ಎರಡು ಕವಿತೆಗಳು
ಆರ್ ವಿಜಯರಾಘವನ್
ಒಂದು ಬಿಳಿ ಕುದುರೆಗೆ
ಅದೆಂಥ ಆಡುವ ಗಾಳಿಗೂದಲು
ರಸ ಸವರಿದ ತುಟಿಗಳತ್ತ ತಿರುಗಿರುವ ಕತ್ತು;
ದುಃಖದ ಮಡುವಾದ ಗೋಣಂಚಿನಲ್ಲಿ ಹೊದೆಹುಲ್ಲಂತ ರೋಮ
ಬಿಳಿ ಬಿಳೀ ಕುದುರೆ ಏಕೆಂದರೆ ಅದನ್ನು ನಾನು ಹಾಗಿರಲೆಂದೇ ಬಯಸಿದ್ದೆ
ನಿನ್ನ ಕಂಗಳು ಆ ಸ್ಮಶಾನದ ಭೂಮೈಯನ್ನು ಪ್ರತಿ ತೆಗೆದಿಟ್ಟುಕೊಳ್ಳುತ್ತವೆ
ಬಿದ್ದುಹೋಗಿರುವ ಮರ ಮೆಲ್ಲ ಕಂಪಿಸುತ್ತದೆ ಲಂಗರಿನ ಬಳಿ
ಹಿಪ್ಪುನೇರಳೆ ಆಕಾಶನೀಲಿಯನ್ನು ಭಟ್ಟಿ ಇಳಿಸಿಕೊಳ್ಳುತ್ತದೆ
ನಿನ್ನ ಸೊಂಟವೇರಿ ಗಾಳಿಯ ಗುಂಟ ಓಡಿಸುತ್ತದೆ
ನೀನು ಓಡಿಹೋದೆ ನನ್ನಿಂದ. ಹಸಿರು ಕೆನೆಗಟ್ಟಿದ ಹುಲ್ಲಿನಲ್ಲಿ
ಕಳೆದುಹೋದೆ. ಎದೆ ಕವಚವ ಮುಂಚಾಚಿ ನುಗ್ಗು
ಹೊಡೆದಾಡುತ್ತಿರುವ ಪಡುವಣ ಪೊದೆಗಳ ಕಡೆಗೆ
ಈ ಕಪ್ಪುಗಟ್ಟುತ್ತಿರುವ ಕೊಳ ನನ್ನಿಂದ
ನೀನು ದೂರ ಓಡಿಹೋಗುತ್ತೀಯ,
ನಿನ್ನ ಬೆಳ್ಳನೆ ಮೊಲೆಗಳಿಂದ ದುರ್ಗಮ ಕಮರಿಯವರೆಗೂ
ನಿನ್ನ ಬಿಳುಪು ಹಾಡುತ್ತದೆ ನನ್ನ ಆಳದಾಳಗಳಿಂದ.
To a White Horse
ಸಂತೋಷವಾಗಿ ಮುಗಿದ ವ್ಯವಹಾರ
ಎಷ್ಟೊಂದು ಮಾಧುರ್ಯ ಬೇಕು ಇರುಳ ನೇರ್ಪಡಿಸುವುದಕ್ಕೆ
ಮತ್ತೆ ನುಣುಪಾದ ಸಂತೈಸುವ ಕಲ್ಲುಗಳ ಬಳಿ
ಈ ಅನಿಮೋನ್ಗಳ ಸೆಳೆತ
ಕಲ್ಲುಗಳು ದಕ್ಷಿಣದ ವಾತಾವರಣಕ್ಕೆ ಹಾಕಿದ ಲಂಗರುಗಳು
ಆ ಬೆಳಕು ಸಿಡಿಸುವ ಮ್ಯಾನ್ಗ್ರೋವ್ಗಳ ಜೊತೆ
ಹಾಗೊಮ್ಮೆ ಹೀಗೊಮ್ಮೆ ಸೆಫೀಡ್ಗಳು* ಮೆಲ್ಲ ನಡುಗುವದನ್ನು
ಗಮನಿಸುತ್ತಿರುವ ಹೆಂಗಸು. ಆ ಹೆಂಗಸು, ಕೊಡಬಯಸುವಳು
ಮಾರ್ಜಾಲನೇತ್ರ ಮಣಿಯನ್ನು*, ಕೇವಲ ಕ್ಲೆಮಾಟಿಸ್* ಹೂಗೊಂಚಲುಗಳನ್ನು,
ದ್ವೀಪಗಳನ್ನು – ತನ್ನ ವ್ಯವಹಾರ ಹಾಗೆ ಕುದುರಿದ್ದಕ್ಕೆ ಸಂತೋಷದ ಮೇರೆ ಮೀರಿ
Deal Struck with Happiness » * Cepheids, cats-eyes, clematis
From: The Poetess Counts To 100 And Bows Out – Selected Poems By Ana Enriqueta Terán, Venezuela. Princeton university press -2003







ಎರಡೂ ಕವಿತೆಗಳೂ ತುಂಬಾ ಚೆನ್ನಾಗಿವೆ ಸರ್.
ಇಂಗ್ಲೀಷ್ ಕವನಗಳ ಭಾವಾನುವಾದದಂತಿವೆ.
ಕವಿತೆ ಚೆನ್ನಾಗಿದೆ ಸರ್