ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂಟಿ ಗೋಡೆ ಮತ್ತು ಅವಳ ಸಂಕಟ

ಹಗಲು ರಾತ್ರಿಗಳ ತೆಕ್ಕೆಯಲಿ ನಗಲು ಹೊತ್ತಿಲ್ಲ, ಮಲಗಲು ಮೈಮನಗಳಿನ್ನು ಸತ್ತಿಲ್ಲ.. ಮುಗಿಲು ಬರಿ ಗಾಳಿ ತುಂಬಿದ ಮೋಡಗಳಿಂದ ತುಂಬಿಕೊಂಡಿದೆ. ಮನಸಲ್ಲಿ ಮಣ್ಣಿನ ಮಳೆಯಾಗುವ ಎಲ್ಲ ಮುನ್ಸೂಚನೆಗಳು ಕಾಣುತ್ತಿವೆ.

ಬೀಸುವ ಗಾಳಿಗೂ ಬಗ್ಗದ ಮರವೊಂದು
ಬೀಗುವದನ್ನು ಮರೆತು ಬಾಗಿ ನಿಂತಿದೆ
ಸಾಗುವ ದಾರಿಯಲಿ ಸಾವಿರಾರು ಕಲ್ಲುಗಳು
ಸಾವಿಗೆ ಶರಣಾಗಿ ಮಲಗಿವೆ..
ನಡೆಯುವಾಗ ಎಡವಿದವರ ಎದೆಯಲ್ಲಿ
ಆಗಾಗ ನಡುಕ ಹುಟ್ಟಿಸುತ್ತವೆ.

ಭಾರವಾದ ಎದೆಯಲ್ಲಿ ಭಾವನೆಗಳ ಹರಿವು
ನಿಂತು ಹೋಗಿದೆ
ಗೋರಿಯೊಳಗಿನವರ ಮಾತುಗಳು
ಕಿವಿಗಪ್ಪಳಿಸುತ್ತ ನಗುತ್ತಿವೆ
ಆಸೆಗಳ ಭಾಷೆಯನ್ನರಿಯದ ಬದುಕು
ಬದುಕುವುದನ್ನೆ ಮರೆತು ಕೂತಿದೆ
ನಿದ್ದೆಯಲಿ ನಿತ್ಯವೂ ಸಂಭ್ರಮಿಸುವ ಕನಸೊಂದು
ಕನಸಾಗೆ ಉಳಿದುಹೋಗಿದೆ.

ಅವಳ ಕಿರುಚಾಟದ ಸದ್ಧಿಗೆ
ಒಂಟಿ ಗೋಡೆಯೊಂದು ಕಿವಿಗೊಟ್ಟಿದೆ
ಹದ್ದಿನ ಬಾಯಿಗೆ ಸಿಕ್ಕ ಗುಬ್ಬಿ ಗೂಡಿನಲ್ಲಿನ ಮರಿಗಳ ಹಾಗೆ
ಮನಸೊಳಗಿನ ಮಾತುಗಳಿಗೆ ತುಟಿಗಳಿದ್ದರೂ
ಮೌನ ಕತ್ತು ಹಿಚುಕಿದಷ್ಟು ಸಂಕಟ
ಕತ್ತಲೆ ಮತ್ತು ಬೆತ್ತಲೆಯೊಂದಿಗೆ ಕೈ ಮಿಲಾಯಿಸಿ
ಕುಲು ಕುಲು ನಗುವ ಹಿತ್ತಲ ಹೂವೊಂದು
ಸುತ್ತಲು ಬೇರು ಬಿಟ್ಟಿದೆ..

ಸಂಕಟಗಳ ಸರಮಾಲೆಗೆ ಸಂಗೀತ ಶಾಲೆಯಲಿ
ಸರಿಗಮ-ಪದಗಳ ಜೊತೆಗೆ ಸ್ನೇಹ ಉಂಟಾಗಿದೆ
ಅರಚಿದರೂ ಹಾಡೆ ಕಿರುಚಿದರೂ ಹಾಡೆ
ನೋವಿಗೂ ಸಾವಿಗೂ ಸಾಹಿತ್ಯದ ಸಾಲುಗಳೆ ಸಾಕ್ಷಿ ಹೇಳುತ್ತಿವೆ
ಬೆವರ ಹನಿಗಳಲಿ ಬೆರೆತ ಬದುಕಿನ ಅರ್ಥ
ಬಾಯಿ ಬಡಕೊಳೊರ ದೃಷ್ಟಿಯಲಿ..
ಬರಿ ಸ್ವಾರ್ಥ ಬರಿ ಸ್ವಾರ್ಥ ಬರಿ ಸ್ವಾರ್ಥ…

‍ಲೇಖಕರು Avadhi

21 July, 2021

2 Comments

  1. ಡಾ. ಶಿವಾನಂದ ಕುಬಸದ

    ಉತ್ತಮ ಕವಿತೆ

  2. ಸಚಿನ್‌ಕುಮಾರ ಬ.ಹಿರೇಮಠ

    ಬೆವರ ಹನಿಗಳಲಿ ಬದುಕಿನ ಅರ್ಥ…ಜೀವನದ ಕಾಣ್ಕೆಯನ್ನು ಚೆನ್ನಾಗಿ ಕವಿತೆಯಾಗಿಸಿದ್ದೀರಿ‌‌‌…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading