ಹಾಳ್ ಗುಂಡಿಗೆ ಬೀಳಾಕ ಅಮಾಸಿ ಆದ್ರೇನು, ಹುಣುವಿ ಆದ್ರೇನು?

ಕರಿಯವ್ನ ಗುಡಿತಾವ ಸಾಬಣ್ಣಂಗೇನು ಕೆಲ್ಸ ಅಂತ ಯಾರೂ ಕೇಳಂಗಿಲ್ಲ

Shivu Morigere-1 (1)

ಆ ಮೋರಿಗೇರಿಯ ತೇರಿನ ಬಜಾರಿನ ತೇರಿನ ಮನೆಯ ಹಿಂದಿನ ಹನುಮಂತ ದೇವರ ಗುಡಿಯ ಮುಂದಿನ ಗರುಡಗಂಬದ ಹಿಂದಿರುವ ಓಕಳಿಗುಂಡಿಯ ಹಿಮ್ಮೊಗ್ಗಲಿನ ಕಮ್ಮಾರರ ನೆರಕಿ ತಟ್ಟಿಯ ಕುಲ್ಮಿಯ ಆಚೆಕಡೆಯ ಬಾಗಿಲಲ್ಲಿ ನಿಂತ್ರೆ ಕಾಣೋದೇ ಮಲ್ಡಿ ದುರಗವ್ವನ ಗುಡಿ. ಇಲ್ಲಿಂದ ಮ್ಯಾಕ ಕಲ್ಲಪ್ಪನ ಗುಡಿಕಡಿಗೆ ಒಂದೀಟೇ ಈಟು ನಡಕಂಡು ಹೋದ್ರ ಬಲಕ್ಕ ಸಿಗೋದೇ ಕರಿಯವ್ನ ಗುಡಿ.

ಈ ಗುಡಿಯ ಎಡಮೊಗ್ಗಲಲ್ಲೊಂದು ಬೇವಿನ ಮರದ ಕಟ್ಟೆಯಿದೆ. ಈ ಕಟ್ಟೆಯ ಮೇಲೆ ಹೊತ್ತು ಕಳಿಯೋಕೆ ಅಂತಲೇ ಕರಿಯವ್ನ ಗುಡಿಯ ಸುತ್ತಮುತ್ತಲ ಮನೆಗಳ ನೆರತ ತಲಿಯ ಹಿರಿಕರು ಬಂದು ಕೂತು ಹರಟೋ ಹರಟೆ ಅಷ್ಟಿಷ್ಟಲ್ಲ. ಭಾಳಾ ಜನ ಬಂದು ಈ ಕಟ್ಟಿಮ್ಯಾಲ ಕುಂತೆದ್ದು ಹೋಗೋದು ಕಾಮನ್ನಾದ್ರೂ ಮೂರು ಜನ ಮಾತ್ರ ಮೂರು ಕಾಲಕ್ಕೂ ಈ ಕಟ್ಟಿಮ್ಯಾಲ ಕುಂತು ಹೊತ್ತು ಕಳಿಯೋದು ಮಾಮೂಲಿ.

village1 ಹಂಗ ‘ಕಟ್ಟಿ ಕುಸಿಬೇಕು ಇಲ್ಲ ನಮ್ಮ ಹೆಣ ಬೀಳಬೇಕು ಅಲ್ಲಿವರಿಗೂ ಬಿಡೋ ಮಕ್ಳಲ್ಲ ನಾವು’ ಅಂತ ಹಟಕ್ಕ ಬಿದ್ದೋರಂಗ ದಿನಾಲಿ ಬಂದು ಕಟ್ಟಿಮ್ಯಾಲ ಕುಂದ್ರೋರಂದ್ರ ಒಬ್ಬ ರಾಮಣ್ಣ, ಇನ್ನೊಬ್ಬಾಕಿ ಮೈಲವ್ವ, ಬಿಟ್ರ ನಮ್ ಬುಡೇನ್ ಸಾಬಣ್ಣ. ಕರಿಯವ್ನ ಗುಡಿತಾವ ಸಾಬಣ್ಣಂಗೇನು ಕೆಲ್ಸ ಅಂತ ಯಾರೂ ಕೇಳಂಗಿಲ್ಲ. ಯಾಕಂದ್ರ ಈ ಊರಾಗ ಮನುಷ್ಯರನ್ನ ಬಿಟ್ರೆ ಯಾವ ಧರ್ಮದೋರೂ ಬದ್ಕಿಲ್ಲ.

ಮಾಡಾಕ ಬ್ಯಾರೆ ಕೆಲ್ಸ ಇಲ್ಲದ, ಊರು ಹೋಗು ಹೋಗು ಅಂದು ಕಾಡು ಬಾ ಬಾ ಅಂತಿರೋ, ಕುಣ್ಯಾಗಿಡೋ ಹೆಣಗಳಾಗಿರೋ ಈ ರಾಮಣ್ಣ, ಮೈಲವ್ವ, ಬುಡೇನ್ ಸಾಬಣ್ಣ ಹಳೇ ಕಾಲದ ದೋಸ್ತಿಗಳು. ಇವರ್ಯಾರ ಜೋಡಿಗಳೂ ಈಗ ಬದ್ಕಿಲ್ಲ. ನಾವಾ ನುಂಗಿ ನೀರು ಕುಡುದೀವಿ ಅಂತ ಸ್ವತಾ ತಾವಾ ಹೇಳ್ಕಂತಾವು. ಯಾವತ್ತು ಬೇಕಿದ್ರೂ ಬಿದಿರಿನ ಮೋಟ್ರ ಏರಬಹುದಿವು, ಯಾವುದಕ್ಕೂ ಹದಿನೈದು ಕೆಜಿ ಗೋಧಿ ಸ್ಟಾಕ್ ಇರ್ಲಿ ಮನಿಯಾಗ ಇವ್ರ ತಿಥಿ ಮಾಡಾಕ ಅಂತ ಇವರಗಳ ಮನಿಯೋರು ರೆಡಿಯಾಗ್ಯಾರ. ಮತ್ತೀ ವಿಷ್ಯ ಈ ಮುದುಕ್ರಿಗೂ ಗೊತ್ತು. ಎಷ್ಟೋ ಸರತಿ, ‘ಸಾಕು ಆ ಗೋದಿನ ನುಚ್ಚು ಹೊಡಿಸ್ಕಂಡು ಬಂದು ಉಪ್ಪಿಟ್ ಹಾಕ್ರವ್ವೋ ಹುಳಾಗಿಳ ಬಿದ್ದುಗಿದ್ದು ಬಿಟ್ಟಾವು ಅವ್ಕ. ನಾವೇನು ಈ ವರ್ಷ ನೆಗದು ಬಿದ್ದು ನೆಲ್ಲಿಕಾಯಿ ಆದಂಗಾಗಲ್ಲ. ನಮ್ ಪತ್ರ ಇದಿಮುಂಡಿಗೆ ಇನ್ನೂ ಸಿಕ್ಕಂಗಿಲ್ಲ’ ಅಂತ ಅಂಗಳದಾಗ ನಿಂತು ತಂಬ್ಲ ಉಗುದು ಅದೆಷ್ಟು ಸರ್ತಿ ಹೇಳ್ಯಾರೋ ಏನೋ. ಭಾಳ ಬೆರಿಕಿ ಅದಾರ ಬಿಡ್ರಿ ಇವ್ರು.

ಪ್ರತಿದಿನ ಒಂದಂದಾಜು ಮುಂಜಾಲೆ ಮನ್ಯಾರ್ ಮಾಡಿ ಹಾಕಿದ್ದನ್ನ ಗಂಟ್ಲಮಟ ಹೊಡ್ಕೊಂಡು ಹತ್ತುವರಿ ಹನ್ನಂದಕ್ಕ ಈ ಮೂರೂ ಜನ ಬಂದು ಈ ಕಟ್ಟಿಗೆ ಕುಂಡಿ ಊರಿದ್ರು ಅಂದ್ರ ಮತ್ ಕಟ್ಟಿ ಇಳಿಯಾದು ಮದ್ಯಾಹ್ನದ ಊಟಕ್ಕ. ಹೊಳ್ಳಿ ಬಂದು ಮತ್ ಕುಂತೋರು ಕಾಲು ಕದಲಿಸೋದು ಮುರಸಂಜಿಗೆ ಮನಿಯರು ಯಾರಾರ ಬಂದು ‘ಚಾ ಕುಡಿಯಾಕ ಬರಕಂತೆ ಬಾ’ ಅಂತ ಕರೆದಾಗ್ಲೆ. ಮಾಡಾಕಂತೂ ಬೇರೆ ಕೆಲ್ಸ ಇಲ್ಲಾಂತ ಸುಮ್ಮನ ಕಟ್ಟಿಗೆ ಕುಂತು ಕಾಲ ಕಳಿಯಲ್ಲರೀ ಇವ್ರು, ಯಪ್ಪೋ, ಇವ್ರು ಮಾತಾಡೋದು ಒಂದಾ ? ಎರಡಾ ? ಯಾರ್ ಮನಿ ವಿಚಾರಾನೂ ಯಾವ್ ದೇಶದ ವಿಚಾರಾನೂ ಬಿಡದಂಗ ಮಾತಾಡಿ ಟೈಂ ಉಳದ್ರ ಮುನ್ನೂರ ಮುವತ್ಮೂರು ಕೋಟಿ ದೇವ್ರುಗಳಿಗೂ ನಿವಾಳಿ ಎತ್ತಿಬಿಡ್ತಾರ. ಅಂಥಾ ಮೊಂಡ ಗಿರಾಕಿಗಳು ಇವು.

ಹಿಂಗಾ ಮೊನ್ನೆ ಕಾಲಿ ಇದ್ದ ಕಟ್ಟಿಗೆ ಮೊದ್ಲು ಬಂದು ಕುಂತಿದ್ದು ರಾಮಣ್ಣ. ಬಂದು ಕುಂತ್ಕಂಡು ತನ್ನ ಜುಬ್ಬದ ಜೋಬಿಗೆ ಕೈ ಹಾಕಿ ಗಣೇಶ ಬೀಡಿ ಕಟ್ಟು ಎಳಕಂಡು ಒಂದು ಬೀಡಿ ಹಚ್ಕೊಂಡು ಸ್ವರ್ ಅಂತ್ ದೊಡ್ಡ ಜುರಿ ಎಳದು ಮುಗಿಲಿಗೆ ಮುಖ ಮಾಡಿ ಉಫ್ ಅಂತ ಕಣ್ ಮುಚ್ಕಂಡು ಹೊಗಿ ಊದಿ ಬೇವಿನ ಮರದ ಬಡ್ಡಿಗೆ ಬೆನ್ನುಕೊಟ್ಟು ಎಲ್ಡನೇ ಜುರಿ ಎಳಿತಿದ್ದ ಅವಾಗ್ಲೇ ಬಂದ್ಳು ನೋಡ್ರಿ ನಮ್ ಮೈಲವ್ವ.

village2ಈ ಮುದ್ಕಿನ ನೋಡಿದ ಕೂಡ್ಲೆ ‘ಓಹೋಹೋಹೋ, ಬಾರಬೇ ಇಂದ್ರಗಾಂದಿ, ಇನ್ನೂ ಬದ್ಕಿಯೇನೀ ?’ ಅಂತಂದ ಮಾತಿಗೆ ‘ಅಯ್ಯ ನಿನ್ ಸಿದಿಗಿ ಸಿಂಗಾರಾಗ್ಲೀ, ಬಂದ್ ಠಿಕಾಣಿ ಹೂಡಿಯೇನ್ ಅಲೆ ?’ ಅಂತನ್ನುತ್ತಲೇ ಇಬ್ಬರೂ ಜೋರು ನಕ್ಕರು. ಅವ್ರವ್ರ ಮನಿಯಾಗ ಏನೇನ್ ಉಂಡ್ಬಂದ್ರು ಅಂತ ಮಾತಾಡ್ಕಳ್ಳೋ ಹೊತ್ತಿಗೇ ಹೆಗಲ ಮ್ಯಾಲಿನ ಟವಲ್ಲಿನಿಂದ ಬಾಯ್ ಒರಿಸಿಕೊಂಡು ಗಡ್ಡ ನೀವಿಕೋಂತ ಬಂದದ್ದು ನಮ್ ಬುಡೇನಜ್ಜ. ‘ಏನಾ ನಡಿಸೀರಲ್ಲಪ್ಪಾ ಅಂತೂ ಏನೋ ಜೋರ್ ನಡದೈತಿ ?’ ಅಂತಂದ. ‘ಹೇಳ್ಕಳಂಥದ್ದು ಏನೂ ಇಲ್ಲ ಬುಡು ಸಾಬಣ್ಣ, ಊರಾಗಿಂದ ನಿಮ್ಮ ಮಮ್ಮಕ್ಳು ಬಂದಂಗೈತಿ ? ಮುಂಜಾಲೆ ನೋಡ್ದೆ ನಿನ್ ಹಿರೇ ಮಮ್ಮಗಳು ಅದೇನೋ ಪಟ ತಗಂತಿದ್ಳು. ಇವಾಗೆದಕಂತೆ ನಿನ್ ಜತಿಗೆ ನಿಂತ್ಕಂಡು ಫೋಟೋ ತಗಂಡಿದ್ದು ?’ ಅಂತ ರಾಮಣ್ಣ ಬುಡೇನ್ ಸಾಬಣ್ಣನ ಕೇಳಿದ.

ರಾಮಣ್ಣನ ಪ್ರಶ್ನಿ ಕೇಳಿದ ಬುಡೇನಜ್ಜ ಚಕ್ಕಳ ಬಡಕೋತ ‘ಏನಂತ ಹೇಳನಪ್ಪಾ ಈಗಿನ ಹುಡ್ರುದು, ‘ನಮ್ ಚಾಚಾ’ ಅಂತ ಪಾಸ್ ಬುಕ್ಕಿಗೆ ಅಕ್ಕಂತಾಳಂತೆ’ ಅಂತ ಹೇಳುತ್ತಿಂಗನೇ ನಡುವೆ ಬಾಯಿ ಹಾಕಿದ ಮೈಲವ್ವ ‘ಅಯ್ಯ ಅದಕ್ಕೇನು ಬಂತಾ ನಮ್ಮೌವ್ನೇ ಯಾದರಾ ಒಂದು ಆಳಿ ಬುಕ್ಕದಾಗ ಹಚ್ಕಳ್ಳಾದು ಬಿಟ್ಟು ಅದ್ಯಾಕ ಹೋಗಿ ಹೋಗಿ ಪಾಸ್ ಬುಕ್ ಗೆ ಹಚ್ಗಂತಾಳಂತೆ ! ಅಂತ ತನ್ನ ಅಚ್ಚರಿ ತೋರಿಸಿದ್ಳು. ‘ಅದಾಳಾಗಿ ಹೋಗ್ಲಿ ಬಿಡತ್ಲಾಗ, ಮನ್ನೆ ಅಮಾಸಿ ಅನ್ನದನ್ನೂ ನೋಡದಂಗ 23 ಜೋಡಿ ಲಗ್ನ ಮಾಡ್ಕಂಡ್ರಂತಲ್ಲಬೇ ಮೈಲವ್ವ, ಚಿತ್ರದುರ್ಗದಾಗ ?’ ಅಂತ ಪ್ರಶ್ನಿ ಕೇಳುತ್ತಲೇ ‘ಹಾಳ್ ಗುಂಡಿಗೆ ಬೀಳಾಕ ಅಮಾಸಿ ಆದ್ರೇನು, ಹುಣುವಿ ಆದ್ರೇನು ?’ ಹೌದಲ್ಲೋ ರಾಮಣ್ಣ ಅಂದ್ಳು.

‘ನಾವಲೆ ಗುಂಡಿ ದಾಟಿವವ್ವ ನಮ್ಮನ್ನ ಕೇಳಬ್ಯಾಡ್ರಿ, ಎಂದ ರಾಮಜ್ಜ ನಕ್ಕೋಂತ ಮೊನ್ನೆ ಇಲ್ಲಿ ಆ ಯಮ್ಮ ಕೂಡ್ಲಿಗಿ ಡಿವೈಎಸ್ ಪಿ ರಾಜಿ ನಾಮಿ ಬಿಸಾಕಿ ಯಾರಿಗೂ ಸುದ್ದಿ ಇಲ್ಲದ ಜಾಗಕ್ಕ ಹೋಗಿ ಅದೇನೋ ಜಾಲತಾಣನೋ ಎಂಥಹದ್ರಾಗೋ ಹೊಟ್ಯಾಗಿನ ಸಿಟ್ಟನೆಲ್ಲಾ ಆಡ್ಕಂಡು, ಮತ್ತೇನು ತಿಳಿತೋ ಹೊಳ್ಳಿ ಬಂದು ‘ನಾ ಇನ್ನ ಕೆಲ್ಸಕ್ಕ ಬರಲ್ರೀಪ್ಪಾ ನೀವೇನನ್ನಾ ಮಾಡ್ಕಳ್ರಿ ಅಂದದ್ಕ, ಏನೇನೆಲ್ಲಾ ನಡದೋತು ಗೊತ್ತೇನು ನಿನಿಗೆ ?’ ಎಂದು ಕೇಳಿದ್ದಕ್ಕೆ ಬುಡೇನಜ್ಜನ ಮುಖನೇ ನೋಡಿಕಂತ ನಮ್ ಮೈಲವ್ವ  ‘ಊರ ತುಂಬಾ ಅದಾ ಸುದ್ದಿ ನಡದೈತಿ ನಮಿಗೆ ಗೊತ್ತಾಗಲ್ಲೇನು ಬಿಡೋ ಯಪ್ಪಾ ? ಎಷ್ಟು ಜನ ತಲಿ ಕೆಡಿಸ್ಕಂಡಾರ ಅನ್ನಾದನ್ನೂ ಲೆಕ್ಕ ಹಾಕಾಕ ಆಗದಷ್ಟು ಮುಂದುವರಿದೈತಿ ಈ ವಿಷ್ಯ.

ಕವಿದ ಕತ್ಲದಾಗ ಕಳದೋದ ಎಮ್ಮಿ ಹುಡ್ಕಾಕ ಲಾಟಿನೂ ಇಲ್ಲದ ಬರೀ ಕೈಲೆ ಕಾಡಿಗೆ ಹೋದ್ರಂತೆ ಅಂತಾರಲ್ಲ ಅಂಥಾ ಗಾದಿ ಇದ್ದಂಗಿದು. ಬಾಳ ಟೈಂ ತಗೋತೈತಿ ಖರೆ ತಿಳಿಯಾಕ, ಆದ್ರ ಒಂದಲ್ಲಾ ಒಂದಿನ ಬಿತ್ತಿದ ಬೀಜ ಮೊಳಿಕಿ ಆಯಾಕಾ ಬೇಕಲ್ಲ. ನಾವು ಕಾದು ನೋಡಾನು ಇನ್ನೂ ಏನೇನು ಪರಾಟು ನಡಿಬೌದು ಅಂತ’ ಹೇಳುತ್ತಲೇ ಮೈಲವ್ವನಿಗೆ ಮನಿಯಿಂದ ‘ಚಾ ಕರೆ ಬಂತು’ ಬರ್ತಿನ್ರಪ್ಪೋ ನಾನು, ಮುರಸಂಜಿ ಹೊತ್ತಾಗೈತಿ ಸಾಕು ನಡ್ರಿನ್ನು ನಾಳಿಗೀಟು ಉದ್ರಿ ಮಾತು ಉಳಿದರಬೇಕಂತೆ’ ಎನ್ನುತ್ತಲೇ ಬುಡೇನಜ್ಜ, ರಾಮಣ್ಣ ಇಬ್ಬರೂ ಅವರವರ ಮನೆಯತ್ತ ಹೆಜ್ಜೆ ಹಾಕಿದ್ರು.

ಹಿಂಗ ಇಡೀ ದಿನ ಇವರ ಮಾತುಕತಿ ನಡಿತೈತಿ. ಮತ್ತು ನಡಿತಾನೇ ಇರತೈತಿ

‍ಲೇಖಕರು Admin

June 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Anonymous

    ಕರಿಯವ್ನ ಗುಡಿತಾವ ಸಾಬಣ್ಣಂಗೇನು ಕೆಲ್ಸ ಅಂತ ಯಾರೂ ಕೇಳಂಗಿಲ್ಲ. ಯಾಕಂದ್ರ ಈ ಊರಾಗ ಮನುಷ್ಯರನ್ನ ಬಿಟ್ರೆ ಯಾವ ಧರ್ಮದೋರೂ ಬದ್ಕಿಲ್ಲ-ಮೋರಿಗೇರಿ ಶಿವಣ್ಣ

    ಪ್ರತಿಕ್ರಿಯೆ
  2. Shama, Nandibetta

    ಅಮಾಸಿ ಹುಣ್ಣಿಮೆಯಷ್ಟೇ ಸಹಜವಾಗಿದೆ ಬರಹ. ನವಿರಾದ ನಿರೂಪಣೆ.

    “ಈ ಊರಾಗ ಮನುಷ್ಯರನ್ನ ಬಿಟ್ರೆ ಯಾವ ಧರ್ಮದೋರೂ ಬದುಕಿಲ್ಲ”

    ಸೂಊಊಊಊಊಪರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: