ಸುಧಾ ಆಡುಕಳ
ಏನಾಗಿ ಹೋಯ್ತು ನೋಡು
ನೋಡನೋಡುತ್ತಿರುವಂತೆ
ಏನಾಗಿ ಹೋಯ್ತು ನೋಡು..
ಪಾತಾಳದವರೆಗೆ ಬೇರು
ಹರಡಿದೆಯೆಂದು ನಂಬಿ
ನೂರಾರು ತೊಟ್ಟಿಲು ತೂಗಿದ
ಆಲದ ಮರ:
ಬರಿಯ ಗಾಳಿಯ ಬೀಸಿಗೆ
ಬುಡ ಕಳಚಿ….
ಬಿಳಿಲು ಹಿಡಿದು
ಉಯ್ಯಾಲೆಯಾಡಿದ ಖುಶಿಗೇ
ಬೆಳೆದ ಜೀವಗಳನು
ಹೇಗೆ ಸಂತೈಸುವುದು?

ಸಾವಿರ ವರ್ಷಗಳಿಂದ
ಬಾಳಿ ಬದುಕಿದ ಮನೆಯ
ಗೋಡೆಗಳು: ತೆಕ್ಕೆಗೆ
ನಿಲುಕದಷ್ಟು ಗಾತ್ರ!
ಕಪ್ಪಗೆ ಕರಿಗಟ್ಟಿದ ಹೊಗೆಯ
ಪದರಕ್ಕೆ ಗೆದ್ದಲು
ಸೋಕದಷ್ಟು ಒಗರು!
ನುಣ್ಣಗೆ ಸಾರಿಸಿದ
ಗೋಡೆಯಲಿ ಎಲ್ಲಿತ್ತು ಬಿರುಕು!?
ತಲೆಯ ಮೇಲೆ ತಪತಪನೆ
ಉದುರಿದಾಗಲೇ ಜ್ಞಾನೋದಯ-
ಸೂರು ಕಳಕೊಂಡ
ಎಲ್ಲರೂ ಅನಾಥರೇ
ನನ್ನೂರ ಬಯಲಾಟದಲಿ
ಬಣ್ಣದ ವೇಷಕ್ಕೂ
ಅದೆಂಥ ಕರುಣೆ!?
ಅಳುವ ಮಗುವ ಕಂಡರೆ
ಒರಲುವುದ ನಿಲ್ಲಿಸುತ್ತಾನೆ
ತುಟಿಯರಳಿಸಿ ನಕ್ಕು
ಕೆನ್ನೆ ಹಿಂಡುತ್ತಾನೆ
ಯಾರಿಗೆ ಗೊತ್ತಿತ್ತು
ಸುಂದರ ವೇಷದ ಹಿಂದಿರುವ
ರಕ್ಕಸ ಹೃದಯದ ಗುಟ್ಟು
ರಕ್ತ ಮೆತ್ತಿದ ಕೈ
ಸಾಕ್ಷಿಯಾಗುವವರೆಗೂ….
ಹೌದು……
ಬಡತನ, ಅಜ್ಞಾನ,
ಅನಾರೋಗ್ಯ, ಹೊಲಸು
ಎಲ್ಲವೂ ಅಷ್ಟಿಷ್ಟು
ಇದ್ದೇ ಇತ್ತು-ನಮ್ಮೊಳಗಿನ
ಕೊಳೆಯ ಹಾಗೆ-
ಆದರೆ ಗೆಳೆಯಾ,
ನಮ್ಮೂರ ಮಣ್ಣು ವಿಷ ಬೀಜಕೆ
ಬಸಿರಾಗಿರಲಿಲ್ಲ….
ಕೃತಕ ಬಸಿರಲ್ಲಿ ವಿಷವೃಕ್ಷ
ಹುಟ್ಟಿಸಿದ ಮೇಲೆ
ಪ್ರೀತಿಯಮೃತ ಫಲವ
ಹೇಗೆ ಬಯಸುವುದು?
ಕೊಳವ ಕಲಕಿದ ಮೇಲೆ
ತಿಳಿನೀರ ಕನಸು
ಕಾಯಲೇಬೇಕು..
ಏನಾಯಿತು ನೋಡು!
ನಾವೆಲ್ಲ ನೋಡನೋಡುತ್ತಿರುವಂತೆ…..!?






ಮನಕಲಕುವ ಕವಿತೆ.