ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗೌರಿ ಹೊಳೆಬಾಗಿಲು ನೀರು ಕುಡಿದು ಬೆಳೆದವಳು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದರು.

33

ಹುಬ್ಬಳ್ಳಿಯ ವಿನಾಯಕ ಶರ್ಮರ ಮನೆಯಲ್ಲಿ ಅದ್ದೂರಿಯ ವಧೂ ಗೃಹಪ್ರವೇಶ ಸಮಾರಂಭ. ಅವರ ಕುಟುಂಬದವರು, ಬಂಧು ಬಳಗ, ಊರ ಗಣ್ಯ ಮಹನೀಯರು, ವಿಷ್ಣುವಿನ ಗೆಳೆಯರು ಹೀಗೆ ಒಳ ಹೊರ ಚಪ್ಪರ ತುಂಬಿ ಹೋಗಿತ್ತು. ವಿನಾಯಕ ಶರ್ಮರು, ಅದಿತಿ ದೇವಿ ಅತಿಥಿಗಳನ್ನು ಖುದ್ದಾಗಿ ವಿಚಾರಿಸುತ್ತ ಸುಬ್ಬಪ್ಪಯ್ಯ, ರಾಮಪ್ಪಯ್ಯನವರಿಗೂ ಪರಿಚಯಿಸುತ್ತಿದ್ದರು. ಸುಸಂಸ್ಕೃತ ಕುಟುಂಬ. ಮಾತಿನಲ್ಲಿ ವಿನಯ, ಸಜ್ಜನಿಕೆ, ಸರಳತೆಯ ವಾತಾವರಣ. ಶೃಂಗರಿಸಿದ ಹೊರ ಚಪ್ಪರ, ಅಲಂಕಾರ ನೋಡಿದಷ್ಟೂ ಸಾಲದು.

ಗುಡಿಗಾರ ದೇವಣ್ಣನನ್ನೂ ಮೀರಿಸಿದ ಬಣ್ಣ ಬಣ್ಣದ ಅಲಂಕಾರ. ಅಲ್ಲಲ್ಲಿ ಹಗಲಿನ ಸೂರ್ಯನನ್ನೂ ನಾಚಿಸುವ ವಿದ್ಯುದ್ದೀಪದ ಬೆಳಕು. ಹೊಳೆಬಾಗಿಲಿನ ಅನೇಕರು ವಿದ್ಯುದ್ದೀಪ ನೋಡಿದ್ದು ಹುಬ್ಬಳ್ಳಿಯಲ್ಲೇ. ಬೀದಿ ಬೀದಿಯನ್ನು ಬೆಳಗುವ ಈ ದೀಪ ಶರ್ಮರ ಮನೆಯಲ್ಲೂ ಬೆಳಗುತ್ತಿದೆ ಪ್ರತಿ ಕೋಣೆಯಲ್ಲಿ. ಗೌರಿ ನಾಣಿ ದಂಗಾಗಿದ್ದಾರೆ. ಚಿಮಣಿ ದೀಪದಂತೆ ನಸು ಬೆಳಕಲ್ಲ. ಝಗಮಗಿಸುವ ಬೆಳಕು. ಅಲ್ಲೊಂದು ಬಟನ್ ಒತ್ತಿದರೆ ಮೇಲೆ ಮಾಡಿಗೆ ಇಳಿಬಿಟ್ಟ ದೀಪ ಝಗ್!

ಚಪ್ಪರದ ತುದಿಯಲ್ಲಿ ವಾದ್ಯಗಳ ಅಬ್ಬರ. ಇಂಗ್ಲೀಷ ಹಾಡಿಗೆ ರಾಗ ಹಾಕಿ ವಿವಿಧ ವಾದ್ಯಗಳನ್ನು ಬಾರಿಸುತ್ತಿದ್ದಾರೆ. ಕಿವಿಗೆ ಇಂಪೇ? ಇಲ್ಲ, ಕರ್ಕಶವಾಗಿ ಕೇಳುತ್ತಿದೆ. ಅವರ ಉಡುಪುಗಳೂ ಬ್ರಿಟಿಷ್‌ರ ಉಡುಪುಗಳ ತರಹವೇ. ಕೆಲವು ಬ್ರಿಟಿಷ್ ಅಧಿಕಾರಿಗಳೂ ಬಂದಿದ್ದಾರೆ. ವಿಲಾಯತಿ ಪಾನೀಯದ ವ್ಯವಸ್ಥೆಯಿದೆ. ಆಚೆ ಈಚೆ ಸಮವಸ್ತ್ರ ಧರಿಸಿದ ಯುವಕರು ಬಂದ ಗಣ್ಯರಿಗೆ ಪಾನೀಯ ಹಂಚುತ್ತಿದ್ದಾರೆ. ದೊಡ್ಡ ಮನುಷ್ಯರು! ಮುತೈದೆಯರಿಗೆ ಅರಸಿನ ಕುಂಕುಮ, ಹೂವು, ರವಕೆ ಖಣ ಕೊಡುವ, ನೆರೆದವರಿಗೆ ಸಿಹಿ ತಿಂಡಿ ಹಂಚುವ, ಅದು ತನ್ನಿ, ಇದು ತನ್ನಿ, ಇತ್ತ ಬನ್ನಿ, ನಮಸ್ತೆ, ಥ್ಯಾಂಕ್ಯೂ, ಇತ್ಯಾದಿ ಸ್ವರ ಶಬ್ಧಗಳು ವಾದ್ಯದ ಅಬ್ಬರದಲ್ಲಿ ಕಳೆದುಹೋಗುತ್ತಿವೆ.

ಏನೋ ಗಡಿಬಿಡಿ, ಉಲ್ಲಾಸದ ನಗು, ಹರ್ಷದ ಹೊನಲು. ಚಪ್ಪರದಲ್ಲಿ ಓಡಾಟ. ಶಾರದತ್ತೆಯ ಮನೆತುಂಬಿಸುವ ಕಾರ್ಯಕ್ರಮದ ನಂತರ ಹೊರ ಚಪ್ಪರದಲ್ಲಿ ಹಾಕಿದ ಸಿಂಹಾಸನದಂತೆ ಇರುವ ಖುರ್ಚಿಯಲ್ಲಿ ಮದುಮಕ್ಕಳನ್ನು ಕರೆ ತಂದು ಕುಳ್ಳಿರಿಸಲಾಯಿತು. ಆರತಕ್ಷತೆಯ ಹೊತ್ತು, ಗಣ್ಯರು ಆಶೀರ್ವದಿಸುವ ಕ್ಷಣಗಳು.

ಬಹಳ ಹೊತ್ತಿನಿಂದ ಶಾರದತ್ತೆ ಹಿಂದೆ ಕುಳಿತು ಕಾರ್ಯಕಲಾಪ ನೋಡುತ್ತಿದ್ದ ಗೌರಿ ಉದಾಸೀನದ ಆಕಳಿಕೆ ತೆಗೆದು ನಾಣಿಯನ್ನು ಹುಡುಕುತ್ತ ಚಪ್ಪರಕ್ಕೆ ಬಂದಳು. ನಾಣಿ ಅದಾವಾಗಲೋ ಚಪ್ಪರದ ದೀಪ ನೋಡಲು ಹೊರಗೆ ಹೋಗಿಯಾಗಿತ್ತು. ಅಲ್ಲಿ ಕಾಣಲಿಲ್ಲ. ಆ ಮನೆಗೆ ಮಹಡಿಯಿತ್ತು. ಅಲ್ಲಿಯೂ ನಾಲ್ಕು ಕೋಣೆಗಳಿದ್ದವು. ಹಿಂದಣ ರಾತ್ರೆ ಹೊಳೆಬಾಗಿಲಿನವರಿಗೆ ವಾಸದ ವ್ಯವಸ್ಥೆ ಆದದ್ದು ಅಲ್ಲಿಯೇ. ಮಹಡಿ ಏರಿ ತಮಗೆ ಕೊಟ್ಟ ಕೋಣೆಗೆ ಬಂದರೆ ಬಾಗಿಲಿಗೆ ಬೀಗ. ಅದರ ನೇರ ಎದುರು ಕೋಣೆ ಅರ್ಧ ತೆರೆದಿತ್ತು. ಹೋಗಿ ನೋಡಿದರೆ ಅದೊಂದು ಪುಸ್ತಕ ಭಂಡಾರದ ಕೋಣೆ.

ನಾಲ್ಕಾರು ಕನ್ನಡಿ ಕಪಾಟುಗಳ ತುಂಬ ಹೊಟ್ಟೆ ಬಿರಿದಂತೆ ಕನ್ನಡ ಇಂಗ್ಲೀಷ್, ಸಂಸ್ಕೃತ ಇನ್ನೂ ಬೇರೆ ಬೇರೆ ಭಾಷೆಗಳ ಪುಸ್ತಕಗಳು. ಕನ್ನಡ ಪುಸ್ತಕಗಳಲ್ಲಿ ಈಗಾಗಲೆ ಓದಿದ ಇಗ್ಗುತ್ತಪ್ಪನ ವಿವಾಹ ಪ್ರಸಂಗ, ವಿನೋದಿನಿ ಇದ್ದವು. ಬಂಗಾಲಿ ಅನುವಾದಿತ ದಪ್ಪ ಕೃತಿಗಳು, ಬಿಡಿಸಿ ನೋಡೋಣವೆಂದರೆ ಕಪಾಟಿಗೆ ಬೀಗ. ಒಂದು ಹಳೆಗನ್ನಡದ ಹಳೆ ಪುಸ್ತಕ, ಅರ್ಥವಾಗದ ಕಬ್ಬಿಣದ ಕಡಲೆಯೇ ಸರಿ. ಮೇಜಿನ ಮೇಲೆ ಸ್ವರಾಜ್ಯ, ದೀನಬಂಧು, ಸ್ವಾತಂತ್ರ್ಯವಾಣಿ, ಹರಿಜನ ಪತ್ರಿಕೆ ಇತ್ಯಾದಿ ಹಲವು ಕನ್ನಡ ಪತ್ರಿಕೆಗಳು.

ಹಾರುವ ಚಿಟ್ಟೆಯಂತೆ ಇವಳು ಕಪಾಟನ್ನು, ಪತ್ರಿಕೆಗಳನ್ನು ಮೆಲ್ಲನೆ ಸ್ಪರ್ಶಿಸಿದಳು. ಏನೋ ಪುಳಕ. ಇವತ್ತು ಸೇರಿದ ಜನರಲ್ಲಿ ಹಲವರು ವಿಮಾನ ಏರಿದ ನೇತಾಜಿ ಸುಭಾಷ ಚಂದ್ರ ಭೋಸರು ಕಾಣೆ ಆದರಂತೆ, ಗಾಂಧೀಜಿಯ ಅಹಿಂಸಾ ವ್ರತ, ಸತ್ಯಾಗ್ರಹದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ದೂರವಿಲ್ಲ, ಬ್ರಿಟಿಷ್‌ರು ಹಿಂದೂ ಮುಸ್ಲಿಂಭೇದ ಹುಟ್ಟಿಸಿ ವಿದ್ರೋಹಿ ಕೆಲಸ ಮಾಡಿಸಿ ಕತ್ತಿ ಮಸೆಯುತ್ತಿದ್ದಾರೆ ಹೀಗೆ ಸುದ್ದಿಯೇ ಸುದ್ದಿ. ಈ ಎಲ್ಲ ಸುದ್ದಿಗಳಿಗೆ ಹೊಳೆಬಾಗಿಲು ಮೌನ.

ಸುದ್ದಿ ಆ ಕುದ್ರು ತನಕ ತಲುಪಿದರೆ ತಾನೇ ಮಾತುಗಳು. ತಾನೂ ಇಲ್ಲಿರುವ ಎಲ್ಲ ಪುಸ್ತಕ, ಪತ್ರಿಕೆ ಓದಿಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು. ಹೇಗೆ? ಯಾವಾಗ? ಇಲ್ಲವಾದರೆ ಏನೂ ಅರಿಯದ ಗುಗ್ಗು, ಬಾವಿಯೊಳಗಿನ ಕಪ್ಪೆಯಂತೆ. ಇದೇ ಅಜ್ಞಾನ ಎನ್ನುವುದು. ತನ್ನ ಪ್ರತಿಭೆ ಧೂಳು ಹಿಡಕಟೆ ಆಗೂಕಾಗ ಎಂದಳಲ್ಲ ಚಿಕ್ಕಿ? ಕೆಳಗೆ ಚಪ್ಪರದಲ್ಲಿ ಗೃಹಪ್ರವೇಶದ ಶುಭಾರಂಭಕ್ಕೂ ತನಗೂ ಸಂಬಂಧ ಇಲ್ಲ ಎನ್ನುವಂತೆ ಗೌರಿ ಅಲ್ಲಿರುವ ಒಂದು ಕನ್ನಡ ಪತ್ರಿಕೆ ಕೈಗೆತ್ತಿಕೊಂಡಳು. ಪುಟ ತಿರುಗಿಸುತ್ತ…,…

ಅಷ್ಟು ಹೊತ್ತಿಗೆ ಇನ್ನೊಂದು ಕೋಣೆಯಿಂದ ಮಕ್ಕಳ ಕೇಕೆ, ಅಟ್ಟಹಾಸ ಕೆಳಗೆ ವಾದ್ಯವೃಂದದ ಅಬ್ಬರವನ್ನೂ ಮೀರಿಸಿ ಕೇಳಿಸಿತು. ಹೋ, ಏನಪ್ಪ ಇಷ್ಟು ಸಂತೋಷ? ಗೌರಿ ಕುತೂಹಲದಿಂದ ಆ ಕೋಣೆಗೆ ನಡೆದು ಬಾಗಿಲಲ್ಲಿ ಇಣುಕಿದರೆ ನಾಣಿಯದೇ ಪ್ರಾಯದ ಅಂಗಿ ಚಡ್ಡಿ ಹಾಕಿದ ಒಬ್ಬ ಸಣ್ಣ ಹುಡುಗನನ್ನು ನಾಲ್ಕಾರು ದೊಡ್ಡ ಮಕ್ಕಳು ಅಟ್ಟಾಡಿಸುತ್ತಿದ್ದಾರೆ.

ಒಬ್ಬನ ಕೈಯ್ಯಲ್ಲಿ ಬೆಳಗಿನ ಉಪಹಾರಕ್ಕೆ ಮಾಡಿದ ಸಿಹಿ, ಖಾರದ ತಿಂಡಿ ತುಂಬಿದ ತಟ್ಟೆ. ಅದನ್ನು ಹುಡುಗನ ಮುಂದೆ ಹಿಡಿಯುವುದು, ಅವನು ಆಸೆಯಿಂದ ತಟ್ಟೆಗೆ ಕೈ ಚಾಚುವಾಗ ಎಳೆದು ದೂರ ಸರಿದು ಎಲ್ಲರೂ ಚಪ್ಪಾಳೆ ತಟ್ಟುವುದು. ಆತ ಚಪ್ಪಾಳೆ ಸ್ವರ ಬಂದ ದಿಕ್ಕಿಗೆ ಹೊರಳಿ ತನ್ನೆರಡೂ ಕೈಚಾಚಿ ಧಾವಿಸುವುದು, ಆಗ ಖುರ್ಚಿಗೆ ಡಿಕ್ಕಿ, ಅಥವಾ ಒಬ್ಬ ತನ್ನ ಕಾಲು ಅಡ್ಡ ಹಾಕಿ ಬೀಳಿಸುವುದು. ಹೋ ಹೋ ಖುಷಿಯ ಕೇಕೆ. ಬಿದ್ದವನು ಏಳುವಾಗ ಬಾಯಿ ಮುಂದೆತಿಂಡಿತಟ್ಟೆ, ಪರಿಮಳಕ್ಕೆ ಜೊಲ್ಲು ಸುರಿಯಬೇಕು. ಮತ್ತೆ ತಿಂಡಿ ತಟ್ಟೆ ಹಿಡಿಯುವ, ಓಡುವ, ಓಡಿಸುವ ಆಟ! ಹೌದು, ಇದು ಮಕ್ಕಳ ಕಣ್ಣುಮುಚ್ಚಾಲೆ ಆಟ.

ಖುಷ್ ಖುಷಿಯಾಗಿ ಆಡುತ್ತಿದ್ದಾರೆ. ನಾಣಿ ಇಲ್ಲೇ ಇರಬೇಕು. ಈ ತರಹದ ಆಟ ಅವನಿಗೆ ಇಷ್ಟವೇ. ತಾನೂ ಆಟದಲ್ಲಿ ಸೇರಿಕೊಳ್ಳಲು ಗೌರಿ ಎರಡು ಹೆಜ್ಜೆ ಮುಂದಿಟ್ಟಳು. ಆದರೆ ಆ ಸಣ್ಣ ಹುಡುಗನ ಕಣ್ಣಿಗೆ ಪಟ್ಟಿ ಕಟ್ಟಿಲ್ಲ. ಪೂರ್ಣ ಕಣ್ಣು ತೆರೆದಿದೆ! ಕಣ್ಣ ಗೊಂಬೆಗಳು ಸ್ವರ ಬಂದತ್ತ ಹೊರಳಿ, ಎಲ್ಲಿ ಇದ್ದಾರೆಂಬ ಊಹೆಯಲ್ಲಿ ಅವರ ಚಪ್ಪಾಳೆಗೆ ಹೆಡ್ಡನಂತೆ ನಗುತ್ತ ತಿಂಡಿಗೆ ಕೈ ಚಾಚಿ. ಅಯ್ಯೋ,ಇದೆಂತ ಆಟ? ಅರ್ಥವಾಗಿ ಹೋಯಿತು ಗೌರಿಗೆ, ಆ ಹುಡುಗ ಕುರುಡ! ಕಣ್ಣಿಲ್ಲದವ! ಈ ಸುಂದರ ಜಗತ್ತನ್ನು ನೋಡಲಾರದವ. ಇದೂ ಒಂದು ಆಟವೇ?

ಮುಂದಿಟ್ಟ ಹೆಜ್ಜೆ ಹಿಂದೆ ಸರಿಸಿದ ಗೌರಿಯ ಸಿಟ್ಟು ನೆತ್ತಿಗೇರಿತು. ಮೂಲೆಯಲ್ಲಿ ಅಜ್ಜಂದಿರು ಉಪಯೋಗಿಸುವ ಹಿಡಿಯುಳ್ಳ ದೊಣ್ಣೆ ಕಾಣಿಸಿತು. ಅದನ್ನು ಎತ್ತಿಕೊಂಡವಳೆ, ‘ನಿಲ್ಲಿಸಿ, ಒಬ್ಬ ಕುರುಡನಿಗೆ ಹೀಂಗಾ ಹಿಂಸೆ ಕೊಟ್ಟು ಮಜಾ ಕಾಂಬದು? ಕಣ್ಣಲ್ಲಿ ಪಸೆ ಇತ್ತಾ ನಿಮ್ಗೆ? ನಿಮ್ಗೂ ಬಾರ್ಸತೆ ಕಾಣಿ’ ಆ ಸಣ್ಣ ಹುಡುಗನ ಕೈ ಹಿಡಿದು ದೊಡ್ಡ ಹುಡುಗನ ಕೈಯ್ಯಲ್ಲಿದ್ದ ತಿಂಡಿ ತಟ್ಟೆಯನ್ನು ದೊಣ್ಣೆ ತುದಿಯಿಂದ ಹಾರಿಸಿದಳು ಮೇಲಕ್ಕೆ. ತಟ್ಟೆ ಕೆಳಗೆ ಬಿದ್ದು ಸಿಹಿ ಖಾರ ಸುತ್ತಲೂ ಎರಚಿಹೋಯಿತು.

ಒಂದು ಕ್ಷಣ ಸ್ಥಬ್ಧ. ಎಲ್ಲ ಗಂಡುಮಕ್ಕಳೂ ಹೊಸಬಳತ್ತ ಹೊರಳಿದರು. ಆಟ ಕೆಡಿಸಿದ ಸಿಟ್ಟು ಕುಣಿಯಿತು ಅವರ ಮುಖದಲ್ಲಿ. ಉದ್ದ ಪರಕರ, ಬಿಗಿಯಾಗಿ ಕಟ್ಟಿದ ಎರಡು ಜಡೆ. ಥಳಕು ಪಳಕು ಇಲ್ಲದ ಇವಳು ಈ ಮನೆಯ ಕೆಲಸದವರ ಮಗಳೇ ಹೌದು. ತಮ್ಮನ್ನು ಮುಟ್ಟುವ ಧೈರ್ಯವೇ? ಸೊಕ್ಕು, ಸೊಕ್ಕು ಮುರೀಬೇಕು. ಹುಡುಗರು ಒಟ್ಟಾದರು. ‘ಚೋಟುದ್ದ ಅದಿ, ನಮ್ಮನ್ನು ಕೇಳಾಕಿ ನೀ ಯಾರು? ಮದ್ವಿ ಮನ್ಯಾಗ ನಾವು ಏನಾರ ಮಾಡ್ತೀವಿ.’ ಒಬ್ಬ ಹುಡುಗ ಕೈ ಮುಷ್ಟಿ ಬಿಗಿದು ಮುಂದೆ ಬಂದ.

‘ಅವನು ಕುರುಡ, ಕಾಂತಿಲ್ಯಾ ನಿಮಗೆ? ನೀವು ಕಣ್ಣು ಇದ್ರೂ ಕುರುಡರು. ಅವಂಗೆ ತಿಂಬ ಆಸೆ ತೋರ್ಸಿ’
‘ನಿನಗೂ ಮಣ್ಣು ಮುಕ್ಸತೇವಿ. ನಮ್ಮನ್ನು ಹೆದರಿಸ್ತಿ ಏನ್? ಬನ್ರೋ, ನಾಲ್ಕು ತದಕೋಣ’
ಇನ್ನೊಬ್ಬ ಮಾತು ಮುಗಿಸುವ ಮೊದಲೇ ಎಲ್ಲರೂ ಒಟ್ಟಾಗಿ ಸೀದಾ ಅವಳ ಮೇಲೆ ಬಿದ್ದು ಮುಷ್ಟಿಯಿಂದ ಚಚ್ಚ ತೊಡಗಿದರು. ಕೆಳಗೆ ಬೀಳಿಸಿ ಕಾಲಿನಿಂದ ಒದೆ ಹಾಕಿದರು. ಗೌರಿ ತಲೆ ಕೂದಲು ಕೆದರಿತು, ಪರಕರ ಹರಿಯಿತು, ಮುತ್ತಿಸರ ಕಡಿದು ಮುತ್ತುಗಳು ಚಲ್ಲಾಪಿಲ್ಲಿ. ಅದೇ ವೇಳೆಯಲ್ಲಿ,
‘ಅಕ್ಕಾ, ಎಲ್ಲಿದ್ದೀ? ನೀ ಶಾರದತ್ತೆಗೆ ಆರತಿ ಎತ್ತೂಕೆ ಬರ್ಬೇಕಂತೆ, ಆಯಿ ಕರೀತ್ಲು’ ಎನ್ನುತ್ತ ಮಹಡಿ ಹತ್ತಿ ಬಂದ ನಾಣಿ. ಅಲ್ಲಿ ಅಕ್ಕನನ್ನು ನಾಲ್ಕಾರು ಹುಡುಗರು ಹೊಡೆಯುವದ ಕಂಡವ ಬೆಚ್ಚಿ ನಿಂತು ಆಮೇಲೆ ರಿಂವನೆ ಕೆಳಗೋಡಿ ಆಯಿ ಕಿವಿಯಲ್ಲಿ ಉಸುರಿದ. ಅವಳು ಅಪ್ಪಯ್ಯನಿಗೆ ಹೇಳಿ ಅದನ್ನು ವಿನಾಯಕ ಶರ್ಮರು ಕೇಳಿ ಮತ್ತೊಂದು ನಿಮಿಷದಲ್ಲಿ ಹಲವರು ಮಹಡಿ ಏರಿ ಬಂದರು.

ಹುಡುಗರನ್ನು ಗದರಿಸಿ ದೂರ ಸರಿಸಿದ ವಿನಾಯಕ ಶರ್ಮರು ಗೌರಿಯ ಕೈ ಹಿಡಿದು ಮೇಲೆಬ್ಬಿಸಿದರು. ನಡೆದ ವಿಷಯ ಅವಳಿಂದಲೇ ತಿಳಿದು ಅವರ ಮುಖದ ಬಣ್ಣ ಬದಲಾಗಿ ಹೋಯಿತು. ಆ ಮಕ್ಕಳು ಬೇರೆ ಯಾರೂ ಅಲ್ಲ, ಅವರ ಅಣ್ಣ ತಮ್ಮಂದಿರ ಮತ್ತು ಅವರದೇ ಮೊಮ್ಮಕ್ಕಳು. ಕುರುಡ ಹುಡುಗ ಅವರ ಸೋದರತ್ತೆಯ ಸಂಬಂಧಿ.

ಮಕ್ಕಳು ಕೂಡಿ ಆಡಬೇಕು, ಸಂತೋಷ ಪಡಬೇಕು, ಒಗ್ಗಟ್ಟಲ್ಲಿ ಇರಬೇಕು ನಿಜ, ಆದರೆ ಹೀಗೆ ನಿಷ್ಪಾಪಿ ಕುರುಡನನ್ನು ಅಟ್ಟಾಡಿಸಿ ಹಿಂಸೆ ಕೊಟ್ಟು ಅವನ ನೋವು ಅಸಹಾಯಕತೆಗೆ ಆನಂದಿಸಿ ಮಜಾ ಮಾಡಿ ಆಡುವುದಲ್ಲ. ತಮ್ಮ ಮೊಮ್ಮಕ್ಕಳಿಂದ ತಾವು ಕನಸಿನಲ್ಲೂ ಯೋಚಿಸದ ಹಿಂಸೆ, ಕ್ರೌರ್ಯ. ಸಿಟ್ಟಿನಲ್ಲಿ ಎಲ್ಲರಿಗೂ ಎರಡು ತಪರಾಕಿ ಕೊಟ್ಟು, ‘ಈಕಿ ಬೀಗರ ಕಡೆ ಹುಡುಗಿ. ನಮ್ಮ ಹೊಸ ಸೊಸಿಯ ಅಣ್ಣನ ಮಗಳು. ಮದ್ವಿ ಮನ್ಯಾಗ ಸುಮ್ಮನ ಕುಳಿತಿರಲಾಗ್ದೆ ಗೌಜು ಎಬ್ಬಿಸ್ತಿರಲ್ಲ, ಹೋಗಿ ನಿಮ್ಮ ತಪ್ಪಿಗೆ ಗೌರಿಯ ಕ್ಷಮೆ ಕೇಳ್ರಿ.’ ಎಂದು ತಾವೂ ಆಯಿ, ಅಪ್ಪಯ್ಯನ ಕ್ಷಮೆ ಬೇಡಿದರು.

ಹೊಸ ಬೀಗರ ಮನೆ. ಅವರದೇ ಮೊಮ್ಮಕ್ಕಳು. ಆಯಿ ಅಪ್ಪಯ್ಯ ಮೌನವಾಗಿ ಕೋಣೆಗೆ ಬಂದದ್ದೇ ತಡ ಗೌರಿ ಸಿಟ್ಟಿನಿಂದ ತಿರುಗಿ ಬಿದ್ದಳು, ‘ನಾ ತಪ್ಪು ಮಾಡಿದ್ನಾ ಅಪ್ಪಯ್ಯ, ಕಣ್ಣು ಕಾಣದವನನ್ನು ಗೋಳು ಹುಯ್ಕಂಡದ್ದು ಕಂಡು ಸಮಾ ಬಾರಿಸಬೇಕಿತ್ತು. ದೊಡ್ಡ ಮನುಷ್ಯರ ಅಹಂಕಾರ.’
‘ಆದರೂ ನೀ ಎಂತಕ್ಕೆ ಕಾಲು ಕೆದರಿ ಜಗಳಕ್ಕೆ ಹೋದೆ? ಸುಮ್ಮನೆ ಇರಕ್ಕಿತ್ತು’ ಅಪ್ಪಯ್ಯ ಅವಳ ಕೆನ್ನೆ ಸವರಿ ತಪ್ಪನ್ನು ಅವಳಿಗೇ ಹೊರಿಸಿದ.
‘ಸುಮ್ಮನೆ ಇರಕ್ಕಿತ್ತಾ? ನಾ ಚಕ್ರೀ ಅಮ್ಮಮ್ಮನ ಮೊಮ್ಮಗಳು. ಹೊಳೆಬಾಗಿಲು ನೀರು ಕುಡಿದು ಬೆಳೆದವಳು. ನನ್ನ ರಟ್ಟೆಯಲ್ಲಿ ಅವರನ್ನು ಬಡಿದು ಎತ್ತಿ ಬಿಸಾಕುವ ಶಕ್ತಿ ಇತ್ತು. ಆದ್ರೆ ನಾವು ಅವರ ಮನೆಗೆ ಬಂದವರಲ್ದಾ? ಅವರಿಂದ ಹೊಡ್ತ ತಿಂದ್ರೂ ಸುಮ್ಮನಿದ್ದೆ. ನಾ ತಪ್ಪು ಮಾಡಿದ್ನಾ?’
‘ಗೌರಿ, ನೀ ಛಲೋ ಮಾಡ್ದೆ. ತಪ್ಪು ಮಾಡಿದಾಗ ತೋರಿಸಿ ಕೊಡೆಕ್ಕು. ಜಂಬದ ಕೋಳಿಗಳಿಗೆ ಅವರ ಅಜ್ಜನಿಂದಲೇ ಸಿಕ್ಕಿತಲ್ದ ಪೆಟ್ಟು. ಸಾಕು ಬಿಡು’

ಆಯಿ ಅವಳ ಹರಿದ ಜರಿ ಪರಕರ ತೆಗೆದು ಸುನಂದೆ ಕೊಟ್ಟ ನಿರಿಗೆ ಅಂಗಿ ಹಾಕಿಸಿದಳು. ತಲೆ ಬಾಚಿ ಜಡೆ ಹಾಕಿ ಬೇರೆ ಸರ, ಬಳೆಗಳನ್ನು ತೊಡಿಸಿದಳು. ಅಷ್ಟರಲ್ಲಿ ಸುಬ್ಬಪ್ಪಯ್ಯ, ಅಜ್ಜಮ್ಮಇಬ್ಬರೂ ಮಹಡಿಗೆ ಬಂದರು. ಹಿಂದಿನಿಂದ ಸುಶೀಲ ಚಿಕ್ಕಿ, ಚಕ್ರೀ ಅಮ್ಮಮ್ಮನ ಸವಾರಿಯೂ ಬಂತು. ಕೆನ್ನೆ ಊದಿದ ಗೌರಿಯನ್ನು ತಬ್ಬಿ ಚಕ್ರಿಅಮ್ಮಮ್ಮ, ಅಜ್ಜಮ್ಮ ಹೋ ಎಂದು ಅತ್ತರು. ಚಕ್ರೀಅಮ್ಮಮ್ಮ ಮೂಗಿನ ಸಿಂಬಳ ಒರಸಿಕೊಳ್ಳುತ್ತ, ‘ನೀ ಸರಿಯಾಗಿ ಮಾಡ್ದೆ. ಬೀಗರಾಗಲಿ, ವೈರಿಯಾಗಲಿ ತಪ್ಪು ತಪ್ಪೇ. ಕುರುಡರ ಕಷ್ಟ ತಿಳಿದಿದ್ದರೆ ಅವರ ಕಣ್ಣಿಗೂ ಪಟ್ಟ ಕಟ್ಟಿ ಒಂದಿನ ಪೂರಾ ಬೆಳಕು ಕಾಣದಾಂಗೆ ಮಾಡೆಕ್ಕು. ಇದ್ದವಕ್ಕೆ ಇಲ್ಲದವರ ನೋವು ಎಂತದು? ಅರ್ಥ ಆಗೆಕ್ಕು’ ಎಂದಳು.

ಸುಶೀಲಚಿಕ್ಕಿ ಒಂದು ಮಾತು ಹೇಳದೆ ಗೌರಿಯ ಬೆನ್ನು ನೀವಿದಳು. ನೀನು ಮಾಡಿದ್ದು ಸರಿಯಾಗಿದೆ ಎನ್ನುವ ಸಾಂತ್ವನ ಸ್ಪರ್ಶ! ಕುರುಡ ಹುಡುಗನ ತಾಯಿತನ್ನ ಮಗನನ್ನು ಪುಂಡರ ಕೀಟಲೆಯಿಂದ ಪಾರು ಮಾಡಿದ ಗೌರಿಯನ್ನು ಮೆಚ್ಚುಗೆಯಲ್ಲಿ ನೋಡುತ್ತ ತಾನೂ ಅತ್ತು ಸುಧಾರಿಸಿಕೊಂಡಳು. ಬೀಗರ ಮನೆ ಹುಡುಗಿಗೆ ಶರ್ಮರ ಮೊಮ್ಮಕ್ಕಳು ಹೊಡೆದ ಸುದ್ದಿ ಕೇಳಿ ಆಗಲೇ ಚಪ್ಪರದಲ್ಲಿ ಗುಲ್ಲೋ ಗುಲ್ಲು. ನೂರೆಂಟು ಮಾತುಗಳು.

ಆಯಿ ಮಗಳ ಕೈ ಹಿಡಿದು ಕೆಳಗಿಳಿದು ಬಂದಳು. ಎಲ್ಲರ ಕಣ್ಣುಗಳೂ ಗೌರಿ ಮೇಲೆ. ಇರಬೇಕು ಹುಡುಗಿಯರಿಗೆ ಇಂತಹ ಧೈರ್ಯ. ಅವಳ ಕ್ಷಮೆ ಕೇಳಿದ ದೊಡ್ಡ ಹುಡುಗರಿಗೆ ನಾಚಿಕೆಯಾಗಿ ಚಪ್ಪರದ ಹೊರಗೆ ಉಳಿದರು. ಮತ್ತೆ ಅವರವರ ತಾಯಂದಿರು ಬೈಯ್ಯುತ್ತ ಕೊನೆಗೆ ಊಟದ ಹೊತ್ತಿನಲ್ಲಿ ಗೌರಿ ಜೊತೆ ಅವರನ್ನೂ, ಕುರುಡ ಹುಡುಗನನ್ನೂ ಕುಳ್ಳಿರಿಸಿದರು. ತಮ್ಮ ಮಕ್ಕಳ ಕೈಯ್ಯಿಂದಲೇ ಗೌರಿಗೆ ಸಿಹಿ ತಿನ್ನಿಸಿ ಸ್ನೇಹದ ಹಸ್ತ ಚಾಚುವಂತೆ ಮಾಡಿದರು. ಘಟನೆಯ ಒಡಕಿಗೆ ತೇಪೆ ಹಚ್ಚಿ, ನಾಣಿಗೆ ನಗುವೋ ನಗು. ‘ಹಾಗೆ ಆಗ್ಬೇಕು, ಹಲ್ಲು ಮುರಿಬೇಕು| ನಾ ನಗ್ಬೇಕು, ನೀ ಅಳಬೇಕು|’ ಅಣಕಿಸಿದ ಅವರಿಗೆ ಕೇಳದಂತೆ. ಸ್ವಲ್ಪ ಹೊತ್ತಿಗೆ ಎಲ್ಲ ಮರೆತು ಸರಿ ಹೋಯಿತು. ಮಕ್ಕಳ ಸ್ವಭಾವವೇ ಹೀಗೆ. ಮೋಡ ಬಿಸಿಲಿನ ಹಾಗೆ.

ಮಧ್ಯಾಹ್ನದ ಭೋಜನವೂ ಅದ್ದೂರಿಯದೇ. ಚಿರೋಟಿ, ಮಂಡಿಗೆ, ಬಾದೂಷಾ ಸಿಹಿ ಭಕ್ಷ್ಯಗಳು. ಹುಟ್ಟಿದಾರಭ್ಯ ತಿನ್ನದ ಅವನ್ನು ನಾಣಿ ಗೌರಿ ಎರಡು ಬಾರಿ ಹಾಕಿಸಿಕೊಂಡು ತಿಂದರು. ‘ನಮ್ಮ ಊರಾಗಿನ ಮಂಡಿಗೆ ಇನ್ನೂ ಹಾಕ್ಸಕೊಳ್ಳಿ. ಇಲ್ಲಿ ವಿಶೇಷದ್ದು. ಹಾಂಗ ಆ ಧಾರವಾಡ ಪೇಡಾ ನೋಡ್ರಿ, ಕರಿದ ಆಲೂ ಬೋಂಡಾ ಬಾಯಾಗ ಇಟ್ಟು ನೋಡ್ರಿ, ಇನ್ನೂ ತಿನಬೇಕಂತ ನಾಲಗಿ ಬೇಡ್ತದ!’ ಎಂದ ಅವಳ ಬಳಿ ಕುಳಿತ ದೊಡ್ಡ ಹುಡುಗ. ಅವನೇ ತಟ್ಟೆ ಹಿಡಿದು ಕುರುಡನಿಗೆ ಹೆಚ್ಚು ಸತಾಯಿಸಿದವ. ಹೆಸರು ಪ್ರಕಾಶ. ಬಡಿಸುವವರನ್ನು ಕರೆದು ಗೌರಿ ಸಾಕೆಂದರೂ ಎಲೆಗೆ ಹಾಕಿಸಿದ, ‘ಗೌರಿ ಅಕ್ಕ, ಇವತ್ತು ನೀ ಕಲಿಸಿದ ಪಾಠ ನಾವು ಈ ಜನ್ಮದಾಗ ಮರೆಯಾಂಗಿಲ್ಲ. ನಮಗೆ ಎಷ್ಟೋ ಸಲ ಘಮಂಡ ಬಂದುಬಿಡ್ತದ. ಅದಕ್ಕ ಒಂದು ಒತ್ತ ಸಿಕ್ಕರ ಮಾತ್ರ ಬುದ್ಧಿ ಬರ್ತದ.’

ಇನ್ನೊಬ್ಬ ಎಲೆ ತುದಿಯಿಂದ ಬಗ್ಗಿದ, ‘ನಮ್ಮಿಂದ ಎಷ್ಟು ನೋವು ತಿಂದಿ. ನಮಗ ದಾರಿ ತೋರ್ಸಿದಿ. ಇಲ್ಲಾಂದ್ರೆ ಇಂತಾ ಕಾರ್ಯ ಆದಾಗ ಇವನನ್ನು ಹೀಂಗ ಆಡ್ಸಿ ಖುಷಿಯಾಗಿ’ ‘ಲೋ, ಗಧಾಕೆ ಬಚ್ಚೆ, ಚುಪ್. ಗೌರಿ ಗುಡಿಯಾ, ಎಲ್ಲ ಮರ್ತು ಬಿಡು. ನನ್ನ ಅಣ್ಣಾ(ತಂದೆ) ಡಾಕ್ಟರು. ನಿನ್ನ ಮೈ ನೋವಿಗೆ ಅವ್ರೇ ದವಾ ಕೊಡ್ತಾರ್’ ಎಂದ ಇನ್ನೊಬ್ಬ, ‘ಇನ್ಮೇಲೆ ನಾವು ನೀನು ಫ್ರೆಂಡ್ಸು.’ ಗೌರಿಗೆ ಯಾರ ಬಳಿಯೂ ಮಾತು ಬೇಡವಾಗಿತ್ತು. ಅನಿರೀಕ್ಷಿತ ಸಿಕ್ಕಿದ ಹೊಡೆತ ಮುಖ ಊದಿಸಿತ್ತು. ‘ಸಂಕೋಚ ಬ್ಯಾಡ್ರೀ, ಬೇಕ್ಕಾದ್ದು ಹಾಕ್ಸಕೊಂಡು ತಿನ್ರಿʼ ಬಡಿಸುವವನದೂ ಒತ್ತಾಯ.

ಊಟದ ನಂತರ ತಾಂಬೂಲ ಸೇವನೆ. ಹೊರಗೆ ಎಳೆ ವೀಳ್ಯದೆಲೆಗೆ ಅಡಿಕೆಪುಡಿ, ಕೆಂಪು ಗುಲಾಬಿ ರಂಗಿನ ಸಿಹಿ ದ್ರವ್ಯ ಬಳಿದು ಒಬ್ಬಾತ ತಾಜಾ ಬೀಡಾ ತಯಾರಿಸಿ ಕೊಡುತ್ತಿದ್ದ. ‘ಸುಬ್ಬಪ್ಪನೋರ, ಕೈ ತೊಳೆದು ಈ ಕಡಿ ರ‍್ರಿ’ ವಿನಾಯಕ ಶರ್ಮರಿಂದ ಉಪಚಾರ, ‘ಇವನು ಬಸ್ಯಾ. ವಿಲಾಯತಿ ಬೀಡಾ ಕಟ್ಟೋದ್ರಲ್ಲಿ ಗಟ್ಟಿ ಅದಾನ. ತಿಂದ ನೋಡಿ ಹೇಳ್ರಿ.’

ವಿಲಾಯತಿ ಬೀಡಾ! ನಾಣಿ, ಗೌರಿಯ ಕಣ್ಣರಳಿತು. ಬಾಯಿಗೆ ಹಾಕಿದರೆ ಅದೆಂತಹ ಸಿಹಿ ರುಚಿ, ಘಮ ಘಮ. ಅಜ್ಜಮ್ಮ ಅಜ್ಜಯ್ಯ ಇಬ್ಬರೂ ಎಲೆಗೆ ಸುಣ್ಣ ಬಳಿದು ಮೇಲೆ ಅಡಿಕೆ ಇಟ್ಟು ಅವನ್ನು ಕುಟ್ಟಿ ಕವಳ ಜಗಿಯುತ್ತಾರೆ. ಅದೇಕೆ ಚಕ್ರಿಅಮ್ಮಮ್ಮ ಚೂರು ಹೊಗೆಸೊಪ್ಪಿನ ತುಂಡನ್ನೂ ದವಡೆ ಒಳಕ್ಕೆ ಇಟ್ಟು ಕವಳ ಹಾಕುತ್ತಾಳೆ. ಒಮ್ಮೆ ಚಕ್ರಿ ಅಮ್ಮಮ್ಮನಂತೆ ನಾಣಿ ಹೊಗೆಸೊಪ್ಪು ಬಾಯಲ್ಲಿಟ್ಟು ಕವಳ ಜಗಿದಾಗ ತಲೆ ತಿರುಗಿ, ಬೇಡಪ್ಪ ಈ ಎಲೆಅಡಿಕೆ ಸಹವಾಸ. ಆದರೆ ಆ ಕವಳದ ಪರಿಮಳ ಬೇರೆಯೇ. ಇಲ್ಲಿ ತಿಂದ ಬೀಡಾದ ರುಚಿಯೇ ಬೇರೆ. ಇಲ್ಲಿಯದು ಸಿಹಿ, ಪರಿಮಳ. ನಾಣಿ ಎರಡು ಬೀಡಾ ತಿಂದು ಇನ್ನೊಂದಕ್ಕೆ ಕೈ ನೀಡಿದಾಗ ಗೌರಿ ತಡೆದಳು, ‘ಹಸಿರು ಕಂಡ ಪರದೇಸಿಯಾ ನೀನು? ತುಂಬ ತಿಂದ್ರೆ ತಲೆ ಸೊಕ್ಕುಗು. ಸಾಕು.’

ಸಂಜೆ ಗೌರಿ ಮತ್ತು ನಾಣಿಗೆ ಹುಬ್ಬಳ್ಳಿ ರಸ್ತೆಯಲ್ಲಿ ಒಂದೆರಡು ಸುತ್ತು ತಿರುಗಾಟ ಮಾಡಲು ತಮ್ಮ ಪರಿಚಯದ ಕುದುರೆ ಗಾಡಿಯನ್ನು ಗೊತ್ತು ಮಾಡಿದ್ದವಿಷ್ಣು.ಕುದುರೆ ಗಾಡಿ ನಡೆಸುವವ ಮಧ್ಯ ವಯಸ್ಸಿನ ಮೀರ ಸಾಬಿ. ಅವನ ಗಾಡಿಗೆ ಕಟ್ಟಿದ್ದು ಬಿಳಿ ನಸುಗಂದು ಬಣ್ಣದ ಎತ್ತರದ ಕುದುರೆ. ಕುದುರೆಯ ಕುತ್ತಿಗೆಗೆ ಕಟ್ಟಿದ ಗೆಜ್ಜೆ ಸರ, ನೆತ್ತಿ ಮೇಲೆ ಕೆಂಪು ಬಣ್ಣದ ಗೆಜ್ಜೆಯದೇ ಮಣಿಗಳ ಕುಚ್ಚು, ಕನ್ನಡಿ ಚೂರುಗಳ ಬಟ್ಟೆಯಿಂದ ಹೊಲಿದ ಹಣೆಪಟ್ಟಿ, ಕಾಲು ಕೈಗಳಿಗೂ ಸಣ್ಣ ಗೆಜ್ಜೆಗಳ ಬಳೆಗಳು. ಎಡಗೈಯ್ಯಲ್ಲಿಅದರ ಜೀನ ಹಿಡಿದು, ಬಲಗೈಯ್ಯಲ್ಲಿ ಚಾಟಿ ಎತ್ತಿಕೊಂಡ ಮೀರಸಾಬಿ ಕುಳಿತ ಗತ್ತು ನೋಡಿ ನಾಣಿಗೆ ಖುಷಿಯೇ ಖುಷಿ. ಅವನ ಆದೇಶದಂತೆ ಹುಬ್ಬಳ್ಳಿಯ ನುಣುಪಾದ ಡಾಂಬರು ರಸ್ತೆಯಲ್ಲಿ ಕುದುರೆ ಹೆಜ್ಜೆ ಹಾಕುತ್ತದೆ.

ಕಾಲಿನ ಖುರಪುಟಗಳ ಸದ್ದು, ಕುತ್ತಿಗೆಯ ಗೆಜ್ಜೆದನಿ, ಆಗಾಗ ‘ಬೇಟಾ, ಸಾವಧಾನಸೆ ಚಲೋ. ಪ್ಯಾರೀ ಲಾಡಲಿ ದೇಖೋ ಆಗೆ’ ಮೀರ ಸಾಬ ಹೇಳುತ್ತ ಚಕ್ರದ ಗಾಲಿಗಳು ಮುಂದೆ ಹೋಗುತ್ತಿದ್ದರೆ ಗೌರಿ, ನಾಣಿಗೆ ಅಜ್ಜಯ್ಯ ಹೇಳುವ ಕಥೆಗಳಲ್ಲಿ ಕೇಳಿದ ರಾಜರ ಕುದುರೆ ರಥಗಳು ನೆನಪಾಗುತ್ತದೆ. ಸಿಂಡ್ರೆಲ್ಲಾ ರಥ ಏರಿ ಆಕಾಶದಲ್ಲಿ ಹೋದದ್ದು ಕಾಣುತ್ತದೆ. ತಾವೂ ಹತ್ತಿದ್ದೇವೆ ಕುದುರೆ ರಥವನ್ನು. ಏನು ಹುಬ್ಬಳ್ಳಿಯ ತಂಪುಗಾಳಿ! ಮೈಮನಕ್ಕೂ ಮುದ. ಎಲ್ಲೋ ತೇಲಿದಂತೆ. ಹಾದಿಯ ಇಕ್ಕೆಲಗಳಲ್ಲಿ ಮರಗಳ ಸಾಲು ಸಾಲು. ಅವು ಮೇ ವರ್ ಮರಗಳಂತೆ.

ವಿಷ್ಣು ಹೇಳಿದಂತೆ ಮೀರಸಾಬಿ ಅವರನ್ನು ಅನೇಕ ಕಡೆ ಸುತ್ತಾಡಿಸಿದ ನಂತರ ಕರೆ ತಂದದ್ದು ರೇಲ್ವೇ ಸ್ಟೇಶನ್ನಿಗೆ. ಇವರು ಸ್ಟೇಶನ್ನಿಗೆ ಬಂದ ಸ್ವಲ್ಪ ಹೊತ್ತಿನಲ್ಲೇ ಎರಡು ಹಳಿಗಳ ನಡುವೆ ಹೋಗುವ ಎರಡು ರೈಲುಗಳು ಗುಡು ಗುಡಕ್ ಕುಹೂ ಸದ್ದಿನೊಂದಿಗೆ ಸ್ಟೇಶನ್‌ನಲ್ಲಿ ಬಂದು ನಿಂತವು. ಹಲವರನ್ನು ಅಲ್ಲಿ ಕೆಳಗಿಳಿಸಿ ಇನ್ನಷ್ಟು ಜನರನ್ನು ತನ್ನಲ್ಲಿ ತುಂಬಿಸಿಕೊಂಡು ಕುಹೂ ಸಿಳ್ಳಿನೊಂದಿಗೆ ಹೊರಟು ಹೋಗುವಾಗ ಅಬ್ಬ, ಅದೆಷ್ಟು ದೊಡ್ಡ ರೈಲುಗಾಡಿ!

ನಾಣಿ ಚಿತ್ರಗಳಲ್ಲಿ ರೈಲುಗಾಡಿ ನೋಡಿದ್ದ. ಇಲ್ಲಿ ಎದುರಿಗೇ ಕಾಣುತ್ತಿದ್ದಾನೆ ಜೋಡು ಪಟ್ಟಿಗಳಂತೆ ರೈಲು ಹಳಿಗಳನ್ನು, ಅದರ ಮೇಲೆ ಗುಡು ಗುಡು ಧಡ್ ದಡ್‌ಕ್, ಚುಕು ಬುಕು ಸದ್ದು, ಕುಹೂ ಸಿಳ್ಳೆಯೊಂದಿಗೆ ಚಲಿಸುವ ರೈಲುಗಾಡಿಗಳು.

ರಾಮ, ರಾಮಾ, ಗೌರಿ ನಾಣಿಯರ ಹರ್ಷೋದ್ಗಾರ. ಎಷ್ಟುದ್ದದ ರೈಲು ಗಾಡಿಗಳು. ಅದರ ಸದ್ದಿಗೆ ಎದೆಯಲ್ಲೂ ಗುಡು ಗುಡು ಕಂಪನ. ತುದಿ ಮೊದಲಿಲ್ಲದ ರಸ್ತೆಯಲ್ಲಿ ರೈಲುಗಾಡಿ ಎಲ್ಲಿಗೆ ಹೋಗುತ್ತದೋ? ಹೇಗೆ ನಡೆಯುತ್ತದೋ? ಮೀರ ಸಾಬಿಯನ್ನೇ ಕೇಳಿದ. ಅವನು ಪ್ರತಿದಿನ ಹಲವು ಬಾರಿ ತನ್ನ ಕುದುರೆ ಗಾಡಿಯಲ್ಲಿ ಜನರನ್ನು ಸ್ಟೇಶನ್‌ಗೆ ಬಿಡಲು, ರೈಲಿನಿಂದ ಇಳಿದವರನ್ನು ಕರೆದೊಯ್ಯಲು ಬರುತ್ತಾನೆ. ಕರ್ನಾಟಕದ ಒಳಗೆ, ಹೊರಗೆ ಬೇರೆ ಬೇರೆ ರಾಜ್ಯಗಳಿಗೆ ರೈಲು ಗಾಡಿ ಹುಬ್ಬಳ್ಳಿ ದಾಟಿ ಹೋಗುತ್ತವೆಂದು ಅವನೇ ವಿವರಿಸಿದ.

‘ಇಷ್ಟು ಉದ್ದದ ರೈಲು ಬಿಡಲು ಡೈವರನಿಗೆ ಕಷ್ಟ ಆಗ್ತಿಲ್ಲೆಯಾ?’ ನಾಣಿಗೆ ತಿಳಿವ ಕುತೂಹಲ. ‘ಇವನ್ನು ಕಲ್ಲಿದ್ದಲು ಬೆಂಕಿನಾಗೆ ನಡೆಸ್ತಾರೀ ಅಣ್ಣಾವರ. ಕಲ್ಲಿದ್ದಲು ಬೆಂಕಿ ಅಂದ್ರೆ ಶಾಕದಾಗ (ಉಗಿಯಲ್ಲಿ) ಓಡೋ ರೈಲುಗಳುರೀ. ಉಗಿಬಂಡಿ. ಬಂಡಿ ಹೋಗ್ತಾ ಇದ್ದಾಂಗ ಕಲ್ಲಿದ್ದಲನ್ನು ಬೆಂಕಿನಾಗೆ ಹಾಕ್ಕೋತಾ ಇತಾರ‍್ರಿ. ಬಂಡಿ ಹೋಗ್ತಾ ಇರ್ತದ್ರೀ. ಅಣ್ಣಾವ್ರ, ನಿಮಗೂ ಉಗಿಬಂಡ್ಯಾಗ ಕುಂತು ಹೋಗೋ ಆಸೆಯಾ?’

ನಾಣಿ ಗೌರಿ ಮುಖ ನೋಡಿದ. ಅವಳಿಗೂ ಆಸೆ ಇದೆ. ಆದರೆ ಹೋಗುವುದು ಎಲ್ಲಿಗೆ? ಹೊಳೆಬಾಗಿಲಿಗೆ ಹೋದನಂತರ ಅದೇ ಹೊಳೆ ತೀರ, ಕುರುಚಲು ಕಾಡು, ಬೆಟ್ಟ, ದನ ಕರು. ಹೊರಗೆ ಹೋಗುವುದೇ ಕಮ್ಮಿ. ಇದೇ ಹಳಿಯುದ್ದಕ್ಕೂ ಹೋಗಬೇಕು, ದೂರ ದೂರ, ಯಾರೂ ನೋಡದ ತೀರದ ಆಚೆ. ತಾನು ನಾಣಿ ಕೈಯ್ಯಲ್ಲಿ ಕೈ ಹಿಡಿದು ರೈಲಲ್ಲಿ ಕುಳಿತು ಕಿಟಕಿಯಾಚೆ ನೋಡುತ್ತ, ಹಸಿರು ಮರ ಗಿಡ ಬಳ್ಳಿಗಳನ್ನು, ನದಿ ತೊರೆ, ಹಳ್ಳಗಳನ್ನು ಹಿಂದೆ ಹಾಕುತ್ತ ಹೋಗಬೇಕು. ಎಲ್ಲಿಗೆ? ಉತ್ತರ ಗೊತ್ತಿಲ್ಲ.

ಅವನ ಭಾಷೆ ಬೇರೆಯೇ. ಮನಸ್ಸಿಲ್ಲದೆ ಕುದುರೆ ಗಾಡಿ ಹತ್ತಿದರು. ಹಿಂದಿರುಗುವ ದಾರಿಯಲ್ಲಿ ಒಂದು ಕಡೆ ಹಾಡು, ಹಾರ್ಮೋನಿಯಂ ಸ್ವರ ಕೇಳಿಸಿ ಗೌರಿ ಗಾಡಿ ನಿಲ್ಲಿಸುವಂತೆ ಮೀರಸಾಬಿಗೆ ಹೇಳಿ ಕೆಳಗಿಳಿದಳು. ನಾಣಿಯೂ ಇಳಿದ. ಅದು ಟೌನ್ ಹಾಲ್ ಕಟ್ಟಡ. ಒಳಗೆ ‘ಶ್ರೀ ಕೃಷ್ಣ ಪಾರಿಜಾತ ಪ್ರಸಂಗ’ ಆಟ ನಡೆಯುತ್ತಿತ್ತು. ಹಾಲ್ ತುಂಬಿ ಹೋಗಿತ್ತು. ಹಾಡು, ವೇಷಧಾರಿಗಳ ಕುಣಿತ. ಯಕ್ಷಗಾನ ನಡೆಯುತ್ತಿರಬೇಕು. ಗೌರಿ ಟಿಕೆಟ್ ಕೊಡುವವನ ಬಳಿ ಹೋಗಿ ವಿಚಾರಿಸಿದಳು. ‘ರಾಣೆಬೆನ್ನೂರಿನ ದೊಡ್ಡಾಟ ಪ್ರಸಂಗ, ನೀವು ಆಟ ನೋಡಾಕ ಬಂದ್ರೇನು. ಶುರುವಾಗಿ ತಾಸು ಕಳೀತಲ್ರೀ. ಮತ್ತ ಟಿಕೆಟ್ ಕೊಡಲೇನು?’ ಕೇಳಿದ.

| ಇನ್ನು ನಾಳೆಗೆ |

‍ಲೇಖಕರು Admin

August 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: