ನಾಗರಾಜ್ ಹರಪನಹಳ್ಳಿ
ಮಳೆ ಸುರಿಯುತ್ತಲೇ ಇದೆ
ದಾಹ ಮಾತ್ರ ಹಿಂಗಿಲ್ಲ
ಎಲ್ಲರದ್ದೂ…
ನಂದು ನಿಂದು ಅವರದ್ದು ಜಗದ್ದು
ಭೂಮಿದು ನದಿಯದ್ದು ಕಡಲದ್ದೂ
ಕೊನೆಗೆ ಆಕಾಶದ್ದು
ಚಿರಂತನ ದಾಹ ಅಂದ್ರೆ ಇದೇ ಇರ್ಬೇಕು
***
ಆಕಾಶ ನೆಲ ಮುಗಿಲು ಒಂದಾಗಿ ನೀರಾದರೂ
ಕಡಲು ಅದೆಷ್ಟೋ ನದಿಗಳ ಮಡಿಲೊಳಗೆ ಮಕ್ಕಳಂತೆ ಮುದ್ದಿಸಿ
ಪ್ರೇಯಸಿಯಂತೆ ಲಲ್ಲೆಗರೆದರೂ
ನೀರು ಕುಡಿದಷ್ಟು ಮುಗಿಯುವಂಥದ್ದಲ್ಲ
ಈ ಜಗದ ಯಾಪಾರ……
****

ಮಳೆಗಾಲದಲ್ಲೇ ಸಮುದ್ರ ರಾಜನ ಅಬ್ಬರ ಜೋರು
ಗಾಳಿ ಮಳೆ ಮುಗಿಲ ಮಿಂಚು
ಮೋಡಗಳ ತಿಕ್ಕಾಟದ ಗುಡುಗು
ಸದ್ಯಕ್ಕೆ ಅಡುಗುವಂಥದ್ದಲ್ಲ
ನದಿ ನದಗಳು ಕೂಡಿ ನಲಿದು
ಮುಗಿಲಿಗೆ ಸಂದೇಶ ಕಳಿಸಿದ್ರೂ
ನಿಲ್ಲುವಂಥದ್ದಲ್ಲ ಮಳೆ
ಥೇಟ್ ನಿನ್ನಂಥದ್ದೇ ಹರೆಯ ಅದಕೆ
ಬಿರುಸು ಸೊಗಸು ಮುನಿಸು ವೈಯ್ಯಾರ ಥಳಕು ಬಳಕು
ಒಂಚೂರು ಕಡಿಮೆಯಾಗಿಲ್ಲ ನೋಡು
ಸಮುದ್ರದ ಬಾಯಾರಿಕೆಯೂ ಹಿಂಗಿಲ್ಲ
ದಂಡೆಯ ವಿರಹವೂ ಮುಗಿಯುವಂಥದ್ದಲ್ಲ
ಮಳೆ ಮಿಂದ ಕಾಡು ಭೂಮಿ
ಹಸಿರೊದ್ದು ನಲಿದು ನರ್ತಿಸಿ
ರಂಗವೇ ಶೃಂಗಾರವಾಗಿ ಚೆಲುವಾಗಿ
ಹಚ್ಚಿಕೊಂಡದ್ದನ್ನೆಲ್ಲ ಸಾವರಿಸಿ ಸಂತೈಸಿರಲು ; ಮಳೆ ಮಾತ್ರ ಸುರಿದೇ ಮುಗಿಯುವುದಿಲ್ಲ….
ಕೂಟ
ಮರದ ಮರೆಯಲ್ಲಿ ಎರಡು ಹೃದಯ
ಕಿಸಕ್ಕನೆ ನಕ್ಕಂತಾಯ್ತು
ಹರೆಯವೇ ಎದ್ದು ಬಂದು ಮುಗಿಲಿಗೆ
ಮುಖಕೊಟ್ಟದ್ದಯ್ತು
ಮಳೆ ಮಳೆ , ಮತ್ತೆ ಮಳೆ
ಅದೇ ಕಡಲು, ನೂರು ನದಿ
ಲೆಕ್ಕವಿಡದ ಮಳೆ ಹನಿ
ಹಚ್ಚಿಕೊಂಡ ಸಮುದ್ರವ ಮುದ್ದಿಸಿ ಸೇರುತ್ತಲೇ ಇದೆ…






ನದಿ,ಕಡಲು,ಮಳೆ,ಇಳೆ,ಶೃಂಗಾರ,ಸೊಗಸು,ಎಲ್ಲವೂ ರಸವತ್ತಾಗಿ ಸೇರಿರುವ ಚಂದದ ಕವನ,ನಿಜಕ್ಕೂ ಸುಂದರವಾಗಿ ಕವನ ರಚಿಸಿದ್ದಿರಿ.
ನಾಗರಾಜ್,
ಮಳೆ, ದಾಹ , ನಿರಂತರತೆ , ಜೊತೆಗೆ ಮುದ್ದು .. ಹದವಾಗಿ ಬಂಧಿಸಿದ್ದೀರಿ. ತಣ್ಣನೆಯ ವಿಷಾದದ ಜೊತೆಗೆ.
ನೂತನ ದೋಶೆಟ್ಟಿ
Chendada kavite – smitha Amrithraj.