ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಣ್ಣುಗಳಲ್ಲಿ ನೂರು ಬೆಳ್ಳಿಯ ಮೆರಗು! ಎಷ್ಟು ಚೆಂದ!

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

22

ಆ ದಿನ ಊರಲ್ಲಿ ಕುಸಿದ ಮನೆಗಳು, ಮರಗಿಡಗಳು ಲೆಕ್ಕವಿಲ್ಲದಷ್ಟು. ಹಣುಮನ ಗುಡಿಸಲು ಮುಕ್ಕಾಲು ಭಾಗ ನೀರಿನಲ್ಲಿ ಕೊಚ್ಚಿ ಹೋಗಿ ಅವನ ಸಂಸಾರದ ಅವಸ್ಥೆ ಕೇಳುವುದೇ ಬೇಡ. ಆಗ ಆ ಸಂಸಾರಕ್ಕೆ ಎರಡುದಿನ ತಮ್ಮ ಕೊಟ್ಟಿಗೆಯಲ್ಲಿ ಉಳಿಯುವ ವ್ಯವಸ್ಥೆ ಮಾಡಿದ್ದು, ತಾತ್ಕಾಲಿಕ ಗುಡಿಸಲು ಹಾಕಿದ್ದು, ಅನಂತರ ಮನೆ ಕಟ್ಟಿಸಿ ಕೊಟ್ಟದ್ದು ಸುಬ್ಬಪ್ಪಯ್ಯರೇ.

ಈದಿನ ರಾತ್ರೆ ಅಂತಹದೇ ಮಳೆ. ಅಪ್ಪಯ್ಯ ಸಾಸ್ತಾನದಲ್ಲಿದ್ದ, ಆಯಿ ಹೆರಿಯಮ್ಮನಲ್ಲಿ. ಗೌರಿ ನಾಣಿ ಅಜ್ಜಮ್ಮನನ್ನೇ ಅಪ್ಪಿ ಹಿಡಿದಿದ್ದರು. ಸಾಂತ್ವನ ನೀಡುವ ಹಿರಿಜೀವ ಅದು. ಎಷ್ಟು ಹೊತ್ತಿಗೆ ಮಳೆ ತಗ್ಗಿತು ತಿಳಿಯಲಿಲ್ಲ. ನಸುಕಿನಲ್ಲಿ ಹೊರಗೆ ಏನೋ ಬಿದ್ದ ಸದ್ದು. ಎದ್ದು ನೋಡಿದರೆ ದನದ ಕೊಟ್ಟಿಗೆಯ ಮೇಲೆ ಹಳೆ ತೆಂಗಿನ ಮರ ಉರುಳಿ ಬಿದ್ದಿದೆ. ಅದು ಯಾವ ದನ ಕರುಗಳ ಮೇಲೆ ಬೀಳದೆ ವಾಲಿಕೊಂಡು ಬಿದ್ದದ್ದು ಇವರ ಪುಣ್ಯ. ಕೆಲಸದವರಿಗೆ ಕರೆ ಹೋಯಿತು.

ಈ ಅವಘಡದ ಮಧ್ಯೆ ಸಿಂಧೂ ದನ ಕರು ಹಾಕಿತ್ತು. ಮುದ್ದಾದ  ಹೆಣ್ಣು ಕರು. ಅದನ್ನು ಮೊದಲು ಕಂಡವಳು ಗೌರಿ. ಕೊಟ್ಟಿಗೆಯ ಉರುಗೋಲು ತೆಗೆಯುವಾಗ ಕಂಡದ್ದು. ನಾಣಿಯನ್ನು ಕರೆದು ತೋರಿಸಿದ್ದೇ ಅವ ಹಕ್ಕಿಯ ರೆಕ್ಕೆಯಂತೆ ಕೈ ಅಗಲಿಸಿ ಒಳಗೋಡಿ ಸುದ್ದಿ ಮುಟ್ಟಿಸಿದ. ಸುಬ್ಬಪ್ಪಯ್ಯ, ಅಜ್ಜಮ್ಮ ಬಂದರು. ದೇವರು ದೊಡ್ಡವ, ತೆಂಗಿನ ಮರ ಈಚೆ ಬಿದ್ದಿರಲಿಲ್ಲ. ಕರುವನ್ನು ತಾಯಿ ದನದ ಕೆಚ್ಚಲು ಬಳಿ ಎತ್ತಿ ಹಿಡಿದು ಅದರ ಮೊಲೆ ಹಾಲು ಚೀಪಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಚಾವಡಿಯ ಒಳ ಮೂಲೆಯಲ್ಲಿ ಮಲಗಿಸಿ ಓಹ್, ಎಷ್ಟು ಕೆಲಸ! ಇನ್ನು ಒಂದು ತಿಂಗಳು ಗೌರಿ, ನಾಣಿಗೆ ಆಟಕ್ಕೆ, ಮುದ್ದಾಟಕ್ಕೆ ಕರುವಿನ ಸಂಭ್ರಮ.

ಆಯಿ, ಕಮಲತ್ತೆ ಬಂದದ್ದು ಮೂರುದಿನ ಕಳೆದ ಮೇಲೆ. ಆ ವೇಳೆಗೆ ಮಳೆ ನಿಂತು ಹೊಳೆ ಶಾಂತವಾಗಿತ್ತು. ಅಶಾಂತಿಯ ಅಲೆ ಎದ್ದದ್ದು ಗೌರಿ ಹಾರ್ಮೋನಿಯಂ ಹಿಡಿದು ಬಾರಿಸಲು ಕುಳಿತಾಗಲೇ. ಮುಂಚಿನಂತೆ ಅಪಸ್ವರ ಇರಲಿಲ್ಲ. ಆದರೆ ಶೃತಿಗೆ ಸರಿಯಾಗಿ ಬೆರಳುಗಳು ಕೂಡಿ ಬರುತ್ತಿರಲಿಲ್ಲ. ‘ಪ್ರತಿದಿನ ಒಂದೇ ಪದ್ಯ ಬಾರ್ಸಲು ಹೇಳಿ ಕೊಡ್ತೆ. ಅದು ಚೆಂದಕ್ಕೆ ಬಂದರೆ ಬೇರೆ ಪದ್ಯಕ್ಕೆ ಬೆರಳು ಇಡಲು ನಿಂಗೂ ತಿಳಿತ್ತು’ ಮೊದಲ ಬಾರಿಗೆ ಹೇಳಿಕೊಡಲು ಕುಳಿತಿದ್ದರು ಸುಬ್ಬಪ್ಪಯ್ಯ.

ಹುಬ್ಬುಗಂಟಿಕ್ಕಿದ್ದಳು ಕಮಲತ್ತೆ. ಮೂಲೆ ಸೇರಿದ ಅದು ಹೊರ ಬಂದದ್ದು ಯಾಕೋ? ತಾಯಿಯಲ್ಲಿ ದೂರಿದಳು, ಗೌರಿಯ ಉದ್ದಟತನಕ್ಕೆ ಆಯಿ ಮೇಲೆ ಸಿಟ್ಟು ಮಾಡಿದಳು. ಬೆಂಕಿ ಕಿಡಿ ಹತ್ತಿಸುವುದು ಬೇಡವೆಂದು ಇಬ್ಬರೂ ಉತ್ತರಿಸಲಿಲ್ಲ. ಈಗ ಸಹಾಯಕ್ಕೆ ನಿಂತವಳು ಸುಶೀಲಚಿಕ್ಕಿ. ಅವಕಾಶಕ್ಕೆ ಕಾಯುತ್ತಿದ್ದ ಚಿಕ್ಕಿ ಅವಳನ್ನು ಅಂಗಳಕ್ಕೆ ಕರೆದೊಯ್ದು ಧರಾಶಾಹಿಯಾದ ದಾಸವಾಳದ ಗಿಡ ತೋರಿಸಿದಳು, ಮೊನ್ನೆ ಬಿರು ಮಳೆಗೆ ಬಿದ್ದ ಮೈ ತುಂಬ ಹೂಅರಳಿಸಿದ ಗಿಡ.

‘ಹೂವು, ಮೊಗ್ಗು, ಹಸಿರೆಲೆಗಳು ಮುದ್ದೆಯಾಗಿ ಮಣ್ಣಲ್ಲಿ ಉದುರಿ ಹ್ಯಾಗೆ  ಕದಡಿ ಹೋಗಿವೆ ನೋಡು. ಆದ್ರೂ ಇನ್ನೊಂದು ವಾರದಲ್ಲಿ ಬುಡದಿಂದ ಚಿಗುರಿ, ಹಸಿರೆಲೆ ತುಂಬಿ ಮೊಗ್ಗು ಬಿರಿದು ಹೂವುಗಳು ಅರಳುತ್ತವೆ. ನಮ್ಮ ಮನಸ್ಥಿತಿನೂ ಇದೇಕಮಲಿ, ಇಂದು ಅಳು, ನಾಳೆ ನಗು, ಇಂದು ಸುಖ, ನಾಳೆ ದುಃಖ. ಇದೇ ಅಲ್ಲದಾ ಜೀವನ?’

‘ನನ್ನ ಮನಸ್ಸು ಸಂಕಟದ ಗೂಡು. ನಿನಗೆಲ್ಲಿ ಅರ್ಥ ಆಗ್ತು?’

‘ನಾನೂ ನಿನ್ನಂತೆಯೇ ಇಲ್ಲವೇ? ಕಮಲಿ, ನೀ ನಿನಗಾಗಿ ಬದುಕಬೇಕು. ಬೇರೆಯವರಿಗಾಗಿ ಅಲ್ಲ. ಬದುಕಿನ ಶೂನ್ಯದಲ್ಲಿ ಹೊಸ ಚೈತನ್ಯ ತುಂಬುವ ಮನಸ್ಸು ನಿನ್ನದಾಗೆಕ್ಕು. ಎಷ್ಟು ವರ್ಷ ಆತು ನೀ ಹಾರ್ಮೋನಿಯಂ ಬಾರಿಸಿ?ಇದರಲ್ಲೇ ನಿನ್ನನ್ನು ಮನಃಪೂರ್ವಕ ತೆರೆದುಕೋ. ಹಾಡು, ಬಾರಿಸು. ಹೊಸ ಕಮಲಿ ಆಗು. ಆಗ ಈ ಜಗತ್ತು ಬೇರೆಯೇ ಕಾಣ್ತು ನಿನಗೆ’

‘ನಿನ್ನ ಪುರಾಣ ನನ್ಗೆ ಬ್ಯಾಡ.’

ಚಿಕ್ಕಿ ಸುಮ್ಮನಾದಳು. ಮರುದಿನ ಮತ್ತೆ ಅದೇ ಬುದ್ದಿವಾದ, ‘ಬೇರೆಯವರು ನಿನ್ನ ಮನಃಸ್ಥಿತಿ ನೋಡಿ ಮರುಕದಲ್ಲಿ ಹೆಜ್ಜೆ ಹಾಕೆಕ್ಕು ಅಂದ್ರೆ ತಪ್ಪು. ನಿನ್ನ ಪಾಡಿಗೆ ನೀನಿರು. ಆದರೆ ಗೌರಿಗೆ ವಾದ್ಯ ಬಾರಿಸ್ಬಾರ್ದು, ಹಾಡಬಾರ್ದು ಅನ್ನುವ ಅಧಿಕಾರ ನಿಂಗಿಲ್ಲ. ಅದು ಬೆಳೆವ ಕುಡಿ. ಈ ಮನೆ ಮಗಳು. ಅಲ್ಲದಾ ಹೇಳು?’

ಈ ಮಾತು ಏನು ಮೋಡಿ ಮಾಡಿತೋ. ಅನಂತರದ ದಿನಗಳಲ್ಲಿ ತಮಗಿಷ್ಟ ಬಂದಾಗ ಗೌರಿ ಹಾರ್ಮೋನಿಯಂ ಬಾರಿಸುವುದು, ನಾಣಿ ಕುಣಿವದು ನೋಡಿಯೂ ಕಮಲತ್ತೆಯ ಕರಕರೆ ನಿಂತದ್ದು ಸತ್ಯ. ಒಂದು ದಿನ ಸುಬ್ಬಪ್ಪಯ್ಯ ಬಾರಿಸು ಮಗಳೇ ಎಂದು ಹೇಳುವ ಮೊದಲೇ ಅವಳು ಹಾರ್ಮೋನಿಯಂ ಮುಂದೆ ಕುಳಿತಾಗಿತ್ತು. ‘ಕಲಿಯುಗದಲಿ ಹರಿ ನಾಮವ ನೆನೆದರೆ| ಕುಲಕೋಟಿಗಳುದ್ಧರಿಸುವವೋ ರಂಗಾ||’ ದಾಸರ ಈ ಪದ ಇಡೀ ಮನೆಯಲ್ಲಿ ಮಾರ್ದನಿಸಿ ಹಳೆ ಕೊಳೆ ತೊಳೆದಂತೆ ಬೆಳಕು ಪ್ರಜ್ವಲಿಸಿದಂತೆ! ಅನಂತರದ ದಿನಗಳಲ್ಲಿ ಕಮಲತ್ತೆ, ಚಿಕ್ಕಿ, ಗೌರಿಯ ಪದ್ಯಗಳು ಮಾರ್ದನಿಸಿದರೆ ನಾಣಿಯ ಹೆಜ್ಜೆ ಕುಣಿತಕ್ಕೆ ರಂಗು ರಂಗಿನ ಮೆರಗು. ಮಳೆ ಅಬ್ಬರ ತಗ್ಗುವಾಗ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪ್ರತಿ ಸಂಜೆ ಕೇಳತೊಡಗಿತು ಕಮಲತ್ತೆಯ ಸುಶ್ರಾವ್ಯ ಧ್ವನಿ ಮತ್ತು ಹಾರ್ಮೋನಿಯಂ ವಾದ್ಯದ ಸ್ವರ.

ಶ್ರಾವಣ ಕಳೆದು ಭಾದ್ರಪದ ಮಾಸದ ಆಗಮನಕ್ಕೆ ಕೆಲವು ದಿನಗಳು ಬಾಕಿ ಇದ್ದವು. ಭಾದ್ರಪದ ಮಾಸವೆಂದರೆ  ಹಬ್ಬಗಳ ಸಾಲು ಸಾಲು. ಹಲವು ವೈವಿದ್ಯ ಅಡಿಗೆಯ ಗಮ್ಮತ್ತು. ಅಡಿಗೆಗೆಕಲಾಯಿ ಇರುವ ಹಿತ್ತಾಳೆ ಪಾತ್ರೆಗಳೇ ಬೇಕು. ಆಯಿ ಹಲವು ಸಣ್ಣ ದೊಡ್ಡ ಹಿತ್ತಾಳೆ ಪಾತ್ರೆಗಳನ್ನು ಕಲಾಯಿ ಹಾಕಲೆಂದೇ ತೆಗೆದಿಟ್ಟಿದ್ದಾಳೆ.

ಈ ಊರಲ್ಲಿ ಕಲಾಯಿ ಹಾಕುವವರು ಯಾರೂ ಇಲ್ಲ. ಬೇರೆ ಊರಿನಿಂದ ಕಲಾಯಿ ಹಾಕಲು ಒಬ್ಬಾತ ಎರಡು ಮೂರು ತಿಂಗಳಿಗೊಮ್ಮೆ ಬರುತ್ತಾನೆ. ಅವನ ಹೆಸರು ಚಂದು. ದೋಣಿಯ ಬದಲು ಹೆಚ್ಚಾಗಿ ಕಾಲು ಹಾದಿ, ಗದ್ದೆ ಬದುವು, ಹೊಳೆನೀರು ಕಡಿಮೆ ಹರಿಯುವ ಬಳಸು ದಾರಿ ಹಿಡಿಯುತ್ತಾನೆ. ಅಲ್ಲಲ್ಲಿ ಕಲಾಯಿ ಸಂಪಾದನೆ ಸಿಗುತ್ತದೆ. ಈ ಊರಿಗೆ ಬಂದರೆ ಅವನ ಠಿಕಾಣಿ ಟಪಾಲು ಪೆಟ್ಟಿಗೆ ಕಟ್ಟಿದ ಹುಳಿಮಾವಿನ ಮರದ ಕೆಳಗೆ. ಟಪ್ಪಾಲು ಪೆಟ್ಟಿಗೆ ಬಂದದ್ದೂ ಕಳೆದ ವರ್ಷವೇ. ಅದಕ್ಕೂ ಮೊದಲು ಊರಿಗೆ ಪತ್ರಗಳು ಈ ಬದಿಗೆ ಬರುವ ಇತರೇ ಜನರಿಂದ ಅಥವಾ ದೋಣಿ ಮೂಲಕ ಬಂದು ಜನರ ಕೈ ಸೇರುತ್ತಿದ್ದವು. ಟಪಾಲು ಪೆಟ್ಟಿಗೆಗೆ ಒಂದು ಬೀಗ.

ವಾರಕ್ಕೆ ಎರಡುಬಾರಿ ಒಬ್ಬಾತ ಬಂದು ಟಪ್ಪಾಲು ಪೆಟ್ಟಿಗೆಯ ಬೀಗ ತೆಗೆದು ಅದರಲ್ಲಿದ್ದ ಪತ್ರಗಳನ್ನು ತೆಗೆದುಕೊಳ್ಳುತ್ತಾನೆ. ಅದೇ ವೇಳೆ ತನ್ನ ಕೈಚೀಲದಲ್ಲಿದ್ದ ಪತ್ರಗಳನ್ನು ಊರ ಜನರಿಗೆ ಹಂಚುತ್ತಾನೆ. ದೂರ ದೂರದ ಮನೆಗಳಿಗೆ ಬಂದ ಪತ್ರಗಳನ್ನು ಹೋಗಿ ಕೊಡುವುದು ಕಷ್ಟದ ಕೆಲಸ. ಅವನ್ನು ಸಮೀಪದ ಸಣ್ಣ ಸೋಡಾ ಅಂಗಡಿಯಲ್ಲಿಟ್ಟು ಹೋಗುತ್ತಾನೆ. ಅವನದು ಖಾಕಿ ಚಡ್ಡಿ, ಖಾಕಿ ಅಂಗಿ. ಅದೇ ಬಣ್ಣದ ಚೀಲ. ಬ್ರಿಟಿಷರ ಪೋಷಾಕು. ಅವನು ಬರುವ ನಿಗದಿತ ದಿನಕ್ಕೆ ಊರ ಜನರೇ ಬಂದು ಕಾದು ನಿಂತು ಪತ್ರ ಪಡೆದು, ಓದಲು ಬಾರದವರು ಅವನಿಂದಲೇ ತಮ್ಮ ಬಂಧುಗಳ ಪತ್ರ ಓದಿಸಿಕೊಂಡು ಹೋಗುವುದು ವಾಡಿಕೆ.

ಈ ಕಾರಣದಿಂದ ಚಂದು ಆರಿಸಿಕೊಂಡದ್ದು ಇದೇ ಹುಳಿಮಾವಿನ ಮರದ ನೆರಳನ್ನು. ಅವನು ಬಂದ ಸುಳಿವು ಸಿಕ್ಕಿದಾಕ್ಷಣ ಗೌರಿ, ನಾಣಿಯ ಕಾಲುಗಳು ನೆಲದ ಮೇಲೆ ನಿಲ್ಲುವುದಿಲ್ಲ. ಹಾರಿ ಹಾರಿ ಬಂದು ಚಂದೂ ಕಲಾಯಿ ಹಾಕುವುದನ್ನು ನೋಡುತ್ತ ಅಲ್ಲೇ ಸ್ಥಾಪನೆ. ಕಲಾಯಿ ಇಲ್ಲದ ಪಾತ್ರೆ ಒಳಗೆ ನಸು ತಾಮ್ರದ ಬಣ್ಣ.  ಚಂದೂ ಮೊದಲು ಬೆಂಕಿ ಉರಿಸಿ ನಿಗಿ ನಿಗಿ ಕೆಂಡ ತಯಾರಿಸಿ ಊರ ಮಂದಿ ತಂದು ಕೊಡುವ ಪಾತ್ರೆಗಳನ್ನು ಬಿಸಿ ಮಾಡಿ ಆಮೇಲೆ ಏನೋ ಒಂದನ್ನು ಪಾತ್ರೆಗೆ ಹಾಕಿ ತಿಕ್ಕಿ ತಿಕ್ಕಿ ಒಳ ಭಾಗ ಬೆಳ್ಳಿಯಂತೆ ಮಾಡುವಾಗ ಇಬ್ಬರ ಕಣ್ಣುಗಳಲ್ಲಿ ನೂರು ಬೆಳ್ಳಿಯ ಮೆರಗು! ಎಷ್ಟು ಚೆಂದ!

| ಇನ್ನು ನಾಳೆಗೆ |

‍ಲೇಖಕರು Admin

July 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Theresa Madtha

    “ನಮ್ಮ ಮನಸ್ಥಿತಿನೂ ಇದೇ……..
    ಇಂದು ಅಳು, ನಾಳೆ ನಗು, ಇಂದು ಸುಖ, ನಾಳೆ ದುಃಖ. ಇದೇ ಅಲ್ಲದಾ ಜೀವನ?”
    ಖಂಡಿತಾ ಹೌದು!!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: