ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನ್ಮಾಡಾದು ನಾನು ಗಾರ್ಮೆಂಟ ಕೂಲಿ ಮಾಡಾಕಿ..

geetha hegde kalmane

ಗೀತಾ ಹೆಗ್ಡೆ ಕಲ್ಮನೆ 

ಹೊತ್ತಿಗೆ ಮುಂಚೆ
ಕಾಲ್ಚೆಂಡು ಪುಟದಾಂಗ
ಪುಟಿಬೇಕ್ರಿ
ಮನಿ ಕಸ ಮುಸುರೆ
ಹೇಗಾದ್ರೂ
ಮುಗಿದೋಗಬಿಡಬೇಕ್ರಿ
ಯಾಕಂತೀರಾ?
ನಾ ಗಾರ್ಮೆಂಟನಾಗೆ
ಕೆಲಸ ಮಾಡಾಕಿ.

garment strike1ಸೈರನ್ ಗಂಟಿ
ಕಿವಿ ಹಿಂಡತಾವ್
ಒಂದೈದು ನಿಮಿಷ
ಎಂಟ್ರಿ ತಡಾತಂದ್ರ
ರಜೆ ಕಟ್ರಿ
ಇಲ್ಲಾಕಂದ್ರ
ಸಂಬಳ ಕಟ್ರಿ.

ವಷ೯ಕ್ಕೊಂದೆರಡ
ರಜಾ ಬಿಟ್ರ
ಶನಿವಾರ ಇಲ್ರಿ
ಬಾನುವಾರ ರಜೆ
ಮೊದಲೆ ಇಲ್ಲ್ ಬಿಡ್ರಿ
ಹಬ್ಬ ಹುಣ್ಣಿಮೆ
ಕೇಳಾ ಬ್ಯಾಡ್ರಿ.

ಮಕ್ಕೊಂಡ ಶಿಶು
ರಚ್ಚಿ ಹಿಡದೈತ್ರಿ
ಸೋರಾಕತ್ತಾವ್ ಮೊಲಿ ಹಾಲ್
ಏಯ್ ಮುಚ್ಕಂಡ ಕೆಲಸ
ಮಾಡಂದಾನವನು
ಪುಕ್ಕಟ್ ಸಂಬಳ
ಕೊಡಲೇನ್ ನಿನಗ.

ಮಾತಾಡಾಂಗಿಲ್ಲರೀ
ನಾವ್ ಹೊಟ್ಟೆ  ಪಾಡಿಗ್
ಸೇರ್ಕಂಡಿವ್ರೀ
ಇಲ್ಲಿ ಸಾಲಿ ಬರೆ
ಹತ್ತನೆ ಕ್ಲಾಸ್ ಸಾಕ್ರೀ
ಬಟ್ಟಿ ಹೊಲಿಯಾಕ್
ಬರಬೇಕ ನೋಡ್ರಿ.

garment strike2ಪಿ.ಎಫ್ ಸೌಲತ್ ಐತ್ರಿ
ಇ.ಎಸ್.ಐ.ಸೌಲತ್ ಐತ್ರಿ
ರೊಕ್ಕ ಎಣಿಸೊ
ಮಂದಿ ಈಗ
ಹೊಸಾ ಕಾನೂನ
ತಂದಾರ್ರಿ
ಗಲಾಟೆ ಮಾಡಿ
ಬೆಂಕಿ ಹಚ್ಚಾತ್ರಿ
ಆದ್ರ
ನನ್ನೊಟ್ಟೆ ಉರಿತೈತ್ರಿ
ಒಂದಿನ ಸಂಬಳ
ಕಟ್ಟಾಯ್ತಲ್ರಿ.

ಎಂಟರ ಬೆಳಗಿ
ಹಾಜರಾಗ ಬೇಕ್ರಿ
ಓಟಿ ಆಸಿ ತೋರ್ಸಿ ನಮಗ
ಗಂಟಿ ಹತ್ತಾದ್ರೂ
ಗಂಡು ಕೂಸಾದ್ರೆ
ಬಿಡಾಂಗಿಲ್ರಿ
ನೈಟ್ ಶಿಫ್ಟು
ಮಾಡಂತಾರ್ರಿ.

ಹೆಣ್ಮಕ್ಕಳ ಗೋಳು
ಒಸಿ ತ್ರಾಸ ಐತ್ರಿ
ಕಣ್ಣಿನ ದೃಷ್ಟಿ
ಆಗಾಗ ಕಾಡತೈತ್ರಿ
ಹರೆದ ಹೆಣ್ಮಕ್ಕಳೆ
ಬಾಳ ಅದಾರ್ರಿ
ಆದ್ರ್ ಏನೂ
ಮಾಡಾಕಾಗೂದಿಲ್ರಿ.

ಒಂದಾ ಎರಡಾ
ಇಲ್ಲಿ ಗೋಳು
ಸಂಬಳದ ಅಂಕಿ
ಏರೋದಿಲ್ರಿ
ಆರ್ಡರ್ ಟಾರ್ಗೆಟ್
ಇತ್ತಂದರಿ
ನಮ್ಮ ರಟ್ಟಿ
ಹೈರಾಣಾಗಾದು
ಗ್ಯಾರಂಟ್ರಿ.

ಏನ್ಮಾಡಾದು
ನಾನು ಗಾರ್ಮೆಂಟ
ಕೂಲಿ ಮಾಡಾಕಿ.

‍ಲೇಖಕರು admin

21 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading