ದೀಕ್ಷಿತ್ ನಾಯರ್
ವೃದ್ಧಾಶ್ರಮದ ಗೇಟಿನಾಚೆಗೆಯೇ ಕೊಕ್ಕರೆಯಂತೆ ಕತ್ತು ತಿರುಗಿಸಿಕೊಂಡು
ಹಳೆಯದನೆಲ್ಲ ನೆನೆದು ಮರುಗಿ, ಸೊರಗಿ ಹಾಸಿಗೆಯ ಮೇಲೆ ಒಂದು ಹಿಡಿಯಾಗಿ ಕಣ್ಣೀರು ಹಾಕುತ್ತಾ
“ಇವತ್ತಾದರೂ ಮಕ್ಕಳು ಬರುತ್ತಾರೆ”ಎಂಬ ಆಸೆಯಿಂದ ಪದೇಪದೇ ಮೂರ್ಖರಾಗುತ್ತಿರುವ ಆ ಹಿರಿಯ ಜೀವಗಳಿಗೆ ಈ ಏಪ್ರಿಲ್ ಒಂದು ಲೆಕ್ಕಕ್ಕಿಲ್ಲ!
ಬೀದಿ ಬದಿಯ ಫುಟ್ಪಾತ್ ನಲ್ಲಿ
ಅಥವಾ ಧೂಳು ತುಂಬಿದ ಇನ್ಯಾವುದೋ ಜಾಗಗಳಲ್ಲಿ
ಮುಡಿದ ಮೂರು ಕಾಸಿನ ಮಲ್ಲಿಗೆ ಹೂವು ಒಣಗಿ ಹೋಗುವವರೆಗೂ;

ತುಟಿಗೆ ಹಚ್ಚಿದ ಆಯುಷ್ಯ ಕಳೆದುಕೊಂಡ ಬಣ್ಣ ಮಾಸುವವರೆಗೂ
ಒಂಟಿ ಕಾಲಿನಲ್ಲಿ ನಿಂತು ಉಸಿರೆಳೆದುಕೊಳ್ಳುತ್ತಲೇ
“ಬಂದೇ ಬಿಡುತ್ತಾನೆ ಜೇಬು ತುಂಬಿಸಿಕೊಂಡ ಗಿರಾಕಿಯೊಬ್ಬ
ಕೈ ತುಂಬಾ ಕೊಡುತ್ತಾನೆ; ಎರಡು ದಿನಗಳು ಹೊಟ್ಟೆ ಬಿರಿಯುವಷ್ಟು ಉಣ್ಣಬಹುದು” ಎಂಬ ನಂಬಿಕೆಯೊಂದಿಗೆಯೇ ಹುಸಿ ನಗುತ್ತಾ ಮೂರ್ಖಳಾಗುತ್ತಿರುವ ರಾತ್ರಿ ಪಾಳಿಯ ವೇಶ್ಯೆಗೆ ಈ ಏಪ್ರಿಲ್ ಒಂದು ಲೆಕ್ಕಕ್ಕಿಲ್ಲವೇ ಇಲ್ಲ!
ಕುಡುಕ ಗಂಡ ಇಂದಲ್ಲ ನಾಳೆ ಬದಲಾಗುತ್ತಾನೆ
ಮಕ್ಕಳು ಬೆಳೆದಂತೆಲ್ಲ ಕಷ್ಟ ತೀರಬಹುದು;
ಇಂದು ಕೂಳಿಗೆ ಗತಿ ಇಲ್ಲವಾದರೂ ನಾಳೆ ಮೃಷ್ಟಾನ್ನ ಉಣ್ಣಬಹುದು
ಸೂರು ಕಿತ್ತು ಹೋಗಿರುವ ಮನೆ

ಬಿರುಕು ಬಿಟ್ಟಿರುವ ಗೋಡೆಯ ಜಾಗದಲ್ಲಿಯೇ ಎರಡಂತಸ್ತಿನ ಮನೆ ಎದ್ದು ನಿಲ್ಲಬಹುದು
ಎಂಬ ಕನಸುಗಳೊಂದಿಗೆಯೇ ಹೊಟ್ಟೆ-ಬಟ್ಟೆ ಕಟ್ಟಿ ದುಡಿದು ದಣಿದು ಹಿಪ್ಪೆಯಾಗುತ್ತಾ ಸೆರಗಿನ ತುದಿ ಹರಿದುಕೊಂಡು ಆಗಾಗ್ಗೆ ಮುಗ್ಗರಿಸಿ ಬೀಳುವ
ಕರಿ ದಾರದ ಕುತ್ತಿಗೆಯ ಅವ್ವನಿಗೆ ಏಪ್ರಿಲ್ ಒಂದಿರಲಿ
ಕ್ಯಾಲೆಂಡರ್ ನ ಪರಿಚಯವೇ ಇಲ್ಲ!






ಅವಧಿಯೊಂದು ಅತ್ಯುತ್ತಮ ಕನ್ನಡ