ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ 

ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ ವ್ಯಕ್ತಿಗೆ/ಗುಂಪಿಗೆ(?) ನವಿರು ಭಾವನೆಗಳು ಮತ್ತು ತೀವ್ರ ಜೀವ-ಜೀವನ ವಿರೋಧಿ ದೃಷ್ಟಿಕೋನಗಳ ನಡುವಿನ ವ್ಯತ್ಯಾಸಗಳ ಅರಿವಿಲ್ಲ ಎಂದು ಹೇಳಬಹುದು.

‘ಲವ್’ ಎಂಬುದು ಜೀವ-ಜೀವನ ಪರವಾದ ಉದಾತ್ತ ಭಾವನೆ. ಅದಕ್ಕೆ ಯಾವುದೇ ತೆರನಾದ ಗಡಿಗಳಿಲ್ಲ. ಅದು ಯಾಕೆ, ಹೇಗೆ, ಯಾರಲ್ಲಿ, ಯಾವಾಗ ಜನ್ಮ ತಳೆಯುತ್ತದೆ ಎಂಬುದು ಹೇಳುವುದಕ್ಕಾಗುತ್ತದೆಯೇ? ಆದುದರಿಂದ ಅದರ ಉಗಮವೇ ವಿಸ್ಮಯಕಾರಿ ವಿಷಯ. ಭಾವನೇತರ ಕಾರಣಗಳ ಗರ್ಭದಿಂದ ಅದು ಉದ್ಭವಿಸಬೇಕಿಲ್ಲ. ಅದೊಂದು ಪುಳಕಗೊಳಿಸುವ ಹರಹು.

‘ಜಿಹಾದ್’ ಎಂದರೆ ಯುದ್ಧ. ಯುದ್ಧದಲ್ಲಿ ಗೆಲ್ಲುವವರು ಇರುತ್ತಾರೆ; ಸೋಲುವವರರು ಸಹ.  ಹಾಗೆಯೇ ಯುದ್ಧ ವಿರಾಮ ಘೋಷಿತವಾದರೇ, ಯಾರೂ ಗೆಲ್ಲುವುದಿಲ್ಲ; ಸೋಲುವುದಿಲ್ಲ.  ಆದರೆ ಯುದ್ಧದಲ್ಲಿ ಕ್ರೌರ್ಯ, ದ್ವೇಷ, ಜಿದ್ದು, ಅಮಾನವೀಯತೆ, ಹಿಂಸೆ ಇತ್ಯಾದಿಗಳು ವಿಜೃಂಭಿಸುತ್ತವೆ. ಇವೆಲ್ಲ ಋಣಾತ್ಮಕ ಸಂಗತಿಗಳು. 

ಯುದ್ಧದಿಂದ ಸಂಭವಿಸುವ ಲುಕ್ಸಾನು ಒಂದೇ, ಎರಡೇ. ಅನೇಕ ಕುಟುಂಬಗಳು ಕಣ್ಣೀರಲ್ಲೇ ಕೈ ತೊಳೆಯಬೇಕಾದ ಸಂದರ್ಭಗಳೇ ಜಾಸ್ತಿ. ಯುದ್ಧದಲ್ಲಿ ಮೃತರಾದವರಿಗೆ ಹುತಾತ್ಮರು ಎಂಬ ಪಟ್ಟವೇನೋ ದೊರೆಯುತ್ತದೆ. ಆದರೆ ಆ ಹುತಾತ್ಮರ ಕುಟುಂಬದವರು ಸತ್ತಂತೆ ಇರಬೇಕಾದ ಎಷ್ಟೋ ನಿದರ್ಶನಗಳು ಇರುತ್ತವೆ.

ಹೀಗಿರಬೇಕಾದರೇ, ಇಂತಹ ‘ಜಿಹಾದ್’ ಎಂಬ ಪದವನ್ನು ‘ಲವ್’ ಪದದ ಜೊತೆ ಸೇರಿಸುವದೇ ಮಾನಸಿಕ ಅಸ್ವಸ್ಥತೆಯ ಲಕ್ಷಣ. ಇದರ ಹಿಂದಿರುವುದು ಅಪ್ಪಟ ರಾಜಕೀಯ ಲೆಕ್ಕಾಚಾರ. ಮತಗಳ ನಡುವೆ ವೈಷಮ್ಯ ಬೆಳೆಸುವ ಹುನ್ನಾರ. ಒಬ್ಬ ಪ್ರಾಪ್ತ ವಯಸ್ಸಿನ ಗಂಡು-ಹೆಣ್ಣು, ಗಂಡ-ಹೆಂಡತಿಯಾಗಲು ಯಾವುದೇ ನಿರ್ಬಂಧವಿಲ್ಲ. ನಮ್ಮ ಸಂವಿಧಾನದ ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾದ ಜೋಡಿಗಳಿಗೆ ಅವರ ಮತಗಳ ವೈಯಕ್ತಿಕ ಕಾನೂನುಗಳು ಅಡ್ಡಿ ಬರುವುದಿಲ್ಲ.

ನಮ್ಮ ದೇಶದಲ್ಲಿ  ಮಹಿಳೆಯರಿಗೆ/ಹೆಣ್ಣು ಮಕ್ಕಳಿಗೆ ಸಂಬಂಧಿಸಿದಂತೆ ಅನೇಕ ಆತಂಕಕಾರಿ, ಗಾಬರಿ ಹುಟ್ಟಿಸುವ ವಿಷಯಗಳಿವೆ; ಘಟನೆಗಳು ಜರಗುತ್ತಿವೆ. ಅಪೌಷ್ಟಿಕತೆಯಿಂದ ನರಳುವ ತಾಯಂದಿರು/ಮಕ್ಕಳು, ಪಿತೃಪ್ರಧಾನತೆಯಿಂದ ನಲುಗುವ ಹೆಣ್ಣು ಮಕ್ಕಳು, ವಿದ್ಯಾಭ್ಯಾಸದಿಂದ ವಂಚಿತರಾಗುವ ಅಸಂಖ್ಯಾತ ಬಾಲಕಿಯರು, ಅತ್ಯಾಚಾರಗಳಿಗೆ ಬಲಿಯಾಗುವ ಮುಗ್ಧ ಹೆಣ್ಣು ಮಕ್ಕಳು, ವರದಕ್ಷಿಣೆಗಾಗಿ ಜೀವ ಕಳೆದುಕೊಳ್ಳುವ ನವವಧುಗಳು, ಲಿಂಗ ಅಸಮಾನತೆಯಿಂದ ಪೀಡಿತರಾಗುವ ಮಹಿಳೆಯರು, ಮಹಿಳೆಯರನ್ನು ಸರಕಾಗಿ ಕಾಣುವ ದೃಷ್ಟಿಕೋನಗಳು, ಇನ್ನೂ ಅನೇಕ ಗಂಭೀರ ಸಮಸ್ಯೆಗಳು ನಮ್ಮ ಮುಂದಿವೆ.

ಇವುಗಳ ಬಗೆಗೆ ಗಮನವನ್ನು ಹರಿಸಿ, ಮಧ್ಯಪ್ರವೇಶ ಮಾಡಿ, ಕಾರ್ಯೋನ್ಮುಖರಾಗುವುದು ಅವಶ್ಯ. ಬೇರೆ ಮಾತುಗಳಲ್ಲಿ ಹೇಳುವುದಾದರೇ, ಇಂತಹ ಅನಿಷ್ಟಗಳ ವಿರುದ್ಧ ಜಿಹಾದ್ ಜರುಗಲಿ; ಲವ್ ವಿರುದ್ಧ ಬೇಡ!

ಏನೇ ಅಡ್ಡಿ, ಆತಂಕಗಳಿರಲಿ, ಜೋಡಿಗಳು ವಿವಾಹವಾಗಲಿ, ಜೀವನವನ್ನು ನಡೆಸಲಿ…

ಇಷ್ಟಕ್ಕೂ, ಇದು ದಿಲ್ ಕಾ ಮಾಮ್ಲಾ ಹೈ, ಅಲ್ಲವೇ?

‍ಲೇಖಕರು Avadhi

November 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಲೇಖನ ಸಮಯೋಚಿತವಾಗಿದೆ. ಅನಾದಿ ಕಾಲದಿಂದಲೂ ಪ್ರೀತಿಯ ಬಗ್ಗೆ ಮಾತನ್ನು, ಮಾನವೀಯತೆಯ ಪರಿಭಾಷೆಯಲ್ಲಿ ನಾವು ಆಡುತ್ತಲೇ ಇದ್ದೇವೆ. ಆದರೆ ಈಗ ಇದ್ದಕ್ಕಿದಂತೆ, ಲೇಖಕರು ಗುರುತಿಸುವಂತೆ ಕರ್ಮಠ ಮೂಲಭೂತವಾದಿಗಳು, ಹಿಂಬಾಗಿಲಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರೀತಿಗೆ ಜಿಹಾದ್ ಪಟ್ಟ ಕಟ್ಟಿದ್ದಾರೆ. ಸುಪ್ರೀಂ ಕೋರ್ಟ್ ವಿವಾಹಕ್ಕಾಗಿಯೇ ಮತಾಂತರ ಹೊಂದುವುದು ಸರಿಯಲ್ಲ ಎಂದು ಹೇಳಿದ್ದನ್ನೇ ತಿರುಚಿ ಅಂತರ್ಜಾತಿಯ ಅದರಲ್ಲೂ ಹಿಂದು ಮುಸ್ಲಿಮ್ ವಿವಾಹ ಕಾನೂನು ಬಾಹಿರವೆಂದು ಅಪಪ್ರಚಾರ ಮಾಡಲಾಗುತ್ತಿದೆ. ಯಾವತ್ತು ಧರ್ಮ ಶ್ರೇಷ್ಠತೆಯನ್ನೇ ಜಪಿಸುವ, ಯುದ್ಧೋದುನ್ಮಾದ ಮಾತುಗಳನ್ನು ಉದುರಿಸುವ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕಾನೂನನ್ನೂ ತಂದಿದ್ದಾರೆ. ನಮ್ಮಲ್ಲಿ ಆಗಲೇ ಮುಖ್ಯಮಂತ್ರಿ ಯಡ್ಯೂರಪ್ಪರವರು ಅದನ್ನೇ ಅನುಸರಿಸುತ್ತೇನೆಂದು ಹೇಳಿರುವುದು – ಪ್ರೀತಿಯ ಗಂಧ ಗಾಳಿ ಗೊತ್ತಿಲ್ಲದ, ಮಾನಸಿಕ ಅಸ್ವಸ್ಥತೆಯನ್ನು ತೋರುತ್ತದೆ. ಇದು ದಿಲ್ ಕಾ ಮಾಮ್ಲಾ ಹೈ ಅನ್ನುವುದು ಅವರ ಅರಿವಿಗೆ ಬರಬೇಕಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: