ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು..

ಮೂಲ : ರಾಯ್ನರ್ ಬ್ರಾಮ್‌ಬಾಖ್

ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್

1917ರಲ್ಲಿ ಜನಿಸಿ 1983ರಲ್ಲಿ ಮಡಿದ ರಾಯ್ನರ್ ಬ್ರಾಮ್‌ಬಾಖ್ (RAINER BRAMBACH), ಕವಿಯಾಗಿ ಒಂದು ಅಸಾಧಾರಣ ಬದುಕು ಕಂಡರು. ಸ್ವಿಟ್ಜ಼ರ್ಲ್ಯಾಂಡಿನ ರೈನ್ ನದಿಯ ತೀರದಲ್ಲಿರುವ ಬಾಜ಼ಲ್ (Basel) ನಗರದಲ್ಲಿ ಬೆಳೆದ ಬ್ರಾಮ್‌ಬಾಖ್‌ರು, ಹದಿನಾಲ್ಕನೇ ವಯಸ್ಸಿನಲ್ಲಿ ಶಾಲೆ ಬಿಟ್ಟು ಕೂಲಿಕೆಲಸ ಮಾಡಲು ಶುರುಮಾಡಿದರು. ಎರಡನೆಯ ವಿಶ್ವಯುದ್ಧದ ಕಾಲದ ಹೆಚ್ಚಿನ ಸಮಯ ಅವರು ಜೈಲಿನಲ್ಲಿ ಅಥವಾ ಕಾರ್ಮಿಕ ಶಿಬಿರಗಳಲ್ಲಿ ಕಳೆದರು. ಈ ಅನುಭವಗಳು ಅವರ ಬರವಣಿಗೆಯ ಮೇಲೆ ಗಾಢವಾದ ಪ್ರಭಾವ ಬೀರಿದವು.

ಯುದ್ಧದ ನಂತರ ಅವರು ತಮ್ಮ ಕವನಗಳ ಸಣ್ಣ ಸಣ್ಣ ಸಂಕಲನಗಳನ್ನು ಹೊರತಂದರು. ಅವರ ಗೆಳೆಯರು ಹಾಗೂ ಕಾವ್ಯಾಸಕ್ತರು ಈ ಸಂಕಲನಗಳನ್ನು ಮರುಮುದ್ರಿಸಿ ಪ್ರಚಾರ ಮಾಡಿದರು. ಈ ರೀತಿಯಾಗಿ ಬ್ರಾಮ್‌ಬಾಖ್‌ರ ಕಾವ್ಯ ಸ್ವಿಟ್ಜ಼ರ್ಲ್ಯಾಂಡಿನ ಪ್ರಮುಖ ಪ್ರಕಾಶಕರೊಬ್ಬರ ಗಮನಕ್ಕೆ ಬಂತು; ಹಾಗೂ ಪಶ್ಚಿಮ ಜರ್ಮನಿಯ ಪ್ರಭಾವಿ ಸಾಹಿತ್ಯ ಪತ್ರಿಕೆಗಳ ಸಂಪಾದಕರ ಗಮನಕ್ಕೂ ಬಂತು. ಆದರೂ, ಸಾಹಿತ್ಯಲೋಕದಲ್ಲಿ ಅವರು ಹೊರಗಿನವರಾಗೇ ಉಳಿದರು ಹಾಗೂ ತಮ್ಮ ಜೀವನೋಪಾಯವನ್ನು ಕೂಲಿಕೆಲಸಗಳ ಮೂಲಕವೇ ನಿಭಾಯಿಸುತ್ತಿದ್ದರು – ರಸ್ತೆ ಕಟ್ಟುವುದು, ಮನೆಗಳ ಪೆಯಿಂಟ್ ಮಾಡುವುದು, ತೋಟಗಾರಿಕೆ, ಕಲ್ಲು ಒಡೆಯುವುದು.

ಬ್ರಾಮ್‌ಬಾಖ್‌ರಿಗಿದ್ದ ಲೌಕಿಕ ವಿಷಯಗಳ ಬಗೆಗಿನ ಅಸಡ್ಡೆ, ರೈನ್ ನದಿಯ ಭೂಪ್ರದೇಶದ ಜತೆಗಿನ ಆಳವಾದ ನಂಟು, ಹಾಗೂ ಮಾನವೀಯತೆಗೆ ಸ್ಥಿರವಾದ ಬದ್ಧತೆ – ಈ ವಸ್ತುಗಳು ಅವರ ಕಾವ್ಯಕ್ಕೆ ರೂಪ ಕೊಟ್ಟವು. ಅವರ ಕವನಗಳು ನೇರವಾಗಿ ಮಾತಾಡುವಂತಹ ಕವನಗಳು; ಆಡಂಬರ ಅಥವಾ ಸಿದ್ಧಾಂತಗಳಿಂದ ಮುಕ್ತವಾದ ಕವನಗಳು. ಅವರ ಕವನಗಳಲ್ಲಿ ಕಂಡುಬರುವ ನಿಶ್ಚಲ ಪ್ರತಿಮೆಗಳಲ್ಲಿ ಭೂದೃಶ್ಯಗಳು, ಸಣ್ಣ ಗ್ರಾಮೀಣ ದೃಶ್ಯಗಳು, ಮತ್ತು ಬಾರ್‌ಗಳು ಮತ್ತು ಕೆಫೆಗಳ ಒಳದೃಶ್ಯಗಳು ಮೂಡಿಬರುತ್ತವೆ. ಎಲ್ಲಕ್ಕಿಂತ ಮೇಲಾಗಿ ಅವರೊಬ್ಬ ಆಸಕ್ತ ವೀಕ್ಷಕರಾಗಿದ್ದು, ಅವರ ಕವಿತೆಗಳು ಸರಳವಾಗಿರುವಂತೆ ಕಾಣುವ ಒಳನೋಟಗಳನ್ನು ಒದಗಿಸುತ್ತವೆ. ಈ ಒಳನೋಟಗಳು ಒಂದು ಕಾವ್ಯಾತ್ಮಕ ಸಾರವನ್ನು ರೂಪಿಸುತ್ತಾ, ಕವಿಯ ಧ್ವನಿಯ ಮಹತ್ವವನ್ನು ದೃಢೀಕರಿಸುತ್ತವೆ.

ಸಂಪ್ರದಾಯಗಳಿಗೆ ಕಟ್ಟುಬೀಳಲು ಒಪ್ಪದ ಬ್ರಾಮ್‌ಬಾಖ್‌ರು ಬಹುಕಾಲ ಬಡತನದಲ್ಲೇ ಕಳೆದರು. ಸುಖಜೀವನದ ನಿರ್ಭಂಧನೆಗಳಿಗಿಂತ ಅವರು ಒಬ್ಬ ಒಂಟಿ ಸಂಚಾರಿಯ, ಒಬ್ಬ ಅನಿಯಮಿತ ಕೂಲಿಕಾರನ ಸ್ವಾತಂತ್ರ್ಯವನ್ನು ಹೆಚ್ಚು ಇಷ್ಟಪಡುತ್ತಿದ್ದರು.

ಅವರ ಒಟ್ಟು ಪ್ರಕಟವಾದ ಕವನಗಳ ಸಂಖ್ಯೆ 140 ಮಾತ್ರ; ಹೆಚ್ಚಿನವು ಸಣ್ಣ ಕವನಗಳು. ಈ ಕವನಗಳು ಎರಡು ಸಂಪುಟಗಳಲ್ಲಿ ಪ್ರಕಟವಾದವು – ‘ಟಾಸ್ ಅ ಕಾಯಿನ್’ (Toss a Coin) ಮತ್ತು ‘ಆಲ್ಸೊ ಇನ್ ಏಪ್ರಿಲ್’ (Also in April). ‘ಆಲ್ಸೊ ಇನ್ ಏಪ್ರಿಲ್’ ಸಂಕಲನವನ್ನು ಅವರೇ ಸಂಪಾದಿಸಿದರು, ಆದರೆ ಅದು ಪ್ರಕಟವಾಗುವುದರೊಳಗೆ ಅವರು ಕಾಲವಾದರು. ಅವರ ಕವನಗಳ ಸಂಖ್ಯೆ ಕಡಿಮೆಯಾಗಿದ್ದರೂ, ಅವರು ಸಾಹಿತ್ಯವಲಯಗಳಿಂದ, ಶಹರೀ ಬುದ್ಧಿಜೀವಿಗಳ ವರ್ಗಗಳಿಂದ ಬಹುದೂರ ತಮ್ಮ ಜೀವನ ಸಾಗಿಸುತ್ತಿದ್ದರಾದರೂ, ಅವರು ತಮ್ಮ ಸಹ-ಕವಿಗಳಾದ ಹನ್ಸ ಮಾಗ್ನುಸ್ ಎನ್ಸೆನ್ಸಬಗರ್ ಹಾಗೂ ಗುಂಟರ್ ಐಷ್‌ರಂತಹವರಿಂದ ಅಪಾರ ಮೆಚ್ಚುಗೆ ಪಡೆದಿದ್ದರು.

ಎಸ್ತರ್ ಕಿನ್ಸ್‌ಕಿ (ESTHER KINSKY) ಯವರು ಜರ್ಮನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ ಬ್ರಾಮ್‌ಬಾಖ್‌ರ ಎಲ್ಲಾ ಪ್ರಕಟಿತ ಕವನಗಳ ಒಂದು ಸಮಗ್ರ ಸಂಪುಟವನ್ನು ಕೊಲ್ಕತಾದ ಸೀಗಲ್ ಬುಕ್ಸ್ 2014ರಲ್ಲಿ ಹೊರತಂದರು (RAINER BRAMBACH – COLLECTED POEMS, Seagull Books).

1. ಉಪ್ಪು
ಮೂಲ: SALT

ನಮಗೆ ಒಬ್ಬರಿಗೊಬ್ಬರ ಅಗತ್ಯವಿದೆ,
ಈ ನೆಲದ ಉಪ್ಪು ನಾವು,
ಉಪ್ಪು, ಬಂಗಾರಕ್ಕಿಂತಲೂ ಅಮೂಲ್ಯ,
ಹೆಚ್ಚು ಅಗತ್ಯವುಳ್ಳದ್ದು,
ಏಕಾಕ್ಷರಿ, ಬಿಳಿ,
ಉಪ್ಪಿನ ಸೀಸೆಯಲ್ಲಿರುವ,
ಅಟ್ಲಾಂಟಿಕ್ ಮಹಾಸಾಗರದಲಿ,
ಬ್ರೆಡ್ಡಿನಲಿ, ಕಣ್ಣೀರ ಹನಿಯಲಿ,
ಬೆವರಿನಲಿ ಕಳೆದುಹೋಗಿರುವ
ನಾವು ಹುಟ್ಟುವ ಮುಂಚೆ
ಅಥವಾ ಹೇಗೋ, ಬೇರೆಲ್ಲೋ
ನಮಗೆ ಒಬ್ಬರಿಗೊಬ್ಬರ ಅಗತ್ಯವಿದೆ,
ನೆಲದ ಉಪ್ಪು ನಾವು.

2. ಬಾಳ್ಮೆ
ಮೂಲ: LIFE

ನಾನು ಬಿಜ಼್‌ನೆಸ್ ಪತ್ರಗಳನ್ನು ಬರೆಯೊಲ್ಲ,
ತಲುಪಬೇಕಾದ ತೇದಿ ಒತ್ತಾಯಪಡಿಸೊಲ್ಲ
ಹೆಚ್ಚು ಸಮಯಕ್ಕಾಗಿ ಕೇಳೊಲ್ಲ.
ನಾನು ಕವನಗಳ ಬರೆಯುವೆ.

ನಾನು ಕವನಗಳ ಬರೆಯುವೆ ಜಾತ್ರೆಗಳಲ್ಲಿ,
ಮ್ಯೂಸಿಯಮ್‌ಗಳಲ್ಲಿ, ಸಿಪಾಯಿಠಾಣೆಗಳಲ್ಲಿ, ಮೃಗಾಲಯಗಳಲ್ಲಿ.
ಮನುಜರು ಮೃಗಗಳು ಸಮನಾಗಿ ಎಲ್ಲೆಲ್ಲಿ ಬೆಳೆಯುವರೋ
ನಾನು ಬರೆಯುವೆ ಅಲ್ಲಲ್ಲಿ.

ನಾನು ಹಲವು ಕವನಗಳನ್ನು ಮರಗಳಿಗೆ ಅರ್ಪಿಸಿರುವೆ.
ಅಲ್ಲಿಂದ ಅವು ಆಕಾಶಕ್ಕೆ ಏರಿದವು.
ಯಾರಿಗೆ ಧೈರ್ಯವಿದೆ ಈ ಮರಗಳು
ಆಕಾಶಕ್ಕೆ ಏರಿಲ್ಲವೆಂಬ ಮಾತನ್ನು ನಿರಾಕರಿಸಲು?

ಮೃತ್ಯುವಿಗೆ ಒಂದು ಸಾಲು ಕೂಡ ಇಲ್ಲ, ಇಲ್ಲಿಯವರೆಗೂ.
ಎಂಬತ್ತು ಕಿಲೋ ನನ್ನ ತೂಕ, ಉನ್ನತ ನನ್ನ ಬಾಳ್ಮೆ.
ಎಂದೋ ಒಂದು ದಿನ ಅಂವ ಬಂದು ಕೇಳುವ,
ನಮ್ಮಿಬ್ಬರ ಬಗ್ಗೆ ಏನನ್ನುತ್ತಿ?

3. ಸಂಕ್ಷಿಪ್ತ ಟಿಪ್ಪಣಿ
ಮೂಲ: BRIEF NOTE

ನನ್ನ ಮನಸ್ಸನ್ನು ಆವರಿಸಿದ
ಕತ್ತಲೆಯ ತೊಲಗಿಸಲು
ಬರೆಯಬೇಕೆಂದುಕೊಂಡೆ,
ಸಫಲನಾಗಲಿಲ್ಲ.
ಮೇಸ್ತ್ರಿಯ ಹತ್ತಿರ ಗಾರೆ
ಕಲ್ಲುಕುಟುಕನ ಹತ್ತಿರ ಉಳಿ
ಬಡಗಿಯ ಹತ್ತಿರ ಮರ ಇಲ್ಲವೆಂದಾಗ
ನಾವು ಅಸಮರ್ಥರು

4. ನದಿಯ ಬದಿಯಲ್ಲಿ
ಮೂಲ: BY THE RIVER

ನದಿಯ ನೀರು ಹರಿಯುತಿದೆ ಏನೂ ಆಗಿಲ್ಲವೆಂಬಂತೆ
ದಡದಲ್ಲಿ ಏನೇನು ಬೇರೂರಿವೆಯೋ
ಬಾಯಿ ಮುಚ್ಚಿಕೊಂಡಿವೆ.
ಬಾತುಕೋಳಿಯೊಂದು ಹಾರುತ್ತೆ ಮೇಲಕ್ಕೆ – ಕ್ವಾಕ್‌ಕ್ವಾಕ್ ಅನ್ನುತ್ತಾ,
ಬಹುಶಃ ಸಾಕ್ಷಿಯೋ ಏನೋ ಅದು —
ಅದರ ಹೇಳಿಕೆ ದಾಖಲಾಗಲಿಲ್ಲ.

ಮೇಪಲ್ ಎಲೆಯೊಂದನ್ನು, ಲೊಡ್ಡಾದ ಮರದ ತುಂಡೊಂದನ್ನು
ನೀರಿನಡಿಯ ಕಿರುದೆರೆಯೊಂದು ಸುತ್ತಿಸಲು ಯತ್ನಿಸುತ್ತದೆ.
ಹಗುರವಾದವು ಅವು, ತೇಲಾಡುತ್ತಾ ಹೋಗುತ್ತವೆ—
ತೂತಾಗಿರುವ ದೋಣಿಯನ್ನು ಏರಿಸುವುದು
ಯಾವ ಉಪಯೋಗಕ್ಕೂ ಬಾರದು, ಅವನೊಬ್ಬನನ್ನೇ
ಅವರು ಈಗಲೂ ಹುಡುಕುತ್ತಿದ್ದಾರೆ, ನಿನ್ನೆ ಮಧ್ಯಾಹ್ನ ಇಲ್ಲಿ ಕೂತಂವ
ತನ್ನ ಕೋಟನ್ನು ವಿಲೊ ಪೊದೆಯಲ್ಲಿ ಬಿಟ್ಟು ಹೋದಂವ.

5. ವೃದ್ಧಾಶ್ರಮ
ಮೂಲ: OLD PEOPLE’S HOME

ತೋಟಗಾರನ ನಿವೃತ್ತ ಜೀವನ ನಡೆಸುತ್ತಿರುವೆನಾದರೂ
ನನಗೀಗಲೂ ನೆನಪಿದೆ
ಅಷ್ಟಮಾರುತಗಳ್ಳೆವುದರ ವೇಳಾಪಟ್ಟಿ.
ಮಳೆಮೋಡಗಳ ಆಗಮನದ ಸಮಯದ ಬಗ್ಗೆ
ನಾನು ನೀಡುವ ಮುನ್ಸೂಚನೆಗಳು
ನಂಬುವಂತಹವು.

ಸಂಧಿವಾತ ಮತ್ತು ಬ್ರ್ಯಾಂಡಿಗಾಗಿ ಇರುವ
ತಣಿಸಲಾಗದ ಕಡುಬಯಕೆಯನ್ನು ಬಿಟ್ಟರೆ
ನನಗೆ ಬೇರಾವ ಸಮಸ್ಯೆಗಳಿಲ್ಲ.
ನನ್ನ ಮಿತ್ರರೆಲ್ಲರೂ ಸತ್ತುಹೋಗಿದ್ದಾರೆ
ನನ್ನ ಶತ್ರುಗಳೆಲ್ಲರೂ ಕಾಣೆಯಾಗಿದ್ದಾರೆ.

ನನಗೆ ಈಗೀಗ ಅರ್ಥವಾಗದ ಈ ಲೋಕ
ವಾರ್ತಾಪತ್ರಿಕೆಯ ರೂಪದಲ್ಲಿ ವಾರಕ್ಕೊಮ್ಮೆ
ನನ್ನನ್ನು ಭೇಟಿ ಮಾಡುತ್ತೆ
ಮತ್ತೆ ದಿನಕ್ಕೆ ಹಲವು ಸಲ
ಗುಬ್ಬಚ್ಚಿಗಳ ಹಿಂಡೊಂದು ಪಟಪಟನೆ
ಹಾರಿ ಬರುತ್ತವೆ ಕಿಟಕಿಯ ಹತ್ತಿರ.

ಗುಬ್ಬಚ್ಚಿಗಳು ನನ್ನಲ್ಲಿಟ್ಟ ನಂಬಿಕೆಯನ್ನು ಮನ್ನಿಸಿ
ನಾನವುಗಳನ್ನು ಹಾಡುಹಕ್ಕಿಗಳ ಮಟ್ಟಕ್ಕೆ ಏರಿಸಿರುವೆ.

‍ಲೇಖಕರು Admin

26 February, 2022

1 Comment

  1. T S SHRAVANA KUMARI

    ಉದಾಹರಣೆಗಳು ಆಸಕ್ತಿ ಹುಟ್ಟಿಸಿವೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading