್ರೇಮ ಕವನವೂ ಅಲ್ಲದೇ ಅತ್ತ ವಿರಹದ ಕವನಗಳೂ ಅಲ್ಲದೇ ಅದೇ ಹೆಣ್ತನವನ್ನೇ ಬಿಂಬಿಸುವಂತಿದೆ.

ನೀನು ಕೇವಲ ನನ್ನವನಾಗಿದ್ದೆ
ನಾನು ಕೇವಲ ನಿನ್ನವಳಾಗಿದ್ದೆ
ಆದರೂ ಒಬ್ಬರಿಗೊಬ್ಬರಾಗಿ ಬದುಕಲೇ ಇಲ್ಲ (ನಾವು)

ಎನ್ನುತ್ತ ಪ್ರೇಮದ ವೈಫಲ್ಯವನ್ನು ವಿವರಿಸುತ್ತಾರೆ ಅವನ ನೆನಪಲ್ಲಿ ಕೂಡ ಪ್ರೇಮದ ವೈಫಲ್ಯವನ್ನೇ ಹೇಳುತ್ತದೆ.

ಆತ ಇದ್ದಾನೆ
ತನ್ನಷ್ಟಕ್ಕೆ ತಾನಾಗಿ
ತನಗಾಗಿ
ಮತ್ತೆ ನಾನಿರುವುದು
ಸರ್ವಸ್ವವನ್ನು ಕಳೆದುಕೊಂಡು
ಆತನ ಶೋಧದಲ್ಲಿ

ಎನ್ನುತ್ತಾರೆ ಇಲ್ಲಿ ಕೂಡ ಹೆಣ್ತನದ ಅಸಹಾಯಕತೆಯೇ ಕಣ್ಣಿಗೆ ಕಟ್ಟುವಂತಿದೆ.

ಕೆಲವು ಕವನಗಳು ಸಾಮಾಜಿಕ ನೆಲಗಟ್ಟಿನಲ್ಲಿ ಬದುಕಿನ ಕುರಿತಂತೆ ಮಾತನಾಡುತ್ತಿದ್ದರೂ ಆಳದಲ್ಲಿ ಅದೂ ಕೂಡ ಹೆಣ್ಣಿನ ಕುರಿತಾಗಿಯೇ ಇರುವುದನ್ನು ಕಾಣಬಹುದು. ರಸ್ತೆ ಎಂಬ ಕವನದಲ್ಲಿ ಬರುವ ಈ ಅದ್ಭುತ ಸಾಲುಗಳನ್ನು ಗಮನಿಸಿ

mohan habbu with vidambariಕನಸ ಕಂಡಿದ್ದೆ ನಾನು
ವಾಸ್ತವತೆಯ ಪ್ರಖರತೆಯಲ್ಲಿ
ಕ್ಷಣಕ್ಷಣವೂ ಸಾಯುವ ಕನಸು

ಎನ್ನುವಲ್ಲಿ ಹೆಣ್ಣಿನ ನೋವೂ ಅಡಕವಾಗಿರುವುದನ್ನು ಕಾಣಬಹುದು.

ಕಾಲ ತನ್ನ ಮರ್ಜಿಯ ಮೂಲಕ
ಬೇಕಾದಾಗ ಬರುತ್ತದೆ
ಬೇಕಾದಾಗ ಹೋಗುತ್ತದೆ
ಬೇಕಾದಷ್ಟು ಆಡಿಸುತ್ತದೆ ಬೇಕಾದಾಗ ಉಧ್ವಸ್ತಗೊಳಿಸುತ್ತದೆ (ಒಣ ಮರದ ಟೊಂಗೆಯಲ್ಲಿ)

ಎಂಬ ಸಾಲುಗಳೂ ಗಂಡಿನ ಕುರಿತಾದ ಹೆಣ್ಣಿನ ತಲ್ಲಣವೇ ಇದೆ.

ಆಯುಷ್ಯದ ಗಿಡ ಕೂಡ
ದುಃಖದ ಹೂಗಳ ಬಿಟ್ಟಿದೆ
ಐನು ಕಾಲದಲ್ಲೆ ಸುಖದ
ಎಲೆಗಳ ಕೊರತೆಯಿಂದ
ಹಳಹಳಿಸುತ್ತಿದೆ (ಗುಲ್ಮೊಹರ್ ಬಣ್ಣಗಳಲ್ಲಿ)

ಎಂಬ ಸಾಲುಗಳೂ ಅದೇಕೋ ಹೆಣ್ಣಿನ ಮನಸ್ಸನ್ನೇ ಧ್ವನಿಸುವಂತೆ ಕಾಣಿಸುತ್ತದೆ.

ಕೆಲವು ಕವನಗಳು ಗಜಲ್ನಂತೆ ಪ್ರಾಸಬದ್ದವಾಗಿದೆ. ‘ನನ್ನ ಒಂಟಿತನ’ ಎಂಬ ಕವನ ಇಡೀ ಸಂಕಲನದ ಜೀವಾಳದಂತಿದೆ. ಕಡಿಮೆ ಶಬ್ಧಗಳಲ್ಲಿ ಹಿಡಿದಿಟ್ಟ ಅರ್ಥವೈವಿಧ್ಯ ನಿಜಕ್ಕೂ ಮನಸೆಳೆಯುತ್ತದೆ. ಸಂಕಲನದ ಕೊನೆಯ ಕವನ ನನ್ನ ಕವಿತೆ ಇಡೀ ಸಂಕಲನವನ್ನು ಪ್ರತಿನಿಧಿಸುವ ಸಾಂಕೇತಿಕ ಕವನದಂತಿದೆ. ಸ್ವಯಂ ನಿರ್ಮಿತ ಸಂತಾನ ವಾಸ್ತವದ ಅಭಾಸ ಹುಟ್ಟಿಸುವಂತಹುದ್ದು.

ಮರಾಠಿಯ ನೀತಾ ತೋರಣೆ ಬರೆದಿರುವ ಈ ಸಂಕಲನವನ್ನು ಕವಿ ಮೋಹನ್ ಹಬ್ಬು ತುಂಬಾ ಚೆನ್ನಾಗಿ ಅನುವಾದ ಮಾಡಿದ್ದಾರೆ. ಇಡೀ ಸಂಕಲನವನ್ನು ಕನ್ನಡದ ನೇಟಿವಿಟಿಗೆ ಹೊಂದುವಂತೆ ಅನುವಾದಿಸಿರುವುದು ಇಲ್ಲಿನ ವಿಶೇಷ. ಮೂಲ ಸಂಕಲನದಲ್ಲಿ ನೀತಾ ತೋರಣೆಯವರ ಮರಾಠಿ ಕವನಗಳನ್ನು ಕೊಂಕಣಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿಯೂ ಅನುವಾದಿಸಲಾಗಿತ್ತು. ಈ ಕನ್ನಡ ಅನುವಾದದಲ್ಲಿ ಪ್ರೊ  ಹಬ್ಬುರವರು ತಾವೇ ಇಂಗಲಿಷ್ ಅನುವಾದವನ್ನೂ ಮಾಡಿರುವುದು ವಿಶೇಷ.

ಕನ್ನಡ ಅನುವಾದದಲ್ಲಿರಬಹುದು ಅಥವಾ ಇಂಗ್ಲಿಷ್ ಅನುವಾದದಲ್ಲಿರಬಹುದು ಬಳಸಿರುವ ಪದಗಳು ಎಲ್ಲಿಯೂ ಅರ್ಥ ಮುಕ್ಕಾಗದಂತೆ ನಾಜೂಕಾಗಿ ಹೆಣೆಯಲ್ಪಟ್ಟಿದೆ. ಇದಕ್ಕೆ ಸಾತ ನೀಡಿದ್ದು ಡಾ. ಕೃಷ್ಣ. ನವಿರು ಗೆರೆಗಳ ಮೂಲಕ ಕವನದ ಒಟ್ಟೂ ಭಾವವನ್ನು ಕೃಷ್ಣ ನಮ್ಮೆದುರು ತೆರೆದಿಡುವ ರೀತಿಯೇ ವಿಶಿಷ್ಟ. ಅಂಕು ಡೊಂಕು ಗೆರೆಗಳಲ್ಲಿ ಡಾ.ಕೃಷ್ಣರನ್ನು ನೋಡಿಯೇ ತಿಳಿಯಬೇಕು. ಕವನಗಳಲ್ಲಿ ಶಬ್ಧವನ್ನು ಹೆಗೆ ಮಿತವಾಗಿ ಬಳಸಿ ದೊಡ್ಡದಾದ ಅರ್ಥವನ್ನು ಕೊಟ್ಟಿದ್ದಾರೆಯೋ ಹಾಗೆ ಕೃಷ್ಣ ಕೆಲವೇ ಗೆರೆಗಳಲ್ಲಿ ಕವನದ ಸಾರವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಒಂದಿಡೀ ಸಂಕಲನ ರೇಖೆಗಳ ಮುಖಾಂತರ, ಪದಲಾಲಿತ್ಯದ ಮುಖಾಂತರ ಸುಂದರವಾಗಿ ಮೂಡಿ ಬಂದಿದೆ. ಕೆಲವು ಕವನಗಳು ಅಲ್ಲಲ್ಲಿ ಜಾಳು ಎನಿಸಿದರೂ, ಹೇಳುವ ಕ್ರಮದಲ್ಲಿ ಅಲ್ಪಸ್ವಲ್ಪ ಬದಲಾವಣೆ ಇರಬೇಕಿತ್ತೇನೋ ಅನ್ನಿಸಿದರೂ ಒಟ್ಟಾರೆ ಇಡೀ ಸಂಕಲನವಾಗಿ ನೋಡಿದಾಗ ಆ ಕೊರತೆಗಳು ಅಷ್ಟೇನೂ ದೊಡ್ಡದಾಗಿ ಕಾಣಿಸುವುದಿಲ್ಲ.

‍ಲೇಖಕರು Admin

12 June, 2016

5 Comments

  1. prathibha nandakumar

    “ಇಡೀ ಸಂಕಲನದಲ್ಲಿ ಹೆಣ್ತನವನ್ನು ಬಿಂಬಿಸುವ ಕವನಗಳು, ಪ್ರೇಮ ಕವನಗಳು ಮತ್ತು ಬದುಕನ್ನು ಸ್ತ್ರೀವಾದಿ ನೆಲೆಯಿಂದ ನೋಡುವ ಕವನಗಳಿದ್ದರೂ ಎಲ್ಲವೂ ಹೆಣ್ತನವನ್ನು ಬಿಂಬಿಸುವ ಕವನಗಳೇ ಆಗಿರುವುದೊಂದು ವಿಶೇಷ. …….ಸ್ತ್ರೀಯತದಿಂದ ಮಾನವೀಯತೆಯೆಡೆಗೆ’ ಎಂಬ ಕವಿತೆ ಸ್ತ್ರೀಯತ್ವದ ಧ್ವನಿಯನ್ನು ಪ್ರಭಲವಾಗಿ ಪ್ರತಿಪಾದಿಸುತ್ತದೆ.” ಹೀಗಂದರೇನು … ?!

  2. Shankar

    ಕೆಲವು ವಿಮರ್ಶೆಗಳೇ ಹಾಗೆ.ಅರ್ಥವಾಗದ ಪದಪುಂಜಗಳ ಜೋಡಣೆ

  3. ಉದಯಕುಮಾರ ಹಬ್ಬು

    ನಾನೂ ಈ ಕವಿತಾ ಸಂಕಲನವನ್ನು ಓದಿ ಆ ಹೆಣ್ಣಿನ ಆತಂಕ, ತಳಮಳ, ವಿಷಾದ, ನೋವು ಹೆಣ್ಣೂ ಓರ್ವ ಮನುಷ್ಯಳು ಎಂದು ಪ್ರತಿಪಾದಿಸುವ ಬಗೆ ಒಮ್ಮೆ ಸಹೃದಯ ಓದುಗನ ಕರುಳು ಚುರ್ರೆನ್ನುತ್ತದೆ. ಪುರುಷ ಒಬ್ಬ ಬೇಜವಾಬ್ದಾರಿ ವ್ಯಕ್ತಿಯಾಗಿ ಪ್ರೇಮ ಪ್ರೀತಿಯನು ಮಾಡಲರಿಯದೆ ಮತ್ತು ಹೆಣ್ಣಿನ ಸೂಕ್ಷ್ಮ ಕೋಮಲ ಮನಸ್ಸಿಗೆ ತಣ್ಣೀರೆರಚಿ ಹೋಗುವ ಪುರುಷನ ಕ್ರಿಯೆಯು ಇಲ್ಲಿ ಆಕ್ರೋಶಕ್ಕಿಂತ ತಣ್ಣನೆಯ ಕುದಿಯುವ ಹೆಣ್ಣಿನ ಆಸೆಆಗಿ ನಿರಾಸೆಯಾಗಿ ವಿಷಾದವಾಗಿ ನವಿರಾದ ಮೃದು ಅಕ್ಷರಗಳನ್ನು ಪಡೆದುಕೊಳ್ಳುತ್ತದೆ. ಸರಳತೆಯಲ್ಲಿಯೂ ಸಾಂದ್ರತೆ, ಸೂಕ್ಷ್ಮತೆ ಮತ್ತು ಸಂಕೀರ್ಣತೆ ಅಡಗಿದೆ. ಮೋಹನ ಹಬ್ಬು ಅವರು ನೀತಾ ತೋರ್ಣೆಯವರ ಮರಾಠಿಯಲ್ಲಿ ರಚಿತವಾದ ಕವಿತೆಗಳನ್ನು ಇಂಗ್ಲಿಷಿಗೂ ಮತ್ತು ಕನ್ನಡಕ್ಕೂ ಅನುವಾದಿಸಿದ್ದಾರೆ. ಇಂಗ್ಲಿಷ್ ಅನುವಾದ ಗಟ್ಟಿಯಾಗಿ ಸಂಕೀರ್ಣವಾಗಿ ಮೂಡಿ ಬಂದಿದೆ. ಕನ್ನಡದಲ್ಲಿಯೂ ಚೆನ್ನಾಗಿಯೇ ಬಂದಿದೆ. ಹೀಗೆ ದ್ವಿಭಾಷೆಯಲ್ಲಿ ಅನುವಾದಿತ ಕವನ ಸಂಕಲನವು ಕನ್ನಡದಲ್ಲಿಯೇ ಅಪರೂಪದ ಪ್ರಯೋಗವಾಗಿದೆ. ಮೋಹನ ಹಬ್ಬು ಅವರು ಈ ಪ್ರಯೋಗದಲ್ಲಿ ಯಶಸ್ಸನ್ನು ಕಂಡಿದ್ದಾರೆ. ಕನ್ನಡ ಫೆಮಿನಿಸ್ಟುಗಳು ಮಾತ್ರವಲ್ಲ ಪುರುಷರೂ ಓದಿ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬಹುದಾಗಿದೆ. ಇಂಥ ನೂತನ ಪ್ರಯೋಗ ಮಾಡಿದ ಹಬ್ಬು ಅವರಿಗೆ ಅಭಿನಂದನೆಗಳು

  4. Anonymous

    ಕವಿತೆಯ ಶೀರ್ಷಿಕೆ `ಸ್ತ್ರೀತ್ವದಿಂದ ಮಾನವತೆಯೆಡೆಗೆ’ ಎಂದಿದೆ; “ಸ್ತ್ರೀಯತ್ವ’ ಅಲ್ಲ. -ಮೋಹನ ಹಬ್ಬು

  5. shama nandibetta

    “ನನ್ನದು ತಾಯ್ತನ ನಿನ್ನದು ಬೀಜ
    ಪ್ರಶ್ನೆ ಸಂತಾನದ ಕುರಿತಾದ ಬದ್ಧತೆಯದು”

    indina sammajadalli Buddha agalu horatavare hechu.. baddharagodu kasta. Buddha agodu sulabha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading