ಎಷ್ಟು ಆಟವಾಡಿದ, ಹೆಣ್ಣು ಹೃದಯಗಳೊಂದಿಗೆ.. ಅದಕ್ಕೇ ಸಾಯಿಸಿದೆ..


ರೇಣುಕಾ ನಿಡಗುಂದಿ ಅವರು ಕಾಮರೂಪಿ ಅವರ ಬರಹಗಳನ್ನು ಓದಲು ಹಂಬಲಿಸಿದ್ದರು.

ಧಾರವಾಡದ ಆ ರಸ್ತೆಯ ಅಂಚಿನ ಅಂಗಡಿಯಲ್ಲಿ ಹೇಗೆ ಇದ್ದಕ್ಕಿದ್ದಂತೆ ಕಾಮರೂಪಿ ತಮಗೆ ಧಕ್ಕಿ ಹೋದರು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದರು. 

ಈಗ ಅದರ ಮುಂದುವರಿದ ಭಾಗ ಕಾಮರೂಪಿಯವರನ್ನೇ ಕೇಳಿದ್ದಾರೆ- ಅವನನ್ನು ಏಕೆ ಸಾಯಿಸಿದಿರಿ? 


ರೇಣುಕಾ ನಿಡಗುಂದಿ 

ಎಂದೋ ಒಮ್ಮೆ ಕನಸಿನಲ್ಲಿ ಕಂಡ ಮುಖದ ಹೋಲಿಕೆ ಹೀಗೆ ಧುತ್ತನೆ ಎದುರಾಗಿ ಮುಖದಲ್ಲಿ ಮಿಂಚಿದಂತೆ ಹೊಳೆದು ಕ್ಷಣಕಾಲ ಸ್ತಬ್ಧತೆ ಆವರಿಸಿಕೊಳ್ಳುತ್ತದಲ್ಲವಾ! ಬೇರೆ ರೀತಿ ಹೇಳಬೇಕೆಂದರೆ ಎಂದೂ ಮಾತನಾಡದೇ ಇರುವ ವ್ಯಕ್ತಿಯ ದನಿ ಕೂಡ ಎಷ್ಟೋ ಕಾಲದಿಂದ ಪರಿಚಿತವಾಗಿರುವಂತೆ ಆಪ್ತವಾಗಿಬಿಡುತ್ತದೆ. ಈಗತಾನೆ ಈ ಕನ್ನಡ ಸಾಹಿತ್ಯಲೋಕದ ಅದ್ಭುತ ಬರಹಗಾರ, ಸರಳ ಸಜ್ಜನ ವ್ಯಕ್ತಿ, ಪತ್ರಕರ್ತರಾಗಿ ಕನ್ನಡಿಗರೆಲ್ಲರಿಗೆ ಪರಿಚಯವಿರುವ ’ಕಾಮರೂಪಿ’ಯವರೊಡನೆ ಮಾತನಾಡಿ ಅದೇ ಗುಂಗಿನಲ್ಲಿ ಕೂತಿದ್ದೇನೆ.

kamaroopiಆಸ್ಸಾಮಿನ ಪುರಾತನ ಹೆಸರು ’ಕಾಮರೂಪ’ ವನ್ನೆ ತಮ್ಮ ಕಾವ್ಯನಾಮವನ್ನಾಗಿಟ್ಟುಕೊಂಡು ಬರೆದ ಎಂ.ಎಸ್.ಪ್ರಭಾಕರ ಅವರು ಈಶಾನ್ಯ ಭಾರತದ ಗೌಹಾಟಿ ವಿಶ್ವವಿದ್ಯಾಲಯದಲ್ಲಿ ಹದಿನಾಲ್ಕೋ ಹದಿನೈದೋ ವರುಷ ಪಾಠಮಾಡಿ, ದಿ ಹಿಂದೂ ಪತ್ರಿಕೆಗೆ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತ ಬರೊಬ್ಬರಿ ಐದು ದಶಕಗಳ ಸುದೀರ್ಘಕಾಲ ಆಸ್ಸಾಮಿನಲ್ಲಿ ವಾಸಿಸಿದವರು. ಆಸಾಮಿ ಭಾಷೆಯನ್ನು ಚೆನ್ನಾಗಿ ಬಲ್ಲ ಕಾಮರೂಪಿ ಹೆಸರು ಆಸ್ಸಾಮಿಗರ ಮನೆ ಮನೆ ಮಾತು. ಆಸ್ಸಾಂ ಅವರ ಕರ್ಮಕ್ಷೇತ್ರ, ನಡುವೆ ಅಲ್ಪಕಾಲ ಮುಂಬೈಗೆ ವಲಸೆಹೋಗಿದ್ದರೂ ಪುನಃ ಬಂದು ಸೇರಿದ್ದು ಆಸ್ಸಾಂಗೇ. ಹೀಗೆ ಬದುಕಿನ ಅತ್ಯಮೂಲ್ಯವಾದ ಯೌವನ, ಹರಯದ ದಿನಗಳನ್ನು ಬಾಳಿ ಬದುಕಿದ ನಾಡು – ಆಸ್ಸಾಂ.

ಅವರ ಕಿರುಕಾದಂಬರಿ ’ಅಂಜಿಕಿನ್ಯಾತಕಯ್ಯ’ ಮೊನ್ನೆ ತಾನೆ ಓದಿ ಮುಗಿಸಿದೆ. ‘ಅವರಿಗೆ ಫೋನ್ ಮಾಡಿ ಹೇಳು ತುಂಬಾ ಖುಶಿ ಪಡ್ತಾರೆ’ ಎಂದು ಗೆಳತಿ ಭಾರತಿ ಹೇಳಿದಾಗಲೇ ನೆನಪಾದದ್ದು. ಫೋನ್ ರಿಸೀವ್ ಮಾಡುತ್ತಲೇ ಅಪರಿಚಿತತೆಯ ಸಂಕೋಚವನ್ನು ದೂರಾಗಿಸಿ ಆಪ್ತವಾಗಿ ಮಾತಾಡಿಸುವ ಅವರೊಂದಿಗೆ ಮಾತನಾಡುತ್ತಲೇ ಇರಬೇಕೆನಿಸುತ್ತದೆ.

’ಅಂಜಿಕಿನ್ಯಾತಕಯ್ಯಾ ಪುಸ್ತಕ ಎಷ್ಟಕ್ಕೆ ಕೊಂಡೆ ? ಸುಮ್ಮನೇ ಕುತೂಹಲಕ್ಕೆ ಕೇಳ್ತಿದೀನಿ ಹೇಳಿ ಅಂದದ್ದಕ್ಕೆ ಕೊಂಡ ಬೆಲೆಯನ್ನು ಹೇಳಿದೆ. ಅಯ್ಯೋ.. ಮೂರು ರುಪಾಯಿ ಐದು ರುಪಾಯಿಗೆಲ್ಲ ಬರ್ತಿತ್ತು. ಇಷ್ಟಾಆ ಎಂದು ಅಚ್ಚರಿಪಟ್ಟರು. ಮಕ್ಕಳ ಮುಗ್ಡ ಬೆರಗು, ತಮ್ಮ ಕೃತಿಯೊಂದರ ಬಗ್ಗೆ ಇಷ್ಟೊಂದು ಕಾಲದ ನಂತರ ಯಾರೋ ಓದಿ ಅದರ ಬಗ್ಗೆ ಮಾತನಾಡಿದಾಗ ಆಗುವ ಸಂತಸ, ಉತ್ಸಾಹ ಅವರಲ್ಲಿದ್ದರೆ, ಕೃತಿಕಾರನೊಂದಿಗೆ ನೇರ ಮಾತಾಡುವ ಅವಕಾಶ ಸಿಕ್ಕಿದ್ದಕ್ಕೆ ನನಗೂ ಇನ್ನಿಲ್ಲದ ಸಂತಸವಾಗಿತ್ತು. ಆಗಾಗ ನಾನೂ ಕಥೆ ಬರೆಯುವ ಗೀಳಿನವಳಾಗಿದ್ದು ಹೊಸ ತಂತ್ರ, ಭಾಷೆಯ ಸೊಗಡು ಯಾವಾಗಲೂ ನನ್ನನ್ನು ಸೆಳೆಯುತ್ತಿರುತ್ತದೆ. ಒಳ್ಳೆಯ ಕಥೆ ಕಾದಂಬರಿಯನ್ನೋದಿದಾಗ ಸಿಗುವ ಸಂತೋಷವೇ ಬೇರೆ. ಅದನ್ನು ಪದಗಳಲ್ಲಿ ಹಿಡಿದಿಡಲಾಗದು.

“ಅಂಜಿಕಿನ್ಯಾತಕಯ್ಯಾ” ಯಾವುದೇ ಊರಿನಲ್ಲಿ, ಒಂದು ಕಾಲಕ್ಕೆ ಹೀಗೇ ಎನ್ನುವಷ್ಟು ಸಹಜವಾಗಿ ಘಟಿಸಬಹುದಾದಂಥ ಒಂದು ಘಟನೆಯ ಸುತ್ತ ಹೆಣೆಯಲ್ಪಟ್ಟ ಒಂದು ನೀಳ್ಗತೆ-ಕಿರುಕಾದಂಬರಿ. ರಾಮಕೃಷ್ಣ ಎನ್ನುವ ಕಥಾನಾಯಕ ಬೆಂಗಳೂರಿನಲ್ಲಿ ಅಧ್ಯಾಪಕನಾಗಿದ್ದು ಮಹಾನ್ ಕೃತಿಯೊಂದ ರಚಿಸಲು ಆ ಪುಟ್ಟ ಗುಡ್ಡಳ್ಳಿಗೆ ಬಂದು ಸೇರುತ್ತಾನೆ. ಪುಸ್ತಕವನ್ನ ಬರೆಯಬೇಕೆನ್ನುವ ಅತ್ಯುದಾತ್ತ ಅಭಿಲಾಷೆಯನ್ನು ಆಚೆಗಿಟ್ಟು ಅನಾವಶ್ಯಕವಾಗಿ ಗುಡ್ಡಳ್ಳಿಯ ಶಾಂತತೆಯನ್ನು ಕೆದಕಲು ಯತ್ನಿಸುತ್ತಾನೆ. ರಾಮಕೃಷ್ಣ ಒಬ್ಬ ವಿಲಕ್ಷಣ ವ್ಯಕ್ತಿ. ಅವನ ಲೆಕ್ಕದಲ್ಲಿ ತಾನು ಎಲ್ಲರಿಗಿಂತ ಹೆಚ್ಚು ಬುದ್ದಿವಂತ, ಅತಿ ಪಾಕಡಾವ್ಯಕ್ತಿ ಎನ್ನವ ಭ್ರಮೆಯಲ್ಲಿರುತ್ತಾನೆ.

ಆ ಊರಿಗೆ ಕೇರಳದಿಂದ ವಲಸೆ ಬಂದು ಕನ್ನಡ ಭಾಷೆ ಕಲಿತು ಆ ಹಳ್ಳಿಯವನೇ ಆಗಿ ಹೋದ ಮ್ಯಾಥ್ಯೂಸ್ ಎಂಬ ಯುವಕ ಮತ್ತು ರೂಪ ಮತ್ತು ರಾಣಿ ಎಂಬ ಇಬ್ಬರು ಯುವತಿಯರ ನಡುವೆ ಸದ್ದು ಗದ್ದಲವಿಲ್ಲದೇ ಪಲ್ಲವಿಸಿ ಹೇಗೋ ಒಂದು ದಾರಿ ಕಂಡಕೊಂಡು ಬಾಳಿ ಬದುಕಬೇಕಿದ್ದ ಪ್ರಣಯವನ್ನು ತನ್ನ ಯುಕ್ತಿ-ಕುಯುಕ್ತಿಗಳಿಂದ ಮುರಿದು ಮೂರಾಬಟ್ಟೆ ಮಾಡಿ ಆ ಇಬ್ಬರು ಯುವತಿಯರಿಗೆ ಅವರ ಪ್ರೇಮ ದಕ್ಕದಂತೆ ಮಾಡಿ ಕೊನೆಗೆ ಅಜ್ಞಾತನೊಬ್ಬ ಅವನನ್ನು ಸಾಯಿಸಿಬಿಡುತ್ತಾನೆ.

ಕಥಾನಾಯಕಿಯರ ಬದುಕಿನ ಉತ್ತರಾರ್ಧವನ್ನು ಮತ್ತು ಅವರನ್ನು ಗುಟ್ಟಾಗಿ ಆರಾಧಿಸುತ್ತಿದ್ದ, ತನ್ನ ಪ್ರೇಮವನ್ನ ವ್ಯಕ್ತಪಡಿಸಲೂ ಹಿಂಜರಿಯುತ್ತಿದ್ದ ಮ್ಯಾಥ್ಯೂಸ್ ತನ್ನ ಊರಿನಿಂದ ಒಬ್ಬಳನ್ನು ಮದುವೆ ಮಾಡಿಕೊಂಡು ಭಗ್ನಪ್ರೇಮವನ್ನ ಮರೆಯಲು ಯತ್ನಿಸಿದರೆ, ರಾಣಿ ಮತ್ತ ರೂಪ ಯಾರನ್ನೂ ಪ್ರೇಮಿಸದೇ, ಅವರನ್ನು ಪ್ರೇಮಿಸಿದ, ಪ್ರೇಮಿಸಿದ್ದಾನೆಂದುಕೊಂಡ, ಯಾರನ್ನು ಯಾರು ಪ್ರೇಮಿಸಿದ್ದು, ಪ್ರೇಮವನ್ನು ಮನ್ನಿಸದೇ ಹೋದದ್ದು ಎಂಬ ಗೊಂದಲದಲ್ಲೇ ತಮ್ಮ ಬದುಕನ್ನು ಕಂಡುಕೊಳ್ಳುತ್ತಾರೆ. ಇದು ಕಥೆ.

anjikinyaatakayyaಅದರ ಕಥಾ ವಸ್ತು,. ಕಥನ ತಂತ್ರಗಾರಿಕೆ , ನಿರೂಪಣ ಶೈಲಿ ಇತ್ಯಾದಿಗಳನ್ನೆಲ್ಲ ಮಾತನಾಡುತ್ತಲೇ ನಾವು ಮತ್ತೆ ಕಾದಂಬರಿಯ ಪಾತ್ರಗಳ ಕುರಿತು ಹರಟಿದೆವು. ಕಾಮರೂಪಿ ಅವರ ವಿಶಿಷ್ಟ ನಿರೂಪಣಾ ತಂತ್ರದಲ್ಲೇ ಇಡೀ ಕಥೆ ಮುನ್ನಡೆಯುತ್ತದೆ. ನಡುನಡುವೆ ಅವರೂ ಪಾತ್ರದ ನಿಕಟತಮ ವ್ಯಕ್ತಿಯಾಗಿ ಮನುಷ್ಯನ ಗುಣ ದೋಷಗಳ, ಹಂಬಲಗಳ, ದೌರ್ಬಲ್ಯಗಳ ಕುರಿತು ಒದಗಿಸುವ ಮನೋವಿಶ್ಲೇಷಣೆ ಓದುಗರೊಂದಿಗೆ ಮುಖಾಮುಖಿಯಾಗುವ ಕಲೆಗಾರಿಕೆ ಇಡೀ ಕಥಾತಂತ್ರವನ್ನು ಅನನ್ಯವಾಗಿಸುತ್ತದೆ. ಅಪರೂಪದ್ದಾಗಿಸುತ್ತದೆ.

ಅದರಲ್ಲಿ ನಿರೂಪಕನ ಹೆಸರೇನೆಂದು ಗೊತ್ತಾಯಿತಾ ಎಂದು ಕಾಮರೂಪಿ ಕೇಳಿದರು. ಕಥಾನಾಯಕ ರಾಮಕೃಷ್ಣ ಪಾಪ ಸಾಯಬಾರದಿತ್ತೇನೋ ಅಂದೆ. ಇಲ್ಲ ಇಲ್ಲ ಸತ್ತಿದ್ದೇ ಒಳ್ಳೆಯದಾಯ್ತು. ಎಷ್ಟು ಆಟವಾಡಿದ ಹೆಣ್ಣು ಹೃದಯಗಳೊಂದಿಗೆ, ಅದಕ್ಕೆ ಸಾಯಿಸಿದೆ ಎಂದು ನಕ್ಕರು. ಕಿಟಕಿಯೊಳಗೆ ಒಂದು ಕೈ ಸುನುಳಿ ರಾಮಕೃಷ್ಣನ ಕತ್ತು ಹಿಸಿಕಿ ಸಾಯಿಸಿದ ಘಟನೆ ನೆನಪಾಯ್ತು. ಇನ್ನೂ ಏನೇನೋ ಮಾತನಾಡಬೇಕು. ಸಮಗ್ರದ ಒಂದು ಕಾಪಿ ಇದೆ ನಿನಗೆ ಕಳಿಸುತ್ತೇನೆ , ವಿಳಾಸ ಕಳಿಸು ಎಂದು ಈಮೇಲ್ ಅಡ್ರೆಸ್ ಕೊಟ್ಟರು……

ದಿಲ್ಲಿಗೆ ಬನ್ನಿ ಎಂದೆ. ಮನೆ ಗೇಟ್ ವರೆಗೂ ನಡೆಯಲಾಗದು, ಅಲ್ಲೆಲ್ಲಿ ಬರುವೆ ? ಎಂದು ಕ್ಷಣಕಾಲ ಸುಮ್ಮನಾದರು.. ಆಯಿತು ನಾನೇ ಬರ್ತೀನಿ ಸರ್ , ಪುಸ್ತಕ ಓದಿ ಮತ್ತೆ ಮಾತಾಡುವೆ ಎಂದು ಮಾತಿಗೊಂದು ವಿದಾಯ ಹೇಳಿದೆ.. ಇನ್ನು ಸಮಗ್ರವನ್ನು ಕಾಯುವ ಕಾಯಕ….
..ಎಷ್ಟು ದೀರ್ಘ..!!

‍ಲೇಖಕರು admin

March 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭಾ ಬಿ.

    ಕೃತಿಯ ಲೇಖಕರೊಂದಿಗಿನ ಆಪ್ತ ಮಾತುಕತೆ ಸರಸಮಯವೂ, ಆಹ್ಲಾದಕರವುೂಿ ಆಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: