ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕವಿತೆ- ಒಂದು ಪತ್ರ

 

ಇದು ನಾವು-ನಮ್ಮಲ್ಲಿ ಬ್ಲಾಗ್ ನಿಂದ ಹೆಕ್ಕಿದ್ದು. ಕವಿತೆಯನ್ನು ದಟ್ಟವಾಗಿ ಪ್ರೀತಿಸುವ ಗೆಳೆಯರು ನಿರಂಜನ ಅವರ ಸಾರಥ್ಯದಲ್ಲಿ ಆರಂಭಿಸಿರುವ ಬ್ಲಾಗ್. ಅಹಾ ಎನ್ನುವಂತ ಕವಿತೆಗಳು ಈ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಅರುಣಕುಮಾರ ಜೋಳದಕೂಡ್ಲಿಗಿ ಅವರ ಕವಿತೆ ಇಲ್ಲಿದೆ. ಒಂದು ಕವಿತೆಗೆ ಇಷ್ಟೊಂದು ಪ್ರತಿಕ್ರಿಯೆ ಸಾಧ್ಯವೇ? ಹೌದು ಎನ್ನುವಂತೆ ಪರಶುರಾಮ್ ಕಲಾಲ್ ಕವಿತೆಯ ಅಳಕ್ಕಿಳಿದಿದ್ದಾರೆ. ಅದೂ ಇಲ್ಲಿದೆ.
dsc01184ಚಿತ್ರ: ಆಶುತೋಷ್
ಜಾಡಮಾಲಿಯೊಬ್ಬಳ ದಿನಚರಿ
ನಸುಕಿನಲಿ ಸೂರ್ಯನ ಎಳೆ ಕಿರಣಗಳು
ಪೊರಕೆ ಹಿಡಿದು ಅವಳ ಮನೆ ಬಾಗಿಲು ತಟ್ಟುತ್ತವೆ
ತಾವು ದಿನಪೂರ್ತಿ ಇರುವ ಬೀದಿಯ ಗುಡಿಸೆಂದು ಹಠ ಮಾಡುತ್ತವೆ 
ಈ ಗದ್ದಲಗಳ ನಡುವೆ ಅವಳು 
ನಿನ್ನೆಯ ಕಳಚಿ ಈ ದಿನವ ತೊಟ್ಟು ಮೇಲೇಳುತ್ತಾಳೆ
ಜಗತ್ತು ಮಗ್ಗಲು ಬದಲಿಸುತ್ತದೆ

 

-2-
ಪೊರಕೆಯ ತೆಂಗಿನ ಗರಿ ಕಡ್ಡಿಗಳು ಕನಸು ಕಾಣುತ್ತವೆ
ತೆಂಗಿನ ಮರವನ್ನೇ ತಾನು ಉಲ್ಟಾ ಹಿಡಿದು ಬೀದಿ ಗುಡಿಸಿದಂತೆ
ದಾರಿಹೋಕರು ಆ ಮರದ ಎಳೆ ನೀರು ಕುಡಿದು ತಂಪಾದಂತೆ
ಅವರು ಬಿಸಾಡಿದ ಖಾಲಿ ತೆಂಗು ಕಸ ಬಳಿಯಲು ಅಡ್ಡಾದಂತೆ
ಏನೆಲ್ಲಾ ಅನ್ನಿಸಿ ಕನಸ ಕಿತ್ತೊಗೆದು 
ಪೊರಕೆಗೆ ಅಂಟಿಕೊಂಡ ಬಿಸಾಡಿದ ಪ್ಲಾಸ್ಟಿಕ್ ಕಪ್ಪುಗಳಲ್ಲಿನ 
ತುಟಿಗಳ ಒಂದೊಂದೇ ಬಿಡಿಸಿ ಗುಡ್ಡೆ ಹಾಕುತ್ತಾಳೆ
ರಾತ್ರಿಯಾಗುತ್ತಲೂ ಆ ತುಟಿಗಳೆಲ್ಲಾ ಅವಳ ಚುಂಬಿಸಲು ಸ್ಪರ್ಧೆಗಿಳಿಯುತ್ತವೆ

-3-
ಇನ್ನೂ ಮಲಗಿಕೊಂಡು ಗೊರಕೆ ಹೊಡೆಯುತ್ತಿರುವ 
ಬೀದಿ ಮೇಲಿನ ನಿನ್ನೆಯ ನರೆಳುಗಳ 
ಮೆಲ್ಲಗೆ ನಿದ್ದೆ ಕೆಡಿಸದಂತೆ ಎತ್ತಿ ಕಸದ ತೊಟ್ಟಿಗೆ ತುಂಬಿ
ಅವರ ನೆರಳಿನ ಉಡುಪು ಕೊಳೆಯಾಗದಂತೆ 
ಇಸ್ತ್ರಿಯ ಗೀರುಗಳು ಮುಕ್ಕಾಗದಂತೆ ಎಚ್ಚರ ವಹಿಸಿ
ಬೇಧವ ಮರೆತು ಕಸದ ತೊಟ್ಟಿಯಲ್ಲಿ 
ಒಂದಾದ ಮನುಷ್ಯರ ಛಾಯೆಗಳಿಗೆ ಹೊಂದಿಸಿ
ಮುಟ್ಟಿಸಿಕೊಳ್ಳದವರ ನೆರಳುಗಳ ಮುಟ್ಟಿ ಪುಳಕಿತಳಾಗುತ್ತಾಳೆ

-4-
ಈಗ ತಾನೆ ಚಲಿಸಿದ ವಾಹನವೊಂದರ ಟಯರ್ ಗುರುತು
ಹೊಸ ಕಾರಿನದೆಂದು ಗುರುತಿಸಿ ಗುರುತು ಹಿಡಿದು ಎಳೆದಂತೆ 
ಕಾರು ಹಿಂಚಲಿಸಿ ಅವಳ ಕೂರಿಸಿಕೊಂಡು ಮುಂಚಲಿಸುತ್ತದೆ
ಟಯರಿನ ಚಂದದ ಹೆಜ್ಜೆಗೆ ಮನಸೋತು 
ಅದು ಅಳಿಸುವ ಮುನ್ನ ಸೀರೆಯ ಅಂಚಿಗೆ ಅಂಟಿಸಿಕೊಳ್ಳುತ್ತಾಳೆ
ಉಟ್ಟ ಸೀರೆಯಲ್ಲೆಲ್ಲಾ ಕಾರು ಚಲಿಸಿದಂತಾಗಿ 
ತಾನು ರಸ್ತೆಯಾಗಿ ಸುಖಿಸುತ್ತಾಳೆ
ಹೆಜ್ಜೆ ಮುಡದ ಸವೆದ ಹಳೆ ಟಯರುಗಳು ಇವಳ ನೋಡಿ 
ಮುಸಿಮುಸಿ ನಕ್ಕು ಹೇಳುತ್ತವೆ ನೀನೂ ನಮ್ಮಂತೆಯೆ

-5-
ಮೈಮನಕೆ ಭಾರವಾದ ಈಡೇರದ ಕನಸುಗಳ 
ಮುಂಜಾನೆ ಕಸದ ಬೆನ್ನಿಗೆ ಕಟ್ಟಿ ಹಗುರಾಗಿ 
ಲೋಕದ ನಿನ್ನೆಯ ಪೊರಕೆಯಿಂದ ಗುಡಿಸಿ 
ಸೂರ್ಯನಲ್ಲಿ ಹಗಲ ಭಿಕ್ಷೆಯ ಬೇಡಿ 
ಮುಂಜಾವನ್ನು ಬೀದಿಗೆ ಹರಡುತ್ತಾಳೆ
ಯಾರಿಗೂ ಕಾಣದಂತೆ ಸೀರೆಯ ಸೆರಗಿನಲ್ಲಿ 
ಕಟ್ಟಿಕೊಂಡ ವಿಮಾನದ ನೆರಳಲ್ಲಿ ಕೂತು 
ಆಕಾಶಕ್ಕೆ ಮುಖ ಮಾಡಿ ಚಲಿಸಿ ಸೂರ್ಯನ ಸೇರಿ
ಆತನ ರಾತ್ರಿಗೆ ಸುಖದ ಗಂಧ ತೇಯುತ್ತಾಳೆ 
ಹಗಲ ಭಿಕ್ಷೆಯ ಋಣದ ಭಾರ ಇಳಿಸಲು

-ಅರುಣ್ ಜೋಳದ ಕೂಡ್ಲಿಗಿ

gnu-post-20071ಅರುಣ್ ನಿನ್ನ ’ಜಾಡಮಾಲಿಯೊಬ್ಬಳ ದಿನಚರಿ’ ನನಗೆ ಖುಷಿ ಕೊಟ್ಟ ಕವನ. ನಿನ್ನೊಳಗೆ ಇರುವ ಸೂಕ್ಷ್ಮಮತಿ ಕವಿಯೊಬ್ಬ ವರ್ತಮಾನದ ಕಠೋರ ಸತ್ಯಗಳಿಗೆ ಮುಖಾಮುಖಿಯಾಗುತ್ತಾನೆ. ಆತ ಸಹಜ ಎನ್ನಬಹುದಾದ ಘಟನೆಗಳನ್ನೇ ತನ್ನ ಕಾವ್ಯದ ಪ್ರತಿಮೆಗಳನ್ನಾಗಿಸಿಕೊಂಡು ಕಾವ್ಯ ಕಟ್ಟುತ್ತಾನೆ ಎನ್ನುವುದು ಈ ಖುಷಿಗೆ ಕಾರಣ.
ನಿನ್ನ ಕವಿತೆಯಲ್ಲಿ ’ಒಂದಾದ ಮನುಷ್ಯ ಛಾಯೆಗಳಿಗೆ ಹೊಂದಿಸಿ: ಮುಟ್ಟಿಸಿಕೊಳ್ಳದವರ ನೆರಳುಗಳ ಮುಟ್ಟಿ ಪುಳುಕಿತಳಾಗುತ್ತಾಳೆ.’ ಹಾಗೂ ’ಹೆಜ್ಜೆ ಮೂಡದ ಸವೆದ ಹಳೆ ಟಯರುಗಳು ಇವಳ ನೋಡಿ: ಮುಸಿ ಮುಸಿ ನಕ್ಕು ಹೇಳುತ್ತವೆ ನೀನೂ ನಮ್ಮಂತೆಯೆ’ ಈ ಸಾಲುಗಳಂತೂ ನನಗೆ ತಟ್ಟಿ ಬಿಟ್ಟವು. 
‘ಲೋಕದ ನಿನ್ನೆಯ ಪೂರಕೆಯಿಂದ ಗುಡಿಸಿ: ಸೂರ್ಯನಲ್ಲಿ ಹಗಲು ಬಿಕ್ಷೆಯ ಬೇಡಿ: ಮುಂಜಾವನ್ನು ಬೀದಿಗೆ ಹರಡುತ್ತಾಳೆ’ ಸಾಲಂತೂ ಸೂರ್ಯನನ್ನು ಪೆಟೆಂಟ್ ಪಡೆದವನಂತೆ ವರ್ತಿಸುವ ನನ್ನ ಅಹಂಕಾರವನ್ನು ನುಚ್ಚುನೂರು ಮಾಡಿ ಹಾಕಿತು. ಅರುಣ್ ನಿನ್ನ ಪ್ರೀತಿಯ ಕವಿತೆಗಳು ಸಾಮಾಜಿಕ ಆಯಾಮ ಪಡೆಯುತ್ತಿರುವುದು ನನಗಂತೂ ಸಂತಸದ ವಿಷಯ. ನನ್ನ ನಿರೀಕ್ಷೆಗಳನ್ನು ಹೆಚ್ಚು ಮಾಡಿವೆ. ನಿನ್ನ ಕವಿತೆಗಳ ಹಾದಿ ನೋಡುತ್ತಿರುವೆ.
– ಪರಶುರಾಮ ಕಲಾಲ್

‍ಲೇಖಕರು avadhi

15 January, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading