ಒಡಲು ತುಂಬಿದ ಜೋಳಿಗೆಯಲ್ಲಿ ಎಷ್ಟೊಂದು ನೋವುಗಳು!

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಮಿತಿಯ ಸದಸ್ಯರಾದ ಡಾ ಪದ್ಮಿನಿ ನಾಗರಾಜು ಅವರ ನೂತನ ಕಥಾ ಸಂಕಲನ ಬಿಡುಗಡೆಯಾಗಲಿದೆ.

ಈ ಕೃತಿಗೆ ಸಾಹಿತಿ ಶ್ರೀಧರ ಬನವಾಸಿ ಬರೆದ ಮುನ್ನುಡಿ ಇಲ್ಲಿದೆ ಮುನ್ನುಡಿ

ಶ್ರೀಧರ ಬನವಾಸಿ ಜಿ ಸಿ (ಫಕೀರ) 

ಕಳೆದ ಕೆಲವು ದಶಕಗಳಲ್ಲಿ ಸಾಹಿತ್ಯ ಪ್ರಪಂಚದಲ್ಲಿ ಎಷ್ಟು ಪರಿವರ್ತನೆಗಳು ಘಟಿಸಿವೆಯೆಂದರೆ ಪ್ರಚಲಿತ ಸಾಹಿತ್ಯ ಸಿದ್ಧಾಂತಗಳ ಮುಂದೆ ಯಾವ ಬಗೆಯ ಬೌದ್ಧಿಕ ಸವಾಲುಗಳಿವೆಯೋ ಅವನ್ನು ಈಗ ನಿರ್ಲಕ್ಷಿಸುವುದು ಅಷ್ಟು ಸುಲಭವಲ್ಲ. ಮೊಟ್ಟ ಮೊದಲಿಗೆ ಸಾಹಿತ್ಯ ಜಗತ್ತಿನಲ್ಲಿ ಸಾಮಾನ್ಯವಾಗಿ ಪ್ರಚಲನೆಯಲ್ಲಿರುವ ವಿಚಾರಗಳು ಆಯಾ ಕಾಲಘಟ್ಟದಲ್ಲಿ ತಮ್ಮದೇ ರೀತಿಯಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತವೆ. ಅದರಲ್ಲೂ ಲೇಖಕನ ಚಿಂತನೆ, ವ್ಯಕ್ತಿತ್ವ, ಜನಮನ್ನಣೆಯು ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ. ಇದನ್ನು ಸ್ವಲ್ಪ ವಿಶ್ಲೇಷಿಸಿ ಹೇಳುವುದಾದರೆ, ಸೃಜನಶೀಲ ಸಾಹಿತ್ಯವು ಲೇಖಕನು ಕಂಡ ಅಥವಾ ಲೇಖಕನ ಬದುಕಿನ ಸತ್ಯಗಳ ಚಿತ್ರಣ ಅಥವಾ ಸಾಹಿತ್ಯ ಬದುಕಿನ ಭಾಷ್ಯ, ಸಾಹಿತ್ಯ ಜೀವನಾನುಭವಗಳ ಪ್ರತಿಬಿಂಬವಾಗಿರುತ್ತದೆ. ಇಲ್ಲಿ ಕೃತಿಕಾರನ ನಿಜರೂಪದ ಅಭಿವ್ಯಕ್ತಿತ್ವ ಮತ್ತು ಆತನ ಗ್ರಹಿಕೆ, ತಿಳುವಳಿಕೆಯ ವಿಚಾರಗಳನ್ನು ಒಳಗೊಂಡು ಸಮತೂಕವಾಗಿ ಓದುಗರಿಗೆ ತಲುಪಿರುತ್ತದೆ.

ಸಾಮಾನ್ಯವಾಗಿ ಲೇಖಕನ ಸಾಹಿತ್ಯಿಕ, ಬೌದ್ಧಿಕ ವಿಚಾರಗಳು ಸಾಮಾನ್ಯ ಬುದ್ಧಿಸಾರ ಹೊಂದಿದವರಿಗೆ ರುಚಿಸಬಹುದು, ಅರ್ಥವಾಗದೆಯೂ ಇರಬಹುದು. ಆದರೆ ಅದೇ ಲೇಖಕನ ಮನಸ್ಥಿತಿ ಇರುವವರು ಅದನ್ನು ಒಪ್ಪಬಹುದು, ಅದರ ಕುರಿತು ವಿಶ್ಲೇಷಿಸಬಹುದು. ಇನ್ನೂ ಕೆಲವರು ಲೇಖಕನ ಸೈದ್ಧಾಂತಿಕ ವಿಚಾರಗಳನ್ನು ಒಪ್ಪದೆಯೂ ಇರಬಹುದು. ಈ ಒಂದು ಪ್ರಕ್ರಿಯೆಯು ಶತಶತಮಾನಗಳಿಂದ ನಡೆದುಕೊಂಡು ಬಂದಿರುವAತಹ ರೂಢಿ. ಹಾಗಾಗಿ ಒಬ್ಬ ಸೃಜನಶೀಲ ಲೇಖಕನಿಗೆ ಒಂದು ಕೃತಿಯನ್ನು ಸೃಷ್ಟಿಸುವಾಗ ತನ್ನೊಳಗೆ ಮೂಡುವ ಅನೇಕ ತೊಳಲಾಟ, ದ್ವಂದ್ವಗಳನ್ನು ಮೆಟ್ಟಿನಿಂತು ಗಟ್ಟಿ ಸಾಹಿತ್ಯವನ್ನು ಬರೆಯುವ ಅನಿವಾರ್ಯತೆಯೂ ಇದೆ. ಇಲ್ಲಿ ಪುರುಷ ಹಾಗೂ ಮಹಿಳಾ ಲೇಖಕಿಯರ ಭಾವನೆಗಳು, ಯೋಚನೆ-ಸಂವೇದನೆಗಳು ಒಂದೊAದು ರೀತಿ ಇದ್ದರೂ, ಅವರ ಸೃಜನಶೀಲ ಸಾಹಿತ್ಯವು ಕೆಲವೊಮ್ಮೆ ಅಂತಹ ಎಲ್ಲ ನೂನ್ಯತೆಗಳನ್ನು ಮರೆಮಾಚಿಸಿಬಿಡುತ್ತದೆ. ಓದುವಾಗ ಯಾವುದೇ ಭೇದಭಾವವಿಲ್ಲದೇ ಓದಿದರೆ ಲೇಖಕನ ಮೂಲ ಚಿಂತನೆಯು ನಮ್ಮ ಅಂತರಾಳಕ್ಕೆ ಇಳಿಯುತ್ತದೆ. ಈ ದೃಷ್ಟಿಯಲ್ಲಿ ನೋಡಿದಾಗ ಲೇಖಕಿ, ಕವಯತ್ರಿ, ಡಾ.ಪದ್ಮಿನಿ ನಾಗರಾಜು ರಚಿಸಿರುವ ಈ ಕೃತಿಯು ಹಲವು ಮಜಲುಗಳ ದೃಷ್ಟಿಕೋನದ ಎಳೆಗಳನ್ನು ನಮಗೆ ಹೊತ್ತು ತಂದAತಿವೆ. ಇಲ್ಲಿರುವ ವಿಚಾರಗಳನ್ನು ಬಿಡಿಸುತ್ತಾ ಹೋದಂತೆ ಲೇಖಕಿಯ ಚಿಂತನೆ ಹಾಗೂ ಪಾತ್ರಗಳ ಸಂವೇದನೆ ಎರಡೂ ಸಮವಾಗಿ ಈ ಸಂಕಲನದಲ್ಲಿ ಮಿಳಿತಗೊಂಡಿವೆ. ಕತೆಗಾರ್ತಿಯು ಪ್ರತಿ ಕತೆಯ ಮೂಲಕ ಪಾತ್ರಗಳ ಜೊತೆಗೆ ನಡೆಸಿದ ಅನುಸಂಧಾನದ ಕಲೆಯು ಹತ್ತು ಹಲವು ವಿಚಾರಗಳನ್ನು ದೃಷ್ಟಿಕೋನಗಳನ್ನು ನಮಗೆ ತಿಳಿಸುತ್ತದೆ.

`ಉರಿವ ಬೆಂಕಿಗೆ ಮೈಯೆಲ್ಲಾ ಬಾಯಿ’ ಕೃತಿಯು ನಗರ, ಗ್ರಾಮೀಣ ಬದುಕಿನ ಎಲ್ಲ ವರ್ಗದವರ ಅಸ್ಥಿರದ ಬದುಕನ್ನು ತಮ್ಮ ಕ್ಷಕಿರಣಗಳ ನೋಟದೊಂದಿಗೆ ತಾವು ಆ ಪಾತ್ರಗಳ ಜೊತೆ ಭಾಗವಾಗಿಯೋ, ಮುಖಾಮುಖಿಯಾಗಿರುವಂತೆಯೋ ಎಂಬAತೆ ಚಿತ್ರಿಸಿದ ರೀತಿ ಈ ಸಂಕಲನದಲ್ಲಿ ಕಣ್ಣಿಗೆ ಕಟ್ಟಿದಂತಿದೆ.

ಪ್ರತಿ ಕತೆಯಲ್ಲಿ ಪಾತ್ರಗಳ ಅಂತಃಸತ್ವವನ್ನು ತೆರೆದಿಡುವ ಪ್ರಯತ್ನ ತುಂಬ ಆಳವಾಗಿ ಮೂಡಿಬಂದಿದೆ. ಅಕಸ್ಮಾತ್ ಲೇಖಕಿ ಸೃಷ್ಟಿಸಿರುವ ಪಾತ್ರಗಳನ್ನು ಓದುಗರು ತಮ್ಮ ಸುತ್ತಮುತ್ತಲೂ ಕಂಡಿದ್ದರೆ ಪ್ರತಿ ಕತೆಯು ಅತ್ಯಂತ ವಿಶೇಷವೆಂಬAತೆ ನಮಗೆ ಕಾಣಿಸುತ್ತದೆ. ಬಹುತೇಕ ಎಲ್ಲ ಕತೆಗಳು ಹೆಣ್ಣನ್ನೇ ಮುಖ್ಯ ಕೇಂದ್ರವಾಗಿಟ್ಟುಕೊAಡು ರಚಿಸಲಾಗಿದ್ದು, ಒಂದೊಂದು ಕತೆಯ ಹೆಣ್ಣಿನ ಬದುಕಿನ ಹೋರಾಟವನ್ನು ಬಿಂಬಿಸುತ್ತವೆ.

ಸುತ್ತಲಿನ ಲೌಕಿಕ ಜಗತ್ತಿನಲ್ಲಿ ಮೂಲ ಬೇರುಗಳನ್ನು ಬಿಟ್ಟು ಇಲ್ಲಿಗೆ ಬಂದು ಬದುಕು ಕಟ್ಟಿಕೊಳ್ಳುವವರ ಹೋರಾಟ, ಬಂದವರ ಮನಸುಗಳ ತಲ್ಲಣ, ಹತಾಶೆ, ನೋವು ಎಲ್ಲವೂ ಈ ಕತೆಗಳಲ್ಲಿ ಪ್ರಮುಖವಾಗಿ ಕಾಣಬಹುದು. ಇದರ ಜೊತೆಗೆ ಲೇಖಕಿಯು ಗ್ರಾಮೀಣ ಪ್ರದೇಶದಿಂದ ಬೆಂಗಳೂರಿನಂತಹ ಬಹುಸಂಸ್ಕೃತಿಯ ನಗರದಲ್ಲಿ ಬದುಕು ಕಟ್ಟಿಕೊಳ್ಳಲು ನಡೆಸುವವರ ಹೋರಾಟ, ಜೀವನ-ಕನಸು, ಬಡತನ, ಹತಾಶೆ, ಸಂಬಂಧಗಳ ನಡುವಿನ ಸಂಘರ್ಷ, ಭಾವನೆಗಳ ಬಿಗಿತ, ಸಂಪ್ರದಾಯಗಳ ಕಟ್ಟುಪಾಡು, ದಾಂಪತ್ಯ, ಸಂಸಾರ-ಮಕ್ಕಳು, ಸಹಮತ ಇಲ್ಲವೇ ಅನೈತಿಕ ಸಂಬAಧ ಇಂತಹ ಹತ್ತು ಹಲವು ವಿಚಾರಗಳನ್ನು ತಮ್ಮ ಕತೆಗಳ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಮಲ್ಲಿಗೆ ಮತ್ತು ಕಸ, ಗುಳೆ, ಅಹಿಂಸೆ, ಚಪ್ಪಲಿಗೆ ಅಂಟಿದ ಡಾಂಬರು ಕತೆಗಳು ನೊಂದವರ ಹತಾಶೆ, ರಾಜಕೀಯ ಹಾಗೂ ಸಾಮಾಜಿಕ ಅವ್ಯವಸ್ಥೆ, ಮಾನವನ ಕ್ರೌರ್ಯ ಹಾಗೂ ಅದರಿಂದಾಗುವ ದುರಂತ ಅಂತ್ಯವನ್ನು ಬಿಂಬಿಸುವ ಕತೆಗಳಾಗಿವೆ. ಈ ಸಂಕಲನದ ಒಂದೊಂದೇ ಕತೆಗಳನ್ನು ವಿಶ್ಲೇಷಿಸಿ ನೋಡಿದಾಗ ಹಲವು ವಿಚಾರಗಳನ್ನು ಆಳವಾಗಿ ನಾವು ಗಮನಿಸಬಹುದು.

`ಮಲ್ಲಿಗೆ ಮತ್ತು ಕಸ’ ಕತೆಯಲ್ಲಿ ಚಲಮ್ಮಳದ್ದು ಪ್ರತಿದಿನ ಮನೆ ಮನೆಯ ಕಸ ಎತ್ತುವ ಕೆಲಸ. ಕತೆಗಾರ್ತಿಯ ಈ ಪಾತ್ರಕ್ಕೆ ಪದ್ದಮ್ಮ ಎಂಬ ಮನೆಯೊಡತಿ ಎದುರಾಗಿ ಅವರಿಬ್ಬರ ನಡುವೆ ಒಂದು ವಿಚಾರದ ಕುರಿತಾಗಿ ಮಾತಿನ ಚಕಮಕಿಯಾಗಿ ಅವಳ ಸ್ವಾಭಿಮಾನವನ್ನು ಕೆಣಕುತ್ತದೆ. ಚಲಮ್ಮ ಬಡವಿಯಾದರೂ ತುಂಬಾ ಕಷ್ಟದಲ್ಲಿ ಬದುಕನ್ನು ಕಟ್ಟಿಕೊಂಡವಳು. ಅವಳಲ್ಲಿನ ಅಮಾಯಕತೆಯು ಅವಳ ದುಸ್ತರ ಬದುಕಿಗೆ ಕಾರಣವಾದರೂ ಆಕೆಗೆ ಬಾಲ್ಯದಿಂದಲೂ ಮಲ್ಲಿಗೆ ಹೂವಿನ ಮೇಲೆ ಇದ್ದ ಆಸೆಯು ಇಡೀ ಕತೆಯ ಸಾರವಾಗಿದೆ. ಮಲ್ಲಿಗೆ ಹೂವು ಮುಡಿದು, ಅದರ ಘಮಲನ್ನು ಆಸ್ವಾದಿಸಬೇಕೆಂಬ ಅವಳ ಬಾಲ್ಯದ ಕನಸು ಒಂದು ಕ್ಷಣದಲ್ಲಿ ಈಡೇರಿದರೂ, ಅದಕ್ಕೆ ಒದಗಿದ ಸಂದರ್ಭ ಅವಳಿಗೆ ನಿರಾಸೆಯನ್ನು ಮೂಡಿಸುತ್ತದೆ. ಒಂದು ರೀತಿಯ ಹತಾಶಭಾವ ಅವಳಿಗೆ. ಅದು ಓದುಗನಿಗೆ ಕೂಡ ಅನ್ನಿಸದಿರದು. ಅದು ಕತೆಯ ಅಂತ್ಯದಲ್ಲಿ ಚಲಮ್ಮನ ಮೇಲೆ ಕರುಣೆ ಹುಟ್ಟುವಂತೆ ಮಾಡುತ್ತದೆ.

`ಬಸಿರು’ ಕತೆಯು ಹೆಣ್ಣಿನ ಅಂತರಾಳದ ಸುತ್ತ ಹೆಣೆಯಲಾದ ಇನ್ನೊಂದು ವಿಶಿಷ್ಟಕತೆ. ನಾಗಮಣಿ ಚಿಕ್ಕವಳಿರುವಾಗ ಬಿದ್ದ ಏಟಿನಿಂದ ಅರೆಹುಚ್ಚಿಯಾಗುತ್ತಾಳೆ. ಅರಳು ಮರಳು ಸ್ವಭಾವದ ಈಕೆ ಊರ ಜನರ ಬಾಯಿಗೆ ಆಹಾರ; ಮನೆಗೆ ಉಪದ್ರವವಾಗುತ್ತಾಳೆ. ನಾಗಮಣಿ ತನ್ನ ಈ ಚಂಚಲ ಸ್ವಭಾವ ಹಾಗೂ ಕಾಮದಾಸೆಗೆ ಬಿದ್ದು, ಊರ ಗಂಡಸರ ಜೊತೆ ನಿರಂತರವಾಗಿ ಸಲುಗೆಯನ್ನು ಹೊಂದಿ ಎರಡ್ಮೂರು ಬಾರಿ ಬಸುರಿಯಾದಾಗ ಮನೆಯವರೇ ಅವಳನ್ನು ಅಬಾರ್ಶನ್ ಮಾಡಿಸಿ ತಮ್ಮ ಸಂಪ್ರದಾಯಸ್ತ ಮನೆತನದ ಗೌರವವನ್ನು ಕಾಪಾಡಿಕೊಂಡಿರುತ್ತಾರೆ. ಮಗಳೆಂಬ ಮಮಕಾರವು ಇಡೀ ಕುಟುಂಬವನ್ನು ಸಂಕಷ್ಟಕ್ಕೆ ಸಿಕ್ಕಿಸುತ್ತದೆ. ಇಂಥವಳ ಬದುಕು ದುರಂತದಲ್ಲೇ ಅಂತ್ಯವಾಗುತ್ತದೆ. ಇದರಿಂದ ನೆಮ್ಮದಿ ಯಾರಿಗೆ ತಾನೇ ಸಿಕ್ಕಿತು? ಅವಳ ಕುಟುಂಬಕ್ಕೊ ಅಥವಾ ನಾಗಮಣಿಯ ಆತ್ಮಕ್ಕೋ? ಕತೆಯ ಅಂತ್ಯ ನಮ್ಮನ್ನು ಕಾಡದೇ ಇರದು.

`ಪ್ರೀತಿಯ ಕಡಲಿಗೆ ಹಂಬಲಿಸಿದೆ ಮನ’ ಕತೆಯಲ್ಲಿ ರಾಜಪ್ಪನು ನಗರ ಪ್ರದೇಶದಲ್ಲಿ ಒಂಟಿತನದ ಬದುಕನ್ನು ಸ್ವೀಕರಿಸಿ, ದೂರದಲ್ಲಿರುವ ಮಕ್ಕಳನ್ನು ಆಗಾಗ ನೆನಪಿಸಿಕೊಳ್ಳುತ್ತಾ ಕಳೆದುಕೊಂಡ ಕೌಟುಂಬಿಕ ಪ್ರೀತಿ ಕಾಳಜಿಯನ್ನು ಮತ್ತೆ ಅನುಭವಿಸುವ ತವಕದಲ್ಲಿ ಕಾದಿರುವ ಜೀವಗಳಲ್ಲಿ ಒಬ್ಬನಾಗಿದ್ದವ. ಪ್ರೀತಿಗೆ ನಿವೃತ್ತಿಯಿಲ್ಲ ಅನ್ನುವ ಮಾತಿನಂತೆ ರಾಜಪ್ಪ ತನ್ನ ಸುತ್ತಲಿನ ಜಗತ್ತನ್ನು ನೋಡುತ್ತಾ, ಹಲವು ಪಾತ್ರಗಳು ಆತನ ಬದುಕನ್ನು ಪ್ರವೇಶಿಸಿ ಹೊಸ ಜೀವನದತ್ತ ಆತನನ್ನು ಕೊಂಡೊಯ್ಯುವ ಸಂದರ್ಭ ನಿರ್ಮಾಣವಾಗುತ್ತದೆ. ಜೀವನದಲ್ಲಿ ಒಂದು ರೀತಿಯ ಹೊಂಗನಸು ಮೂಡುತ್ತದೆ. ಇಂದಿನ ವಾಸ್ತವ ಪ್ರಪಂಚಕ್ಕೆ ತುಂಬಾ ಹತ್ತಿರವಾದ ಕತೆಯಾಗಿದೆ.

ಹಲವು ತಲೆಮಾರುಗಳ ನಡುವಿನ ಸಂಬAಧಗಳ ಎಳೆಯನ್ನಿಟ್ಟುಕೊಂಡು ಬರೆಯಲಾದ `ಜೀವನದಿ’ ಕತೆಯು ಮಾನವ ಸಹಜ ಗುಣಗಳು ರಕ್ತಗತವಾಗಿ ನಮ್ಮೊಂದಿಗೆ ಬಂದು, ಆ ನಂತರ ವ್ಯಕ್ತಿ ಬೆಳೆದ ಪರಿಸರ ಮತ್ತು ಸುತ್ತಲಿನ ಜನರ ಭಾವನೆಗಳಿಂದ ತಲೆಮಾರಿನ ಕುಡಿಗಳಲ್ಲಿನ ಜೀವನ ಮೌಲ್ಯವನ್ನು ಹಾಳುಮಾಡಿಬಿಡುತ್ತದೆ. ಈ ಕತೆಯಲ್ಲಿ ಎರಡು ಧರ್ಮಗಳ ಭಾವನೆಗಳ ನಡುವಿನ ಸಂಘರ್ಷವನ್ನು ತೋರಿಸಿದರೂ ಮಾನವೀಯತೆಯನ್ನು ಹೊಂದಿದಂತಹ ಲತೀಫನಂತವರು ತಮ್ಮ ಸಹಜ ಸದ್ಗುಣಗಳಿಂದಲೇ ಎಲ್ಲರಿಗೂ ಬೇಕಾದವನಾಗಿ ಎರಡು ಧರ್ಮದವರ ನಡುವೆ ಸಾಮರಸ್ಯದ ಸೇತುವೆಯಾಗಿರುತ್ತಾರೆ. ಆದರೆ ಆತನ ಮಕ್ಕಳು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದರಿAದ ಅಲ್ಲಿಯ ಪ್ರಕೃತಿ ಸಹಜ ಗುಣಗಳನ್ನು ಅವರು ಹೊಂದಿರುತ್ತಾರೆ. ಪ್ರೀತಿ, ಕಾಮ, ಮೋಸ ವಂಚನೆ ವ್ಯವಹಾರದ ಭಾಗವಾದಾಗ, ಅದು ಸುಂದರ ಹಳೆಯ ಸಂಬಂಧವು ವೈಷಮ್ಯಕ್ಕೆ ತಿರುಗಲು ಕಾರಣವಾಗುತ್ತದೆ. ಲತೀಫನಿಗೆ ಅಂಟದ ಧರ್ಮದ ಹೆಸರು ಅವನ ಮಗ ಮಾಡಿದ ಕೃತ್ಯಕ್ಕೆ ಅಂಟಿಕೊಳ್ಳುತ್ತದೆ. ಕತೆಯಲ್ಲಿನ ಜ್ವಾಲಮ್ಮ, ಧರ್ಮಣ್ಣ ಹಾಗೂ ಲತೀಫ ಪಾತ್ರಗಳು ಮನದಲ್ಲಿ ಉಳಿಯುತ್ತವೆ. ಭೂತ ಮತ್ತು ವರ್ತಮಾನದ ಎರಡು ಘಟ್ಟಗಳ ನಡುವೆ ಈ ಕತೆ ಸಾಗುತ್ತದೆ.

ಈ ಸಂಕಲನಕ್ಕೆ ಶೀರ್ಷಿಕೆಯಾದ ಕತೆಯ ಹೆಸರು `ಉರಿವ ಬೆಂಕಿಗೆ ಮೈಯೆಲ್ಲಾ ಬಾಯಿ’ ಉಡುಪಿ-ಕುಂದಾಪುರ ಪ್ರಾಂತ್ಯದ ಕತೆಯಾಗಿದೆ. ನಾಗಮಂಡಲವೆAಬ ಸಂಪ್ರದಾಯದ ಆಚರಣೆಯ ಜೊತೆಗೆ ನಮ್ಮ ಸಂಸ್ಕೃತಿಯಾಚೆಗಿನ ಸಾಂಸಾರಿಕ ಸಮಸ್ಯೆಗಳು, ಸ್ವೇಚ್ಛಾಚಾರದ ಬದುಕನ್ನು ಇಲ್ಲಿ ತೋರಿಸಲಾಗಿದೆ. ಇದು ಕೂಡ ಎರಡು ತಲೆಮಾರಿನ ನಡುವಿನ ಸಾಂಸ್ಕೃತಿಕ ಸಂಘರ್ಷವನ್ನು ಎತ್ತಿಹಿಡಿಯುತ್ತದೆ. ತನ್ನದಲ್ಲದ ಬದುಕನ್ನು ಹಿರಿಯರು, ಕುಟುಂಬದ ಕಟ್ಟುಪಾಡು ಎಂಬAತೆ ಒತ್ತಾಯವಾಗಿ ಹೇರಿದಾಗ ಅದನ್ನು ಬಳುವಳಿಯಾಗಿ ಪಡೆದವನ ಪಾಡು ಎಂತಹದ್ದು? ನಾಗಮಂಡಲ ಆಚರಣೆಯಲ್ಲಿ ನಾಗಕನ್ನಿಕೆಯಾಗಿ ಪರಕಾಯ ಪ್ರವೇಶ ಮಾಡುತ್ತಾ ಬದುಕಿನಲ್ಲಿ ತಾನೊಬ್ಬ ಗಂಡಸು ಎಂಬ ಭಾವನೆಯನ್ನೇ ಪಾತ್ರಧಾರಿಯಾದ ನಾಣಿ ಕಳೆದುಕೊಳ್ಳುತ್ತಾನೆ. ಇದರಿಂದ ಆತನ ದಾಂಪತ್ಯ ಸುಖದ ಹಾದಿ ತಪ್ಪುವುದಲ್ಲದೇ ಕೈಹಿಡಿದ ಮಡದಿ ಗಾಯತ್ರಿ, ಗಂಡನಿAದ ಸಿಗಬೇಕಾದ ಸುಖ ಸಿಗದೇ ನಲಗುತ್ತಾಳೆ. ಗಂಡನ ದೌರ್ಬಲ್ಯವನ್ನು ಅವಮಾನಿಸದೇ, ಕೊಂಕಿಸದೇ ಯಾರೊಂದಿಗೂ ಹೇಳಿಕೊಳ್ಳಲಾಗದೇ ತನ್ನೊಳಗೆ ನುಂಗಿಕೊಳ್ಳುವ ಸ್ವಭಾವ ಅವಳದ್ದು. ಸಾಮ ಅವಳ ಜೀವನದ ಹೊಂಗನಸಿನAತೆ ಬಂದರೂ ಅದು ಶಾಶ್ವತ ಸಂಬAಧವಾಗದೇ ಅವಳ ಆಸೆ ಕನಸುಗಳು ಈಡೇರದೇ ಹಾಗೆಯೇ ಮಣ್ಣು ಸೇರುತ್ತವೆ. ಈ ಪಾತ್ರ ತುಂಬಾ ಆಪ್ತವೆನಿಸುತ್ತದೆ. ಶಿವರಾಮ ಕಾರಂತರು ಸೃಷ್ಟಿಸಿದ ಚೋಮನ ಪಾತ್ರದಂತೆಯೇ, ಈ ಕತೆಯ ಸಾಮನು ಕೂಡ ಸಮಯದ ಬಲಿಪಶುಗಳಾಗಿ ಕಾಣುತ್ತಾರೆ. ಈ ಕತೆಯು ಸಂಕಲನದ ಮಹತ್ವವುಳ್ಳ ಕತೆಯಾಗಿದೆ. ಅಂತಹ ಸಾರ ಇದರಲ್ಲಿದೆ. ಮುಖ್ಯವಾಗಿ ನಾಗಮಂಡಲದAತಹ ಆಚರಣೆಯನ್ನು ಕತೆಯಲ್ಲಿ ಚಿತ್ರಿಸಿದ ರೀತಿ ಗಟ್ಟಿತನವನ್ನು ತೋರಿಸುತ್ತದೆ.

ಪ್ರಸ್ತುತ ಕಾಲಘಟ್ಟಕ್ಕೆ ಪೂರಕವೆಂಬAತಿರುವ ಕತೆಗಳಲ್ಲಿ `ಅಹಿಂಸೆ’ ಕೂಡ ಒಂದು. ಏರ್‌ಪೋರ್ಟ್ನಲ್ಲಿ ಸತೀಶ್ ಹಾಗೂ ಗುಜರಾತಿಯವನಾದ ಮೋಹನದಾಸ್ ಇಬ್ಬರೂ ಆಕಸ್ಮಿಕವಾಗಿ ಭೇಟಿಯಾಗುತ್ತಾರೆ. ಆರಂಭದ ಮಾತುಕತೆಗೆ ಇವರಿಬ್ಬರು ವಾಸಿಸುವ ಸ್ಥಳ ಒಂದೇ ಆಗಿರುವುದು ಕಾರಣವಾದರೂ, ಇಬ್ಬರ ತಾತ್ವಿಕ ವಿಚಾರ ಹಾಗೂ ಹಿನ್ನೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದುದರಿಂದ ಅದು ಸಂಘರ್ಷಕ್ಕೆ ಈಡುಮಾಡಿದರೂ ಅದನ್ನು ತೋರಿಸಿಕೊಳ್ಳದೇ ಇವರ ಪ್ರಯಾಣ ಮುಂದುವರಿಯುತ್ತದೆ. ಮೋಹನದಾಸ ಮೌಖಿಕವಾಗಿ ಅಹಿಂಸೆಯ ಪ್ರತಿಪಾದನೆ ಮಾಡಿದರೂ, ಅಂತರAಗದಲ್ಲಿ ಹಿಂಸೆಯ ಮಾರ್ಗದಲ್ಲೇ ಸಾಗಿರುತ್ತಾನೆ. ಇದು ಸತೀಶನಿಗೆ ಅರಿವಾದರೂ ಅದನ್ನು ಹೇಳದೇ ಮೌನಿಯಾಗುತ್ತಾನೆ. ಕತೆಯ ಆರಂಭದಲ್ಲಿ ಸತೀಶನಿಗೆ ಬರುವ ಈಮೇಲ್ ಹಾಗೂ ಕೊನೆಯಲ್ಲಿ ಮೋಹನದಾಸನಿಗೆ ಬರುವ ಸೋನುವಿನ ಸೂಸೈಡ್ ಕಾಲ್‌ಗಳ ನಡುವಿನ ಈ ಕಥಾಹಂದರ ಮನೋಜ್ಞವಾಗಿದೆ.

ನಾರಾಯಣ ಶಾಸ್ತ್ರಿ ಮತ್ತು ಬೆಕ್ಕು ಹಾಗೂ ಸಂಧ್ಯೆಯ ಬೆಳಕು-ಈ ಎರಡು ಕತೆಗಳು ಎರಡು ಅನುಬಂಧಗಳ ನಡುವಿನ ಒಂಟಿಪಯಣದಲ್ಲಿ ಸಿಲುಕುವ ವಿಚಾರವನ್ನು ಹೊಂದಿದಂತಹ ಕತೆಗಳಾಗಿವೆ. ನಾರಾಯಣ ಶಾಸ್ತ್ರಿ ಕತೆಯಲ್ಲಿ ಮೇಲ್ವರ್ಗದವರು ಕೆಳಸ್ತರದ ಹೆಂಗಸರ ಜೊತೆ ಸಹಮತದ ಸಂಬಂಧ/ಅನೈತಿಕ ಸಂಬಂಧವನ್ನು ಹೊಂದಿದ್ದರ ಕುರಿತಾಗಿದೆ. ನಾರಾಯಣ ಶಾಸ್ತ್ರಿಗಳು ಹೊಂದಿದ್ದ ಈ ಸಂಬಂಧವನ್ನು ಆತ ಕಾಲವಾಗುವರೆಗೂ ವಿರೋಧಿಸುವ ಹೆಂಡತಿ ಮತ್ತು ಮಗ, ಅನಿರೀಕ್ಷಿತವಾಗಿ ಮನೆಗೆ ಬರುವ ಬೆಕ್ಕಿನ ಮೂಲಕ ಶಾಸ್ತ್ರಿಗಳು ಮತ್ತು ಅವರು ಇಟ್ಟುಕೊಂಡಿದ್ದ ಲಕ್ಷ್ಮಿಯನ್ನು ನೆನಪು ಮಾಡಿಕೊಳ್ಳುತ್ತಾರೆ. ಇದರ ಮೂಲಕವೇ ಕತೆಯ ಹಿನ್ನೆಲೆಯು ತೆರೆಯುತ್ತದೆ.

`ಸಂಧ್ಯೆಯ ಬೆಳಕು’ ಕತೆಯಲ್ಲಿ ಪಾತ್ರಧಾರಿ ಅವಿನಾಶನದ್ದು ಒಂದು ರೀತಿಯ ಗೊಂದಲದ ಬದುಕು. ಜೀವನದಲ್ಲಿ ಸಂತಸವಿಲ್ಲದೇ ಮಾನಸಿಕವಾಗಿ ಕೊರಗುವ ಸ್ಥಿತಿ ಅವನದ್ದು. ಇದೊಂದು ಕೌಟುಂಬಿಕ ಸಂಘರ್ಷದ ನವಿರಾದ ಕತೆಯಾಗಿದೆ.
`ಮೈಮನದ ಸುಳಿಯಲ್ಲಿ ಕತೆಯ ದಾಂಪತ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಅಸೂಹೆ, ಅನುಮಾನವು ಯಾವ ರೀತಿಯಲ್ಲಿ ಸಂಸಾರದ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ. ಅನ್ಯೋನ್ಯ ದಾಂಪತ್ಯವು ಮುಂದೆ ಯಾವ ರೀತಿಯಲ್ಲಿ ಸಾಗುತ್ತದೆ ಅನ್ನುವುದರ ಕುರಿತಾಗಿದೆ. ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಸಾಮಾನ್ಯವಾಗಿ ನಡೆಯುವ ಕತೆ ಮತ್ತು ವಾಸ್ತವಕ್ಕೆ ಹತ್ತಿರವಾಗಿದೆ.

ಸಮಾಜದ ಅತ್ಯಂತ ಕೆಳವರ್ಗದವರ ಕೌಟುಂಬಿಕ ಕತೆಗಳು ಒಂದು ಕಡೆಯಾದರೆ `ನೀ ಇಲ್ಲದೇ ನನಗೇನಿದೆ’ ಕತೆ ಸಮಾಜದ ಉನ್ನತ ಸ್ತರದಲ್ಲಿ ವಾಸಿಸುವವರ ಕೌಟುಂಬಿಕ ಕತೆಯಾಗಿದೆ. ಮಕ್ಕಳ ಭವಿಷ್ಯ ಹಾಗೂ ಅವರ ಸುಂದರ ಬದುಕಿಗಾಗಿ ಕಷ್ಟಪಡುವ ತಂದೆತಾಯಿಗಳು ಮಕ್ಕಳು ತಮ್ಮ ಕಣ್ಣಮುಂದೆ ಬೆಳೆದಂತೆಲ್ಲಾ ಅವರ ಕುರಿತ ಆಸೆ ಕನಸುಗಳು ಹಾಗೆ ಬೆಳೆಯುತ್ತಲೇ ಇರುತ್ತವೆ. ಮಕ್ಕಳು ಚೆನ್ನಾಗಿ ಓದುತ್ತಾರೆ, ತಮ್ಮ ಕಾಲ ಮೇಲೆ ನಿಂತುಕೊಳ್ಳುತ್ತಾರೆ, ತಾವು ನೋಡಿದ ಒಳ್ಳೆಯ ಸಂಬಂಧದಲ್ಲಿ ಮದುವೆಯಾಗುತ್ತಾರೆ, ಕಣ್ಣ ಮುಂದೆಯೇ ಮಕ್ಕಳು-ಮರಿ ಮಾಡಿಕೊಂಡು ಅವರು ಚೆನ್ನಾಗಿದ್ದು, ನಮ್ಮನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಕನಸು ಕಾಣುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳ ಆಸೆ ಕನಸು, ಅವರ ಅಭಿರುಚಿ, ಜೀವನದ ಗುರಿಗಳು ಪಾಲಕರಿಗೆ ಅರ್ಥವಾಗದೇ ಇದ್ದಾಗ ಇಲ್ಲವೇ ತದ್ವಿರುದ್ಧವಿದ್ದಾಗ ಅವರನ್ನು ಸಾಕುವಲ್ಲಿ ತಾವು ಎಡವಿದೆಯೇ ಎಂಬ ದ್ವಂದ್ವ ಮತ್ತು ಸಂಘರ್ಷದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಇಂತಹ ಹಿನ್ನೆಲೆಯಲ್ಲಿ ಈ ಕತೆ ಸಾಗುತ್ತದೆ. ಇದು ಸುಖಾಂತ್ಯವಾದರೂ ಹಲವು ಪ್ರಶ್ನೋತ್ತರಗಳನ್ನು ಮನದಲ್ಲಿ ಮೂಡಿಸುತ್ತದೆ.
`ಚಪ್ಪಲಿಗೆ ಅಂಟಿದ ಡಾಂಬರು’ ಕತೆಯು ಬೆಂಗಳೂರಿನ ಸ್ಲಂ ಜಗತ್ತಿನ ಅನಾವರಣವನ್ನು ಮಾಡುತ್ತದೆ. ಅಲ್ಲಿಗೆ ಬಂದವರ ಹಿನ್ನೆಲೆ, ಅಲ್ಲಿನ ಕಷ್ಟನಷ್ಟ ಬಡತನ, ಹೋರಾಟ, ಗಂಡಸಿನ ದೌರ್ಜನ್ಯ, ಸಮಯದ ಬಲಿಪಶುವಾಗುವುದು, ಹೆಂಗಸರು ಪಡುವ ಪಾಡು ಎಲ್ಲವೂ ನರಸಿ ಮತ್ತು ಲಕುಮಿ ಪಾತ್ರಗಳ ಮೂಲಕ ಅನಾವರಣಗೊಳ್ಳುತ್ತದೆ. ಹೆಣ್ಣಿನ ಬಾಳು ದುರಂತವೇ ಅಥವಾ ಅದು ಅವಳ ಹೋರಾಟಕ್ಕೆ ಸಿಕ್ಕ ವೇದಿಕೆಯೇ ಎಂಬ ಪ್ರಶ್ನೆಯನ್ನು ಈ ಕತೆ ಮನದಲ್ಲಿ ಮೂಡಿಸುತ್ತದೆ. ಈ ಕತೆಯಲ್ಲಿ ಪ್ರಸ್ತುತ ಕೆಟ್ಟ ರಾಜಕಾರಣವನ್ನು ಅತ್ಯಂತ ವಿಡಂಬನೆಯಿAದ ಲೇಖಕಿ ತಿಳಿಸಿರುವುದು ಮುಂದಿನ ತಲೆಮಾರಿನವರಿಗೆ ಈ ಕತೆ ಇಂದಿನ ರಾಜಕೀಯದ ಕುರಿತಾದ ಒಂದು ದಾಖಲಾತಿಯೇ ಸರಿ.

ಒಟ್ಟಾರೆಯಾಗಿ ಈ ಕೃತಿಯ ಕತೆಗಳು ಹಲವು ತಲೆಮಾರುಗಳು ಹಾಗೂ ಜಾಯಮಾನಗಳ ನಡುವಿನ ಅನೇಕ ಸೂಕ್ಷ್ಮ /ಅತಿಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಸುತ್ತವೆ. ಪಾತ್ರಗಳ ಯೋಚನೆ, ಭಾವನೆ, ಸಾಂಸ್ಕೃತಿಕ, ಭಾವನಾತ್ಮಕ ಚಿಂತನೆ ಎಲ್ಲವೂ ಕತೆಗಳ ಸಾರವನ್ನು ಅತ್ಯಂತ ಆಳವಾಗಿ ತಿಳಿಸುತ್ತವೆ. ಈ ಸಂಕಲನದ ಹೆಚ್ಚಿನ ಕತೆಗಳು ಆರಂಭದಲ್ಲಿ ನಗರ ಕೇಂದ್ರಿಕೃತವೆಂಬಂತೆ ನಿರೂಪಣೆಯಾದರೂ, ಕತೆಯ ಓಘ ಸಾಗುತ್ತಾ ಹೋದಂತೆ ಪಾತ್ರಗಳ ಹಿನ್ನೆಲೆಯು ಕವಲು ಕವಲಾಗಿ ಒಡೆಯುತ್ತಾ ಹಲವು ಮಗ್ಗಲುಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ಅಂತ್ಯದಲ್ಲಿ ಕತೆಗಳು ಬಹುವಿಚಾರಗಳೊಂದಿಗೆ ಕೇಂದ್ರಿಕೃತವೆಂಬಂತೆ ನಮಗೆ ಕಾಣಿಸುತ್ತವೆ. ಇದರಲ್ಲಿ ಜಾತಿ, ಸಮುದಾಯ, ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳನ್ನು ಲೇಖಕಿ ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿರುವುದು ವಿಶೇಷ. ಪ್ರತಿ ಪಾತ್ರಗಳ ಸಂವೇದನೆ, ಅಂತರಾಳವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಈ ಸಂಕಲನದ ಇನ್ನೊಂದು ವಿಚಾರವೆಂದರೆ, ಇಲ್ಲಿನ ಎಲ್ಲ ಕತೆಗಳು ಕರ್ನಾಟಕದ ಒಂದೊAದು ಪ್ರಾಂತ್ಯದ ಕತೆಗಳಾಗಿದ್ದು, ಆಯಾ ಕತೆಗಳು ಅವರವರ ಭಾಷೆಯಲ್ಲೇ ಅನುಸಂಧಾನ ಮಾಡುತ್ತವೆ. ಹಾಗಾಗಿ ಕತೆಗಳು ಅಲ್ಲಿಯ ಕತೆಗಳಾಗಿ ಅಲ್ಲಿಯ ನೈಜ ಪಾತ್ರಗಳೇ ಎಂಬಂತೆ ಚಿತ್ರಿಸಲಾಗಿದೆ. ತುಮಕೂರು, ಮಂಡ್ಯ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಕುಂದಾಪುರ-ದಕ್ಷಿಣ ಕನ್ನಡ ಭಾಷೆಯ ಸೊಗಡು, ಆಚಾರ ವಿಚಾರಗಳು ಆ ಕತೆಗಳಲ್ಲಿ ಕಾಣಸಿಗುತ್ತದೆ. ಆಯಾ ಪ್ರಾಂತ್ಯದ ಕತೆಯನ್ನು ಆಯ್ದುಕೊಳ್ಳುವಾಗ ಅಲ್ಲಿಯ ಭಾಷೆಯನ್ನೇ ಲೇಖಕಿ ಸಮರ್ಥವಾಗಿ ಬಳಸಿಕೊಂಡ ರೀತಿ ಮೆಚ್ಚುವಂತಹದ್ದು. ಕಥನ ಸಂವಿಧಾನವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ಕತೆಗಳ ಗುಣಮಟ್ಟವನ್ನು ಉನ್ನತಕ್ಕೇರಿಸಿರುವುದು ಅವರ ವೈಶಿಷ್ಟತೆಯಾಗಿದೆ. ಇದು ಲೇಖಕಿಯ ಬರವಣಿಗೆಯ ಕೌಶಲ್ಯವೂ ಕೂಡ ಹೌದು. ಲೇಖಕಿಯು ಸ್ತ್ರೀ ಪ್ರಧಾನ ವಿಚಾರ ಹಾಗೂ ಅವರನ್ನೇ ಮುಖ್ಯ ಕೇಂದ್ರಿಕೃತವಾಗಿಟ್ಟುಕೊಂಡು ಕತೆಗಳನ್ನು ರಚಿಸಿದ್ದರಿಂದ ಚಲಮ್ಮ, ನಾಗಮಣಿ, ಜ್ವಾಲಮ್ಮ, ಗಾಯತ್ರಿ, ಲಕ್ಷ್ಮಿ, ಹನುಮಿ, ಸಹನಾ, ನರಸಿ ಮತ್ತು ಲಕುಮಿ ಎಲ್ಲರೂ ಕೌಟುಂಬಿಕ ನೆಲೆಯಲ್ಲಿ ಸ್ತ್ರೀ ಹೋರಾಟದ ದಿಟ್ಟ ಮಹಿಳೆಯರಾಗಿ ನಮಗೆ ಕಾಣುತ್ತಾರೆ.

ಗಂಡಸಿನ ದೌರ್ಜನ್ಯವನ್ನು ಅನುಭವಿಸುವ, ಅದರ ವಿರುದ್ಧ ಹೋರಾಡುವ ಈ ಪಾತ್ರಗಳು ನಮ್ಮ ಸುತ್ತಲೂ ಸಹಜವಾಗಿ ಕಾಣುತ್ತಲೇ ಇರುತ್ತಾರೆ. ಗುರುತಿಸುವ ಕಣ್ಣುಗಳು ಕುರುಡಾಗಿವೆಯಷ್ಟೇ! ಸುತ್ತಲಿನ ಇಂತಹ ಸಾಮಾನ್ಯ ವ್ಯಕ್ತಿಗಳು ಕತೆಗಳ ಮೂಲಕ ಅಸಾಮಾನ್ಯ ಪಾತ್ರಗಳಾಗಿ ನಮಗೆ ಕಾಣುತ್ತಾರೆ. ಬರವಣಿಗೆಯ ಮೂಲಕ ಇವರನ್ನು ಮೇಲ್ಮಟ್ಟಕ್ಕೆ ಏರಿಸುವ ಕೈಗಳು ಮಾತ್ರ ನಿಗುಮ್ಮನಾಗಿರುತ್ತವೆ. ಇಂತಹ ಹಲವು ವೈಶಿಷ್ಟತೆಗಳೊಂದಿಗೆ ಈ ಸಂಕಲನವು ಕನ್ನಡ ಕಥಾಲೋಕದ ಓದುಗರ ಗಮನ ಸೆಳೆಯಲಿದೆ. ಅಂತಹ ಗಟ್ಟಿತನ ಈ ಸಂಕಲನದಲ್ಲಿದೆ. ಇಂತಹ ವಿಶಿಷ್ಟ ಕೃತಿಯನ್ನು ರಚಿಸಿದ ಡಾ. ಪದ್ಮಿನಿ ನಾಗರಾಜು ಅವರು ಅಭಿನಂದನಾರ್ಹರು. ಈ ಕೃತಿಯು ಹೆಚ್ಚಿನ ಓದುಗರು ಮತ್ತು ವಿಮರ್ಶಕರ ಗಮನ ಸೆಳೆಯಲಿ ಎಂಬುದು ಕೂಡ ನಮ್ಮ ಹಾರೈಕೆ.

 

‍ಲೇಖಕರು avadhi

February 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: