ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲ ಮುಗಿದ ಮೇಲೂ….

ಶ್ರೀದೇವಿ ಕೆರೆಮನೆ

 

ಮುಗಿಯುತ್ತ ಬಂದ ಎಣ್ಣೆಯ ಪಸೆಗೆ
ಪ್ರಜ್ವಲಿಸಿ ಅಟ್ಟಹಾಸಗೈದು ಉರಿದು ಬಿಡುವ ದೀಪವೇ
ನಿನಗದೆಂತಹ ಚೈತನ್ಯ; ಅದೆಲ್ಲಿಯ ಉಮ್ಮೇದಿ?
ಮುಗಿದೇ ಹೋಯಿತು ಜೀವನ
ಎನ್ನುವ ಕಡೇ ಗಳಿಗೆಯಲ್ಲೂ
ಉರಿದುರಿದು ಬೆಳಕ ನೀಡುವ ಜೀವೋನ್ಮಾದಿ

ಸುಟ್ಟಷ್ಟೂ ಬೆಳಕ ನೀಡಿ
ಮತ್ತಿಷ್ಟು ಸುಡಿಸಿಕೊಳ್ಳಲೆತ್ನಿಸುವ
ಉರಿವ ದೀಪವೇ ನಿನ್ನೊಳಗಿನ
ಜೀವ ಚೈತನ್ಯದ ಸೆಲೆಯಾದರೂ ಯಾವುದು
ಬೆಳಕಾಗಬೇಕೆಂಬ ಅದಮ್ಯ ಹಂಬಲವೇ?
ಬೆಳಕು ನೀಡಬೇಕೆಂಬ ತುಡಿತವೇ?
ಬೆರೆಯವರ ಕತ್ತಲು ನೀಗುವ ಸಂತೃಪ್ತಿಯೇ?
ಸಾವಿನ ಕೊನೆಯ ಕ್ಷಣದವರೆಗೂ
ಬದುಕೆಂಬ ಬದುಕ ಸವಿದು
ಆಸ್ವಾದಿಸಲೇ ಬೇಕೆಂಬ ಮಹದಾಸೆಯೇ?

ಎಣ್ಣೆ ತಳಬತ್ತಿ ಒಣಗಿ ಕರಕಲಾದರೂ
ಬತ್ತಿಯಲ್ಲಿರುವ ಚೈತನ್ಯವನ್ನಾದರೂ ಹೀರಿ
ಮತ್ತಿಷ್ಟು ಬೆಳಕ ಸುರಿವ ದೀಪವೇ
ನಿನ್ನ ಜೊತೆ ನಾನಿದ್ದೇನೆ
ಸೋರಿಹೋಗುತ್ತಿರುವ ಜೀವ ಸೆಲೆಯನ್ನೆಲ್ಲ ಒಗ್ಗೂಡಿಸಿ
ಪ್ರೀತಿಯ ಧಾರೆಯಾಗುತ್ತಿದ್ದೇನೆ
ಎಣ್ಣೆ ಮುಗಿದು ಬೆಳಕು ಆರಿದ ಮೇಲೂ
ಇಲ್ಲೊಂದು ದೀಪವಿತ್ತು ಎಂಬ
ಕುರುಹನ್ನಾದರೂ ಉಳಿಸಿ ಹೋಗುವಂತೆ
ನನ್ನ ಅಸ್ತಿತ್ವದ ಚಿಕ್ಕ ಹೆಜ್ಜೆಗುರುತನ್ನಾದರೂ
ಮೂಡಿಸಿ ಆರಿ ಹೋಗಲು ಕಾದಿದ್ದೇನೆ

ಒಂದಿಷ್ಟು ಚೈತನ್ಯ ಕೊಡು
ಕೊನೆಗಳಿಗೆಯಲ್ಲೂ ನಿನ್ನಂತೆ ಬೆಳಕ ನೀಡಲು
ಎಲ್ಲ ಮುಗಿದ ನಂತರವೂ
ಬದುಕುವ ಹುಮ್ಮಸ್ಸು ಮೂಡಲು
ಇನ್ನೊಂದು ಬತ್ತಿಗೆ ಬೆಳಕ ಹೊತ್ತಿಸಲು…

 

‍ಲೇಖಕರು admin

24 June, 2017

9 Comments

  1. Anonymous

    ತುಂಬಾ ಚೆನ್ನಾಗಿದೆ. ನಿಮ್ಮ ಆಲೋಚನೆ ಮತ್ತು ಬಾವನೆಗಳು
    ಇನ್ನು ಚೆನ್ನಾಗಿ ವೃದ್ಲಿಸಲಿ.

    • Anonymous

      Super mam

  2. ಬಿದಲೋಟಿ ರಂಗನಾಥ್

    ಕವಿತೆ ಚನ್ನಾಗಿದೆ

  3. Anonymous

    ಒಳ್ಳೆಯ ಕವಿತೆ ಶ್ರೀದೇವಿ..

  4. ಶಾಂತಿ ಕೆ ಅಪ್ಪಣ್ಣ

    ಚೆಂದ ಕವಿತೆ

  5. Dr.Praksh Khade

    “ಇನ್ನೊಂದು ಬತ್ತಿಗೆ ಬೆಳಕ ಹೊತ್ತಿಸಲು’ಕವಿತೆ ಚೆನ್ನಾಗಿದೆ.

  6. BHUVANESHVARI

    ದೇದೀಪ್ಯಮಾನವಾಗಿ ಉರಿದಿದೆ

  7. ramanand Nayak

    So good

  8. Anonymous

    Superb madam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading