ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಟ್ಸ್ ಮತ್ತು ನಾನು..

ಕವಿ, ನಾಟಕಕಾರ ಪ್ರಕಾಶ್ ಕೊಡಗನೂರ್ ರವರ ಎರಡನೆಯ ಕವನ ಸಂಕಲನ ‘ಏಟ್ಸ್ ಮತ್ತು ನಾನು’ ಕೃತಿಗೆ

ಕವಿ ಸತೀಶ್ ಕುಲಕರ್ಣಿ ಅವರು ಬರೆದ ಬೆನ್ನುಡಿ ಇಲ್ಲಿದೆ

ಸತೀಶ ಕುಲಕರ್ಣಿ / ಹಾವೇರಿ

ಕಾವ್ಯ ಮತ್ತು ನಾಟಕ ಸಾಹಿತ್ಯ ರಚನೆಯಲ್ಲಿ ಈಗಾಗಲೇ ಸಾಕಷ್ಟು ಪಳಗಿರುವ ಕವಿ ನಾಟಕಕಾರ ಪ್ರಕಾಶ್ ಕೊಡಗನೂರ್ ರವರ ಎರಡನೆಯ ಕವನ ಸಂಕಲನ ‘ಏಟ್ಸ್ ಮತ್ತು ನಾನು’ ಇಲ್ಲಿದೆ. ತಲ್ಲಣಗೊಂಡ ಭಗ್ನಪ್ರೇಮದ ಮೂಲಕ ಸಮಾಜ ವ್ಯವಸ್ಥೆಯ ನಾನಾ ಮುಖಗಳನ್ನು ಪ್ರಶ್ನಿಸುವ, ಒಂದರ್ಥದ ಪ್ರತಿಭಟನಾ ಕಾವ್ಯವಿದು. ಜೊತೆಗೆ ಸಹಜವಾಗಿ ನಮ್ಮ ಸುತ್ತಲು ಬದುಕುತ್ತಿರುವ ಸಾಮಾನ್ಯರ ಬದುಕಿನ ಚಿತ್ರಗಳೂ ಇಲ್ಲಿವೆ. ಸರಳ- ಸಹವಾಗಿ ಕವಿತೆಯೊಂದು ಅರಳಿನಿಂತಾಗ ಮುದ ಕೊಡುವುದು ಕಾವ್ಯದಿನ್ನೊಂದು ಪದರೂ ಇಲ್ಲಿದೆ.

ಹಾಗೆ ನೋಡಿದರೆ, ಕಾವ್ಯ-ನಾಟಕಗಳೆರಡರಲ್ಲೂ ಸಮಹಿಡಿತ ಲೇಖಕ ಪ್ರಕಾಶರಿಗಿದೆ. ಕಾವ್ಯದೊಳಗಿನ ನಾಟಕೀಯತೆ, ನಾಟಕದೊಳಗಿನ ಕಾವ್ಯದೆಳೆಗಳೂ ಇಲ್ಲಿ ಮಿಳಿತಗೊಂಡಿವೆ. ‘ಎರಡು ಹಳ್ಳಿಗಳ ನಡುವೆ’ ಕವನ ಸಂಕಲನ ಪ್ರಕಟವಾಗಿ ಒಂದೂವರೆ ದಶಕಗಳ ನಂತರ ‘ಏಟ್ಸ್ ಮತ್ತು ನಾನು’ ಸಂಕಲನ ಹೊರಬರುತ್ತಿದೆ. ಕವಿಗೆ ಕಾಡಿದ ಭಾವತೀವ್ರತೆಗಳು ಮತತು ಮಾಗಿದ ಸಂತೃಪ್ತಿಗಳೆರಡನ್ನೂ ಇಲ್ಲಿ ಕಾಣಬಹುದು. ‘Little Plays, A Secret Behind The Sacrifice, Kanglish Plays ಹಾಗೂ Role Palys’ ಹೀಗೆ, 4 ನಾಟಕ ಸಂಕಲನಗಳಲ್ಲಿ ಒಟ್ಟು 37 ನಾಟಕಗಳನ್ನು ಕೊಡಗನೂರ್ ರವರು ಬರೆದಿದ್ದಾರೆ. ಮಕ್ಕಳ ಮನೋಭೂಮಿಕೆ, ಕಥನ ರೂಪಾಂತರಗಳು ಹಾಗೂ ಸಮಾಕಾಲೀನ ಚಿತ್ರಗಳನ್ನು ಮರುಸೃಷ್ಟಿಸಿದ ಇವರ ನಾಟಕಗಳ ರೀತಿ ಅನನ್ಯವಾದುದು.

ಪ್ರಕಾಶ್ ಕೊಡಗನೂರ್ ರವರ ಅನೇಕ ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇಲ್ಲಿಯ ಯಾವುದೇ ಒಂದು ಕವಿತೆಯನ್ನು ಓದಿದರೂ ಅದರ ಕುದಿತದೆದೆಬಡಿತ ಓದುಗನಿಗೆ ಕೇಳಿಸದೇ ಇರಲಾರದು. ಕಸಿದ ಮತ್ತು ಹಸಿದ ಪ್ರೇಮದ ನಾನಾ ಮುಖಗಳಿಲ್ಲಿವೆ. ನಿವೇದಿಸುವ, ಪ್ರಶ್ನಿಸುವ ಹಾಗೂ ಅತ್ಯಂತ ಸೂಕ್ಷ್ಮವಾಗಿ ಪರಿತಪಿಸುವ ಭಾವದ ಕವಿತೆಗಳಿವು. ಸುಮಾರು ಒಂದೂವರೆ ದಶಕದ ಆಯುಸ್ಸಿನ ಕಾಲಾಂತರದಲ್ಲಿ ಕವಿ ಕ್ರಮೇಣ ಮಾಗಿ, ವೈಯಕ್ತಿಕ ನೆಲೆಗಟ್ಟಿನಿಂದ ಸಾಮಾಜಿಕ ಹರುವಿನಲ್ಲಿ ಹರಳುಗಟ್ಟಿದ ರೂಪಾಂತರ ಕೂಡ ಒಡೆದೆದ್ದು ಕಾಣುತ್ತದೆ.

ಭಟ್ರ ಬಜ್ಜಿ, ಆಟೋ ಚಂದ್ರಣ್ಣ, ಕಟಿಂಗ್ ಎಂಕಣ್ಣ, ಟ್ರಾಕ್ಟರ್ ಮಲ್ಲಣ್ಣ, ಕಲ್ಪನ ಮತ್ತು ವಾಸ್ತವ, ರವಿಯೆಂದರೆ ರವಿ, ಫಾಸ್ಟರ್ ಮುಲ್ಲಾ ಮತ್ತು ಅಂಬೇಡ್ಕರ್ ವಾದಿಗಳು- ಇವೆಲ್ಲ ಕವಿ ಪ್ರಕಾಶ ಕೊಡಗನೂರರ ಕಾವ್ಯ ಸತ್ವದ ಸಾಕ್ಷಿಗಳು. ನಮ್ಮ ಸುತ್ತ ಬದುಕಿರುವ ಸಾಮಾನ್ಯರ ಮೂಲಕವೇ ಸಹಜ ಕಾವ್ಯ ಕಟ್ಟಿದ ರೀತಿ ತುಂಬ ಅಪರೂಪದ್ದು.

Again, ‘Educate, Organise and Agitate’ ಎಂಬ ಸಮಾಜ ಪ್ರೀತಿಯ ಮೂಲಕ ‘Who is right ? What is right ? or Which is right ?’ ಎಂಬ ಕವಲು ದಾರಿಯ ಧೋರಣೆ ಇಲ್ಲಿದೆ. ಪ್ರತಿ ಕಾವ್ಯ ಸಾಂತ್ವನ ನೀಡಬೇಕು ಎಂಬ ಸತ್ಯದತ್ತ ‘ಏಟ್ಸ್ ಮತ್ತು ನಾನು’ ಸಂಕಲನ ಮುಖಮಾಡಿ ನಿಂತಿದೆ. ಹೇಳಿದರೂ ಹೇಳದಂತಿರದ, ಹೇಳದಂತಿದ್ದರು ಕೇಳಿಸಿಕೊಳ್ಳುವ ಗುಣವುಳ್ಳ ಕಾವ್ಯ ಮುಂಬರುವ ದಿನಗಳಲ್ಲಿ ಬರುವಂತಾಗಲಿ.

 

‍ಲೇಖಕರು avadhi

31 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading