ಬೆಳ್ಳಿ ಕಾಲುಂಗುರ
ಜ್ಯೋತಿ ಅನಂತಸುಬ್ಬರಾವ್
ಒಂದು ಟಿವಿ ಚಾನೆಲ್ ಸ್ಟುಡಿಯೋದಲ್ಲಿ ಚರ್ಚೆಗೆಂದು ಒಂದಷ್ಟು ಮಹಿಳೆಯರು, ಯುವತಿಯರು ಒಟ್ಟಿಗೆ ಸೇರಿದ್ದೆವು. ನಾನು ತಾಳಿ, ಬಳೆ, ಕಾಲುಂಗುರಗಳನ್ನು ಧರಿಸಿಲ್ಲದ ಕುರಿತೂ ಒಂದಿಷ್ಟು ವಿಶೇಷ ಚರ್ಚೆಯಾಗುತ್ತಿತ್ತು. 😂
ಒಬ್ಬ ಮಹಿಳಾಮಣಿ ಹೇಳಿದರು, “ವೈಜ್ಞಾನಿಕ ಸತ್ಯ ಏನೆಂದರೆ ಕಾಲ್ಬೆರಳಲ್ಲಿ ಇರುವ ಒಂದು ನರ ಗರ್ಭಕೋಶಕ್ಕೆ ಸಂಬಂಧಿಸಿದ್ದು, ಆ ನರ ಗರ್ಭಕೋಶವನ್ನು ಲಿಂಕ್ ಆಗುತ್ತದೆ. ಮಹಿಳೆಯರು ಕಾಲುಂಗರ ಧರಿಸುವುದರಿಂದ ಆಗುವ ಪ್ರಯೋಜನ ನೋಡಿ… ಈ ನರದ ಮೇಲ್ಮೈಗೆ ಬೆಳ್ಳಿ ಲೋಹ ಸೋಕಿದರೆ ಅದು ಗರ್ಭಕೋಶದ ಸಮಸ್ಯೆಗಳನ್ನು ತಡೆಗಟ್ಟುತ್ತದೆ… ಆದ್ದರಿಂದ ಬೆಳ್ಳಿ ಕಾಲಂಗುರದ ಪದ್ಧತಿ ನಮ್ಮಲ್ಲಿ ಬಂದಿದ್ದು”
ಈ “ಕಾಲುಂಗುರ ತಜ್ಞೆ “ಯ ಮಾತಿಗೆ ಇನ್ನೊಬ್ಬರು, “ಎಸ್, ಎಕ್ಸಾಕ್ಟ್ಲಿ” ಎನ್ನುತ್ತಾ ತಲೆಯಾಡಿಸಿದರು.
ಒಬ್ಬಳು ಯುವತಿ ಬಹಳ ಮುಗ್ಧವಾಗಿ, “ಮೇಡಂ, ಕಾಲುಂಗುರ ಹಾಕುವುದರಿಂದ ಬಾಣಂತನದಲ್ಲಿ ಹಾಲುಣಿಸುವ ತಾಯಿಗೆ ಎದೆಹಾಲು ಚೆನ್ನಾಗಿ ಸಿಗುತ್ತದಂತೆ” ಎಂದು ನುಡಿದಳು.
ನನಗೆ ಮಾನವನ ಅನಾಟಮಿ, ಫಿಸಿಯಾಲಜಿಗಳನ್ನು ಹೊಸದಾಗಿ ಅಧ್ಯಯನ ಮಾಡಿದಂತಹ ಈ “ಲೋಹ-ಸ್ತ್ರೀದೇಹ ಶಾಸ್ತಜ್ಞ”ರ ಮಾತುಗಳನ್ನು ಕೇಳಿ ನಗು ಉಕ್ಕಿತ್ತು! ಕಾಲ್ಬೆರಳಿನ ಆ ಯಾವುದೋ ನರ ಗರ್ಭಕೋಶದೊಳಗೇ ಲಗ್ಗೆ ಇಟ್ಟು ಕಚಗುಳಿ ಇಟ್ಟಂತಾಯಿತು! 😁 😇 ಇವರ ಕಾಲ್ಬೆರಳ ನರ ಗರ್ಭಕೋಶವನ್ನು ಪ್ರಚೋದಿಸಿದಂತೆ ಮಿದುಳನ್ನು ಪ್ರಚೋದಿಸುವ ಯಾವ ವಿಶೇಷ ನರವೂ ಇಲ್ಲವೇ ಎನಿಸಿತು! (ಅದನ್ನೂ ಈ ವಿಜ್ಞಾನಿಗಳು ಹುಡುಕಿ ಬಿಡುತ್ತಾರೇನೋ!!)
ನಂತರ ಯುವತಿಗೆ ಹೇಳಿದೆ, “ನಾನು ಕಾಲುಂಗುರ ತೊಟ್ಟಿದ್ದಲ್ಲ, ಮುಟ್ಟಿಯೂ ಇಲ್ಲ; ಆದರೆ ನನ್ನ ಇಬ್ಬರೂ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಾಕಷ್ಟು ಪ್ರಮಾಣದಲ್ಲಿ ಎದೆ ಹಾಲು ಕುಡಿಸಿದ್ದೇನೆ. ಇವೆಲ್ಲಾ ಅವೈಜ್ಞಾನಿಕವಾದ ಆಲೋಚನೆಗಳು.
ಬೆಳ್ಳಿ ಕಾಲುಂಗುರ ತೊಟ್ಟರೂ ಗರ್ಭಕೋಶದ ತೊಂದರೆಗಳಿಂದ ಬಳಲುವ ಮಹಿಳೆಯರಿಗೇನು ಕಡಿಮೆಯೇ ಸ್ವಲ್ಪ ಗಮನಿಸಿ, ಯೋಚಿಸಿ…
ತುಕ್ಕು ಹಿಡಿದು ನಶಿಸಿಹೋಗುತ್ತಿರುವ ಅರ್ಥಹೀನ ಸಂಪ್ರದಾಯಗಳಿಗೆ ವೈಜ್ಞಾನಿಕತೆಯ ಲೇಪನ ಕೊಟ್ಟು ಜೀವಂತಿಕೆ ಕೊಡಲು ಮೂರ್ಖರು, ಅವಿವೇಕಿಗಳು ತೋಡುವ ಕೂಪಕ್ಕೆ ನೀವು ಬೀಳಬೇಡಿ” ಎಂದು.






Nimma ee putta baraha nanna mukhada halaavaaru snaayugalannu (naguvina moolaka) prachodisitu.