ಏಳು ಕೆರೆಯ ನೀರು ಕುಡಿದ ದಿವ್ಯಾ ಕಾರಂತರ ‘ಮಿಂಚು ಮತ್ತು ಮಳೆ’

ಮಲೆನಾಡಿನ ಚಿರಾಪುಂಜಿ ಎಂದೇ ಕರೆಯಲ್ಪಡುವ ಬಸರೀಕಟ್ಟೆಯಲ್ಲಿ ಹುಟ್ಟಿ, ಬೆಳೆದು, ಉಡುಪಿಯಲ್ಲಿ ಕಾಲೇಜು ಶಿಕ್ಷಣ ಮುಗಿಸಿ, ಮಂಗಳೂರಿನಲ್ಲಿ ರೇಡಿಯೋ ಜಾಕಿಯಾಗಿ ಕೆಲಸಕ್ಕೆ ಸೇರಿ, ಅಲ್ಲಿಂದ ವರ್ಗಾವಣೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದ ದಿವ್ಯಾ ಕಾರಂತರದ್ದು, ಏಳು ಕೆರೆಯ ನೀರು ಕುಡಿದ ಬದುಕಿನ ಪಯಣ.

ರೇಡಿಯೋ, ಟೆಲಿವಿಷನ್‌, ರಂಗಭೂಮಿ, ನೃತ್ಯ, ಬರವಣಿಗೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ 13 ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡು, ನಟಿ – ನಿರ್ದೇಶಕಿಯಾಗಿಯೂ ಪ್ರಸಿದ್ಧರಾಗಿದ್ದಾರೆ. ಹಲವಾರು ನಾಟಕಗಳು, ವಿಮರ್ಶೆಗಳು, ಅನುವಾದಗಳು, ಕಥಾ ಸರಣಿಗಳನ್ನು ಬರೆದಿರುವ ದಿವ್ಯಾ ಕಾರಂತರ ಮೊದಲ ಕಥಾ ಸಂಕಲನ ‘ಮಿಂಚು ಮತ್ತು ಮಳೆ’.

ಈ ಸಂಕಲನಕ್ಕೆ ಬರೆದ ಅವರ ಮಾತು ಇಲ್ಲಿದೆ-

ದಿವ್ಯಾ ಕಾರಂತ

೨೦೧೫ರ ಹೊತ್ತಿಗೆ ನನ್ನ ಮನೆಯ, ನನ್ನೂರಿನ ನೆನಪುಗಳು ಬಲವಾಗಿ, ಕಳೆದುಕೊಳ್ಳುವ ಭಾವವನ್ನು ತೊಡೆಯುವ ಉದ್ದೇಶದಿಂದ ಸಣ್ಣ ಕಥೆಗಳ ಬರವಣಿಗೆ ಆರಂಭವಾಯಿತು. ಇದರ ನಂತರವೂ ಹಲವಾರು ನಾಟಕಗಳನ್ನು, ವಿಮರ್ಶೆಗಳನ್ನು, ಇತರ ಕಥೆಗಳನ್ನು ಬರೆದಿದ್ದೇನೆ. ಆದರೆ ಆರಂಭದ ಕಥೆಗಳು ಬರಹಾನುಭವ ಶೂನ್ಯವಾದದ್ದರಿಂದಲೋ ಏನೋ ಮನಸ್ಸಿಗೆ ಬಹಳ ಹತ್ತಿರವಾದವು ಹಾಗಾಗಿ ೫ ವರ್ಷಗಳ ನಂತರ ಇವುಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಸಾಹಸಕ್ಕೆ ಕೈ ಹಾಕಿದ್ದಾಗಿದೆ.

ಈ ಕಥೆಗಳನ್ನು ಬರೆದ ನಂತರ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಆದ್ದರಿಂದ ಮುಂದೆ ಬರೆಯುವ ಕಥೆಗಳಲ್ಲಿ, ಈ ಮಳೆಯ ಮುಗ್ಧತೆ ಮತ್ತು ಮಿಂಚಿನ ಕೋರೈಸುವಿಕೆ ಇಲ್ಲದೇ ಹೋಗಬಹುದು. ಈ ಸಂಕಲನದಲ್ಲಿ ಬರುವ ಎಲ್ಲ ಪಾತ್ರಗಳು ಜೀವಂತವಾದವು. ಅವುಗಳಿಗೆ ಸಿಂಗಾರ ಮಾಡಿ, ಕಲ್ಪನೆಯ ಒತ್ತು ಕೊಟ್ಟು ಕಥೆಗಳನ್ನಾಗಿಸಿದ್ದೇನೆ. ಇದರ ತುಂಬಾ ಇರುವುದು ಮಲೆನಾಡಿನ, ನಮ್ಮೂರಿನ ಚಿತ್ರ.

ಊರಿನವರಿಗೆ ಪ್ರತಿಯೊಂದು ಜಾಗವೂ, ಪ್ರತಿಯೊಂದು ಪಾತ್ರವೂ ಚಿರಪರಿಚಿತ ಅನ್ನಿಸಬಹುದು. ಅಲ್ಲದವರು, ಒಮ್ಮೆ ನಮ್ಮಲ್ಲಿಗೆ ಬನ್ನಿ. ಕಥೆಗಳನ್ನು ಬರೆಯಲು ಮಾತ್ರ ಅಲ್ಲ ಓದಲು ಕೂಡ ಪ್ರತಿಭೆ ಬೇಕು. ಕಥೆಯ ರಸವನ್ನು ಅನುಭವಿಸುವುದು, ಚಿತ್ರಿಸಿಕೊಳ್ಳುವುದು, ಕಲ್ಪಿಸಿಕೊಳ್ಳುವುದು ಮತ್ತು ಪಾತ್ರಗಳನ್ನು ಅರ್ಥಮಾಡಿಕೊಳ್ಳುವುದೂ ಒಂದು ಕಲೆ. ಆದ್ದರಿಂದ ಓದು ಗಜಿಬಿಜಿಯಾಗದೆ, ಸಾವಧಾನವಾಗಿ, ಸಚಿತ್ರವಾಗಿ ಮತ್ತು ಸಜೀವವಾಗಿರಲು ವಿಜ್ಞಾಪನೆ ಮಾಡುತ್ತೇನೆ.

ಬಾಲ್ಯದಿಂದ ನನ್ನಲ್ಲಿ ಮೂಡಿದ ಓದುವ ಹವ್ಯಾಸಕ್ಕೆ ನನ್ನ ಅಪ್ಪ-ಅಮ್ಮ ಕಾರಣಕರ್ತರು. ಹವ್ಯಾಸ ದಿನಚರಿಯಾಗಲು ನಮ್ಮ ಕನ್ನಡದ ಪ್ರತಿಯೊಬ್ಬ ಲೇಖಕರು, ಮೊಗೆದಷ್ಟೂ ಸಿಗುವ ಕನ್ನಡದ ಅದ್ಭುತ ಸಾಹಿತ್ಯ ಭಂಢಾರವೇ ಕಾರಣ. ಮೊದಲಿನಿಂದಲೂ ಮನಸ್ಸಿಗೆ ಬಂದದ್ದೆಲ್ಲಾ ಗೀಚುವ ಹವ್ಯಾಸವಿದ್ದರೂ, ನನ್ನ ವೃತ್ತಿಪರ ಬರವಣಿಗೆಗೆ ಮೂಲ ಕಾರಣ ಒಲುಮೆಯ ಅಂಜನ್ ಭಾರದ್ವಾಜ್. ಆಗಿನ್ನೂ ಕಾಲೇಜಿನಲ್ಲಿದ್ದ ಅವನ ಒಡನಾಟ ಮತ್ತು ಹಾವ-ಭಾವಗಳನ್ನು ಅನುಸರಿಸಿ ಬರೆದ ಮೊದಲ ಕಥೆ ‘ಮಿಂಚು ಮತ್ತು ಮಳೆ’.

ಕೊನೆಯಲ್ಲಿ ಬರೆದ ‘ವಿಜಯಲಕ್ಷ್ಮಿಯ ಜಡೆ’ ಕಥೆಗೆ, ಮುಂಬೈನ ಮೈಸೂರು ಅಸೋಸಿಯೇಷನ್‌ನ ‘ಮಾಸ್ತಿ ಸಣ್ಣ ಕಥೆಗಳ ಸ್ಪರ್ಧೆ’ಯಲ್ಲಿ ಬಹುಮಾನ ಬಂತು. ಅದಾಗಿ ವರ್ಷಗಳ ನಂತರ, ನನ್ನ ಗೆಳೆಯ ವಿನಯ್ ಶಾಸ್ತ್ರಿಯ ಮೊಂಡುತನದಿಂದ ಈ ಕಥಾ ಸಂಕಲನಕ್ಕೆ ಪುಸ್ತಕ ರೂಪ ಕಾಣುವ ಹುರುಪು ಬಂತು.

ಆಮೇಲೆ ನನ್ನ ಅಕ್ಕಸಾಲಿ, ಶ್ರೀ ಎಸ್ ಎನ್ ಸೇತುರಾಮ್ ಸರ್‌ರವರು ಈ ಕಥಾ ಸಂಕಲನವನ್ನು, ಅವರು ಓದಿದ ದಿನದಿಂದ ಹಿಡಿದು ಪುಸ್ತಕವನ್ನು ಚಂದ ಮಾಡಿ ಹೊರತರುವವರೆಗೂ ಬೆನ್ನೆಲುಬಾಗಿ ನಿಂತು, ಮುನ್ನುಡಿಯನ್ನು ಬರೆದು ನನ್ನನ್ನು ಋಣದಲ್ಲಿ ಕಟ್ಟಿಹಾಕಿದ್ದಾರೆ. ಈಗ ಮಸ್ಕತ್‌ನಲ್ಲಿ ‘ಏಕಾಂತ’ನಾಗಿರುವ ಬಸರೀಕಟ್ಟೆಯ ಲಕ್ಷ್ಮಿಕಾಂತರು, ಈ ಕಥೆಗಳನ್ನು ಓದಿ ಅವರ ಮನಸ್ಸಿನಲ್ಲಿ ಮೂಡಿದ ನಮ್ಮೂರಿನ ಚಿತ್ರವನ್ನು, ಅದ್ಭುತವಾಗಿ ಪುಸ್ತಕದ ಮುಖಪುಟಕ್ಕೆ ಇಳಿಸಿ ಕೊಟ್ಟಿದ್ದಾರೆ. ನನ್ನ ಮನಸ್ಸಿನಲ್ಲಿರುವ ಧನ್ಯವಾದದ ಹಂಡೆಗೆ ಸರಿಹೊಂದುವ ಪದ ಇನ್ನೂ ಹುಡುಕುತ್ತಿದ್ದೇನೆ.

ಈ ಪಯಣದಲ್ಲಿ ನನ್ನ ಜೊತೆಯಾದ ಹಲವು ಮಿನುಗುತಾರೆಗಳಿವೆ. ನಾ ಏನೇ ಬರೆದರೂ ಮೂಗು ಮುರಿಯುವ ಸಚಿನ್ ಶ್ರೀನಾಥ್, ‘ನೀ ಬರೆದದ್ದೆಲ್ಲಾ ಇಂದ್ರ ಚಂದ್ರ’ ಎಂದು ಸುಮ್ಮಸುಮ್ಮನೆ ಹೊಗಳೋ ಅಶ್ವಿನ್ ಲಕ್ಷ್ಮಿ ನಾರಾಯಣ್, ನಾನು ಕಥೆ ಅಂದೊಡನೆ ಮುಖವರಳಿಸೋ ಸಂತೋಷ್ ಕರ್ಕಿ, ನನ್ನ ಕಥೆಗೆ ಬಹುಮಾನ ಬಂದಾಗ ಒಂದು ಜಾಮೂನು ಹೆಚ್ಚಿಗೆ ತಿಂದ ದಿವ್ಯಾಮೂರ್ತಿ, ‘ನ್ಯಾಷನಲ್ ಅವಾರ್ಡ ಯಾವಾಗ ಬರೋದು?’ ಅಂತ ಫೋನ್ ಮಾಡಿದಾಗಲೆಲ್ಲಾ ಒತ್ತಡ ಹೇರಿ ಹುರಿದುಂಬಿಸುವ ಅಡ್ವೊಕೇಟ್ ಕೇಶವ್ ಸರ್, ‘ನೀವು ನನ್ನ ಗರ‍್ಲ್ ಕ್ರಶ್’ ಅಂತ ಹುಚ್ಚಾಡೋ ಸ್ನೇಹಾ ಶರ್ಮಾ, ‘ಈ ಕಥೆಯನ್ನ ಸಿನಿಮಾ ಮಾಡ್ರೀ’ ಅಂತ ಬೆನ್ನು ಬೀಳೊ ಸಿನೆಮಾಟೊಗ್ರಾಫರ್ ನಂದಕಿಶೋರ್ ರಾವ್, ನಾ ಬೇಜಾರಾದಾಗಲೆಲ್ಲಾ ‘ಚಾಮುಂಡಿಗೆ ಅಡ್ಡಬಿದ್ದು ಬರೋಣ’ ಅಂತ ಕಾರು ಹೊರಡಿಸುತ್ತಿದ್ದ ಹೇಮಂತ, ‘ನಮ್ ದಿವ್ಯಾ ಕಾರಂತರು ಹೆಣ್ಣು ಹುಲಿ’ ಅಂತ ಹೆಮ್ಮೆಯಿಂದ ಬೀಗೋ ಲಕ್ಷ್ಮಿ ಭಾಗವತರ್, ನಾನು ಬರೆದ ಪ್ರತೀ ಹಾಳೆಯನ್ನು ಸಂವೇದನಾಶೀಲವಾಗಿ ವಿಮರ್ಶೆ ಮಾಡೋ ಶರತ್ ಪರ್ವತವಾಣಿ, ‘ಮೇಡಮ್ ಮೇಡಮ್’ ಅಂತ ಸಂಭ್ರಮಪಡುವ ಅನಿಲ್ ರಾಜ್, ಕಳೆದ ೫ ವರ್ಷಗಳಿಂದ ನನ್ನ ಒಡನಾಡಿಯಾಗಿರುವ ‘ಸರ್ವಮ್’ ಥಿಯೇಟರ್ ತಂಡದ ಪ್ರತಿಯೊಬ್ಬ ಸದಸ್ಯರು, ಹೀಗೆ ಮಿನುಗುತಾರೆಗಳ ಪಟ್ಟಿ ಮುಗಿಯೋದೇ ಇಲ್ಲ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನಾನು ಋಣಿ.

ಈ ಪುಸ್ತಕ ನನ್ನೊಬ್ಬಳದ್ದು ಮಾತ್ರವಲ್ಲದೆ, ಹಲವಾರು ಆಸಕ್ತ, ಕಳಕಳಿಯ ಮನಸ್ಸುಗಳ, ಪ್ರಾಮಾಣಿಕ ಪ್ರಯತ್ನ. ನಾನು ಬರೆದದ್ದು ಮಾತ್ರ.
ಮನುಜಕಂಠೀರವನ ಪಾದಕ್ಕೂ ಮತ್ತು ನಿಮಗೂ ಒಪ್ಪಿಸಿದ್ದೇನೆ.

‍ಲೇಖಕರು Avadhi

May 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: