ನಾಗರಾಜ ಹರಪನಹಳ್ಳಿ
ಬಟಾ ಬಯಲು
ವಿಶಾಲ ಕಡಲ ಬಾಗಿಲೊಳಗೆ
ನುಸುಳಿದೆ ಬೆಳಗು
ಅದು ಬೇರೇನು ಅಲ್ಲ ;
ನಿನ್ನದೇ ಉಸಿರು
****
ಉರಿ ಉರಿ ಬಿಸಿಲು
ಬರ ಬರನೆ ಬೀಸುವ ಗಾಳಿ
ಗಾಳಿಗೆ ಮೈ ಮುರಿದೇಳುವ ಕಡಲು
ಮುಗಿಲಿಗೆ ದಿಗಿಲು ಬಡಿದಂತೆ
ನೋಡುವ ಅವಳು

*****
ಸಾಕು ಸಾಕಾಗಿದೆ ಈ ಬಿಸಿಲು
ಎಷ್ಟು ಋತುಗಳ ಕಳೆದೆನೋ ಹೀಗೆ
ಒಂಟಿಯಾಗಿ ಒಬ್ಬಂಟಿಯಾಗಿ
ಏಕಾಂಗಿಯಾಗಿ
ಜೊತೆಗೆ ಬುದ್ಧನೂ ನಿಲ್ಲಲಿಲ್ಲ
ರೂಮಿಯೂ ನಿಲ್ಲಲಿಲ್ಲ
ಎಲ್ಲರೂ ಬೆಳಕ ಬೆನ್ನ ಹತ್ತಿದವರೇ
ನಾನು ಕಾದಿದ್ದೇನೆ
ನಿನಗಾಗಿ ; ನಿನ್ನ ಕಿರುನಗೆಗಾಗಿ
****
ಇರುಳು ಹಗಲು ನದಿ ಕಡಲು
ಬೆಡಗು ಬಯಲು ಹಕ್ಕಿ ಚುಕ್ಕಿ
ಇಳೆ ಮಳೆ ಆಕಾಶ ಚಂದಿರ
ಒಂದಾದವು
ಒಂದಾದ ಮೇಲೊಂದರಂತೆ
ದಶಕಗಳು ಕಳೆದವು
ನಾವು ಇಲ್ಲೇ ಇದ್ದೇವೆ
ಚಲನೆಯೊಳಗೂ ಚಲನೆ ಮರೆತು
ಮೌನದೊಳಗು ಮಾತು ಮೊರೆತು
****
ಬಯಲ ಬೆಳಕು ಕೂಡಿತು
ಕ್ಷಿತಿಜ ಭೂ ಆಕಾಶ ಬೆಸೆಯಿತು
ಅದರಾಚೆಯ ಹುಡುಕಾಟ
ನನಗೂ ನಿನಗೂ
ಎಷ್ಟು ಋತುಗಳ ಕಳೆದೆನೋ ಹೀಗೆ..
ನಿಮಗೆ ಇವೂ ಇಷ್ಟವಾಗಬಹುದು…





0 Comments