'ಪಂಪಭಾರತ'ದ ಲೌಕಿಕದ ಭಿನ್ನ ನೆಲೆಗಳು

 ಬಿ.ಎ. ವಿವೇಕ ರೈ 
ಲೇಖನ ಕೃಪೆ: ‘ಉದಯವಾಣಿ’ ದೀಪಾವಳಿ ವಿಶೇಷಾಂಕ 
ಕನ್ನಡದ ಆದಿಕವಿ ಪಂಪ ತನ್ನ ಮಹಾಕಾವ್ಯ  ವಿಕ್ರಮಾರ್ಜುನ ವಿಜಯದ ಕೊನೆಯಲ್ಲಿ ಬೆಳಗುವೆನಿಲ್ಲಿ ಲೌಕಿಕಮನ್, ಅಲ್ಲಿ ಜಿನಾಗಮಮಮ್ ಸಮಸ್ತಭೂತಳಕೆ ಸಮಸ್ತಭಾರತಮುಮ್ ಆದಿಪುರಾಣಮುಮ್ ಎಂದು ಹೇಳಿಕೊಂಡಿದ್ದಾನೆ.
ಅದೇ ಕಾವ್ಯದ ಆರಂಭದಲ್ಲಿ ತನ್ನ ಭಾರತವು ವ್ಯಾಸಭಾರತಕ್ಕೆ ಋಣಿಯಾಗಿದೆ ಎನ್ನುವುದನ್ನು ವಿನಯಪೂರ್ವಕವಾಗಿ ಹೀಗೆ ಹೇಳುತ್ತಾನೆ:  ವ್ಯಾಸಮುನೀಂದ್ರರುಂದ್ರವಚನಾಮೃತ ವಾರ್ಧಿಯನ್ ಈಸುವೆಂ, ಕವಿವ್ಯಾಸನೆನ್ ಎಂಬ ಗರ್ವಂ ಎನಗಿಲ್ಲ. ಅದೇ ಉಸಿರಿನಲ್ಲಿ ಈ ಕಥೆಯೊಳ್ ಗುಣಾರ್ಣವ ಭೂಭುಜನಂ ಕಿರೀಟಿಯೊಳ್ ಪೋಲಿಪೊಡೆ ಎನಗೆ ಅಳ್ತಿಯಾದುದು ಎನ್ನುವ ಮಾತನ್ನು ಜೋಡಿಸುತ್ತಾನೆ.

ಪಂಪಾ

ತನ್ನ ಆಶ್ರಯದಾತನಾದ ಅರಿಕೇಸರಿಯೊಡನೆ ತನ್ನ ಭಾರತ ಕಥೆಯ ನಾಯಕನಾದ ಅರ್ಜುನನನ್ನು ಹೋಲಿಸಿ ಬರೆದ ತನ್ನ ಕಾವ್ಯವನ್ನು ಆತನೇ ಇತಿಹಾಸಕಥೆ  ಎಂದು ಘೋಷಿಸುತ್ತಾನೆ. ಹಾಗಾಗಿ ಪಂಪಭಾರತದಲ್ಲಿ ವ್ಯಾಸಮಹಾಭಾರತದ ಕಥೆ, ಅರಿಕೇಸರಿಯ ಇತಿಹಾಸ ಮತ್ತು ಕವಿ ಪಂಪ ತನ್ನ ಬದುಕಿನಲ್ಲಿ ಕಂಡ ಕೇಳಿದ ಲೌಕಿಕದ ಸಂಗತಿಗಳು ಒಂದರೊಡನೊಂದು ಬೆರೆತುಕೊಂಡಿವೆ.
ಅಂತಹ ಲೌಕಿಕದ ನೆಲೆಗಳು ಕಥೆಯ ಹಂದರವನ್ನು ವಿಸ್ತರಿಸಿವೆ. ಕಾವ್ಯದ ಸಂವಿಧಾನವನ್ನು ರೂಪಿಸಿವೆ, ಬದುಕಿನ ಸೂಕ್ಷ್ಮ ಸಂಗತಿಗಳಿಗೆ ಸ್ಪಂದಿಸಿವೆ, ಮನುಷ್ಯತ್ವದ ಕುರಿತು ಹೊಸ ಪಾಠಗಳನ್ನು ಕಲಿಸಿವೆ. ಇವುಗಳಲ್ಲಿ ಕೆಲವು ಕಾವ್ಯದ ಪಾತ್ರಗಳ ವಿಮರ್ಶೆಯ ಭಾಗವಾಗಿ ಬಂದರೆ, ಇನ್ನು ಕೆಲವು ನಿಜಬದುಕಿನ ತೆರೆಮರೆಯ ಸಂಗತಿಗಳನ್ನು ಅನಾವರಣ ಮಾಡಿವೆ.
‘ಕುಲ’ ದ ಪ್ರಶ್ನೆ :
ಪಂಪಭಾರತದಲ್ಲಿ ಹುಟ್ಟಿನಿಂದ ನಿರ್ಣಯಿತವಾಗುವ ಕುಲದ ಬಗ್ಗೆ ಮತ್ತು ಅದರ ಆಧಾರದಲ್ಲಿ ಶ್ರೇಷ್ಠತೆಯನ್ನು ನಿರ್ಧರಿಸುವುದರ ಬಗ್ಗೆ ತೀಕ್ಷ್ಣವಾದ ಪ್ರತಿರೋಧ ಇದೆ. ಪಂಪನ ಹಿರಿಯರು ಕಮ್ಮೆ ಬ್ರಾಹ್ಮಣರಾಗಿದ್ದರು. ಪಂಪನ ತಂದೆ ಭೀಮಪ್ಪಯ್ಯನು ವಿಪ್ರಕುಲವನ್ನು ಬಿಟ್ಟು ಜೈನಧರ್ಮವನ್ನು ಸ್ವೀಕರಿಸಿದ.  ಚಾಲುಕ್ಯ ವಂಶದ ಅರಿಕೇಸರಿ ಧರ್ಮಾತೀತ ದೃಷ್ಟಿಯವನಾಗಿದ್ದು ಜೈನ ಕವಿ ಪಂಪನಿಗೆ ಆಶ್ರಯ ಕೊಟ್ಟ.
ಪಂಪನಿಗೆ ಹುಟ್ಟಿನಿಂದ ನಿರ್ಧಾರವಾಗುವ ಜಾತಿಗಿಂತ ಸಾಧನೆಗಳ ಮೂಲಕ ಪಡೆಯುವ ಗುಣಗಳೇ ಮುಖ್ಯವಾಗಿದ್ದುವು. ಕುಲದ ವ್ಯಾಖ್ಯಾನದ ಎರಡು ಪ್ರಸಂಗಗಳು ಪಂಪಭಾರತದಲ್ಲಿ ಬರುತ್ತವೆ : ಒಂದು, ದ್ರೋಣರಲ್ಲಿ ವಿದ್ಯೆ ಕಲಿಯಲು ಕರ್ಣ ಬಂದ ಸಂದರ್ಭ. ಇನ್ನೊಂದು ಭೀಷ್ಮರಿಗೆ ಸೇನಾಧಿಪತಿಯ ಬೀರಪಟ್ಟವನ್ನು ಕಟ್ಟುವ ಸನ್ನಿವೇಶ.
ಗುರುವಾದ ದ್ರೋಣನ ಸಮ್ಮುಖದಲ್ಲಿ ಪಾಂಡವರ ಮತ್ತು ಕೌರವರ ಶಸ್ತ್ರವಿದ್ಯೆಯ ಪ್ರದರ್ಶನವಾಗುತಿದ್ದಾಗ ಅಲ್ಲಿಗೆ ಬಂದ ಕರ್ಣನು ಅರ್ಜುನನನ್ನು ಗೇಲಿಮಾಡಿದಾಗ ದ್ರೋಣನು ಕರ್ಣನಲ್ಲಿ ಹೇಳುವ ಮಾತು: ಕರ್ಣ, ನಿನ್ನ ಅಸಮಾಧಾನಕ್ಕೆ ಕೋಪಕ್ಕೆ ಕಾರಣವೇನು ? ನಿನ್ನ ತಾಯಿ ತಂದೆಯ ವಿಷಯವನ್ನು ಭಾವಿಸದೆ ನೀನು ಮಾತಾಡುವುದಾದರೆ ನಿನಗೂ ಅರ್ಜುನನಿಗೂ ಯಾವ ರೀತಿಯ ಸರಿಸಮಾನತೆ ಇದೆ ?.
ಈರೀತಿ ಕರ್ಣನ ತಂದೆ-ತಾಯಿಯನ್ನು ಉಲ್ಲೇಖಿಸಿ ಆತನು ಹೀನ ಕುಲದವನು ಎಂದು ದ್ರೋಣನು ಅವಮಾನಿಸಿದಾಗ, ಕರ್ಣನು ಅವಮಾನದಿಂದ ಬೆವರಿ ಪ್ರತ್ಯುತ್ತರ ಕೊಡಲು ಅಸಮರ್ಥನಾದಾಗ , ದುರ್ಯೋಧನನು ಕರ್ಣನ ಪರವಾಗಿ ಗುರು ದ್ರೋಣರಿಗೆ ಸವಾಲು ಹಾಕುತ್ತಾನೆ ; ದ್ರೋಣ ಮತ್ತು ಕೃಪರ ಹುಟ್ಟಿನ ರಹಸ್ಯವನ್ನು ಬಯಲಿಗೆಳೆಯುತ್ತಾನೆ.
ವೀರವೇ ಕುಲ ಅಲ್ಲದೆ ಕುಲ ಎನ್ನುವುದು ಬೇರೆ ಉಂಟೇ ? ಕುಲ ಎಂಬುದನ್ನು ಈ ರೀತಿ ಹಿಂಜಬೇಡಿರಿ. ನೀವು ಇಷ್ಟಪಟ್ಟು ಎಲ್ಲಿ ಹುಟ್ಟಿ ಬೆಳೆದಿರಿ? ಕೊಡದಲ್ಲಿಯಾಗಲೀ ಜೊಂಡುಹುಲ್ಲಿನಲ್ಲಿಯಾಗಲೀ ಕುಲ ಎಂಬುದು ಉಂಟೇ ? ದ್ರೋಣಿಯಲ್ಲಿ ಹುಟ್ಟಿದ ದ್ರೋಣರನ್ನೂ ಶರಸ್ತ೦ಭದಲ್ಲಿ ಜನಿಸಿದ ಕೃಪರನ್ನೂ ಗೇಲಿಮಾಡುವ ಮೂಲಕ ಪಂಪನ ದುರ್ಯೋಧನನು ಹುಟ್ಟನ್ನು ವ್ಯಕ್ತಿತ್ವದ ಮಾನದಂಡವಾಗಿ ಭಾವಿಸುವ ಸಾಂಪ್ರದಾಯಿಕ ದೃಷ್ಟಿಯನ್ನು ವಿರೋಧಿಸುತ್ತಾನೆ.
ಕುರುಕ್ಷೇತ್ರದ  ಯುದ್ಧ ಆರಂಭದ ಮೊದಲು ಕೌರವರ ಸೇನೆಯ ಅಧಿಪತಿಯಾಗಿ ಭೀಷ್ಮನಿಗೆ ಬೀರಪಟ್ಟವನ್ನು ಕಟ್ಟುವ ಸಂದರ್ಭದಲ್ಲಿ ಕರ್ಣನು ಅದನ್ನು ವಿರೋಧಿಸಿ, ಭೀಷ್ಮನ ದೈಹಿಕ ಮತ್ತು ಮಾನಸಿಕ ದೌರ್ಬಲ್ಯಗಳನ್ನು ಬೊಟ್ಟುಮಾಡಿ ತೋರಿಸುತ್ತಾನೆ. ಅದಕ್ಕೆ ಪ್ರತಿಕ್ರಿಯೆಯಾಗಿ ದ್ರೋಣನು ಕರ್ಣನನ್ನು ನಿಂದಿಸುತ್ತಾನೆ.
ಕುಲಜರನ್ನು ಶ್ರೇಷ್ಠರನ್ನು ಪರಾಕ್ರಮಿಗಳನ್ನು ಎಲ್ಲರಿಗೂ ಹಿತಕರರಾದವರನ್ನು ಈ ಸಭಾಮಧ್ಯದಲ್ಲಿ ನೀನು ಕೊಬ್ಬಿನಿಂದ ಹೀನೈಸಿದ್ದಿಯಾ. ಕುಲವನ್ನು ನಾಲಗೆ ಆಡಿತೋರಿಸಿತು ಎನ್ನುವ ಹಾಗೆ ನೀನು ಕೆಟ್ಟಮಾತು ಆಡಿದ್ದೀಯಾ. ಈರೀತಿ ದ್ರೋಣನು ಕರ್ಣನ ಕುಲವನ್ನು ಅವಹೇಳನ ಮಾಡಿದಾಗ ಕರ್ಣನೇ ಅದಕ್ಕೆ ಸಿಡಿಯುತ್ತಾನೆ ಮತ್ತು ಕುಲದ ಬಗ್ಗೆ ತನ್ನದೇ ವಿಶಿಷ್ಟ ವ್ಯಾಖ್ಯಾನವನ್ನು ಕೊಡುತ್ತಾನೆ.
ಮೊದಲಾಗಿಯೇ ಕುಲವನ್ನೇ ಯಾಕೆ ಘೋಷಣೆ ಮಾಡಿಕೊಳ್ಳುತ್ತೀರಿ ? ನಿಮ್ಮ ಕುಲಗಳು ಪ್ರತಿಭಟಿಸಿದವರನ್ನು ಎದುರಿಸಿ ನಾಶಮಾಡುತ್ತವೆಯೇ ? ನೀವು ಹೇಳುವ ಹುಟ್ಟಿನ ಕುಲ ಎನ್ನುವುದು ಕುಲ ಅಲ್ಲ . ಚಲ ಎನ್ನುವುದು ಕುಲ. ಒಳ್ಳೆಯ ಗುಣ ಎನ್ನುವುದು ಕುಲ. ಆತ್ಮಾಭಿಮಾನ ಎನ್ನುವುದು ಕುಲ. ಪರಾಕ್ರಮ ಎನ್ನುವುದು ಕುಲ. ಯೋಚಿಸಿ ನೋಡುವುದಾದರೆ ಈ ಜಗಳದಲ್ಲಿ ನಿಮ್ಮ ಕುಲ ನಿಮಗೆ ದುಃಖವನ್ನು ಉಂಟುಮಾಡುತ್ತದೆ ! ಕರ್ಣನ ಮೂಲಕ ಪಂಪನು ಮಾಡುವ ಕುಲದ ಈ  ವ್ಯಾಖ್ಯಾನವು ಎಲ್ಲ ಕಾಲಕ್ಕೂ ಸಲ್ಲುವ ಸಾಮಾಜಿಕ ಮೌಲ್ಯವಾಗಿ ಮುಖ್ಯವಾಗಿದೆ.
ಗೆಳೆತನದ ಎರಡು ಮಾದರಿಗಳು :
ಪಂಪಭಾರತದಲ್ಲಿ ಗೆಳೆತನದ ಎರಡು ಮಾದರಿಗಳು ಪರಸ್ಪರ ವಿರುದ್ಧ ರೂಪಗಳಲ್ಲಿ ದೊರೆಯುತ್ತವೆ. ಒಂದು, ದ್ರುಪದ ದ್ರೋಣರ ಒಡನೋದಿದ ಕಾಲದ ಸಂಬಂಧವು ದೊಡ್ಡವರಾದ ಬಳಿಕ ಅಂತಸ್ತಿನ ಕಾರಣವಾಗಿ ಬದಲಾಗಿ ವಿಚ್ಛೇದನಗೊಳ್ಳುವುದು. ಇನ್ನೊಂದು, ಬಂಧುತ್ವದ ಸಂಬಂಧವೇ ಇಲ್ಲದೆ ಭೂಪತಿಯಾದ ದುರ್ಯೋಧನನಿಗೆ ಕರ್ಣ ಸಮಾನ ಅಂತಸ್ತಿನ ಗೆಳೆಯನಾಗುವುದು.
ದ್ರೋಣನು ತನಗೆ ಬಡತನ ಉಂಟಾಗಲು ತನ್ನ ಬಾಲ್ಯದ ಒಡನಾಡಿಯೂ ಸ್ನೇಹಿತನೂ ಆದ ಪಾಂಚಾಲದೇಶದ ರಾಜ ದ್ರುಪದನ ಅರಮನೆಗೆ ಬಂದು ಅಲ್ಲಿ ಬಾಗಿಲು ಕಾಯುವವನಲ್ಲಿ ನಿಮ್ಮ ಒಡನೆ ಆಡಿದ ಗೆಳೆಯ ದ್ರೋಣ ಎಂಬ ಬ್ರಾಹ್ಮಣನು ಬಂದನು ಎಂದು ನಿಮ್ಮ ಅರಸನಿಗೆ ತಿಳಿಸು ಎನ್ನುತ್ತಾನೆ. ಬಾಗಿಲು ಕಾಯುವವನು ಅದೇ ರೀತಿಯಲ್ಲಿ ದ್ರುಪದ ರಾಜನಲ್ಲಿ ತಿಳಿಸಿದಾಗ ದ್ರುಪದನ ಪ್ರತಿಕ್ರಿಯೆ ಮದೋನ್ಮತ್ತನದ್ದು ಅಹಂಕಾರಗ್ರಹಪೀಡಿತನದ್ದೂ ಆಗಿತ್ತು:
ಹಾಗೆಂದು ಹೇಳಿಕೊಳ್ಳುವವನು ಯಾರು ? ಅವನಿಗೆ ಬಹಳ ಭ್ರಾಂತಿ ಇರಬೇಕು. ದ್ರೋಣ ಎನ್ನುವವನೇ ? ಬ್ರಾಹ್ಮಣನೇ ? ಅವನು ನನಗೆ ಹೇಗೆ ಗೆಳೆಯನಾಗುತ್ತಾನೆ ಹೇಳು ? ಆ ರೀತಿ ಹೇಳುವವನನ್ನು ಹೊರಗೆ ನೂಕು ಎಂದು ದ್ರುಪದನು ತಾನು ಆಸೀನನಾಗಿದ್ದ ಸಭೆಯಲ್ಲಿ ಹೇಳಿದನು. ಸಭೆಯಲ್ಲಿ ಓಲಗದಲ್ಲಿ ಮೆರೆಯುತ್ತಿದ್ದ ಅರಸನು ದ್ರೋಣನ ಬಗ್ಗೆ ಹೇಳಿದ ಮಾತುಗಳು ಗೆಳೆತನಕ್ಕೆ ಸಮಾನತೆಯ ಗುಣವನ್ನು ಕಲ್ಪಿಸುವುದು ಅಂತಸ್ತಿನ ನೆಲೆಯಲ್ಲಿ ಮಾತ್ರ ಎನ್ನುವುದನ್ನು ಸಾರುತ್ತವೆ.
ಕೊನೆಗೆ ದ್ರೋಣನು ಬಲತ್ಕಾರದಿಂದ ಒಳಗೆ ಪ್ರವೇಶಿಸಿ ದ್ರುಪದನನ್ನು ಕಂಡು ಅಣ್ಣಾ , ನೀವು ಮತ್ತು ನಾನು ಒಟ್ಟಿಗೆ ಓದಿದೆವು ಎಂಬುದನ್ನು ತಿಳಿದಿಲ್ಲವೇ ಎಂದು  ಪ್ರೀತಿ ಆತಂಕದಿಂದ ಕೇಳಿದಾಗ ದ್ರುಪದನ ಪ್ರತಿಕ್ರಿಯೆ ವರ್ಗಭೇದವನ್ನು ಪ್ರತಿನಿಧಿಸುತ್ತದೆ :
ನೀನು ಯಾರು ಎಂದು ನನಗೆ ಗೊತ್ತಿಲ್ಲ. ನೀನು ನನ್ನನ್ನು ಎಲ್ಲಿ ಕಂಡೆಯೋ ಏನೋ ! ಒಬ್ಬ ಮಹೀಪತಿಗೂ ಒಬ್ಬ ಬ್ರಾಹ್ಮಣನಿಗೂ ಯಾವ ರೀತಿಯ ಗೆಳೆತನ ಇರಲು ಸಾಧ್ಯ? ಮನುಷ್ಯರು ನಿನ್ನಂತೆ ಇಷ್ಟೂ ನಾಚಿಕೆಕೆಟ್ಟವರು ಆಗುತ್ತಾರೆಯೇ ? ದ್ರುಪದನು ಆಡುವ ಈ ಮಾತುಗಳು ವರ್ಗಭೇದದ ಅಹಂಕಾರದ ಅಭಿವ್ಯಕ್ತಿಗಳು.
ರಾಜನಿಗೆ ರಾಜನು ಮಾತ್ರ ಗೆಳೆಯನಾಗಬಲ್ಲ , ಬಡಬ್ರಾಹ್ಮಣನಿಗೆ ಅವನ ಮಟ್ಟದವನು ಮಾತ್ರ ಸ್ನೇಹಿತನಾಗಬಲ್ಲ ಎನ್ನುವ ತರ್ಕವು ಅನೇಕರಲ್ಲಿ ಇಂದಿಗೂ ಮನೆಮಾಡಿದೆ. ದ್ರುಪದನ ಈ ಬಗೆಯ ದರ್ಪದ ಹೇಳಿಕೆಗೆ ಪ್ರತಿಯಾಗಿ ದ್ರೋಣನು ನೀಡುವ ಹೇಳಿಕೆಯು ಪಂಪಭಾರತದ ಮಹತ್ವದ ಸಂದೇಶವನ್ನು ಸಾರುತ್ತದೆ.
ದ್ರೋಣನು ಹೇಳುತ್ತಾನೆ: ಕಳ್ಳು ಕುಡಿದವರು ಮತ್ತು ಸಂಪತ್ತಿನ ಮದ ಏರಿದವರು ಒಂದೇ ಸ್ವಭಾವದವರು. ಕಳ್ಳು ಕುಡಿದವರ ರೀತಿ ಹೀಗಿರುತ್ತದೆ : ಅವರ ಮಾತು ತಡವರಿಸುತ್ತದೆ. ಅವರ ಮುಖದಲ್ಲಿ ವಕ್ರಚೇಷ್ಟೆ ಕಾಣಿಸಿಕೊಳ್ಳುತ್ತದೆ. ಅವರ ಮಾತುಗಳು ನಾಚಿಕೆಕೆಟ್ಟವು ಆಗಿರುತ್ತವೆ, ಆ ಮಾತುಗಳು  ಸಂಬಂಧಗಳನ್ನು ಮರೆತಿರುತ್ತವೆ.
ಸಿರಿ ಅಥವಾ ಸಂಪತ್ತು ಬಂದವರೂ ಇದೇ ರೀತಿ ವರ್ತಿಸುತ್ತಾರೆ. ಆದ್ದರಿಂದಲೇ ಈಗ ನಾನು ಅರ್ಥಮಾಡಿಕೊಂಡಿದ್ದೇನೆ : ಸಂಪತ್ತು ಮತ್ತು ಕಳ್ಳು ಒಟ್ಟಿಗೆ ಹುಟ್ಟಿತು ಎಂಬುದನ್ನು. ಮದ್ಯಪಾನದ ಅಮಲು ಮತ್ತು ಐಶ್ವರ್ಯದ ಅಮಲು ಒಂದೇ ಎನ್ನುವ ಈ ಹೇಳಿಕೆಯು ಹಣವನ್ನು ಆರಾಧಿಸುವ ಮತ್ತು ಅದರಿಂದ ಪ್ರತಿಷ್ಠೆಯನ್ನು ಮೆರೆಯುವ ಎಲ್ಲ ಕಾಲಕ್ಕೂ ಅನ್ವಯಿಸುವಂತಹದ್ದು.
ದುರ್ಯೋಧನ -ಕರ್ಣರ ಸ್ನೇಹ ಕುಡಿಯೊಡೆದ ಸನ್ನಿವೇಶವನ್ನು ಪಂಪನು ಚಿತ್ರಿಸುವುದು ವಿಶಿಷ್ಟವಾಗಿದೆ. ಗುರು ದ್ರೋಣರ ಮುಂದೆ ಕುಲಹೀನ ಎಂಬ ಅವಮಾನಕ್ಕೆ ತುತ್ತಾದ ಕರ್ಣನನ್ನು ಕುಲಜನನ್ನಾಗಿ ಮಾಡುತ್ತೇನೆ ಎಂದು ಪಣ ತೊಟ್ಟ ದುರ್ಯೋಧನನು ಆತನಿಗೆ ಅಂಗರಾಜ್ಯದ ಅಭಿಷೇಕವನ್ನು ಮಾಡಿಸಿ, ಪ್ರಭುತ್ವದ ಬಲದಿಂದ ಹುಟ್ಟು ಯಾವುದೇ ಇದ್ದರೂ ಯಾರು ಕೂಡಾ ಮಾನ್ಯರಾಗಬಹುದು ಎನ್ನುವುದನ್ನು ಸಾಧಿಸಿ ತೋರಿಸುತ್ತಾನೆ.
ಕರ್ಣನಿಗೆ ಅಂಗರಾಜ್ಯದ ಒಡೆತನವನ್ನು ಕೊಟ್ಟ ಬಳಿಕವೂ ಆತನನ್ನು ಗೆಳೆಯ ಎಂದು ಆತ್ಮೀಯವಾಗಿ ನಡೆಸಿಕೊಳ್ಳುವ ಸಂದರ್ಭದಲ್ಲಿ ದುರ್ಯೋಧನ ಆಡುವ ಮಾತುಗಳು ಗೆಳೆತನಕ್ಕೆ ಒಳ್ಳೆಯ ಭಾಷ್ಯವನ್ನು ಬರೆಯುತ್ತವೆ : ರಾಧೇಯ, ಪ್ರಭುವಾದ ನನಗೆ ಉಳಿದ ಸಾಮಂತರೆಲ್ಲ ವಿಧೇಯವಾಗಿ ನಮಸ್ಕರಿಸುತ್ತಾರೆ , ಜೀಯಾ ಎಂದು ಸಂಬೋಧಿಸುತ್ತಾರೆ , ಕೊಡಿ , ದಯಪಾಲಿಸಿ , ಏನು ಪ್ರಸಾದ ಎಂದು ಅತಿಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆದರೆ ಈ ಬಗೆಯ ಶಿಷ್ಟಾಚಾರಗಳೆಲ್ಲ ಬೇರೆಯವರು ಮಾಡಲಿ. ಆದರೆ ನಮ್ಮ ನಡುವೆ ಈ ರೀತಿಯ ಸಂಬಂಧಗಳು ನಡೆಯಬಾರದು. ನೀನು ನನಗೆ ಗೆಳೆಯ.
ನನ್ನಿ ಮತ್ತು ಕಡುನನ್ನಿ :
ಪಂಪಭಾರತದಲ್ಲಿ ನನ್ನಿಯು ಒಂದು ಮೌಲ್ಯವಾಗಿ ಬೇರೆ-ಬೇರೆ ಸಂದರ್ಭಗಳಲ್ಲಿ ಬಳಕೆಯಾಗಿದೆ. ಕಾವ್ಯದ ಕೊನೆಯಲ್ಲಿ ಇವರ್ಗಳಿಂ ಭಾರತಂ ಲೋಕಪೂಜ್ಯಮ್ ಎಂದು ಹೇಳುವ ಪಟ್ಟಿಯಲ್ಲಿ ನನ್ನಿಯೊಳ್ ಇನತನಯಂ ಎನ್ನುವ ಪ್ರಸ್ತಾವ ಇದೆ. ನನ್ನಿ ಎನ್ನುವುದು ಸತ್ಯವೂ ಹೌದು, ನಿಜದ ಪ್ರಮಾಣವೂ ಹೌದು. ವಚನ, ಭಾಷೆ, ಪ್ರಮಾಣ -ಎಲ್ಲವೂ ನನ್ನಿಯ ವ್ಯಾಪ್ತಿಯಲ್ಲೇ ಬರುತ್ತವೆ.
ಪುರುಷವ್ರತದ ಪ್ರತಿಜ್ಞೆ ಮಾಡಿದ ಭೀಷ್ಮನಲ್ಲಿ ಸತ್ಯವತಿ ಬಂದು ಧರಾಭಾರವನ್ನು ಸ್ವೀಕರಿಸು ಎಂದು ಕೇಳಿಕೊಂಡಾಗ, ಭೀಷ್ಮನು ಹೇಳುವ ಮಾತು : ನನ್ನಿಯ ನುಡಿಯನ್ನು ನಾನು ಮೀರಿ ವರ್ತಿಸಿದರೆ, ಎರಡು ರೀತಿ ಹೇಳಿದರೆ ಮಾತಿಗೆ ತಪ್ಪಿದರೆ ದೇವರುಗಳು ನಗುವುದಿಲ್ಲವೇ ?  ಖಾಂಡವವನ ದಹನದ ಪ್ರಸಂಗದಲ್ಲಿ ಅರ್ಜುನನು ಬ್ರಾಹ್ಮಣ ವೇಷದ ಅಗ್ನಿಗೆ ಆಹಾರ ಕೊಡಲು ಮಾತು ಕೊಟ್ಟು ಆದ  ಬಳಿಕ ಕೃಷ್ಣನು ಅಗ್ನಿಯು ವಂಚಕನು ಎಂದು ಅರ್ಜುನನನ್ನು ಎಚ್ಚರಿಸುತ್ತಾನೆ.
ಆಗ ಅರ್ಜುನನು ಕೃಷ್ಣನಲ್ಲಿ ಹೇಳುವ ಮಾತು ನನ್ನಿಯ ಅರ್ಥಕ್ಕೆ ಮಹತ್ವದ ವ್ಯಾಖ್ಯೆ ಆಗಿದೆ: ತನಗೆ ಶರಣಾಗತರಾದವರನ್ನು ಕಾಪಾಡದೆ, ತ್ಯಾಗದ ಒಳ್ಳೆಯತನದ ಮುದ್ರೆಯನ್ನು ಒತ್ತದೆ, ಬಾಳುವವನು ಹುಳುವಿಗೆ ಸಮಾನನಾದ ಮನುಷ್ಯನು. ಆತನು ಬ್ರಹ್ಮಾಂಡ ಎಂಬ ಅತ್ತಿಯ ಹಣ್ಣಿನಲ್ಲಿ ಇರುವ ಹುಳು ಅಲ್ಲದೆ, ಮನುಷ್ಯ ಎನ್ನಿಸಿಕೊಳ್ಳುತ್ತಾನೆಯೇ ಮುರಾಂತಕಾ.
ಆಗ ಕೃಷ್ಣನು ಅರ್ಜುನನ ನನ್ನಿಮಾತಿಗೆ ಮೆಚ್ಚಿದನು. ಪಂಪನು ‘ಮಾನಸ’ ಅಂದರೆ ‘ಮನುಷ್ಯ’ ಪರಿಕಲ್ಪನೆಯ ಲಕ್ಷಣ ನಿರೂಪಣೆಯನ್ನು ಕೂಡಾ ಇಲ್ಲಿ ಮಾಡಿದ್ದಾನೆ.
ಖಾಂಡವವನದಹನದ ಸಂದರ್ಭದಲ್ಲಿ ಅಶ್ವಸೇನ ಎಂಬ ಸರ್ಪ ತನ್ನ ತಾಯಿಯ ಸಾವನ್ನು ಕಂಡು ತನ್ನ ಹಗೆಯನ್ನು ತೀರಿಸಲು ನಿರ್ಧರಿಸಿದ ಪ್ರಸಂಗದಲ್ಲಿ ಕವಿ ಹೇಳುತ್ತಾನೆ :ಹಾವುಗಳು ತಮ್ಮ ಹಗೆತನವನ್ನು ಮರೆಯುವುದಿಲ್ಲ ಎನ್ನುವುದನ್ನು ನನ್ನಿಮಾಡಿ ಅಶ್ವಸೇನ ಕರ್ಣನ ಬತ್ತಳಿಕೆಯನ್ನು ಪ್ರವೇಶಿಸಿದ.
ಪಂಪಭಾರತದಲ್ಲಿ ಕರ್ಣನ ವ್ಯಕ್ತಿತ್ವದಲ್ಲಿ ಮುಖ್ಯಗುಣವೇ ‘ಕಡುನನ್ನಿ’. ದುರ್ಯೋಧನನ ಜೊತೆಗೆ ಸಂಧಾನಕ್ಕೆ ಬಂದ ಕೃಷ್ಣ ಹಿಂದಿರುಗುವಾಗ ಕರ್ಣನ ಮನೆಯ ಮುಂದೆ ಬಂದು ಕರ್ಣನನ್ನು ತನ್ನ ರಥದಲ್ಲಿ ಕುಳ್ಳಿರಿಸಿ, ಆತನ ಜನ್ಮರಹಸ್ಯವನ್ನು ತಿಳಿಸಿ, ಪಾಂಡವರ ಹಿರಿಯನಾದ ಆತನಿಗೇ ಪಟ್ಟ ಎಂದು ಆಮಿಷ ತೋರಿಸುತ್ತಾನೆ.
ಅದಕ್ಕೆ ಪ್ರತಿಕ್ರಿಯೆ ಆಗಿ ಕೃಷ್ಣನಲ್ಲಿ ಕರ್ಣನ ಪ್ರಶ್ನೆ : ಸುಯೋಧನನು ನನಗೆ ಮಾಡಿದ ಒಳ್ಳೆಯ ಕೆಲಸಗಳನ್ನು ಹೊರಗೆ ಹಾಕಿ, ಕೃತಜ್ಞತೆ ಇಲ್ಲದೆ, ಬಂಧುತ್ವದ ನೆವನ ಹೇಳಿ ಪಾಂಡವರ ಜೊತೆಗೆ ಸೇರಿಕೊಂಡರೆ ನೀವೇ ನನ್ನ ಬಗ್ಗೆ ಹೇಸಿಕೊಳ್ಳುವುದಿಲ್ಲವೇ ? ಅದೇ ರೀತಿ ಕೃಷ್ಣನ ಪ್ರೇರಣೆಯಿಂದ ಕುಂತಿ ಬಂದು ಕರ್ಣನಲ್ಲಿ ಮಗನ ವಾತ್ಸಲ್ಯವನ್ನು ಪ್ರಕಟಿಸಿ, ಆತನೇ ಪಾಂಡವರ ಹಿರಿಯನಾಗಿ ರಾಜ್ಯವನ್ನು ಆಳಬೇಕು ಎಂದು ಕೇಳಿಕೊಳ್ಳುತ್ತಾಳೆ. ಕುಂತಿಯ ಜೊತೆಗೆ ಕರ್ಣ ಆಡುವ ಮಾತುಗಳು ಅವನ ಕಡುನನ್ನಿಗೆ ಸಾಕ್ಷಿಯಾಗಿವೆ.
ಕರ್ಣ ಹೇಳುತ್ತಾನೆ : ನನ್ನ ಒಡೆಯ ದುರ್ಯೋಧನನು ನನಗೆ ಮಾಡಿದ ಒಳ್ಳೆಯ ಕೆಲಸಗಳನ್ನು ನಿರ್ಲಕ್ಷಿಸಿ, ನನಗೆ ಆತ ಕೊಟ್ಟ ಆಹಾರದ ಪೋಷಣೆಗೆ (ಜೋಳದ ಪಾಳಿ ) ದ್ರೋಹ ಮಾಡಿ ಬದುಕಬೇಕೇ ? ಹಾಗೆ ಬದುಕಲು ಈ ದೇಹ ಯುಗಯುಗಗಳ ಕಾಲ ಇರುತ್ತದೆಯೇ ? ಅನ್ನದ ಋಣ, ಕೃತಜ್ಞತೆ, ವಚನಬದ್ಧತೆ – ಇವು ಎಲ್ಲವುಗಳನ್ನು ಪ್ರಾಣಕ್ಕಿಂತ ಮಿಗಿಲಾಗಿ ಪಾಲಿಸುವುದೇ ಕಡುನನ್ನಿ.
ಕರ್ಣನ ಪಾತ್ರದಲ್ಲಿ ಅದು ನಿಜವಾಗಿದೆ. ಆದ್ದರಿಂದಲೇ ಕರ್ಣನ ಸಾವಿನ ಸಂದರ್ಭದಲ್ಲಿ ಕವಿ ಪಂಪ ರಚಿಸಿದ ಶೋಕಗೀತೆಯಲ್ಲಿ ನೆನೆಯದಿರಿ ಅಣ್ಣ ಭಾರತದೊಳ್ ಇಂ ಪೆರರ್  ಆರುಮಂ ಎಂಬ ಉದ್ಗಾರದ ಜೊತೆಗೆ ಕರ್ಣನ ಗುಣಗಾನದಲ್ಲಿ ಉಲ್ಲೇಖಗೊಂಡ ಕರ್ಣನ ಕಡುನನ್ನಿ ಎನ್ನುವ ನುಡಿಗಟ್ಟು ಮಹತ್ವದ ಮೌಲ್ಯಾತ್ಮಕ ಪರಿಭಾಷೆ ಆಗುತ್ತದೆ.
ಪ್ರಾಯೋಗಿಕ ವೈಯ್ಯಾಕರಣಿ ಭೀಮ :
ಪಂಪಭಾರತದ ಭೀಮಸೇನ ವಿದ್ಯಾಭ್ಯಾಸದ ಸಂದರ್ಭದಲ್ಲಿ ವ್ಯಾಕರಣದಲ್ಲಿ ಕುಶಲನಾಗುತ್ತಾನೆ. ಅವನು ಕನ್ನಡ ವ್ಯಾಕರಣದಲ್ಲೇ ಪಾರಂಗತನಾಗಿದ್ದ ಎನ್ನುವುದಕ್ಕೆ ಪಂಪಭಾರತದಲ್ಲಿ ಒಂದುಕಡೆ ಆಧಾರ ಸಿಗುತ್ತದೆ. ಪಾಂಡವರು ರಾಜಸೂಯ ಯಾಗ ಮಾಡುವ ಪ್ರಸ್ತಾವ ಬಂದಾಗ ಕೃಷ್ಣನು ಆ ಯಾಗಮಾಡುವಾಗ ವೀರರನ್ನು ಕೊಂದು ಯುದ್ಧಗಳನ್ನು ಮಾಡಬೇಕಾದ ಅಪಾಯಗಳ ಬಗ್ಗೆ ಎಚ್ಚರಿಸುತ್ತಾನೆ.
ಕೃಷ್ಣನ ಮಾತಿಗೆ ಪ್ರತಿಕ್ರಿಯೆಯಾಗಿ ಭೀಮನು ತನ್ನ ಶಕ್ತಿಪ್ರದರ್ಶನದ ನೇರ ಕಠಿಣ ಮಾತುಗಳನ್ನು ಆಡುತ್ತಾನೆ. ಆಗ ಕನ್ನಡ ವ್ಯಾಕರಣದ ಪರಿಭಾಷೆಯನ್ನು ಬಳಸುತ್ತಾನೆ : ವೀರರ ಸೊಂಟವನ್ನು ಮುರಿಯಲಿಕ್ಕೆ ನನ್ನ ಬಲಿಷ್ಠವಾದ ಭುಜಗಳೇ ಸಾಕು. ಪ್ರೀತಿಸು ಇಲ್ಲವೇ ಕೋಪಿಸು ಎನ್ನುವುದೇ ನನ್ನ ಘೋಷಣೆ . ನನ್ನ ನುಡಿ ಟಠಡಢಣ.
ರಾಜಸೂಯ ಯಾಗವನ್ನು ನಡೆಸಲು ನನಗೆ ಅಪ್ಪಣೆಯನ್ನು ಕೊಡು. ಕನ್ನಡ ವರ್ಣಮಾಲೆಯಲ್ಲಿ ವ್ಯಂಜನಗಳಲ್ಲಿ ಟ ಠ ಡ ಢ ಣ -ಇವು ಮೂರ್ಧನ್ಯಗಳು . ಧ್ವನಿಮಾವಿಜ್ಞಾದ ಪ್ರಕಾರ ಈ ವ್ಯಂಜನಗಳನ್ನು ಉಚ್ಚರಿಸಲು ನಾಲಗೆಯ ತುದಿಯು ಬಾಯಿಯ ಒಳಗೆ ಇರುವ ನೇರವಾಗಿ ಮೇಲ್ಭಾಗದ ಸ್ಥಳಕ್ಕೆ ಸ್ಪಷ್ಟವಾಗಿ ತಾಗಬೇಕು.
ಈ ರೀತಿಯ ಉಚ್ಚಾರಣೆಯ ಸ್ಪಷ್ಟತೆ ತಾಲವ್ಯ ಧ್ವನಿಗಳಾದ ‘ಚ’ಕಾರದ ವರ್ಗಕ್ಕೆ , ದಂತ್ಯ ಧ್ವನಿಗಳಾದ ‘ತ’ಕಾರದ ವರ್ಗಕ್ಕೆ , ಓಷ್ಠ್ಯ ಧ್ವನಿಗಳಾದ ‘ಪ’ಕಾರದ ವರ್ಗಕ್ಕೆ ಇರುವುದಿಲ್ಲ. ನೇರ ಸ್ಪಷ್ಟ ನುಡಿಗೆ ಟಠಡಢಣ ಧ್ವನಿಗಳು ನಿದರ್ಶನ. ಹೀಗಾಗಿ ಶಿಕ್ಷಣದಲ್ಲಿ ಕನ್ನಡ ವ್ಯಾಕರಣ ಕಲಿತ  ಭೀಮ ಆ ವ್ಯಾಕರಣದ ಧ್ವನಿಗಳನ್ನು ತನ್ನ ನಡವಳಿಕೆಗೆ ಅನ್ವಯಿಸಿಕೊಂಡವನು ಆಗಿದ್ದ ಕಾರಣ ಆತನನ್ನು ‘ಪ್ರಾಯೋಗಿಕ ವೈಯ್ಯಾಕರಣಿ ‘ ಎಂದೂ ಕರೆಯಬಹುದು.
ಭೀಮನ ಇನ್ನು ಎರಡು ಪರಿಣತಿಗಳನ್ನು ಅವನು ವಿರಾಟನ ಆಶ್ರಯವನ್ನು ಪಡೆಯುವಾಗ ಹೇಳಿಕೊಳ್ಳುತ್ತಾನೆ : ಒಂದು , ಸವಿಯಾದ ಅಡುಗೆಮಾಡುವ ಕೌಶಲ ; ಇನ್ನೊಂದು , ಮಲ್ಲವಿದ್ಯೆ . ಅಡುಗೆ ಪ್ರೀತಿಸಲು , ಮಲ್ಲವಿದ್ಯೆ ಕೋಪಿಸಲು !
ಅಪ್ಪನ ಕಲಿತನವನ್ನು ಪ್ರಶ್ನಿಸಿದ ಅಭಿಮನ್ಯು :
ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಚಕ್ರವ್ಯೂಹವನ್ನು ಭೇದಿಸಲು ಅರ್ಜುನನ ಅನುಪಸ್ಥಿತಿಯಲ್ಲಿ ಧರ್ಮರಾಯನು ಅಭಿಮನ್ಯುವಿನಲ್ಲಿ ವಿಚಾರಿಸುತ್ತಾನೆ, ಕಂದ, ಇದನ್ನು ಭೇದಿಸಲು ನೀನು ಬಲ್ಲೆಯಾ ಎಂದು ಕೇಳುತ್ತಾನೆ. ಅಭಿಮನ್ಯುವಿಗೆ ತನ್ನ ಶಕ್ತಿಸಾಮರ್ಥ್ಯವನ್ನು ಪ್ರಕಟಿಸಲು ಇದು ಒಂದು ಅಪೂರ್ವ ಅವಕಾಶ. ಅಪ್ಪ ಅರ್ಜುನನಿಗೇ ಎಲ್ಲ ಬಗೆಯ ಅವಕಾಶ ಮತ್ತು ಆದ್ಯತೆಗಳು ದೊರೆಯುತ್ತಿದ್ದ ಕಾರಣ ಮಗ ಅಭಿಮನ್ಯುವಿಗೆ ಮನಸ್ಸಿನಲೇ ಅತೃಪ್ತಿ ಹುದುಗಿತ್ತು.
ಆದ್ದರಿಂದಲೇ ಅಭಿಮನ್ಯುವು ಅರ್ಜುನನ ಸಾಮರ್ಥ್ಯದ  ಪ್ರಾಯೋಜಕತ್ವವನ್ನು ಮತ್ತು ಮಿತಿಯನ್ನು ಧರ್ಮರಾಯನಲ್ಲಿ ಹೀಗೆ ಹೇಳುತ್ತಾನೆ : ಅಗ್ನಿಯು ದಾನವಾಗಿ ಕೊಟ್ಟ ಗಾಂಡೀವ  ಧನುಸ್ಸು , ರಥದ ಸಾರಥಿ ಆಗಿರುವ ಕೃಷ್ಣನ ಮೆಚ್ಚಿನ ರಕ್ಷೆ , ಈಶ್ವರನು ದಯಪಾಲಿಸಿದ ಪಾಶುಪತಾಸ್ತ್ರದ ಬೆಂಬಲದಿಂದ ನೀವು ನನ್ನ ಅಪ್ಪನನ್ನು ಸುಮ್ಮನೆ ವೀರ ಎಂದು ಹೊಗಳುತ್ತಿರುವಿರಿ.
ಶತ್ರುಗಳ ಸೈನ್ಯವು ನನಗೆ ಗೆಲ್ಲುವುದಕ್ಕೆ ಅಸಾಧ್ಯವೇ ?. ತರುಣ ಮಕ್ಕಳು ಅವಕಾಶಕ್ಕಾಗಿ ಕಾಯುತ್ತಾ ಅಪ್ಪಂದಿರಿಂದ ಅಧಿಕಾರ ಅವಕಾಶಗಳನ್ನು ಪಡೆಯಲು ಹಾತೊರೆಯುವ ಮನಸ್ಥಿತಿಯನ್ನು ಅಭಿಮನ್ಯುವಿನ ಮಾತುಗಳು ಪ್ರತಿಧ್ವನಿಸುತ್ತವೆ.
ಮಧುಪಾನ ಗೋಷ್ಠಿ :
ಪಂಪ ತನ್ನ ಭಾರತದಲ್ಲಿ ತನ್ನ ಸಮಕಾಲೀನ ಸಮಾಜದ ಅನೇಕ ಸಂಗತಿಗಳನ್ನು ಕಥನದ ಭಾಗವಾಗಿ ತರುತ್ತಾನೆ. ಕತೆಯನ್ನು ಕಥನವಾಗಿ ಮಾಡುವುದೇ ಸಂವಿಧಾನ. ಪಂಪಭಾರತದ ಸಂವಿಧಾನದ ಭಾಗವಾಗಿ ಬರುವ ಅನೇಕ ವರ್ಣನೆಗಳು ಕವಿಯ ಲೌಕಿಕದ ತಿಳುವಳಿಕೆಯ ಅಭಿವ್ಯಕ್ತಿಗಳಾಗಿ ಗಮನ ಸೆಳೆಯುತ್ತವೆ.
ಕಳ್ಳಿನ ರೂಪಕವನ್ನು ಸಂಪತ್ತಿನ ಅಮಲಿಗೆ ಸಂವಾದಿಯಾಗಿ ಕೊಟ್ಟ ಕವಿ ಪಂಪನು ವೇಶ್ಯಾವಾಟಿಯ ಚಿತ್ರಣದ ಸಂದರ್ಭದಲ್ಲಿ ವೇಶ್ಯೆಯರ ಮಧುಪಾನಗೋಷ್ಠಿಯ ಸಚಿತ್ರವಿವರವನ್ನು ಅನಾವರಣ ಮಾಡುತ್ತಾನೆ . ತಮ್ಮ ವೃತ್ತಿನಿಷ್ಠೆಯ ಜೊತೆಗೆ ವೇಶ್ಯೆಯರು ಅನುಸರಿಸುತ್ತಿದ್ದ ನಂಬಿಕೆ ಆಚರಣೆಗಳ ಸೂಕ್ಷ್ಮ ಸಂಗತಿಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ :
ಆ ಸುಂದರ ಹೆಂಗಸರು ಮುನ್ನೂರ ಅರುವತ್ತು ಜಾತಿಯ ಕಳ್ಳುಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಮಧುಮಂತ್ರಗಳಿಂದ ಮಧುದೇವತೆಗಳನ್ನು ಪೂಜಿಸಿದರು . ಬಳಿಕ ಚಿನ್ನ, ಬೆಳ್ಳಿ, ಪದ್ಮರಾಗ, ಪಚ್ಛೆ ಲೋಹಗಳಿಂದ ಮಾಡಿದ ಗಿಳಿ, ಕೋಗಿಲೆ, ಕ್ರೌ೦ಚ, ಹಂಸ ಮತ್ತು ಕುಂತಳಿಕೆ ಹಕ್ಕಿಗಳ ವಿನ್ಯಾಸದ ಚಿಪ್ಪುಗಳಲ್ಲಿ ಕಳ್ಳನ್ನು ತುಂಬಿಸಿದರು.
ಬಳಿಕ ಮಧುಮಂತ್ರಗಳಿಂದ ಕಳ್ಳನ್ನು ಮಂತ್ರಿಸಿ, ಸ್ವಲ್ಪ ಕಳ್ಳನ್ನು ನೆಲದಲ್ಲಿ ಸುರಿದು, ಬಳಿಕ ಕಳ್ಳಿನಿಂದ ತಲೆಯ ಮೇಲೆ ಪ್ರೋಕ್ಷಣೆ ಮಾಡಿದರು. ಆಮೇಲೆ ಕಳ್ಳಿನಿಂದ ತಮ್ಮ ಹಣೆಯ ಮೇಲೆ ಬೊಟ್ಟನ್ನು ಇಟ್ಟುಕೊಂಡು, ಹತ್ತಿರ ಇದ್ದವರಿಗೂ ಕಳ್ಳಿನಿಂದ ಬೊಟ್ಟನ್ನು ಇಟ್ಟರು. ಬಳಿಕ ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸಿದರು. ಧರ್ಮಾರ್ಥವಾಗಿ ಕಳ್ಳು ಕುಡಿಯುವವರಿಗೆ ಮೀಸಲು ಇಟ್ಟ ಕಳ್ಳನ್ನು ಎರೆದರು.
ಚಿನ್ನದ ಮತ್ತು ಬೆಳ್ಳಿಯ ಚಿಪ್ಪುಗಳಲ್ಲಿ ಸ್ವಲ್ಪಸ್ವಲ್ಪವೇ ಕಳ್ಳನ್ನು ಎರೆದು ತುಂಬಿದರು. ಬಳಿಕ ಕಳ್ಳಿನ ಜೊತೆಗೆ ನಂಜಿಕೊಳ್ಳಲು ತಾವು ತಯಾರಿಸಿದ ಚಕ್ಕಣವನ್ನು ಸವಿದರು. ಎಳೆಯ ಬಿದಿರಿನ ಕಣಿಲೆ, ಮಾವಿನ ಮಿಡಿ, ಬಿಲ್ವಪತ್ರೆಯ ಕಾಯಿಯ ತಿರುಳು, ಮೆಣಸು ಹಾಕಿದ ಕಡಲೆಯ ಪುಡಿಯಿಂದ ಕೂಡಿದ ಹಸಿಶುಂಠಿಯ ಮಿಶ್ರಣ- ಇಷ್ಟನ್ನು ಸೇರಿಸಿದ ಚಾಕಣವನ್ನು ಸವಿಸವಿದು ನಂಜಿಕೊಳ್ಳುತ್ತಾ ಕಳ್ಳನ್ನು ಕುಡಿದರು.
ಯುದ್ಧಭೂಮಿಯಲ್ಲಿ ಸೈನಿಕರ ಜೋಳದ ಪಾಳಿ- ಸೈನಿಕರ ಪತ್ನಿಯರ ಓಲೆಭಾಗ್ಯ :
ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಕೌರವ-ಪಾಂಡವರ ನಾಯಕರು ಮತ್ತು ಅವರ ಪಕ್ಷದವರು ಹೋರಾಡುವ ಚಿತ್ರಣಗಳ ನಡುವೆಯೇ ಸಾಮಾನ್ಯ ಸೈನಿಕರ ಮತ್ತು ಅವರ ಪತ್ನಿಯರ ಮನೋಭೂಮಿಕೆಯ ಭಾವನಾಲಹರಿಗಳು ಅಪೂರ್ವವಾಗಿವೆ. ಸ್ವತಃ ಕಲಿಯೂ ಆಗಿದ್ದ, ತನ್ನ ಕಾಲದ ಯುದ್ಧಗಳನ್ನು ಕಂಡು ಅನುಭವಿಸಿದ್ದ ಕವಿ ಪಂಪ ಅಂತಹ ಮಾನವೀಯ ಮುಖಗಳನ್ನು ಅನಾವರಣ ಮಾಡಿದ್ದಾನೆ.
ಹತ್ತನೇ ಶತಮಾನದ ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು ಕಲ್ಲಿನ ಬರಹಗಳಲ್ಲಿ ದಾಖಲಿಸಿದ್ದನ್ನು ಪಂಪ ತನ್ನ ಕಾವ್ಯದಲ್ಲಿ ಅಕ್ಷರಗಳಲ್ಲಿ ಪಡಿಮೂಡಿಸಿದ್ದಾನೆ. ಯೋಧನೊಬ್ಬನು ತನ್ನನ್ನು ಸಾಕಿದ ಸಲಹಿದ ಒಡೆಯನ ಋಣವನ್ನು ತೀರಿಸುವ ಸರದಿಯನ್ನು ಜೋಳದ ಪಾಳಿ ಎನ್ನುವ ಸಾಂಸ್ಕೃತಿಕ ಪರಿಭಾಷೆಯ ಮೂಲಕ ಪಂಪ ಅಭಿವ್ಯಕ್ತಿಸುತ್ತಾನೆ.
ತಾನು ಬಹುಕಾಲ ಜೀವಿಸಿದ್ದ ಉತ್ತರಕರ್ನಾಟಕ ಪ್ರದೇಶದ ಪ್ರಮುಖ ಆಹಾರವಾದ ಜೋಳವನ್ನು ಋಣದ ರೂಪಕದಲ್ಲಿ ಕಟ್ಟಿಕೊಟ್ಟ ಪಂಪನ ಲೌಕಿಕ ಪ್ರಜ್ಞೆ ಅನನ್ಯವಾದುದು. ಒಬ್ಬ ಯೋಧ ಹೇಳುತ್ತಾನೆ – ತೋಳಿನ ನವೆಯು ತೀರುವಂತೆ ಒಂದೆರಡು ಕುದುರೆಯ ಮುಂಡಗಳನ್ನೂ ಒಂದೆರಡು ಆನೆಯ ಮುಂಡಗಳನ್ನೂ ಖಡ್ಗದಲ್ಲಿ ಸಿಕ್ಕಿಸಿ ಕತ್ತರಿಸದಿದ್ದರೆ ನನ್ನ ಒಡೆಯನ ಜೋಳದ ಋಣವನ್ನು ನಾನು ಹೇಗೆ ತಾನೇ ತೀರಿಸಿದಂತಾಗುತ್ತದೆ ?
ಇನ್ನೊಬ್ಬ ಸೈನಿಕ ಹೇಳುವ ಮಾತು – ದೇವಲೋಕ ಸಿಗುವುದು ಒಂದು ಫಲ. ಅಲ್ಲಿನ ಸುಖದ ಐಶ್ವರ್ಯ ಬರುವುದು ಇನ್ನೊಂದು ಫಲ. ದೇವತೆಗಳ ಜೊತೆಗೆ ಸೇರುವ ಒಂದು ಉತ್ಸಾಹ ಮತ್ತು ಮೇಯ್ಸಿರಿಯ ಭಾಗ್ಯ ದೊರೆಯುವುದು ಮತ್ತೊಂದು. ಇಂತಹ ಯುದ್ಧದಲ್ಲಿ ಜಯಶಾಲಿಯಾಗಿ ಜೋಳದ ಋಣವನ್ನು ತೀರಿಸಿದವನು ನಿಜವಾದ ವೀರನು.
ಒಬ್ಬ ಯೋಧನು ತನ್ನ ಪತ್ನಿಯಲ್ಲಿ ಹೀಗೆ ಹೇಳಿದನು – ಈ ಹೊತ್ತೇ ಸರಿಯಾದ ವೇಳೆ. ನಾಳೆ ನಾನು ದೇವಲೋಕದ ಹೆಣ್ಣುಗಳ ಜೊತೆಗೆ ಇರುತ್ತೇನೆ. ಅದಕ್ಕೆ ಅವನ ಹೆಂಡತಿ ಹೇಳಿದಳು -ನೀನು ಹೇಳಿದ ಹಾಗೆ ದೇವಲೋಕಕ್ಕೆ ಹೋಗಲು ಸಾಧ್ಯವಿಲ್ಲ. ನಾಳೆ ನೀನು ಹಿಂದಕ್ಕೆ ಬಂದು ನನ್ನ ಜೊತೆಗೆ ಸೇರುತ್ತಿ. ಅದಕ್ಕೆ ಗಂಡನ ಮರುಪ್ರಶ್ನೆ – ಅದು ನಿನಗೆ ಹೇಗೆ ಗೊತ್ತು ? ಅದಕ್ಕೆ ಅವಳ ಮಾರುತ್ತರ – ನನ್ನ ಓಲೆಭಾಗ್ಯ ಇದೆ. ಇಂತಹ ಅನೇಕ ಲೌಕಿಕ ಮಾನವೀಯ ಚಿತ್ರಗಳು ಯುದ್ಧಭೂಮಿಯಲ್ಲಿ ದೊರೆಯುತ್ತವೆ .
ಪಂಪಭಾರತ ಕಾವ್ಯವು ಇತಿಹಾಸಕತೆಯಾಗಿ ಲೌಕಿಕ ಎಂಬ ಪರಿಕಲ್ಪನೆಯನ್ನು ಭಿನ್ನ ಭಿನ್ನ ಸ್ತರಗಳಲ್ಲಿ ಪ್ರಕಟಿಸಿದ ಕೆಲವು ಮಾದರಿಗಳು ಇಲ್ಲಿ ಇವೆ. ಇದರಿಂದ ಪಾತ್ರಗಳು ಸನ್ನಿವೇಶಗಳು ತಾತ್ವಿಕ ಸಂಗತಿಗಳು ಮೌಲ್ಯಗಳು ಹೊಚ್ಚಹೊಸತಾಗಿ ರೂಪುಗೊಳ್ಳುತ್ತವೆ.
ಕತೆಗಾಗಿ ಯಾರೂ ಕಾವ್ಯಗಳನ್ನು ಓದಬೇಕಾಗಿಲ್ಲ. ಕಾವ್ಯವು ತನ್ನ ಸಂವಿಧಾನದಲ್ಲಿ ಅಳವಡಿಸುವ ಲೌಕಿಕದ ಹೊಸ ಚಿಂತನೆಗಳು ಅದನ್ನು ಮಹಾಕಥನವನ್ನಾಗಿ ಮಾರ್ಪಡಿಸುತ್ತವೆ . ಅದು ಕಡಲಿನಂತೆ ಸದಾ ಹೊಸತೇ ಆಗಿ ಇರುತ್ತದೆ . ಪಂಪಭಾರತ ಅಂತಹ ಒಂದು ಮಹಾ ಅರ್ಣವ .

‍ಲೇಖಕರು avadhi

November 1, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: