ನಂದಿನಿ ವಿಶ್ವನಾಥ ಹೆದ್ದುರ್ಗ
ಅದೇ ಹಾದಿಯಲ್ಲಿ ನನಗಾಗಿ ಕಾಯುತ್ತಿ
ಮತ್ತೊಂದು ದಿನ ನೀನು.
ನಿನ್ನ ಕಾಲವೂ ಕಾಲವಾಗುತದೆ ಆಗ.
ತುಸುವಾದರೂ ಕಳೆಗಟ್ಟಬಾರದೆ .?
ಗದರುತ್ತಿ.
ಕಾಲ ಬೆದರಿ
ಹಾಡಲಾರಂಬಿಸಿದೆ.
ನಿನ್ನೆದೆಯ ಮೇಲೆ
ತೋರುಬೆರಳಿನ ಕನವರಿಕೆ.
ಅರೆಗಣ್ಣಾದವನೇ
ಆಯಾಚಿತ ಅರಳಿದವು ನಿನ್ನ ತುಟಿಗಳೇಕೆ.?
ಕುಂಕುಮದೋಕುಳಿ ಚೆಲ್ಲುತ್ತ
ಕೆಂಪುಬಸ್ಸೊಂದು ನಿಲ್ಲುತ್ತದೆ ಅಲ್ಲಿ.
ಮಲ್ಲಿಗೆ ದಂಡೆಯೊಂದು ಮೆಲ್ಲ ಇಳಿಯುತಿದೆ..
ಅವಳ ಪಾದದಡಿಯಲ್ಲಿ ನಿನ್ನ
ಕಲ್ಪನೆಯ ಕೆಂಪು ಹಾಸು.
ಕಡು ಹಗಲು ಗುಣ ಮರೆತು
ನಕ್ಷತ್ರ ಅರಳಿಸುತದೆ
ನಕ್ಕ ಚುಕ್ಕಿಗಳೀಗಾ ಹೂವು ಪಕಳೆ
ಚೆಲ್ಲುತ್ತಿವೆ.
ಕಣ್ಣು ಕಲೆತ ವೇಳೆ.
ಸದ್ದಿಗಾಗಿ ಕಾಯುತ್ತದೆ ಹೃದಯ.
ಯಾರು ಮೊದಲು ಹೇಳು.,ಯಾರಿಲ್ಲಿ ಮೊದಲು.?

ನಿನ್ನೆದೆಯ ಬೆವರಿಗಾಗಿ ಅವಳ
ಗಲ್ಲ ಕಾತರಿಸುವ ವೇಳೆ.!
ಚಾಚಿ ಬಳಸುವಾಗೆಲ್ಲ
ನೆರೆಗೆ ಕೊಚ್ಚುವ ಭಯ ನನಗೆ.!
‘ಅದೆಷ್ಟು ಒಲವಿಂದ ಕರೆಯುತ್ತೀ ನೀನು ನನ್ನ
ಏನು ಮಾಡುತ್ತೀಯೇ ನನ್ನ ಚಿನ್ನಾ.!’
ಇರುಳುಗಳ
ಇರುವ ಮರೆತು ಮಾಡಿದ ನಿನ್ನ ಧ್ಯಾನ
ತೃಪ್ತವಾಗುವ ಹೊತ್ತು.
ಜಗವು ಚಪ್ಪರಕೆ ಸಿದ್ದ
ಜರಡಿಯೆದೆಯಿಂದ ಅರಿಷಿನದ ಸ್ನಾನ
ಕಂಕಣ ಬಾಸಿಂಗವೆಂಬ ನೀನರಿಯದ
ಸೊಬಗು.
ಬಳಸಿದ ಬಲ ತೋಳು
ನಿನ್ನ ಬೆರಳ ಸೆರೆಯೊಳಗೆ.
ಗಲ್ಲ ಕೆನ್ನೆ ತುಂಬೆಲ್ಲಾ ಸಂಗಕ್ಕೆ ಒಲಿದ
ಗಂಗೆ.!
ಹೊರಗೆ ಸುರಿಯುತಿದೆ ಸೋನೆ ಸಣ್ಣಗೆ.!!!






ಕುಂಕುಮದೋಕುಳಿ ಚೆಲ್ಲುತ್ತ
ಕೆಂಪುಬಸ್ಸೊಂದು ನಿಲ್ಲುತ್ತದೆ ಅಲ್ಲಿ.
ಮಲ್ಲಿಗೆ ದಂಡೆಯೊಂದು ಮೆಲ್ಲ ಇಳಿಯುತಿದೆ..
ಚೆಂದ ಸಾಲುಗಳು……ಕಾವ್ಯ ರೂಹು, ಚೆಲುವು ಪಡೆಯುವುದೇ ಹೀಗೆ. ಕಂಗ್ರಾಟ್ಸ್