ಏ ದಿವಾನಿ ಮಸ್ತಾನಿ ಹೋಗಯೀ…

‘ಮಹಾಪ್ರವಾಹ, ಮಹಾಪ್ರವಾಹ ಪಾತ್ರವಿರದ ತೊರೆ ಪ್ರೀತಿ’

-ಎಚ್ ಎಸ್ ವಿಯವರ ಹಾಡಿನ ಈ ಸಾಲು ನನಗೆ ತುಂಬಾ ಪ್ರಿಯವಾದದ್ದು.

ಪ್ರೀತಿ ಎಂದರೆ ಹಾಗೆಯೇ ಮಹಾಪ್ರವಾಹದಂತೆ, ಸಿದ್ಧ ಪಾತ್ರ ಇರದೆ ಇರುವುದೇ ಆ ಪ್ರವಾಹದ ಗುಣ.  ಅಂತಹ ಒಂದು ಪ್ರವಾಹವನ್ನೇ ತಡೆದುಕೊಳ್ಳುವುದು ಕಷ್ಟ, ಹಾಗಿರುವಾಗ ಅಂತಹ ಎರಡು ಪ್ರವಾಹಗಳು ಎದುರಾದರೆ ?

ಅದು ಸಾಗರವನ್ನು ಬಿರುಗಾಳಿ ಅಪ್ಪಿದಂತಹ ಪ್ರೀತಿ.  ಸಾಹು ಛತ್ರಪತಿಯ ಆಸ್ಥಾನದಲ್ಲಿ ಒಬ್ಬಂಟಿಯಾಗಿ ನಿಂತು ’ನನಗೆ ಪೇಶ್ವೆ ಬೇಕು’ ಎಂದು ತಲೆ ಎತ್ತಿ ಕೇಳಿದ ಮಸ್ತಾನಿಯ ಹುಚ್ಚು ಧೈರ್ಯದ ಪ್ರೀತಿ, ’ತುಂಬಿದ ಸಭೆಯಲ್ಲಿ ನನಗೆ ಪೇಶ್ವೆ ಬೇಕು ಎಂದೆಯಲ್ಲಾ, ಇದೋ ಬಂದಿದ್ದೀನಿ’ ಎಂದು ಬಿರುಗಾಳಿಯ ದೋಣಿಯಲ್ಲಿ ಬಂದು ಅಂಗಳದಲ್ಲಿ ಆಕಾಶದಗಲ ಕೈಚಾಚಿ ನಿಂತ ಬಾಜಿರಾಯನ ಪೇಶ್ವಾನಿ ಪ್ರೀತಿ. ಅದು ಇಡೀ ಜಗದೆದುರು ಸರಿ ತಪ್ಪುಗಳ ಹಂಗಿಲ್ಲದೆ, ಸಿಂಧೂರ, ಕರಿಮಣಿ, ಸಮಾಜದ ರೀತಿ ರೀವಾಜು ಯಾವುದರ ಜಾಮೀನಿಲ್ಲದೆ ತನ್ನ ಪ್ರೀತಿಯನ್ನು ಮಾತ್ರ ನಂಬಿ ಸಾಗರಕ್ಕೆ ದೋಣಿ ಇಳಿಸಿದ ಹೆಣ್ಣಿನ ಕಥೆ.

‘ನಜರ್ ಜೋ ತೇರಿ ಲಾಗಿ ಮೈ ದಿವಾನಿ ಹೋಗಯಿ…. ‘ ನಿನ್ನ ನೋಟ ನನ್ನನ್ನು ತಾಕಿದ ಮರುಕ್ಷಣದಲ್ಲೇ ನಾನು ಇಹದ ಪ್ರಜ್ಞೆ ಕಳೆದುಕೊಂಡೆ ಎನ್ನುತ್ತಾ ಆಕೆ ಹಾಡುವ ಆ ಹಾಡಿನ ಲಯ, ಪದಗಳ ಸ್ಪರ್ಶ, ಆಯನಾ ಮಹಲಿನ ಭವ್ಯತೆ, ದೀಪಿಕಾಳ ಮಸ್ತಾನಿ ಅದಾ, ಬಾಜಿರಾವ್ ಅವಳನ್ನು ಕಂಡು ತನಗಾದ ಹಿಗ್ಗನ್ನೂ ಮೌನದಲ್ಲೇ ಕೆನ್ನೆಗಳ ಉಬ್ಬಿನಲ್ಲೂ, ಅವಳ ಮೇಲಿನ ತನ್ನ ಪ್ರೀತಿಯನ್ನು ಕಣ್ಣುಗಳಲ್ಲೇ ವ್ಯಕ್ತ ಪಡಿಸುವ ರೀತಿ, ತನ್ನ ಕಣ್ಣೋಟದಲ್ಲೇ ಅವಳನ್ನು ನೇವರಿಸುವ ಬಗೆಗೆ ಮನಸ್ಸು ಸೋಲದಿರಲು ಸಾಧ್ಯವೇ ಇರಲಿಲ್ಲ.  ಆ ಹಾಡಿನಲ್ಲಿ ದೀಪಿಕಾ ಸೂಫಿಯಂತೆ ಮೈಮರೆತು ನರ್ತಿಸಿದ್ದಾಳೆ. ಆಗಲೇ ಅನ್ನಿಸಿದ್ದು ನನಗೆ, ಎ ದೀವಾನಿ ಮಸ್ತಾನಿ ಹೋಗಯೀ ಅಂತ.

ಪೇಶ್ವಾ ಬಾಜಿರಾವ್ ಬಲ್ಲಾಳ್, ಕೇವಲ ನಲ್ವತ್ತು ವರ್ಷಗಳು ಬದುಕಿದವನು, 20 ವರ್ಷಗಳ ತನ್ನ ಪೇಶ್ವಾನಿ ಬದುಕಿನಲ್ಲಿ 40 ಯುದ್ಧಗಳನ್ನು ಗೆದ್ದ ಯೋಧ, ನೇತೃತ್ವ ವಹಿಸಿದ್ದ ಯಾವ ಯುದ್ಧವನ್ನೂ ಸೋತವನಲ್ಲ,  1700 ರ ಸುಮಾರಿಗಾಗಲೇ ಛತ್ರಪತಿಯ ರಾಜ್ಯಭಾರ ಅಂತ ಇದ್ದರೂ ಅಧಿಕಾರದ ಕೇಂದ್ರ ಇದ್ದದ್ದು ಪೇಶ್ವೆಗಳ ಕೈಯಲ್ಲಿ.  ಬಾಜಿರಾವ್ ಹುಟ್ಟಿನಿಂದ ಬ್ರಾಹ್ಮಣ, ಪೇಶ್ವಾ (ಪ್ರಧಾನ ಮಂತ್ರಿ) ಆಗಿದ್ದವನು, ಆದರೆ ಅದಕ್ಕಿಂತ ಹೆಚ್ಚಾಗಿ ತನ್ನ ಯುದ್ಧ ಕೌಶಲತೆಯಿಂದ, ಯುದ್ಧತಂತ್ರದಿಂದ, ಧೈರ್ಯ ಸಾಹಸಗಳಿಂದ ನೆನಪಿನಲ್ಲಿ ಉಳಿದವನು. ರಣ್ ಮರ್ದ್ – ರಣ ಮಲ್ಲ ಎಂದು ಕರೆಸಿಕೊಂಡವನು.  ಅವನ ಹೆಸರಿನಲ್ಲಿ ಲಾವಣಿಗಳಿವೆ, ಲೋಕಗೀತಗಳಿವೆ, ಕಾದಂಬರಿಗಳು ಬಂದಿವೆ.  ಅಂತಹದೇ ಒಂದು ಕಾದಂಬರಿ ‘ರಾವ್’, ಆ ಕಾದಂಬರಿ ಆಧರಿಸಿದ ಚಿತ್ರ ಬಾಜಿರಾವ್ ಮಸ್ತಾನಿ.

ಚಿಕ್ಕವಯಸ್ಸಿನಲ್ಲೇ ಬಾಜಿರಾಯನಿಗೆ ಮರಾಠ ಸಾಮ್ರಾಜ್ಯದ ಪ್ರಧಾನಮಂತ್ರಿಯ ಜವಾಬ್ದಾರಿ ಸಿಗುತ್ತದೆ, ಅದನ್ನು ಆತ ಹೆಮ್ಮೆಯಿಂದಲೇ ಒಪ್ಪಿಕೊಳ್ಳುತ್ತಾನೆ. ಮರಾಠ ಸಾಮ್ರಾಜ್ಯವನ್ನು ದೆಹಲಿಯ ತನಕ ವಿಸ್ತರಿಸಿ, ಮೊಗಲರ ಮಯೂರ ಧ್ವಜವನ್ನು ಕೆಳಗಿಳಿಸಿ ಭಗವಾ ಧ್ವಜವನ್ನು ಹಾರಿಸುವುದು ಅವನ ಕನಸು.  ಒಂದು ಯುದ್ಧದ ಯೋಜನೆಯಲ್ಲಿ ಅವನಿರುವಾಗ ಬುಂದೇಲ್ ಖಂಡದಿಂದ ನೆರವು ಯಾಚಿಸಿಕೊಂಡು ಬಂದಿದ್ದಾರೆ ಎಂದು ಸೈನಿಕ ಬಂದು ಹೇಳುತ್ತಾನೆ, ಆದರೆ ಅವನಿಗೆ ಅದಕ್ಕೆಲ್ಲಾ ಪುರುಸೊತ್ತಿಲ್ಲ.  ಆಗ ಬುಂದೇಲ್ ಖಂಡದ ಸೈನಿಕ ಹಠಮಾಡಿ ಒಳನುಗ್ಗುತ್ತಾನೆ, ಆಮೇಲೆ ಬಾಜಿರಾಯನಿಗೆ ಗೊತ್ತಾಗುವುದು ಅದು ಅವನಲ್ಲ ಅವಳು, ಅವಳು ಬುಂದೇಲ್ ಖಂಡದ ಛತ್ರಸಾಲನ ಮಗಳು ಮಸ್ತಾನಿ.  ಬುಂದೇಲ್ ಖಂಡವನ್ನು ಉಳಿಸುವಷ್ಟರಲ್ಲಿ ಅವನು ಅವಳಿಗೆ ಸೋತಿರುತ್ತಾನೆ. ಇಬ್ಬರೂ ಹುಟ್ಟಾ ಯೋಧರು, ಅವರಿಬ್ಬರನ್ನೂ ಮೊದಲು ಸೆಳೆಯುವುದೂ ಪರಸ್ಪರ ಯುದ್ಧಕೌಶಲವೇ.

ಬಾಜಿರಾವ್ ಪಾತ್ರದಲ್ಲಿ ರಣವೀರ್ ಸಿಂಗ್ ಇಡೀ ಚಿತ್ರವನ್ನೇ ತನ್ನ ಕ್ಯಾನ್ವಾಸ್ ಆಗಿ ಮಾಡಿಕೊಂಡಿದ್ದಾನೆ.  ಆ ಪಾತ್ರದಲ್ಲಿ ಆತ ಯುದ್ಧದಲ್ಲಿ ತೋರಿಸುವ ಅಸೀಮವಾದ ಶೌರ್ಯ ಮತ್ತು ಪ್ರೀತಿ ಎದುರಲ್ಲಿ ಅವನ ಅಸಹಾಯಕತೆಗೆ ಮನಸ್ಸು ಸೋತುಬಿಡುತ್ತದೆ.  ’ಪೇಶ್ವೆಯ ಹತ್ತಿರವೂ ಹೃದಯ ಎನ್ನುವುದಿದೆ ಮಸ್ತಾನಿ ಬಾಯಿ’ ಎಂದು ಹೇಳುವಾಗ ಆತನ ಕಣ್ತುಂಬಿರುವ ಕಂಬನಿ ಅವಳ ಬೆನ್ನ ಮೇಲಿನ ಗಾಯ ನೋಡಿ ಬಂದದ್ದೋ, ಆ ಗಾಯ ಮಾಡಿದ್ದು ತಾನು ಎನ್ನುವುದರಿಂದ ಬಂದಿದ್ದೋ, ತಾನು ಆ ಗಾಯ ಮಾಡುವಾಗ ಆಗಷ್ಟೇ ಅವಳು ತನ್ನ ಜೀವ ಉಳಿಸಿದ್ದಳು ಎನ್ನುವ ಅರಿವಿನಿಂದ ಬಂದದ್ದೋ ಅಥವಾ ಅವಳ ಸಂಪೂರ್ಣ ಶರಣಾಗತಿಯ ನೋಟಕ್ಕೆ ತಾನೇ ಗಾಯಗೊಂಡು ಬಂದಿದ್ದೋ ಅರ್ಥವಾಗುವುದಿಲ್ಲ.

ಆದರೆ ಆತ ಮದುವೆ ಆದವನು, ಅವಳು ಇನ್ನೊಬ್ಬ ರಾಜನ ಮಗಳು.  ಏನೂ ಹೇಳದೆ ಹಿಂದಿರುಗಿ ನೋಡುತ್ತಲೇ ಹೊರಡುತ್ತಾನೆ ಪೇಶ್ವೆ.  ಸೂಜಿಯ ಹಿಂದಿನ ದಾರದಂತೆ, ತನ್ನ ಬೆನ್ನಿಗೆ ಗಾಯವನ್ನು ಕೊಟ್ಟು, ಎದೆಗೆ ಮುಲಾಮನ್ನೂ ಹಚ್ಚಿದ ಅವನ ಹಿಂದೆ ಮಸ್ತಾನಿ ಹೊರಡುತ್ತಾಳೆ.  ಅಲ್ಲಿಂದ ಮುಂದೆ ಅವಳಿಗೆ ಸ್ವಂತ ಬದುಕಿಲ್ಲ, ಸ್ವಂತ ನಿರ್ಧಾರಗಳಿಲ್ಲ, ಆಮೇಲೆ ಅವಳು ಬಯಸಿದ್ದೆಲ್ಲಾ ಪೇಶ್ವೆಯನ್ನು ಮಾತ್ರ, ತಪಿಸಿದ್ದು ಸಹ ಅವನಿಗಾಗಿಯೇ.

ಅವನ ಊರಿನಲ್ಲಿ ಯಾವುದೂ ಅವಳಿಗೆ ಅನುಕೂಲಕರವಾಗಿ ಇರುವುದಿಲ್ಲ.  ಪೇಶ್ವೆಯ ಅಮ್ಮನಿಗೆ ಸೊಸೆ ಕಾಶಿಬಾಯಿಯ ನೆಮ್ಮದಿ ಕದಡುವ ಈ ಹೆಣ್ಣು ಬೇಕಿಲ್ಲ.  ಅವಳನ್ನು ನರ್ತಕಿಯರ ಬಿಡಾರದಲ್ಲಿ ಇಳಿಸುತ್ತಾಳೆ.  ಅವಳನ್ನು ಪೇಶ್ವೆಯಿಂದ ದೂರ ಇಡುವ ಎಲ್ಲಾ ಪ್ರಯತ್ನಗಳನ್ನೂ ಕಟ್ಟುನಿಟ್ಟಾಗಿ ಮಾಡುತ್ತಾಳೆ. ಪೇಶ್ವೆಯ ಹೆಂಡತಿ ಅತ್ತೆಯ ಮನೆ, ಮನಸ್ಸನ್ನು ಗೆದ್ದವಳು.  ಅತ್ತೆ, ನಾದಿನಿಯರು, ಮೈದುನ, ಪರಿವಾರ, ಸಮಾಜ ಎಲ್ಲವೂ ಅವಳ ಕಡೆ.  ಅಲ್ಲಿ ಮಸ್ತಾನಿ ಯಾರಿಗೂ ಬೇಡದ ಹೆಣ್ಣು.  ಆದರೆ ಅವನನ್ನು ಪಡೆಯುವುದರ ಹೊರತು ತನ್ನ ಬದುಕಿಗೆ ಅರ್ಥವೇ ಇಲ್ಲ, ಕಾರಣವೇ ಇಲ್ಲ ಎಂದು ನಂಬಿದ ಮಸ್ತಾನಿ ಒಂದೊಂದೇ ಹೆಜ್ಜೆ ಇಟ್ಟು ಅವನೆಡೆಗೆ ಹೋಗುತ್ತಲೇ ಇರುತ್ತಾಳೆ.  ಸಾತಾರದಲ್ಲಿ ದೊರೆಯ ಎದುರಿಗೆ ನರ್ತಿಸು ಎಂದು ಅವಳನ್ನು ಕಳಿಸಿದರೆ ಆ ದೊರೆಯೆದುರು ಗೆಜ್ಜೆ ಇಟ್ಟು ಕೈ ಮುಗಿದು ನಿಲ್ಲುತ್ತಾಳೆ.  ’ಏನು ಬೇಕು ಕೇಳು’ ಎನ್ನುವ ಛತ್ರಪತಿಗೆ ಅವಳು ಕೊಡುವ ಉತ್ತರ ’ನನಗೆ ಪೇಶ್ವೆ ಬೇಕು’.. ಅವಳ ಆ ಹುಚ್ಚು ಧೈರ್ಯ, ಜಗವನ್ನೇ ಕಾಲಿನಿಂದ ಒದ್ದು, ಕತ್ತಿಯ ಮೊನೆಯಲ್ಲಿ ಹೃದಯವನ್ನಿಟ್ಟು ಕಾಯಬಲ್ಲ ನಂಬಿಕೆ ಕಡೆಗೂ ಅವಳೆಡೆಗೆ ಪೇಶ್ವೆಯನ್ನು ಕರೆತರುತ್ತದೆ.

ಆದರೆ ಅವರ ಪ್ರೀತಿ ಸುಲಭವಲ್ಲ.  ಆ ಕಾಲಕ್ಕೆ ವಿವಾಹಿತನಾದ ಗಂಡು ಇನ್ನೊಂದು ಹೆಣ್ಣನ್ನು ಬದುಕಿಗೆ ತಂದುಕೊಳ್ಳುವುದು ವಿಶೇಷವಲ್ಲ, ಅದೂ ಅರ್ಧಕ್ಕಿಂತ ಹೆಚ್ಚು ಬದುಕನ್ನು ಯುದ್ಧಭೂಮಿಯಲ್ಲಿ ಕಳೆದ ಬಾಜಿರಾಯನಂತಹ ಗಂಡು.  ಅಲ್ಲಿ ಮಸ್ತಾನಿಯಿಂದ ಕಾಶಿಬಾಯಿಗೆ ಅನ್ಯಾಯವಾಗುತ್ತದೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಕೆಲಸ ಮಾಡುವುದು ಧರ್ಮ ಮತ್ತು ಅಧಿಕಾರ.  ತಂದೆ ರಜಪೂತನಾದರೂ ಮಸ್ತಾನಿಯ ತಾಯಿ ಮುಸಲ್ಮಾನಳು, ಮಸ್ತಾನಿ ಸಹ ಇಸ್ಲಾಂ ಅನ್ನು ಪಾಲಿಸುತ್ತಿದ್ದವಳು.  ಭಗವಾ ಧ್ವಜವನ್ನು ದೆಹಲಿಯಲ್ಲಿ ನೆಡಲು ಹೊರಟ ಬಾಜಿರಾಯ ಇಸ್ಲಾಂ ಹೆಣ್ಣನ್ನು ’ಹೆಂಡತಿ’ ಎಂದು ಘೋಷಿಸಿಕೊಳ್ಳುವುದನ್ನು ಅವನ ಬ್ರಾಹ್ಮಣ ಸಮಾಜ ಒಪ್ಪುವುದಿಲ್ಲ.  ಆದರೆ ಅವರ ಹಠವೇ ಅವನನ್ನು ಹೆಚ್ಚುಹೆಚ್ಚು ಅವಳ ಕಡೆಗೆ ತಳ್ಳುತ್ತಿರುತ್ತದೆ.  ಧರ್ಮದಷ್ಟೇ ದೊಡ್ಡ ಇನ್ನೊಂದು ಲೆಕ್ಕಾಚಾರ ಅಲ್ಲಿರುತ್ತದೆ.  ಅದು ಬಾಜಿರಾಯನ ಮೇಲೆ ಇರುವ ಮಸ್ತಾನಿಯ ಪ್ರಭಾವ.  ಯುದ್ಧ ಗೆಲ್ಲುವುದಕ್ಕೆಂದೇ ಹುಟ್ಟಿದ ರಣಮಲ್ಲ ಬಾಜಿರಾಯ, ರಾಜಾಧಿಕಾರ ಈಗಾಗಲೇ ಸಾತಾರದಿಂದ ಪುಣೆಗೆ ವರ್ಗಾವಣೆಯಾಗಿದೆ, ಅಧಿಕಾರದ ಸೂತ್ರ ಇರುವುದು ತಾಯಿ ರಾಧಾಬಾಯಿ, ತಮ್ಮ ಚಿಮಾಂಜಿ ಅಪ್ಪ ಮತ್ತು ಬ್ರಾಹ್ಮಣ ಮಂಡಲಿಯ ಕೈಯಲ್ಲಿ.  ಹೆಂಡತಿ ಕಾಶಿಬಾಯಿ ಹೆಚ್ಚು ತಿಳುವಳಿಕೆ ಇಲ್ಲದವಳು, ಅವಳು ಎಂದೂ ರಾಜ್ಯಭಾರದಲ್ಲಿ ಮೂಗುತೂರಿಸಲಾರಳು, ಆದರೆ ಮಸ್ತಾನಿಯ ಬಗ್ಗೆ ಹಾಗೆ ಹೇಳಲಿಕ್ಕಾಗುವುದಿಲ್ಲ.  ಅಧಿಕಾರವನ್ನು ಅಷ್ಟು ಸುಲಭಕ್ಕೆ ಬಿಟ್ಟು ಕೊಡಲಾಗುವುದಿಲ್ಲ, ಅಮ್ಮನಿಗಾಗಲಿ, ತಮ್ಮನಿಗಾಗಲಿ.

ಬಾಜಿರಾಯ ಅದುವರೆಗೂ ರಣರಂಗದಲ್ಲಿ ಯುದ್ಧ ಮಾಡಿದವನು, ಅಲ್ಲಿನ ಯುದ್ಧದಲ್ಲಿ ನುರಿತವನು, ಅಲ್ಲಿನ ಕೌಶಲಗಳನ್ನು ಕರಗತ ಮಾಡಿಕೊಂಡವನು, ಅರಮನೆಯೊಳಗಣ ಯುದ್ಧ ಕಡೆಗೂ ಅವನಿಗೆ ಅರ್ಥವಾಗುವುದೇ ಇಲ್ಲ.  ಅವನು ಕೈ ಕಾಲು ಆಡಿಸಲು ಪ್ರಯತ್ನಿಸುವವರೆಗೂ ಕೈಕಾಲುಗಳಲ್ಲಿ ಸಂಕೋಲೆ ಇರುವುದು ಅವನಿಗೆ ಗೊತ್ತಾಗುವುದೇ ಇಲ್ಲ.  ಅವನಿಗೇ ತಿಳಿಯದಂತೆ ಅವನು ತನ್ನ ನೆಲದಲ್ಲಿ, ತಾನೇ ಗದ್ದು ತಂದ ಹಣದಲ್ಲಿ ಕಟ್ಟಿದ ಅರಮನೆಯಲ್ಲಿ ಬಂಧಿ ಆಗಿರುತ್ತಾನೆ.  ಎರಡನೆಯ ಹೆಂಡತಿ ಎಂದು ಒಪ್ಪಿಕೊಂಡವಳಿಗೆ ತಾನು ಬರೆದ ಪತ್ರ ಮುಟ್ಟಬೇಕು ಎನ್ನುವಷ್ಟೂ ಅಧಿಕಾರ ಕೈಯಲ್ಲಿರದ ಪೇಶ್ವೆ ಬಾಜಿರಾಯ.  ಧರ್ಮರಕ್ಷಣೆಗೆ ರಾಜನಿರಬೇಕು ಎಂದು ಕೇಳುವಾಗಲೂ ಅದು ರಾಜನ ಕರ್ತವ್ಯ ಎಂದು ಆಜ್ಞಾಪಿಸುವ ಹಮ್ಮು ಧರ್ಮಕ್ಕಿರುತ್ತದೆ.  ಅದು ಜೋಧಾ ಅಕ್ಬರ್ ನಲ್ಲಿಯ ಮೌಲ್ವಿಗಳ ಸಮೂಹ ಆಗಿರಬಹುದು ಅಥವಾ ಪೇಶ್ವೆ ಬಾಜಿರಾಯನ ಸುತ್ತ ಇರುವ ಬ್ರಾಹ್ಮಣ ಸಮೂಹ ಆಗಿರಬಹುದು.

ಇಡೀ ಚಿತ್ರದಲ್ಲಿ ಬಾಜಿರಾಯನಿಗೆ ಸರಿಸಮಾನವಾಗಿ ನಿಲ್ಲುವ ಪಾತ್ರ ಒಂದಿದ್ದರೆ ಅದು ಹೆಂಡತಿ ಕಾಶಿಬಾಯಿ. ಆಕೆ ಮಾತನಾಡುವುದಕ್ಕಿಂತಲೂ ಹೆಚ್ಚಿಗೆ ಅವಳ ಕಣ್ಣುಗಳು ಮಾತನಾಡುತ್ತದೆ, ಮೊದಲ ಸಲ ಮಸ್ತಾನಿಯನ್ನು ತನ್ನ ಗಂಡನ ದರಬಾರಿನಲ್ಲಿ ಕಂಡಾಗ ಅವಳು ಬಿಡುವ ನಿಟ್ಟುಸಿರು ಮಾತನಾಡುತ್ತದೆ, ಮೊದಲ ಸಲ ಗಂಡನ ಅಪ್ಪುಗೆಯಲ್ಲಿ ಮಸ್ತಾನಿಯನ್ನು ಕಂಡಾಗ ಸೋತು ತತ್ತರಿಸುವ ಅವಳ ನಿಲುವು ಮಾತನಾಡುತ್ತದೆ.  ಈ ಹೊಸ ಸಂಬಂಧದಲ್ಲಿ ಅವಳು ತನ್ನ ಗಂಡನನ್ನು ಮಾತ್ರ ಕಳೆದುಕೊಂಡಿಲ್ಲ, ತನ್ನ ಆತ್ಮಾಭಿಮಾನವನ್ನು ಕಳೆದುಕೊಂಡಿದ್ದಾಳೆ.  ’ನೀನು ನನ್ನ ಜೀವ ಕೇಳಿದ್ದರೂ ಕೊಟ್ಟುಬಿಡುತ್ತಿದ್ದೆ, ಆದರೆ ನೀನು ನನ್ನ ಆತ್ಮಗೌರವವನ್ನು ಪುಡಿಪುಡಿ ಮಾಡಿದೆ’ ಎಂದು ಹೇಳುವಾಗ ಅವಳ ದನಿಯಲ್ಲಿನ ಕಣ್ಣೀರ ಪಸೆ ಎದೆಯನ್ನು ಚುಚ್ಚುತ್ತದೆ.  ಇಲ್ಲಿ ಬಾಜಿರಾಯ ಇನ್ನೊಬ್ಬ ಹೆಣ್ಣನ್ನು ಹೆಣ್ಣಾಗಿ ಮಾತ್ರ ಸ್ವೀಕರಿಸಿಲ್ಲ, ಸಂಗಾತಿಯನ್ನಾಗಿ ಒಪ್ಪಿಕೊಂಡಿದ್ದಾನೆ.  ತಾನು ಇದುವರೆಗೂ ಯಾವೆಲ್ಲವನ್ನೂ ಗಂಡನ ಸಂಬಂಧಿಕರು, ಗಂಡನ ಮನೆ, ಆ ಮನೆಯ ಗೌರವ, ಆ ಮನೆಯ ಸಂಪ್ರದಾಯ ಎಂದು ತಲೆತಗ್ಗಿಸಿ ಒಪ್ಪಿಕೊಂಡಿದ್ದಳೋ ಅವೆಲ್ಲವನ್ನೂ ಅವನು ಆ ಇನ್ನೊಂದು ಹೆಣ್ಣಿಗಾಗಿ ಎದುರಿಸಿದ್ದಾನೆ.  ಅವನ ಮುಕುಟದಂತಿದ್ದ, ತನ್ನ ಹೆಮ್ಮೆಯಂತಿದ್ದ ಪೇಶ್ವಾ ಸ್ಥಾನವನ್ನು ಸಹ ಅವಳಿಗಾಗಿ ಬಿಟ್ಟುಕೊಡಲು ಸಿದ್ಧನಾಗಿದ್ದಾನೆ.  ತನ್ನ ಇಡೀ ಪ್ರಪಂಚವನ್ನೆ ಆ ಇನ್ನೊಬ್ಬಳಿಗಾಗಿ ಎದುರು ಹಾಕಿಕೊಂಡಿದ್ದಾನೆ.  ಹೆಂಡತಿಯ ಆತ್ಮಗೌರವಕ್ಕೆ ಏಟು ಬೀಳುವುದು ಅಲ್ಲಿ.

ಇಡೀ ಪ್ರಕರಣದಲ್ಲಿ ಅವಳ ತಪ್ಪು ಏನಿಲ್ಲ, ಅವಳು ಭಾಗಿಯಾಗಿಲ್ಲ, ಹೀಗಿರುವಾಗ ತಾನೇಕೆ ಶಿಕ್ಷೆ ಅನುಭವಿಸಬೇಕು ಎನ್ನುವುದು ಅವಳ ಪ್ರಶ್ನೆ.  ಗೊತ್ತಿದ್ದೋ ಗೊತ್ತಿಲ್ಲದೆಯೋ ಮಸ್ತಾನಿ ಅವಳನ್ನು ಸಮಾಧಾನಿಸಲು ’ಅವರು ನಿನ್ನನ್ನೂ ನನ್ನಷ್ಟೇ ಪ್ರೀತಿಸುತ್ತಾರೆ’ ಎಂದು ಬಿಡುತ್ತಾಳೆ.  ಅಷ್ಟು ವರ್ಷ ಸಂಸಾರ ಮಾಡಿ, ಮಕ್ಕಳನ್ನು ಹೆತ್ತುಕೊಟ್ಟು, ಅವನ ಮನೆಯವರನ್ನೆಲ್ಲಾ ತನ್ನವರೆಂದುಕೊಂಡು ಸಂಭಾಳಿಸಿ, ಅವನು ಯುದ್ಧಕ್ಕೆ ಹೋದಾಗ ದೀಪ ಹಚ್ಚಿ ದಾರಿ ಕಾದು, ಬಂದ ಮೇಲೆ ಅವನ ಮೈಮೇಲಿನ ಗಾಯವೆಣಿಸುತ್ತಲೇ ಮತ್ಯಾವಾಗ ರಣಕಹಳೆ ಮೊಳಗುವುದೋ ಎಂದು ಕಾದ ತನ್ನೆದುರಿಗೆ ಬಂದ ಈ ಹೆಣ್ಣು ನಿನ್ನನ್ನೂ ನನ್ನಷ್ಟೇ ಪ್ರೀತಿಸುತ್ತಾರೆ ಎಂದಾಗ ಏನಾಗಿರಬೇಕು ಆ ಪೇಶ್ವಾಯಿಣಿಗೆ? ಅವಳೇ ಹೇಳುವಹಾಗೆ ಅವಳು ಅದನ್ನು ಒಪ್ಪಿಕೊಳ್ಳುತ್ತಾಳೆ ಆದರೆ ಅದನ್ನು ಎಂದಿಗೂ ಕ್ಷಮಿಸುವುದಿಲ್ಲ.  ಗಂಡ ಯುದ್ಧದಿಂದ ಬರುವಾಗ ದೀಪ ಕೈಲಿ ಹಿಡಿದು ಕಾಯುವ ಹೆಣ್ಣು, ಇದೆಲ್ಲಾ ಆದಮೇಲೆ ಗಂಡ ಯುದ್ಧಕ್ಕೆ ಹೊರಡುವಾಗ ಊದುಕೊಳವೆ ಹಿಡಿದು ಎತ್ತರಕ್ಕೆ ಕಟ್ಟಿದ ತೂಗುದೀಪಗಳಲ್ಲಿ ಬೆಳಗುತ್ತಿದ್ದ ದೀಪಗಳನ್ನು ಒಂದೊಂದಾಗಿ ಆರಿಸುತ್ತಾ ಇರುತ್ತಾಳೆ.  ಪತ್ನಿ ತನ್ನನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುವ ಬಾಜಿರಾಯನಿಗೂ ಅವಳು ಅರ್ಥ ಆದ ಹಾಗೆ ಕಾಣುವುದಿಲ್ಲ, ಆ ಒಂದು ದೃಶ್ಯ ನಮ್ಮ ಮನಸ್ಸಿನಲ್ಲಿ ಕಾಶಿಬಾಯಿಯನ್ನು ತಂದು ಕೂರಿಸಿಬಿಡುತ್ತದೆ.

ಅರಮನೆಯೊಳಗಣ ಯುದ್ಧ ಬಾಜಿರಾಯನನ್ನು ಹಣ್ಣಾಗಿಸುತ್ತದೆ.  ಹೆಂಡತಿಯ ತಿರಸ್ಕಾರವನ್ನು ಮರೆಯಲಾರ, ಮಸ್ತಾನಿಯನ್ನು ಬಿಡಲಾರ, ತಾಯಿ-ತಮ್ಮನ ಪ್ರತಿಭಟನೆಯನ್ನು ಎದುರಿಸಲಾರ.  ಇದು ತಾನೆಂದೂ ಗೆಲ್ಲಲಾರದ ಯುದ್ಧ ಎನ್ನುವುದು ಆ ಯೋಧನಿಗೆ ಗೊತ್ತಾಗಿ ಹೋಗುತ್ತದೆ.  ಕೊನೆಗೆ ಸಾಯಲೆಂದೇ ತನ್ನ ಜೀವನದ ಕಡೆಯ ಯುದ್ಧಕ್ಕೆ ತಯಾರಾಗುತ್ತಾನೆ. ಎಂದೂ ಯಾವ ಯುದ್ಧದಲ್ಲೂ ಸೋಲನ್ನು ಕಂಡಿರದ ಆ ಯುದ್ಧಮಲ್ಲ ಮನೆಯ ಯುದ್ಧದಲ್ಲಿ ಸೋತು ಹೋಗಿರುತ್ತಾನೆ.  ಕಡೆಯ ದೃಶ್ಯದಲ್ಲಿ ಎದುರಿಗಿರದ ಆದರೆ ಇಲ್ಲದೆಯೂ ತನ್ನ ಮೇಲೆ ಪ್ರಹಾರ ಮಾಡುವ ಶತೃಗಳ ಕಡೆಗೆ ಕತ್ತಿ ಬೀಸುತ್ತಾ ಅವನು ಹೋರಾಡುವಾಗ, ಹೊಡೆದಾಡುವಾಗ ನಮ್ಮೆದುರಲ್ಲೇ ಅವನ ಸೋಲು ನಮ್ಮನ್ನು ಸೋಲಿಸಿರುತ್ತದೆ.

ಸಂಜಯ್ ಲೀಲಾ ಬನ್ಸಾಲಿಯದು ಕಲಾವಿದನ ಕಣ್ಣು.  ಆತನ ಚಿತ್ರದಲ್ಲಿ ಒಂದೊಂದು ಫ್ರೇಮಿನಲ್ಲೂ ಚಿತ್ತಗಟ್ಟಿ ಕೂತು ವಿವರಗಳನ್ನು ಬಿಡಿಸಿದ ಚಿತ್ರಕಾರನ ಕ್ಯಾನ್ವಾಸಿರುತ್ತದೆ.  ಒಂದು ಕನಸನ್ನು ಭವ್ಯವಾಗಿ ಕಾಣುವುದು ಅವನಿಗೆ ಗೊತ್ತು.  ಚಿತ್ರದ ಬಗ್ಗೆ ಅವನಿಗಿರುವ ಉತ್ಕಟ ಒಲವು ಒಂದೊಂದು ದೃಶ್ಯದಲ್ಲೂ ಗೊತ್ತಾಗುತ್ತದೆ.  ಆದರೆ ಒಂದು ವಿಪರ್ಯಾಸ ಎಂದರೆ ಆ ಉತ್ಕಟತೆ ಒಂದೆರಡು ದೃಶ್ಯಗಳ ಹೊರತಾಗಿ ಬಾಜಿರಾವ್ ಮತ್ತು ಮಸ್ತಾನಿಯರ ನಡುವಿನ ಪ್ರೇಮದಲ್ಲಿ ಮೂಡಿಬಂದಿಲ್ಲ.  ಆ ದೃಶ್ಯಗಳಲ್ಲೂ ಸಹ ಅವರಿಗಿರುವ ಆ ತೀವ್ರ ಉತ್ಕಟತೆ, ವ್ಯಾಮೋಹ ಅವರಿಬ್ಬರ ನಡುವಿನ chemistry ಇಂದ ಬಂದಿದೆಯೇ ಹೊರತು ಚಿತ್ರಕಥೆ ಅದಕ್ಕೆ ನೆರವು ನೀಡಿಲ್ಲ.  ಒಟ್ಟಿಗೇ ಉಸಿರಾಡಿ, ಒಟ್ಟಿಗೇ ಉಸಿರು ನಿಲ್ಲಿಸುವಷ್ಟು ಬೆರೆತ ಹೃದಯಗಳ ಪ್ರೇಮವನ್ನು ಕಟ್ಟಿಕೊಡುವ ದೃಶ್ಯಗಳು ಚಿತ್ರದಲ್ಲಿ ಇನ್ನೂ ಇರಬೇಕಿತ್ತು.

ಆ ಚಿತ್ರ ಎಷ್ಟರ ಮಟ್ಟಿಗೆ ಬನ್ಸಾಲಿಯದೋ ಅಷ್ಟರ ಮಟ್ಟಿಗೆ ರಣವೀರ್ ನದೂ ಹೌದು.  ಆ ಪಾತ್ರಕ್ಕೆಂದೇ ಅವನು ಬಳಸಿಕೊಂಡಿರುವ ಹಾವಭಾವ, ಬಿರುಸಿನ ನಡಿಗೆ, ಯೋಧನ ದೇಹದೊಳಗಿರುವ ಪ್ರೇಮಿಯ ಚಡಪಡಿಕೆ, ಬಹುಶಃ ಇದು ಆತನ ಚಿತ್ರಜೀವನದ ಕಡೆಯವರೆಗೂ ನೆನಪಿನಲ್ಲಿ ಉಳಿಯುವ ಪಾತ್ರ.  ಅವನ ಮುಂದೆ ದೀಪಿಕಾಳಂತ ನುರಿತ ನಟಿ ಸಹ ಮಂಕಾಗುತ್ತಾಳೆ.  ಸದ್ದೇ ಮಾಡದೆ ಗೆದ್ದ ಮತ್ತೆರಡು ಪಾತ್ರಗಳು ಹೆಂಡತಿಯಾಗಿ ಕಾಶಿಬಾಯಿ ಮತ್ತು ತಾಯಿಯಾಗಿ ರಾಧಾಬಾಯಿ.

ಚಿತ್ರ ಬಿಡುಗಡೆಯಾಗಿ ವರ್ಷದ ಮೇಲಾಯಿತು.  ಈಗ್ಯಾಕೆ ಚಿತ್ರದ ಬಗ್ಗೆ ಬರೆಯುತ್ತಿದ್ದೇನೆ ಎಂದು ಯೋಚಿಸುತ್ತಿದ್ದೇನೆ.  ಇಲ್ಲ ಬಹುಶಃ ನನಗೆ ಬರೆಯಬೇಕಾಗಿರುವುದು ಆ ಚಿತ್ರದ ಬಗ್ಗೆ ಅಲ್ಲ, ನನಗೆ ಬರೆಯಬೇಕಾಗಿರುವುದು ಅಂತಹ ಸನ್ನಿವೇಶ ಜೀವನಗಳಲ್ಲಿ ಎಬ್ಬಿಸುವ ಬಿರುಗಾಳಿಯ ಬಗ್ಗೆ.  ತನ್ನ ಎಲ್ಲವನ್ನೂ ಪ್ರೀತಿಗಾಗಿ ಪಣವಿಟ್ಟ ಅವನನ್ನು ಹೊಗಳಲೋ ಅಥವಾ ತನ್ನೊಬ್ಬನ ಪ್ರೀತಿಗಾಗಿ ಇಡೀ ನಾಡಿನ ನಾಳೆಗಳನ್ನು ಗಮನಿಸದ ಅವನನ್ನು ಹೀಗಳೆಯಲೋ?  ಇಲ್ಲಿ ಯಾವುದನ್ನೂ ಸರಿ ಎಂದು ಹೇಳುವುದು ನನ್ನ ಉದ್ದೇಶವಲ್ಲ.  ಕೆ ಎಸ್ ನ ಬರೆದ ಒಂದು ಕವನ ನೆನಪಾಗುತ್ತಿದೆ,

ನನ್ನ ಕೇಳಿದೆ ನೀನು ಹೊಳೆಯಾಳವೆಷ್ಟೆಂದು

ಎಲ್ಲಿಂದ ತರಲಿ ನಾನುತ್ತರವನು?

ದಡದ ಬಳಿ ಆಳುದ್ದ; ತೆಪ್ಪ ಸರಿದಂತೆಲ್ಲ

ಹೆಚ್ಚುವುದದರ ಆಳ ನನಗೆ ಗೊತ್ತು.

ದಂಡೆಯಲಿ ಕೂತು ದಡದ ಬಳಿಯ ಆಳ ಹೇಳಬಹುದು, ತೆಪ್ಪ ಸರಿದಂತೆಲ್ಲಾ ಹೆಚ್ಚುವ ಆಳವನು ಅಳೆಯುವುದು ಹೇಗೆ? ಇಡೀ ಸನ್ನಿವೇಶದಲಿ ಯಾರದು ತಪ್ಪೆನ್ನೋಣ?  ಮದಿರೆ ಕುಡಿದು ಕಾಲು ತೂರಾಡತ್ತಿದ್ದರೂ ಕತ್ತಿ ಮೊನೆಯಲ್ಲಿ ಹಿಡಿದ ಹಣತೆಯ ದೀಪದ ಕುಡಿ ಕದಲದಂತೆ ಹಿಡಿವ ದೃಡತೆ ಅವನ ತೋಳುಗಳಲ್ಲಿ.  ಅದಕ್ಕಾಗಿ ಅವನು ಅಮ್ಮನನ್ನು ಎದುರಿಸುತ್ತಾನೆ, ತಮ್ಮನನ್ನು ಎದುರಿಸುತ್ತಾನೆ, ಇಡೀ ಬ್ರಾಹ್ಮಣ ಸಮಾಜವನ್ನು ಎದುರಿಸುತ್ತಾನೆ, ಅವನು ತಲೆತಗ್ಗಿಸುವುದು ಹೆಂಡತಿಯ ಎದುರಲ್ಲಿ ಮಾತ್ರ.  ಇನ್ನು ಮಸ್ತಾನಿ, ತಾನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಳ್ಳಲು ಅವಳಿಗೆ ಯಾವ ಸಿಗ್ಗೂ ಇಲ್ಲ.  ಮಗು ಅಮ್ಮ ಬೇಕು ಎಂದು ಕೇಳಿದಷ್ಟೇ ಸಹಜವಾಗಿ ನನಗೆ ಪೇಶ್ವೆ ಬೇಕು ಎನ್ನುತ್ತಾಳೆ.  ಅವಳು ಹೆರಿಗೆ ನೋವುಣ್ಣುವಾಗ ಅವಳ ಬಳಿ ಯಾವ ಸೂಲಗಿತ್ತಿಯೂ ಬರುವದಿಲ್ಲ, ಅವಳ ಮಗುವಿಗೆ ಯಾರೂ ಬಂದು ಆಶೀರ್ವಾದ ಮಾಡಿ ನಾಮಕರಣ ಮಾಡುವುದಿಲ್ಲ… ಇದ್ಯಾವುದೂ ಅವಳನ್ನೂ ಹಿಮ್ಮೆಟ್ಟಿಸುವುದಿಲ್ಲ.

ಇಲ್ಲಿ ನಾನು ಹೇಳಬೇಕಿರುವುದು ಇವರಿಬ್ಬರ ಪ್ರೇಮದ ಬಗ್ಗೆ ಮಾತ್ರವಲ್ಲ, ನಾನು ಹೇಳಬೇಕಿರುವ ಇನ್ನೊಂದು ಪ್ರೇಮ ಇದೆ.  ಅದು ಬಾಜಿರಾಯನ ಹೆಂಡತಿ ಕಾಶಿಬಾಯಿಯದು.  ಆದರೂ ಆಕೆ ಅವನಿಗೆ ಅಷ್ಟು ದೊಡ್ಡ ಶಿಕ್ಷೆ ಕೊಡಬಾರದಿತ್ತು, ಕ್ಷಮಿಸಿಬಿಡಬೇಕಿತ್ತು ಎಂದು ತಮ್ಮನಂತಹ ಹುಡುಗನೊಬ್ಬ ಹೇಳಿದೆ.  ಹೇಗೆ ಹೇಳಲಿ ಅವನಿಗೆ ಅವಳ ಸಂಕಟವನ್ನು?  ಬಾಜಿರಾಯ ರಾಜ್ಯಕ್ಕಾಗಿ, ಮಡದಿಗಾಗಿ, ಮಕ್ಕಳಿಗಾಗಿ ಮಸ್ತಾನಿಯನ್ನು ಬಿಡಲಿಲ್ಲ, ಮಸ್ತಾನಿ ಒಂದು ಸಂಸಾರವನ್ನು ಉಳಿಸಲಿಕ್ಕಾಗಿ, ಒಂದು ರಾಜ್ಯಕ್ಕೆ ಅದರ ಪೇಶ್ವೆಯನ್ನು ಬಿಟ್ಟುಕೊಡಲಿಕ್ಕಾಗಿ ತನ್ನ ಪ್ರೇಮವನ್ನು ತ್ಯಾಗ ಮಾಡಲಿಲ್ಲ, ಹಾಗಿರುವಾಗ ಕಾಶಿಬಾಯಿ ತನ್ನ ಪ್ರೀತಿಯನ್ನು ಬಿಟ್ಟುಕೊಡಬೇಕಾಗಿತ್ತು ಎಂದು ಹೇಗೆ ಹೇಳಲಿ?  ಅವಳು ಅದನ್ನು ಸಹಿಸಿಕೊಂಡರೆ ಸಾಲದು, ಅನುಮೋದಿಸಲೂ ಬೇಕು ಎಂದು ಕೇಳುವುದೇ ಒಂದು ಕ್ರೌರ್ಯವಲ್ಲವೇ?

ಹೊಳೆಯ ವೇಗದ ಪ್ರಶ್ನೆಯನು ಕೇಳಿದೆ ನೀನು

ಉತ್ತರವ ಹೊಂದಿಸುವೆನದಕೆ ನಾನು;

ನೀರ ವೇಗವೆ ಬೇರೆ, ತೆಪ್ಪದ ವೇಗವೆ ಬೇರೆ

ತಳದಿ ಸರಿಯುವ ಮರಳಿನ ವೇಗ ಬೇರೆ

ಇಲ್ಲಿ ಯಾರ ಪ್ರೇಮ ಕಡಿಮೆ, ಯಾರ ಪ್ರೀತಿ ಸೋಲಬೇಕಿತ್ತು? ಕಡೆಗೂ ಗೆದ್ದದ್ದು ಪ್ರೀತಿಯೇ. ನೀರ ಪ್ರೀತಿ, ತೆಪ್ಪದ ಪ್ರೀತಿ, ಕಾಣದಿದ್ದರೂ ಇರುವ ಮರಳಿನ ವೇಗದ ಪ್ರೀತಿ. ನಾನು ಬರೆಯಬೇಕೆಂದಿದ್ದು ಆ ಪ್ರೀತಿಯ ಬಗ್ಗೆ.

‍ಲೇಖಕರು admin

March 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. s.p.vijayalakshmi

    Sanjay Leela Bansaaliya kalavidana kanninashte shakthavaagi nimma lekhani kelasa maadide . Adbhutha vimarshe, sundara….! Kanna munde paatragalellaa matthomme kunidavu…

    ಪ್ರತಿಕ್ರಿಯೆ
  2. ಭಾರತಿ

    Wonderful article ! ಯೋಚಿಸುತ್ತಲೇ ಇರ್ತೀನಿ ಇದರ ಬಗ್ಗೆ ಇನ್ನೊಂದಿಷ್ಟು ದಿನಗಳು …

    ಪ್ರತಿಕ್ರಿಯೆ
  3. ಮಮತ

    ಎಂಥಹ ಬರಹ ಸಂಧ್ಯಕ್ಕ . ನನ್ನ ಪ್ರತಿಕ್ರಿಯೆ ನೀರಸವೆನಿಸಿಬಿಡುತ್ತೆ . ಭಾವಪ್ರವಾಹದಲ್ಲಿ ಕೊಚ್ಚಿಹೋದೆ. ನೀವು ಕಂಡುಕೊಂಡ ಪಾತ್ರಒಳಹಿನಲ್ಲಿ ಮುಳುಗಿಹೊದೆ . ಪ್ರೇಮ ಲಹರಿಯಂತಹ ಅದ್ಭುತ ಕಾವ್ಯಭಾಷೆ ನಿಮ್ಮದು .ನದಿ ದಡದಿಂದ ಹೊರಟಂತೆಯೇ ಆಳ ಆಳಕ್ಕಿಳಿದು ಪ್ರೇಮ ಸುಳಿಯ ಬರಹದಲ್ಲಿ ತೇಲಿ ತೇಲಿ ಹೋದೆ

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಠ್ಯಾಂಕ್ಯೂ ಮಮತಾ…. ಈ ಚಿತ್ರ ನೋದಿದ್ದು ರಾಜಾಸ್ಥಾನದಲ್ಲಿ. ಬೆಳಾಗ್ಗೆ ನೋಡಿದ್ದ ಮಹಲುಗಳು, ರಾತ್ರಿ ನೋಡಿದ ಈ ಚಿತ್ರ, ರಾಜಾಸ್ಥಾನದ ಮರಳುಗಾಡು, ಭಣಗುಟ್ಟುವ ಉದ್ದಾನೆ ರಸ್ತೆಗಳು ಎಲ್ಲಾ ಮನಸ್ಸಿನಲ್ಲಿ ಒಂದು ಕೊಲಾಜ್…

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: