ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಅನಾಥ ಮಗು..

ಪಿ ಪಿ ಉಪಾಧ್ಯ

ಹೆಸರಿಲ್ಲದ ಮಗುವಿಗೊಂದು
ಹೆಸರನಿಡಿ ನೀವು
ಕರೆಯಬೇಕು ನೀವು
ಕರೆಯಬೇಕು ಎಲ್ಲರೂ
ಅಂಥ ಹೆಸರೇ ಬೇಕು.
ಗುಂಡ ಎನ್ನಿ ಗೂಂಡಾ ಎನ್ನಿ
ಅವನು ಮಾತ್ರ ನಿಮ್ಮವ
ಕಳ್ಳನೆನ್ನಿ ಕುಳ್ಳನೆನ್ನಿ
ನಿಮ್ಮ ಊರ ಕೂಸದು
ಅಮ್ಮ ಸತ್ತು ಕಾಲವಾಯ್ತು
ಅಪ್ಪನ್ಯಾರೋ ತಿಳಿಯದು.
ಯಾರ ಮನೆಯ ಊಟವೋ
ಯಾರ ಮನೆಯ ಜಗಲಿಯೋ
ಯಾರೋ ಎಸೆದ ಚಾಪೆ ಮೇಲೆ
ಮಲಗಿ ಎದ್ದ ಮಗುವದು
ದಾನದಂಗಿ ಚಡ್ಡಿ ತೊಟ್ಟು
ಸಂಭ್ರಮಿಸುವ ಮಗುವಿಗೆ
ನೀವೇ ತಾಯಿ ನೀವೇ ತಂದೆ
ಎಲ್ಲ ನೀವೇ ಅನಿಸಿದೆ
ಇಲ್ಲ ಎನ್ನಬೇಡಿ..

ಅವನ ನಗುವ ಕೆಡಿಸಬೇಡಿ
ಅವನ ಬದುಕ ಸಂತಸಕ್ಕೆ
ಮಿತಿಯ ಹಾಡಬೇಡಿ.
ಊರ ಕೂಸು ನಿಮ್ಮ ಕೂಸು
ನೀವೇ ಬೇಡವೆಂದರೆ
ಅದು ಎಲ್ಲಿ ಹೋಗಿ ಅಲೆಯಲಿ
ಯಾರ ಮಡಿಲ ಸೇರಲಿ.
ತೆಗೆದುಕೊಳ್ಳಿ ತೆಕ್ಕೆಗೆ
ಬಿಡಲೇ ಬೇಡಿ ಬೀದಿಗೆ
ಸತ್ತ ತಾಯಿ, ಬದುಕಿದಪ್ಪ
ಯಾರ ನೆನಪು ಕಾಡದಂತೆ
ಸಾಕಿ ಸಲಹಿ ಬೆಳೆಸಿರಿ
ಅದೇ ನಿಮ್ಮ ಹಿರಿಮೆ
ಅದುವೆ ನಿಮ್ಮ ಗರಿಮೆ.
ಅನಾಥಗೊಂದು ಬದುಕು ಕೊಟ್ಟ
ಹೆಮ್ಮೆ ನಿಮ್ಮದಾಗಲಿ
ನಾಡಿಗೊಳ್ಳೆ ಜೀವ ಕೊಟ್ಟ
ಬಿರುದು ನಿಮಗೆ ಸೇರಲಿ

‍ಲೇಖಕರು Avadhi

16 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading