ಎಸ್ ದಿವಾಕರ್ ಹೊಸ ಕವಿತೆಗಳು

ಕಪ್ಪೆ

ಕಪ್ಪೆಯ ಎದೆ ಮಿಡಿಯುತ್ತದೆ ಯಾರೂ ಅಂಗಲಾಚದಿದ್ದರೂ
ಇಲ್ಲಿಂದ ಅಲ್ಲಿಗೆ ನೆಗೆದುಬಿದ್ದರೂ

ಮಣ್ಣಲ್ಲಿ ಹೂತರೇನು ಎದ್ದು ಬರುತ್ತೆ ಕಪ್ಪೆ
ಏನೂ ಬದಲಾಗದೆ. ಮಳೆಗಾಲದಲ್ಲಿ ವಟರೆನ್ನುವುದು ಕೂಡ
ಕಳೆದ ವರ್ಷದಂತೆ

ಕುಪ್ಪಳಿಸದೆ ಕೂತರೆ ಕಪ್ಪೆಯ ಮೈಯೆಲ್ಲಾ
ಮಿಡಿಯುವ ಹೃದಯ
ಯಾರೋ ಬೀದಿಯಲ್ಲೆಸೆದ ಮಾಂಸದ ತುಂಡು
ಕೊಳೆತುಹೋದಂತೆ ಇದ್ದಕಿದ್ದಂತೆ

ವಿಜಯಪುರದಿಂದ ವಿಧಾನ ಸೌಧಕ್ಕೆ
ಅದೆಷ್ಟು ದೂರ
ಕಾರು, ಬಸ್ಸು, ರೈಲುಗಳಲ್ಲಿ ಕ್ರಮಿಸುತ್ತ ದಣಿದರೂ ನಾವು
ದಣಿಯುವುದಿಲ್ಲ ಕುಪ್ಪಳಿಸುವ ಕಪ್ಪೆ

ಒಮ್ಮೊಮ್ಮೆ ಸತ್ತಂತೆ ತೆಪ್ಪಗೆ ಕೂತೇ ಇರುವ ಈ ಪ್ರಾಣಿಯ ಗುಟ್ಟು
ರಟ್ಟಾಗುವುದು ಕೆಲವೇ ಕೆಲವರಿಗಷ್ಟೆ

ಬಾಲಮುರಳೀಗಾನ

ನೀನಿರುವುದೆಲ್ಲಿ? ಭಾಷೆ ಭಾಷೆಗಳೆಲ್ಲ ಕೊನೆಯಾಗುವಲ್ಲಿ?
ಕೇಳಿಸುತ್ತಿದೆಯೀಗ ಪ್ರತಿಮೆಗಳ ಉಸಿರಾಟ ಚಿತ್ರಪಟಗಳ ಮೌನ
ಬೇಸಿಗೆಯ ಸಂಜೆಗಳ ನೀರವದ ಎಲೆಯುದುರು
ಬಿಸಿಲು ಠಳ್ಳೆಂದೊಡೆದ ಗಾಜು.

 

ಕೆರೆಯಂಚಿನ ಗಿಡದ ಹಕ್ಕಿಗಳೆಲ್ಲ ಹಾರಿ
ಮರೆಯಾದವು ದೂರ ದೂರ. ನೀರ ಕನ್ನಡಿಯಲ್ಲಿ
ಮೂಡುತ್ತಿದೆಯೊಂದು ಅಲೆ; ಇನ್ನೇನು ಬೀಸಿಬಿಡಬಹುದೊಂದು
ಚಂಡಮಾರುತ.

ಕಲ್ಲು ಕರಗುವ ಸಮಯ ಬೇಕಿಲ್ಲ ಉಳಿಯೇಟು
ನೋಡುನೋಡುತ್ತ ಪುಡಿಪುಡಿಯಾಗಿ
ಕುಡಿಯೊಡೆಯುವ ಕಲ್ಲೆ
ಬಳ್ಳಿಮಾಡಗಳಾಗಿ ಹೂತಳೆದು ವರ್ಣಮಯ
ಚಿಟ್ಟೆಗಳ ಬಳಿ ಕರೆದು ವಿರಹಿ ರಾಧೆಯ ಕೈಯ
ಹಿಡಿದು ಕರೆತಂದಂತೆ ಶ್ರೀಕೃಷ್ಣ ಸನ್ನಿಧಿಗೆ

ಮಟಮಟ ಮಧ್ಯಾಹ್ನ ಸಮುದ್ರಕ್ಕೆ ಸ್ನಾನ ಮಾಡಿಸಿದಂತೆ
ಗೊಂಡಾರಣ್ಯವೇ ಕೈತೋಟಕ್ಕೆ ಬಂದುಬಿಟ್ಟಂತೆ
ಇಳಿಸಂಜೆ ಸೀಗೆಮೆಳೆಯಲ್ಲಿ ನುಸುಳಿದ ಹಾವು
ಸರಸರನೆ ತನ್ನದೇ ಪೊರೆಯ ಸುಲಿದಂತೆ
ಆಕಾಶದಿಂದ ಅಂಗಳಕ್ಕಿಳಿದ ಚಂದ್ರ
ಕಂದಮ್ಮಗಳ ಕಣ್ಣ ನೀರೊರಸಿದಂತೆ

ರಾಗವೆ? ಅಲ್ಲಲ್ಲ ಚರಾಚರದ ರೂಪಾಂತರ

ಕತ್ತಲು ತುಯ್ಯುವ ರಾತ್ರಿ. ಉಯ್ಯಲಾಡುವ ನಕ್ಷತ್ರಗಳ
ಹಾಡಿಂದ ಉದುರುತ್ತಿದೆ ಸ್ವರ-ಸೇಬು

ಹೋ ಬನ್ನಿ ಓಡೋಡಿ, ಎರಡೂ ಕೈಚಾಚಿ ಹಿಡಿದು ಸವಿಯಿರಿ

ಸಂತೋಷವೆನ್ನುವುದು ನೆಲದಲ್ಲಿಲ್ಲ
ನೆಲಕ್ಕಿಂತ ತುಸು ಮೇಲೆ

ವಿರಾಮ ಚಿಹ್ನೆಗಳು

 

ಪದ್ಯವಿರುತ್ತೆ ಆರಾಮಾಗಿ ಇಲ್ಲದೆ
ವಿರಾಮ
ಚಿಹ್ನೆ
ಅಷ್ಟು ಆರಾಮಾದರೆ ಗದ್ಯ
ಸೊರಗುತ್ತೆ ಓದುವವರಿಲ್ಲದ ಪದ್ಯದಂತೆ

ಒಣಗದ್ಯವಾದರೆ ಎಲ್ಲಾ ಸಲೀಸು
ರಾಜಕಾರಣದಂತೆ. ಸಲೀಸಲ್ಲ ಹದಿಹರೆಯದ ಯುವಕ
ಯವತಿಯರ ಸರಸ ಸಲ್ಲಾಪ
ಬೇಕೇ ಬೇಕು ಕೆಲವೊಮ್ಮೆ ಅಲ್ಪವಿರಾಮ

ಮೊದಲಿನದನ್ನು ನೆನಪಿಸಿಕೊಂಡು
ಬನ್ನಿರೆನ್ನುತ್ತೆ ಸೆಮಿಕೋಲನ್ನು; ಸದ್ದಿಲ್ಲದೆ ಸಮಾಜ
ಎದುರಿಗೇ ತಂದಿಡುತ್ತೆ ಕೋಲನ್ನು:

ಏನೋ ಒಡೆಯಿತೆನ್ನುತ್ತಾಳೆ ಯುವತಿ
ಇಬ್ಬರ ನಡುವೆ ಒಡೆದದ್ದೇನು ಒಂದು ಹೂದಾನಿ
ರಹಸ್ಯ ಒಪ್ಪಂದ ನೋಯುವ ಹೃದಯ ಕೈಬಳೆ ಹುಚ್ಚು ಪ್ರೇಮ
ಲಜ್ಜೆಯ ವಿಚಾರ ಅವಮಾನ ಟೆಲಿಫೋನ್ ಲೈನು
ಅಸಾಧ್ಯ ಮೌನ ನಿಟ್ಟುಸಿರು ಎಲ್ಲವೂ ಜೋಡಿ ಉದ್ಧರಣಗಳೊಳಗೆ

ಹೌದೇ ಎನ್ನುವ ಪ್ರಶ್ನಾರ್ಥಕವೇ ಆಶ್ಚರ್ಯಸೂಚಕ

ಜಪಾನಿ ಚಿತ್ರಲಿಪಿಯಲ್ಲಿ
ಕಣ್ಣಿನ ಚಿತ್ರಾಕ್ಷರಕ್ಕೆ ನೀರಿನ ಚಿತ್ರಾಕ್ಷರ ಸೇರಿಸಿದರೆ ಅಳು ಬರುತ್ತೆ
ಚೂರಿಯ ಚಿತ್ರಕ್ಕೆ ಹೃದಯದ ಚಿತ್ರ ಕೂಡಿದರೆ ಯಾತನೆಯಾಗುತ್ತೆ

ಪೂರ್ಣವಿರಾಮವೇ? ಇಲ್ಲಿಗೀ ಕತೆ ಮುಗಿಯಿತೆನ್ನುತ್ತೆ

ಅರೆಸ್ಟ್ ವಾರಂಟು

 

ಎದೆ ಸೆಟೆಸಿಕೊಂಡೇ ನಡೆಯುವುದುಂಟು
ಅರೆಸ್ಟ್ ವಾರಂಟು

ಇಲ್ಲವೇ ಇಲ್ಲ ಹೊತ್ತುಗೊತ್ತಿನ ಪರಿವೆ; ನಟ್ಟಿರುಳಲ್ಲಿ
ಚುಮುಚುಮು ನಸುಕಿನಲ್ಲಿ ಮಟಮಟ ಮಧ್ಯಾಹ್ನದಲ್ಲಿ
ಬಾರಿಸುತ್ತೆ ಕರೆಗಂಟೆ; ಬೂಟುಗಾಲಿಂದ ಡಬಡಬ
ಒದ್ದುಹಾಕುತ್ತೆ ಬಾಗಿಲು

ಮೆಟ್ಟಿಬಿದ್ದು ಕಣ್ಣುಜ್ಜಿ ಏನೊ ಎಂತೋ ಎಂದು
ಅಗುಳಿಯ ಸರಿಸಿ ಬಾಗಿಲು ತೆರೆದರೆ

ಅಲ್ಲೆ ಹೊಸ್ತಿಲಲ್ಲಿ ನಿಂತಿರುತ್ತೆ
ಇಡೀ ಬಾಗಿಲನ್ನು ಬಾಗಿಲಾಚೆಯ ರಸ್ತೆಯನ್ನು
ರಸ್ತೆಯ ಮೇಲಿನಾಕಾಶವನ್ನು ಆವರಿಸಿಕೊಂಡು

ಮನುಷ್ಯಾಕೃತಿಯಲ್ಲ ರಾಕ್ಷಸಾಕಾರವಲ್ಲ
ನಿರಾಕಾರ. ಬಲು ಭಾರಿ
ಕೈಯಲ್ಲಿರುವ ಕಾಗದದಿಂದ ತೊಟ್ಟಿಡುವ ರಕ್ತ

ಅರೆಸ್ಟ್ ವಾರಂಟಿಗುಂಟು ಸಾವಿರಾರು
ಪಾಪೆಗಳಿಲ್ಲದ ಕಣ್ಣು
ಗೊತ್ತಾಗುವುದು ಹೇಗೆ ಅತ್ತರೋ
ಆಪೋಶನ ತೆಗೆದುಕೊಂಡರೋ

ಬಾರಣ್ಣಾ ಎಂದು ಕರೆಯುವ ಬಂದೂಕಿನ ಭಾಷೆ
ಮೈದಡವಿ ಹತ್ತಿಸುತ್ತೆ
ಗವ್ವೆನ್ನುವ ಕರಾಳ ರಾತ್ರಿಯ ರೈಲನ್ನು
ಅಲ್ಲಿ ಚೂರಿಯ ಫಳಫಳದ ಕಿಂಚಿತ್ ಬೆಳಕಿಗೇ ದಂಗಾಗಿ
ಒಪ್ಪಿಕೊಳ್ಳಲೇಬೇಕು ಯಾರದೋ ತಪ್ಪನ್ನು

 

‍ಲೇಖಕರು avadhi

November 1, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಎನ್ಟಿ

    ಕವಿತೆಗಳು ಚೆನ್ನಾಗಿವೆ ದಿವಾಕರ್ ಸರ್..

    ಪ್ರತಿಕ್ರಿಯೆ
  2. ನೂತನ ದೋಶೆಟ್ಟಿ

    ಕಪ್ಪೆ ಕವಿತೆ …ಗೂಡು ಹಾಗೂ ಗಾಢ.

    ವಿರಾಮ ಚಿಹ್ನೆಗಳನ್ನು ಹೀಗೆ ಇದುವರೆಗೆ ಯಾರಾದರೂ ಯೋಚಿಸಿರಬಹುದೇ.
    ಸೆಮಿಕೋಲನ್ನು, ಕೋಲನ್ನು ಗಳು ಇನ್ನೂ ಹೇಳಲು ಬಾಕಿ ಇರುವುದನ್ನು ಈಗಲೂ ಆರಂಭಿಸುತ್ತಿದ್ದೇನೆ.

    ಪ್ರತಿಕ್ರಿಯೆ
  3. ನೂತನ ದೋಶೆಟ್ಟಿ

    ಕೆಲವು ತಪ್ಪುಗಳು..
    ಕಪ್ಪೆ ಕವಿತೆ..ಗೂಢ…
    ವಿರಾಮ ಚಿನ್ಹೆಗಳು…ಆಲೋಚಿಸುತ್ತಿದ್ದೇನೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: