ಎ ನಾಗಿಣಿ ಅನುವಾದಿತ ಒಂದು ಮದುವೆಯ ಕಥೆ ಭಾಗ 1..

ತೆಲುಗು ಮೂಲ : ಓಲ್ಗಾ

ಕನ್ನಡಕ್ಕೆ : ಎ ನಾಗಿಣಿ

ಓಲ್ಗಾ ಎಂಬುದು ಪೋಪೂರಿ ಲಲಿತ ಕುಮಾರಿ ಅವರ ಕಾವ್ಯನಾಮ. ತೆಲುಗು ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಬೆಳೆಸಿದ ಪ್ರಮುಖರಲ್ಲೊಬ್ಬರು ಓಲ್ಗಾ. ತೆಲುಗು ಲೇಖಕರಾದ ಚಲಂ, ಕೊಡವಗಂಟಿ ಕುಟುಂಬರಾವ್‌ ಅವರ ಬರಹಗಳಿಂದ ಪ್ರಭಾವಿತರಾಗಿ ಸ್ತ್ರೀ ಚೈತನ್ಯವನ್ನೇ ತಮ್ಮ ಬರಹದ ಮುಖ್ಯ ಉದ್ದೇಶವಾಗಿಸಿಕೊಂಡ ಓಲ್ಗಾ, ಕಥೆ, ಕಾದಂಬರಿ, ಅನುವಾದ, ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

೧೯೫೦ ನವೆಂಬರ್‌ ೨೭ ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಯಡ್ಲಪಲ್ಲಿ ಗ್ರಾಮದಲ್ಲಿ ಓಲ್ಗಾ ಜನಿಸಿದರು. ಇವರ ತಂದೆ ಪೋಪೂರಿ ವೆಂಕಟಸುಬ್ಬಯ್ಯ, ತಾಯಿ ವೆಂಕಟಸುಬ್ಬಮ್ಮ. ಆಂಧ್ರ ವಿಶ್ವವಿದ್ಯಾಲಯದಿಂದ ತೆಲುಗು ಎಂ.ಎ ಪದವಿ ಪಡೆದ ನಂತರ ತೆನಾಲಿಯ ವಿ.ಎಸ್.ಆರ್.‌ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದರು;೧೯೯೧ ರಿಂದ ೧೯೯೭ ರವರೆಗೆ ಅಸ್ಮಿತ ಸೆಂಟರ್‌ ಫಾರ್‌ ವಿಮೆನ್‌ ಸಂಸ್ಥೆಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ; ತೆಲುಗು ಚಲನಚಿತ್ರ ರಂಗದ ʼಉಷಾಕಿರಣ್‌ʼ ಸಂಸ್ಥೆಗೆ ಕಥಾ ರಚನಕಾರ್ತಿಯಾಗಿ ಮೂರು ಚಿತ್ರಗಳನ್ನು ನಿರ್ಮಿಸಿ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅಸ್ಮಿತ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿದ್ದಾರೆ.

ಸಹಜ, ಸ್ವೇಚ್ಛ, ಕನ್ನೀಟಿ ಕೆರಟಾಲ ವೆನ್ನೆಲ, ಆಕಾಶಂಲೋ ಸಗಂ, ಗುಲಾಬೀಲು, ಇವು ಓಲ್ಗಾ ಅವರ ಪ್ರಮುಖ ಕಾದಂಬರಿಗಳು. ʼಸಂತುಲಿತʼ ಅವರ ಪ್ರಮುಖ ವಿಮರ್ಶಾ ಕೃತಿ. ರಾಜಕೀಯ ಕಥಲು, ಭಿನ್ನ ಸಂದರ್ಭಾಲು, ಮೃಣ್ಮಯ ನಾದಂ, ವಿಮುಕ್ತ ಇವು ಕಥಾ ಸಂಕಲನಗಳು. ಅವರ ವಿಮುಕ್ತ ತೆಲುಗು ಕಥಾ ಸಂಕಲನಕ್ಕೆ ೨೦೧೫ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅವರ ಸ್ವೇಚ್ಛ ಬಹು ಚರ್ಚಿತ ಕಾದಂಬರಿಯಾಗಿದ್ದು, ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ.

ಈ ಕತೆಯು ಓಲ್ಗಾ ಅವರ ʼ ಓ ಪೆಳ್ಳಿ ಕಥʼ ಅನುವಾದ.

‘ಸದ್ಯ, ಅಂತೂ ಬಂದೆಯಲ್ಲ! ನಿನಗೋಸ್ಕರ  ಒಂದು ತಾಸಿನಿಂದ ಕಾಯತಾ ಇದ್ದೆ ಕಣೋ. ಕೈಕಾಲು ಮುಖ ತೊಳೆದು ಬೇಗ ಅಡುಗೆ ಮನೆಗೆ ಬಾ. ನಿನ್ನಿಂದ ಒಂದು ಕೆಲಸ ಆಗಬೇಕು.’ 

ಹೊಸ್ತಿಲಿಗೆ ಕಾಲಿಡುತ್ತಲೇ ‘ಚಲೆ ಚಯ್ಯ ಚಯ್ಯ ಚಯ್ಯಾʼ ಅಂತ ಕುಣಿತಾ, ಹಾಡ್ತಾ ಶೂ ಬಿಚ್ಚುತ್ತಿದ್ದ ಮಗನನ್ನು ನಿರ್ಮಲಾ ಅಡುಗೆ ಕೋಣೆಯಿಂದಲೇ ನೋಡಿ ಹಿಗ್ಗಿ ಕರೆದಳು.

 ಪ್ರಶಾಂತ್ ಬೆರಗಾಗಿ ನೋಡುತ್ತಾ ಅಡುಗೆ ಮನೆಯ ಕಡೆಗೆ ನಡೆದ. ಆ ಕಡೆಗೆ ಇಣುಕಿದರೆ ಸಾಕು, ಸಿಡಿಮಿಡಿಗೊಳ್ಳುವ ಅಮ್ಮ , ಇವತ್ತು ತಾನಾಗೇ ಕರಿತಾ ಇದಾಳೆ ಅಂದರೆ ಏನೋ ವಿಶೇಷವೇ ಇರಬೇಕು. 

ಅಲ್ಲಿ ನೋಡಿದ ಕೂಡಲೇ ಅಮ್ಮನ ಕರೆಗೆ ಕಾರಣ ಗೊತ್ತಾಯಿತು. ಆದರೆ ಮತ್ತದೇ ಗೊಂದಲ. ನನ್ನನ್ನೇ ಯಾಕೆ ಕರೆದಿರಬಹುದು?

‘ಕೈ ತೊಳೆದು ಬಂದು ಕಡಲೆ ಹಿಟ್ಟು ಕಲಿಸಿ ಕೊಡು ಮಗ, ಮೆಣಸಿನ ಕಾಯಿ ಬಜ್ಜಿಗೆ ನೀನು ಮಾಡಿದಾಗ ಬರುವ ರುಚಿ ನಾನು ಮಾಡಿದಾಗ ಬರೋದೇ ಇಲ್ಲ.ʼ ಸೇಫ್ಟಿ ಪಿನ್ನಿನಿಂದ ಮೆಣಸಿನಕಾಯಿಯ ಹೊಟ್ಟೆ ಸೀಳಿ, ಅದಕ್ಕೆ ಓಮುಕಾಳು, ಉಪ್ಪು ತುಂಬುತ್ತಿದ್ದಳು. 

‘ಯಾರಮ್ಮಾ ಬರತಾ ಇರೋದು?’ ಪ್ರಶಾಂತ್ ಪ್ರಶಾಂತವಾಗಿ ಕೇಳಿದ. 

ನಾನು ಮಾಡಿದ ಮೆಣಿಸಿನಕಾಯಿ ಬಜ್ಜಿ ರುಚಿಯಾಗಿರತ್ತೆ ಅನ್ನುವ ವಾಸ್ತವ ಅಮ್ಮನಿಗೆ ಅವಮಾನಕರ ಸಂಗತಿಯಾಗಿಯೂ, ಮೂರು ಕಾಸಿನ ಕೆಲಸವಾಗಿಯೂ ಕಾಣತ್ತೆ. ನಾನು ಅಡುಗೆ ಮಾಡಲು ನಿಂತರೆ ಮುಗಿಯುವ ಮೊದಲೇ ಸಾಕು ಮಾಡು ಅಂದು ಹೊರಗೆ ಅಟ್ಟುತ್ತಿದ್ದವಳು, ಇವತ್ತು ತಾನಾಗೇ ಕರೀತಾ ಇದಾಳೆ.

ಏನೋ ವಿಶೇಷವೇ ಇರಬೇಕು.

‘ಲೋ ನಿನ್ನ ಸಾಕ್ಸು ಗಬ್ಬು ವಾಸನೆ ಹೊಡಿತಿದೆ. ಕಳಚಿ ಬಿಸಾಕಿ ಬೇಗ ಕೈ ತೊಳೆದು ಬಾರೋ’ ನಿರ್ಮಲ ಗಡಿಬಿಡಿಯಲ್ಲಿದ್ದಳು.

‘ಅಮ್ಮಾ, ಬೆವರು ಸುರಿದ ಕೈಯಿಂದ ಮಾಡಿದಾಗ ಮಾತ್ರ ಮೆಣಸಿನ ಕಾಯಿ ಬಜ್ಜಿಗೆ ಅಸಲಿ ರುಚಿ ಬರತ್ತೆ. ರಸ್ತೆ ಪಕ್ಕದ ಬಜ್ಜಿಗೆ ಅಷ್ಟೊಂದು ರುಚಿ ಯಾಕಿರತ್ತೆ ಗೊತ್ತಾ ನಿನಗೆ? ಎಲ್ಲಿ ಹಿಟ್ಟು ಕೊಡು ಇಲ್ಲಿ’ ಅಂತಿದ್ದ ಮಗನನ್ನು ಬಚ್ಚಲು ಮನೆಗೆ ಅಟ್ಟಿದಳು ನಿರ್ಮಲ. ಅರ್ಧ ಗಂಟೆಯೊಳಗೆ ಬಿಸಿ ಬಿಸಿಯಾದ, ತೆಳುವಾದ, ಉದ್ದನೆಯ  ಮೆಣಸಿನ ಕಾಯಿ ಬಜ್ಜಿ ಹಾಟ್ ಪ್ಯಾಕಿನಲ್ಲಿ ಹೊಂದಿಕೊಂಡವು. 

ʼಈ ನುಣುಪು ನನಗೆ ಬರೋದೇ ಇಲ್ಲ ನೋಡು. ಒರಟೊರಟಾಗಿ ಇರತ್ತೆʼ ನಿರ್ಮಲ ಬಜ್ಜಿಯ ಕಡೆಗೆ ನೋಡಿ ಯೋಚನೆ ಮಾಡುತ್ತಾ ಅಂದಳು. 

ʼಹಾತ್‌ ಮೆ ಕಮಾಲ್‌ ಹೈ ಕಮಾಲ್.‌ ಅದಿರಲಿ, ದೀಪ್ತಿ ಎಲ್ಲಿ? ನಾವಿಬ್ಬರೂ ಇಲ್ಲಿ ಹೀಗೆ ಮೈಯ್ಯೆಲ್ಲಾ ಬೆವರು ಸುರಿಸುತ್ತಾ ಹೀಗೆ ಕಷ್ಟ ಪಡ್ತಾ ಇದ್ದರೆ ಅವಳು ರೂಮಲ್ಲಿ ಕಾದಂಬರಿ ಓದ್ತಾ ಕೂತಿದಾಳಾ?ʼ ಅವನು ಹೊಗೆ ಉಗಳಲು ಪ್ರಯತ್ನ ಮಾಡಿದ.

ʼಪಾಪ ಅವಳ ತಂಟೆಗೆ ಹೋಗಬೇಡವೋ. ಅವಳ ಕಷ್ಟ ಅವಳಿಗೆ,ʼ ನಿರ್ಮಲಾ ನಸು ನಗುತ್ತಾ ಹೇಳಿದಳು.

ಪ್ರಶಾಂತ್‌ಗೆ ಏನೋ ಅನುಮಾನ ಅನಿಸಿ ತಂಗಿಯ ಕೋಣೆಗೆ ಹೋದ. 

ದೀಪ್ತಿ ಅರ್ಧ ಮುಗಿದ ಅಲಂಕಾರದಲ್ಲಿದ್ದಳು. ದೀಪ್ತಿಯ ಗೆಳತಿ ಸಹಾಯ ಮಾಡುತ್ತಾ ಇದ್ದಳು.

ಪ್ರಶಾಂತನ ಅನುಮಾನ ನಿಜವಾಯಿತು.

ʼಇದೇನು ತಾಯಿ ಹುಡುಗನನ್ನ ನೋಡಲು ತಯಾರಾಗ್ತಾ ಇದ್ದೀಯ?ʼ ಅಂದ.

ದೀಪ್ತಿ ಮಿಸುಕಾಡದೇ ಸುಮಾಳಿಂದ ಮೇಕಪ್‌ ಹಾಕಿಸಿಕೊಳ್ಳತಾ ʼಊಂʼ ಅಂದಳು.

ʼನಾಚಿಕೆ ಆಗೋದಿಲ್ಲವಾ ನಿನಗೆʼ ನಗುತ್ತಾ ಅಂದ.

ʼದೀಪ್ತಿಗೆ ಮದುವೆ ಅಂದ ಕೂಡಲೇ ಅಷ್ಟೊಂದು ನಾಚಿಕೊಳ್ಳತ್ತಾ ಇದ್ದರೆ ನೀವೇನ್ರೀ ಹೀಗಂತೀರಾʼ ಅಂದಳು ಸುಮಾ.

ʼನಾನು ಹೇಳಿದ್ದು ನೀವಂದುಕೊಂಡ ನಾಚಿಕೆ ಬಗೆಗೆ ಅಲ್ಲ ಬಿಡಿʼ ಅನ್ನುತ್ತಾ ಪ್ರಶಾಂತ್‌ ಹೊರಗೆ ಬಂದ. 

ಹುಡುಗ ಬರದಿದ್ದರೂ ಹುಡುಗಿಯನ್ನು ನೋಡುವ ಶಾಸ್ತ್ರ  ಯಾವ ಅಡ್ಡಿಯೂ ಇಲ್ಲದೆ ಮುಗಿಯಿತು.

ಹುಡುಗ ಬರಲು ಈಗ ಅವನು ಈ ದೇಶದಲ್ಲಿ ಇಲ್ಲ. ಅಮೆರಿಕಾದಲ್ಲಿ ಇದಾನೆ. ಅವನು ಬರುವುದು ಮದುವೆಗೆ. ಅಪ್ಪ ಅಮ್ಮನ ಮಾತು ಮೀರದ ಶ್ರೀರಾಮಚಂದ್ರ. ವಿಧೇಯವಾಗಿರುವ, ಲಕ್ಷಣವಾಗಿರುವ ಸುಂದರ ಹುಡುಗಿಯಾದರೆ ಸಾಕು, ವರದಕ್ಷಿಣೆ ಕೂಡಾ ಬೇಕಿಲ್ಲವಂತೆ. ಪ್ರಶಾಂತ್‌ ಮಾಡಿದ ಬಿಸಿ ಬಿಸಿಯಾದ, ಖಾರದ ಮೆಣಿಸಿನ ಬಜ್ಜಿ ತಿನುತ್ತಾ ಸಿಹಿಯಾದ ಮಾತು ಹೇಳಿ ಹಿರಿಯರು ದಯಮಾಡಿಸಿದರು. ಸುಮ್ಮನೇ ದಯಮಾಡಿಸಿಲ್ಲ. ಹೋಗುವ ಮುನ್ನ ಹುಡುಗಿ ಇಷ್ಟವಾದಳೆಂದೂ ಮದುವೆ ಖಾತರಿ ಎಂದೂ ತಿಂಗಳೊಳಗೆ ಮುಹೂರ್ತ ನೋಡಿ ಮದುವೆ ಮಾಡಿ ಗಂಡು ಹೆಣ್ಣನ್ನು ಹನಿಮೂನಿಗೆ ಸ್ವಿಟ್ಜರ್ಲೆಂಡಿಗೆ ಕಳಿಸುವುದಾಗಿಯೂ ಹೇಳಿ ಹೋದರು. 

ನಿರ್ಮಲಾ ಪ್ರಸಾದ್‌ ದಂಪತಿಗೆ ಭೂಮಿಯ ಮೇಲೆ ನಿಲ್ಲಲು ಆಗುತ್ತಿಲ್ಲ. ದೀಪ್ತಿಯ ಬಗೆಗೆ ನಿರ್ಮಲಾಗೆ ಆತಂಕ ಕೂಡಾ ಇದೆ.

ಒಬ್ಬಳೇ ಹೆಣ್ಣುಮಗಳು. ಜೀವಕ್ಕೆ ಜೀವ ಅನ್ನುವ ಹಾಗೆ ಸಾಕಿದರು. ವರದಕ್ಷಿಣೆ ಕೊಟ್ಟು ಒಳ್ಳೆಯ ಹುಡುಗನನ್ನು ಹುಡುಕಲು ತಮಗೆ ಸಾಧ್ಯ ಆಗುತ್ತದಾ ಅನ್ನುವ ಚಿಂತೆಯಲ್ಲಿದ್ದರು. ಹುಡುಗಿ ದಂತದ ಬೊಂಬೆ, ಜಾಣೆ. ಇದೆಲ್ಲಾ ನಿಜವೇ ಆದರೂ ಈಗ ಹಣ ಇದ್ದರೆ ಮಾತ್ರ ಬೆಲೆ.

ಪ್ರಸಾದ್‌ ಸೆಕ್ರೆಟೇರಿಯಟ್‌ನಲ್ಲಿ ಸೆಕ್ಷನ್‌ ಆಫೀಸರಾಗಿ ಕೆಲಸ ಮಾಡತಾ ಇದಾನೆ. ಒಳ್ಳೆಯ ವ್ಯಕ್ತಿ.

ವೈಚಾರಿಕವಾಗಿ ಯೋಚನೆ ಮಾಡುವಾತ. ಯೂನಿಯನ್ನಿನಲ್ಲಿ ಚುರುಕಾಗಿ ಕೆಲಸ ಮಾಡುವವ. 

ಅವನು ಮಾಡಬೇಕಾದ ಯಾವ ಕೆಲಸವೂ ಪೆಂಡಿಂಗ್‌ ಇರುವುದಿಲ್ಲ. 

ಹೀಗೆ ಒಳ್ಳೆಯ ವ್ಯಕ್ತಿತ್ವ ಇರುವುದರಿಂದಲೇ ಲಂಚ ತೆಗೆದುಕೊಳ್ಳುವುದೂ ಗೊತ್ತಿಲ್ಲ.

ವಾರಗೆಯವರೆಲ್ಲ ನ್ಯಾಯದಿಂದಲೋ, ಅನ್ಯಾಯದಿಂದಲೋ ಲಕ್ಷಗಟ್ಟಲೆ ಹಣ ಗಳಿಸಿ ಮಗಳ ಮದುವೆ ಮಾಡುತ್ತಿರುವಾಗ ನೀತಿ ನಿಷ್ಠೆ ಅಂತ ಮಡಿಕಟ್ಟಿಕೊಂಡು ಕೂತ ಗಂಡನನ್ನು ಕಂಡು ನಿರ್ಮಲಾ ಆಗಾಗ ಸಿಟ್ಟಾಗುತ್ತಿದ್ದಳು..

ವಾಸ್ತವವಾಗಿ ಅವಳಿಗೂ ಆ ಕೆಲಸ ಮಾಡಲು ಮನಸು ಒಪ್ಪುವುದಿಲ್ಲ. ʼಹೇಗೋ ಆಗುತ್ತೆ ಬಿಡಿ ಪಾಪದ ಹಣ ನಮಗೆ ಬೇಡʼ ಅನ್ನುತ್ತಿದ್ದಳು. 

ಮಗ ಕಂಪ್ಯೂಟರ್ ಇಂಜನಿಯರ್‌ ಕೋರ್ಸಿನ ಕೊನೆಯ ವರ್ಷದಲ್ಲಿದಾನೆ. ದೀಪ್ತಿ ಪೋಸ್ಟ್‌ ಗ್ರಾಜ್ಯುಯೇಶನ್‌ಗೆ ಸೇರಿದಾಳೆ. ಇಬ್ಬರ ಕೋರ್ಸುಗಳೂ ತುಟ್ಟಿ.

ತಿಂಗಳ ಸಂಬಳ ಮನೆಯ ಖರ್ಚಿಗೆ ಸಾಕಾಗುತ್ತಿರುವಾಗ ಮಗಳ ಮದುವೆ ಹೇಗೆ ಮಾಡುವುದು ಅನ್ನುವ ಚಿಂತೆ ದೀಪ್ತಿ ಡಿಗ್ರಿ ಪಾಸಾಗಿ ಪೋಸ್ಟ್‌ ಗ್ರಾಜ್ಯುಯೇಶನ್‌ ಸೇರಿದ ಈ ಆರು ತಿಂಗಳಿನಿಂದ ಅವರಿಬ್ಬರನ್ನೂ ತುಂಬಾನೇ ಕಾಡತಾ ಇದೆ. ಮೊದಲು ಓದು ಮುಗಿಯಲಿ, ಪ್ರಶಾಂತನ ಕೋರ್ಸು ಮುಗಿದ ಮೇಲೆ ಯಾವುದೋ ಒಂದು ದಾರಿ ಸಿಗಬಹುದು ಅಂದುಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದರು.

ಈಗ ಬಂದ ಈ ಸಂಬಂಧ ಅವರಿಗೆ ದೇವರು ಕೊಟ್ಟ ವರ ಅನಿಸಿತು. ಈ ಸಂಬಂಧದ ಬಗೆಗೆ ಹೇಳಿದ್ದು ಪ್ರಸಾದನ ಗೆಳೆಯ ಸಾಯಿಪ್ರಕಾಶ, ನಿರ್ಮಲಾಳ ಕಣ್ಣಿಗೆ ಅವನೀಗ ಸಾಕ್ಷಾತ್‌ ಸಾಯಿಬಾಬಾ ಥರ ಕಾಣತಾ ಇದಾನೆ. 

ʼಪ್ರಾಮಾಣಿಕತೆ, ನಿಷ್ಠೆ ಇರುವವರನ್ನು ದೇವರು ಯಾವತ್ತೂ ಕೈ ಬಿಡುವುದಿಲ್ಲ ಕಣ್ರೀʼ ಗಂಡನನ್ನು ಹೆಮ್ಮೆಯಿಂದ ನೋಡಿದಳು.

ಪ್ರಸಾದನಿಗೂ ಇದು ಹೆಮ್ಮೆಯ ಸಂಗತಿಯೇ. ಆಗಲೇ ಬೇಕಲ್ಲವಾ ಮತ್ತೆ! ಅವನ ಕುಟುಂಬ ಒಳ್ಳೆಯದೆಂದೂ ತನ್ನ ಮಗಳು ಚೆಂದದ ಹುಡುಗಿ ಎಂದೂ ಅವನನ್ನು ಹುಡುಕಿಕೊಂಡು ಅಮೇರಿಕಾದಿಂದ ಬಂದ ಸಂಬಂಧ ಇದು. ವರದಕ್ಷಿಣೆ, ಕಾಣಿಕೆ ಇತ್ಯಾದಿ ಬೇಕಾಗಿಲ್ಲ ಅಂದರು.

ಚೆಂದದ, ಮುಗ್ಧ ಹುಡುಗಿಯ ಕೊರಳಿಗೆ ತಾಳಿ ಕಟ್ಟಿ ಅಮೇರಿಕಾದ ಹುಡುಗ ಹಾಯಾಗಿ ಬದುಕಬೇಕು ಅಂದುಕೊಳ್ಳತಾ ಇದಾನೆ. ತಿಂಗಳು ಕಳೆಯುವಷ್ಟರಲ್ಲಿ ತಮ್ಮ ಹೊರೆ ಇಳಿಯುವುದಷ್ಟೇ ಅಲ್ಲ, ಸಾಮಾಜಿಕ ಅಂತಸ್ತೂ ಬೆಳೆಯುತ್ತದೆ. 

ನಿರ್ಮಲ ಬಿಡುವು ಮಾಡಿಕೊಂಡು ನೆಂಟರಿಗೆಲ್ಲಾ ಫೋನು ಮಾಡಿ ಈ ಸಂಗತಿ ಕಿವಿಗೆ ಹಾಕುತ್ತಿದ್ದಳು.

ದೀಪ್ತಿ ಸುಮಾಳನ್ನು ಆ ದಿನ ತನ್ನ ಮನೆಯಲ್ಲೇ ಇರಲು ಕೇಳಿದಳು. ಗೂಡಿಗೆ ಸೇರಿದ ಪಾರಿವಾಳಗಳ ಹಾಗೆ ಇಬ್ಬರೂ ಗುಸುಪಿಸು ಮಾತಾಡುತ್ತಾ ಕೋಣೆ ಸೇರಿದರು.

ಪ್ರಶಾಂತನ ಬಗೆಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಡುಮನೆಯಿಂದ ತಂಗಿಯ ಕೋಣೆಗೆ ಶತಪಥ ಸುತ್ತುತ್ತಾ ಇದ್ದ. ಅಪ್ಪ ಅಮ್ಮ ಫೋನಿನ ಅಮಲಿನಿಂದ ಹೊರ ಬರುತ್ತಾ ಇಲ್ಲ.

ʼಅದೃಷ್ಟವೇ ಸರಿ – ಅಲ್ಲವೇನ್ರೀ ಮತ್ತೆ – ಕಾಲೇಜಾ – ಇನ್ನೆಲ್ಲಿಯ ಓದು ಕಣ್ರೀ, ತಿಂಗಳೊಳಗೆ ಅಮೆರಿಕಾಗೆ ಕರೆದುಕೊಂಡು ಹೋಗುತ್ತಾರೆ. ಇಷ್ಟವಾದರೆ ಅಲ್ಲಿ ಯಾವುದೋ ಒಂದು ಕೋರ್ಸು ಮಾಡತಾಳೆ. ಅದರ ಅಗತ್ಯ ಕೂಡಾ ಇಲ್ಲ ಅನಿಸತ್ತೆ. ಹುಡುಗನದು ಸ್ವಂತದ್ದೇ ಕಂಪನಿ. ಚೆನ್ನಾಗಿ ನಡಿತಾ ಇದೆ. ಸಂಪಾದನೆ ತುಂಬಾ ಚೆನ್ನಾಗಿದೆʼ.

ಇದೇ ವಿವರಗಳನ್ನು ಒಬ್ಬರ ನಂತರ ಒಬ್ಬರಿಗೆ ಬೇಸರವೇ ಇಲ್ಲದೆ ಹೇಳುತ್ತಾ ಇದ್ದರು.

ಆ ದಿನ ಯಾರಿಗೂ ಊಟ ಕೂಡಾ ಬೇಕಿರಲಿಲ್ಲ. 

ಮರುದಿವಸ ಭಾನುವಾರ.

ಈ ಖುಷಿಯನ್ನು ಹಂಚಿಕೊಳ್ಳಲು ನೆಂಟರೆಲ್ಲಾ ಮನೆಗೆ ಬರುತ್ತಲೇ ಇದ್ದರು. ಹೊತ್ತಿಸಿದ ಒಲೆ ಆರಿಸುವ ಪ್ರಮೇಯವೇ ಇಲ್ಲದೇ ನಿರ್ಮಲಾ ಬಂದವರಿಗೆ ಕಾಫಿ, ಟೀ ಮಾಡಿ ಕೊಡುತ್ತಿದ್ದಳು. ಸೋಮವಾರ ಎಂದಿನ ಹಾಗೆ ಬೆಳಗಾಯಿತು.

ಪ್ರಸಾದು ಆಫೀಸಿಗೆ ತಯಾರಾಗುತ್ತಾ ಇದ್ದ. ನಿರ್ಮಲಾ ಗಂಡನಿಗೆ, ಮಗನಿಗೆ ತಿಂಡಿ, ಮಧ್ಯಾಹ್ನದ ಊಟಕ್ಕೆ ಚಪಾತಿ ಮಾಡುವ ಕೆಲದಲ್ಲಿದ್ದಳು. ದೀಪ್ತಿ ಅಮ್ಮನಿಗೆ ಸಹಾಯ ಮಾಡುತ್ತಿದ್ದಳು.

ʼಇವನು ಯಾಕೆ ಇನ್ನೂ ಎದ್ದಿಲ್ಲʼ ಮಂಚದ ಮೇಲೆ ಮುಸುಕೆಳೆದುಕೊಂಡು ಮಲಗಿದ್ದ ಮಗನನ್ನು ನೋಡುತ್ತಾ ಪ್ರಸಾದು ಕೇಳಿದ. 

ʼಯಾಕೋ ಗೊತ್ತಿಲ್ಲ! ನೋಡ್ತೀನಿ ಇರಿ. ಮೈ ಬಿಸಿ ಆಗಿರಬಹುದಾ?ʼ ಅನ್ನುತ್ತಾ ನಿರ್ಮಲಾ ಪ್ರಶಾಂತ್‌ ಹೊದ್ದಿದ್ದ ದುಪ್ಪಟಿಯನ್ನು ಎಳೆದು ಹಾಕಿ ಹಣೆಯ ಮೇಲೆ ಕೈ ಇಟ್ಟು ನೋಡಿದಳು. ಯಾವ ಬಿಸಿಯೂ ಇಲ್ಲ.

ಪ್ರಶಾಂತ್‌ ಕಣ್ಣು ಬಿಟ್ಟು ನಕ್ಕ.

ʼಯಾಕೋ ಕಾಲೇಜು ಇಲ್ಲವಾ ಇವತ್ತು?ʼ

ʼಇದೆʼ. ಆಕಳಿಸಿದ.

ʼಮತ್ತೆ ಏನಿದು? ಎಂಟೂವರೆ ಆಗಿದೆʼ. ನಿರ್ಮಲಾಗೆ ಸಿಟ್ಟು ಬಂದಿತ್ತು.

ʼನಾ ಕಾಲೇಜಿಗೆ ಹೋಗೋದಿಲ್ಲ ಅಮ್ಮಾʼ ಮತ್ತೆ ಮುಸುಗು ಹಾಕುತ್ತಾ ಹೇಳಿದ.

ʼಕ್ಲಾಸಿಲ್ಲವಾ?ʼ

ʼಇದೆ. ಚಕ್ಕರ್‌ ಗಿಕ್ಕರ್‌ ಹಾಕಲ್ಲ. ಓದು ನಿಲ್ಲಿಸಿಬಿಟ್ಟೆ. ಇವತ್ತಿಂದ ಕಾಲೇಜಿಗೆ ಹೋಗುವುದಿಲ್ಲʼ.

ʼತರಲೆ ಸಾಕು ಮಾಡಿ ಎದ್ದೇಳು. ನಿನ್ನ ಜೊತೆ ಹರಟೆ ಹೊಡೆಯುವಷ್ಟು ಬಿಡುವಿಲ್ಲʼ ಅಲ್ಲಿಂದ ನಿರ್ಮಲ ಓಡಿದಳು. ಅಡುಗೆ ಮನೆಯಿಂದ ಕುಕ್ಕರ್‌ ಒಂದೇ ಸಮನೆ ಕೂಗುತ್ತಿತ್ತು.

ಪ್ರಸಾದ್‌ ಆಫೀಸಿಗೆ ಹೊರಟು ಹೋದ.

ಪ್ರಶಾಂತ್‌ ದಿನವಿಡೀ ಪೇಪರ್‌, ಪುಸ್ತಕ ಓದುತ್ತಾ ಮನೆಯಲ್ಲೇ ಇದ್ದ.

ಎರಡು ದಿನ ಹೀಗೆ ಕಳೆಯುವ ಹೊತ್ತಿಗೆ ನಿರ್ಮಲಾಳಿಗೆ ಅನುಮಾನ ಬಂತು.

ʼಏನಾಯ್ತೋ? ಕ್ಲಾಸ್‌ ಯಾಕಿಲ್ಲ? ಸ್ಟ್ರೈಕ್‌ ನಡೀತಿದೆಯಾ?ʼ

ʼಕ್ಲಾಸ್‌ ಯಾಕೆ ನಡೆಯಲ್ಲ? ಯಾವ ಅಡ್ಡಿಯೂ ಇಲ್ಲದೇ ನಡೀತಾ ಇವೆ. ನಾನು ಇನ್ಮೇಲೆ ಕಾಲೇಜಿಗೆ ಹೋಗೊದಿಲ್ಲ ಅಂತ ಹೇಳಿದೆ ತಾನೇʼ

ನಿರ್ಮಲಾಳಿಗೆ ಎದೆ ಒಡೆದ ಹಾಗಾಯಿತು.

ʼಯಾಕೋ? ಯಾಕೆ ಹೋಗುವುದಿಲ್ಲ ಕಾಲೇಜಿಗೆ? ಇಂಜನಿಯರಿಂಗ್‌ ಕೊನೆಯ ವರ್ಷದಲ್ಲಿ ಇರೋವಾಗ ಕಾಲೇಜಿಗೆ ಹೋಗುವುದಿಲ್ಲ ಅಂದರೆ ಏನರ್ಥ? ಯಾವ ಘನಕಾರ್ಯ ಮಾಡಿದೆ ಕಾಲೇಜಿನಲ್ಲಿ?ʼ ಮಗ ಯಾವುದಾದರೂ ಮಾಡಬಾರದ ಕೆಲಸ ಮಾಡಿ ಕಾಲೇಜಿನಿಂದ ಹೊರ ದಬ್ಬಿದರಾ ಅನ್ನುವ ಅನುಮಾನ ಬಂದು ನಿರ್ಮಲಾ ಗಾಬರಿಯಾದಳು. 

ʼಅಮ್ಮಾ, ನಾನೇನೂ ಮಾಡಿಲ್ಲ. ಇದಕ್ಕೂ ಕಾಲೇಜಿಗೂ ಸಂಬಂಧವಿಲ್ಲ. ನನಗೆ ಇಷ್ಟವಿಲ್ಲʼ ಪ್ರಶಾಂತನಿಗೆ ಅಮ್ಮನ ಮಾತಿನರ್ಥವಾಯಿತು. 

ʼಯಾಕೆ? ಏನು ರೋಗ ನಿನಗೆ?ʼ

ʼನಾನು ಮದುವೆ ಆಗಬೇಕು ಅಂದುಕೊಂಡಿದೇನೆʼ

ನಿರ್ಮಲಾಗೆ ಪಿತ್ತ ನೆತ್ತಿಗೇರಿತು.

ʼ ನಿಂಗೇನು ತಲೆ ಕೆಟ್ಟಿದ್ಯಾ? ಹೊಟ್ಟೆ ಉರೀತಿದೆ. ಅಪ್ಪ ಬರಲಿ ಹೇಳ್ತೀನಿʼ. ʼಇವನೊಂದಿಗೆ ವಾದ ಯಾಕೆʼ ಅಂದುಕೊಂಡು ಅಲ್ಲಿಂದ ಎದ್ದು ಹೊರ ನಡೆದಳು. ಸಂಜೆ ಪ್ರಸಾದ್‌ ಮನೆಗೆ ಬಂದು ಚಪ್ಪಲಿ ಕೂಡಾ ಬಿಚ್ಚಿರಲಿಲ್ಲ.

ʼಏನ್ರೀ..ನೋಡಿದಿರಾ ಇವನ ವರಸೆ?ʼ ಅನ್ನುತ್ತಾ ಬಂದಳು.

ಮೂರು ದಿನ ಮಗ ಮನೆಯಲ್ಲೇ ಕೂತಿದ್ದು ಆಕೆಗೆ ಎದೆಯ ಮೇಲೆ ಭಾರ ಹೊತ್ತುಕೊಂಡ ಹಾಗಿತ್ತು. ಅವಳ ಗಾಬರಿಯನ್ನು ನೋಡಿ ಪ್ರಸಾದನಿಗೆ ಮತ್ತಷ್ಟು ಗಾಬರಿ ಆಯಿತು.

ʼಯಾಕೆ, ಏನಾಯ್ತು?ʼ ಗಾಬರಿಯಾಗಿ ಕೇಳಿದ.

ʼಅವನು ಕಾಲೇಜು ಬಿಟ್ಟಿದಾನೆ. ಮದುವೆ ಆಗತಾನಂತೆʼ.

| ಮುಂದುವರೆಯುತ್ತದೆ |

‍ಲೇಖಕರು Admin

November 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: