ಕ್ವಾರಲ್ಲೂ, ಕ್ವಾರಂಟೈನೂ ಮತ್ತು ಹಕ್ಕಿಗಳು
ವಿದ್ಯಾ ಭರತನಹಳ್ಳಿ
ಹೆಂಡತಿ ಪಾತ್ರೆ ತೊಳೆಯುತ್ತಾ ,ಅಡಿಗೆ ಮಾಡುತ್ತಾ ತಕ ತಕ ಬೇಯುತ್ತಿರುತ್ತಾಳೆ. ಬಾಲ್ ಆಡುತ್ತಾ ಅಡಿಗೆ ಮನೆಗೆ ಬಂದ ಗಂಡ ಗೋಡೆಗೆ ಬಾಲ್ ಒಗೆಯುತ್ತಿರುತ್ತಾನೆ. ಅದು ಪುಟಿದು ಇನ್ನೊಮ್ಮೆ ಒದೆಯಬೇಕೆನ್ನುವಷ್ಟರಲ್ಲಿ ಮೊದಲೇ ಜಾಸ್ತಿ ಕೆಲಸ ಮಾಡಿ ಸಹಾಯ ಮಾಡದ ಗಂಡನ ವಿರುದ್ಧ ರೋಸಿದ್ದ ಹೆಂಡತಿ ಸಿಟ್ಟಲ್ಲಿ ಬಂದು ಗಂಡನಿಗೇ ಒದೆಯುತ್ತಾಳೆ. ಇದೊಂದು ವಿಡಿಯೋ ಹರಿದಾಡುತ್ತಿದೆ. ಪಾಪ ಅಂತಾಪರಿ ಸಿಟ್ಟು ಗಂಡನ ಮೇಲೆ ಅದೇನಿತ್ತೊ !? ಚೆನ್ನಾಗಿಯೇ ಬಾರಿಸಿದಳು. ಮುಂದೆ ಅವನು ಅವಳ ಕೂದಲು ಹಿಡಿದೆಳೆದನೊ, ಅಥವಾ ಕಾಲ ಉರಿ ತಡೆಯಲಾರದೆ ಹೊರಗೆ ಹೋದನೋ ಗೊತ್ತಿಲ್ಲ. ಇದೀಗ ಭಾರತದಲ್ಲೂ ಬಹುತೇಕ ಮನೆಯ ದೃಶ್ಯವಾಗಿರಬಹುದೆಂದು ಯೋಚಿಸುತ್ತಾ ನಗು ಬಂತು.
ವಾರಕ್ಕೆ ಮೂರುದಿನ ಹೊಟೇಲಲ್ಲಿ ಉಣ್ಣುತ್ತಾ ಎಂಜಾಯ್ ಮಾಡ್ತಿದ್ದ ಹತ್ತಿರದ ಗೆಳತಿಯಿಂದ ಫೋನ್ ಬಂತು. ಅವಳು ಕೂಡ ಸಿಟ್ಟಲ್ಲಿದ್ದಳು. ‘ಮನೆಯಲ್ಲಿ ಕಟ್ಟಿ ಹಾಕ್ದಾಂಗಾಗಿದೆ ಕಣೆ. ಅವನು ಏನೂ ಸಹಾಯ ಮಾಡಲ್ಲ, ಊಟ ತಿಂಡಿಯೊಂದು ಸರಿಯಾಗಿ ಆಗಿ ಬಿಡಬೇಕು. ಒಂದು ಕಡ್ಡಿ ಆಚೆ ಈಚೆ ಹಂದಿಸಲ್ಲ. ಕುಡಿಯಲು ನೀರು ಬೇಕಾದರೂ ನಾನೇ ಕೊಡ್ಬೇಕು. ಮಾಡಿದ್ದೊಂದೂ ಸರಿ ಆಗಲ್ಲ. ಕಾಫಿ ಮಾಡದು, ಪಾತ್ರೆ ತೊಳಿಯೋದು, ನೆಲ ಒರೆಸೋದು, ಬಟ್ಟೆ ವಾಶಿಂಗ್ ಮಶಿನ್ಗೆ ಹಾಕೋದು ಇದೇ ಆಗಿದೆ ಅಂದಳು.
‘ಅವೆಲ್ಲ ಇರಲಿ ಬಿಡು’ ಇಡೀ ಜಗತ್ತು ಭಯಾನಕ ಸಂಕಷ್ಟದಲ್ಲಿದೆ. ಅದರಿಂದ ಪಾರಾಗೋದು ಹೇಗೆ? ನಮ್ಮ ಇಮ್ಯುನಿಟಿ ಹೆಚ್ಚು ಮಾಡ್ಕೊಳ್ಳದು ಹೇಗೆ? ಅಂತ ಯೋಚಿಸಿ ಅಡಿಗೆ ಮಾಡೋದು ಮುಖ್ಯ. ಹಾಗೆ ಮಾಡು ಅಂದೆ.

ಅವಳು ಅದನ್ನೆಲ್ಲ ಕೇಳಲು ರೆಡಿ ಇರಲಿಲ್ಲ. ‘ಹೆಂಗಸರು ಕೆಲಸ ಮಾಡೋದಕ್ಕೇ ಇದ್ದಾರೆ ಅಂತ ಭಾವಿಸಿಕೊಳ್ಳೊ ಗಂಡಸರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ನಮ್ಮನೆಯಲ್ಲಿ ದಿನಾ ಜಗಳ. ಈ ಕೊರೋನಾ ಎಲ್ಲಿಂದ ಬಂತೊ ಮಹಾಮಾರಿ. ನಮ್ಮ ಪ್ರಾಣ ತಿನ್ನಕ್ಕೆ. ಕೆಲಸದವಳಿದ್ದಾಗ ಹೇಗೋ ಮ್ಯಾನೇಜ್ ಮಾಡ್ತಿದ್ದೆ. ಈ ಗಂಡಸರು ಹೊರಗೆ ದುಡಿದು ಸ್ವಲ್ಪ ಹೊತ್ತು ಮನೇಲಿದ್ರೇ ಒಳ್ಳೇದು ನೋಡು ‘ ಅಂದಳು. ಹಾಗೆಲ್ಲ ಭಾವಿಸಬೇಡ. ಅಪರೂಪಕ್ಕೆ ಗಂಡ ಮನೆಲಿದಾನೆ. ಒಟ್ಟಾಗಿ ಕಳೆಯುವುದಕ್ಕೆ ಸಿಕ್ಕ ಅದೃಷ್ಟ ಅಂದ್ಕೊಂಡು ಶಾಂತವಾಗಿರು ಅಂದೆ. “ನಿನಗೇನು? ನಿನ್ನ ಗಂಡ, ಮಗಳು ಎಲ್ಲ ಸಹಾಯ ಮಾಡ್ತಾರೆ. ನಿನಗೆ ಈ ಕಷ್ಟ ಅರ್ಥ ಆಗಲ್ಲ.” ಅಂದಳು. ಅದೂ ಸತ್ಯವೇ. ಹೇಳಿದಷ್ಟು ಸುಲಭ ಮಾಡುವುದಲ್ಲ ಅನಿಸಿತು.
ಈ ಲಾಕ್ಡೌನ್ ಒಬ್ಬೊಬ್ಬರಿಗೆ ಬಂಧನವಾಗಿಯೂ, ಒಬ್ಬೊಬ್ಬರಿಗೆ ಬಂಧವಾಗಿಯೂ ಕಾಣುತ್ತಿದೆ. ಜಗತ್ತು ಎದುರಿಸುತ್ತಿರುವ ಈ ಕಷ್ಟ ಕಾಲದಲ್ಲಿ ಸೆಲ್ಫ್ ಕ್ವಾರಂಟೈನ್ ಹಾಕಿಕೊಳ್ಳುವಷ್ಟೇ ಮುಖ್ಯ ಮನಸ್ಸು ಕೆಡದಂತೆ ನೋಡಿಕೊಳ್ಳುವುದೂ ಆಗಿದೆ. ಕೊರೊನಾ ಒಂದು ಅತಿಥಿಯಾಗಿ ನಮ್ಮನೆಗೆ ಬರದಿದ್ದರೆ ಸಾಕು, ಅದಕ್ಕೆ ನಾವೇನು ಮಾಡಬೇಕು ಅಂತ ಯೋಚಿಸುವುದು ಬಿಟ್ಟು ಗಂಡ ಹೆಂಡತಿ ಜಗಳ ಮಾಡಿಕೊಳ್ಳುವ ಸಮಯವೇ ಇದು?
ಒಮ್ಮೆ ಕೊರೊನ ವೈರಸ್ ಮನೆಯೊಳಗೆ ಬಂದರೆ ಜಗಳವೂ ಇಲ್ಲ, ಪ್ರೀತಿಯೂ ಇಲ್ಲ.
‘ಜವರಾಯ ಬಂದಾನ, ಬಾಗಿಲೊಳು ನಿಂದಾನ’ ಅಂತ ಮಾಧ್ಯಮಗಳು ಹೆದರಿಸುತ್ತಿವೆ. “ನಾನು ಹೇಳ್ತೀನಿ ಕೇಳ್ರಿ , ಬರ್ದಿಟ್ಕೊಳ್ರಿ, ಹೆಣಗಳನ್ನೆಲ್ಲ ಜೆಸಿಬಿ ಹಾಕಿ ಹೂಳಬೇಕು. ಹಾಗಾಗತ್ತೆ” ಅಂತ ಜ್ಯೋತಿಷಿಯೊಬ್ಬ ಬಾಯಿ ಬಡಿದುಕೊಳ್ಳುತ್ತಾನೆ. ಕೇಳುವವರಿಗೆ ಅಯ್ಯೋ ಆ ಹೊಂಡದಲ್ಲಿ ನಾವೂ ಇರ್ತೀವಾ? ನಮ್ಮ ಅಂತಿಮ ದಿನಗಳು ನಮಗಾಗಿ ಕಾಯ್ತಿವೆಯೆ? ಈ ಆಸ್ತಿ, ಬಂಗಾರ, ಹೆಸರು, ಕೀರ್ತಿ ಎಲ್ಲ ಎಲ್ಲ ಏನಾಗಿ ಹೋಗುತ್ತವೆ? ಅನ್ನಿಸಬೇಕು ಹಾಗೆ ಹೆದರಿಸುತ್ತಾರೆ.
ಏನು ಆಗಲ್ಲ ಕಣ್ರಿ. ಮುಂದೆ ಒಳ್ಳೆಯ ದಿನ ಬರತ್ತೆ ಮನೆಯಿಂದ ಆಚೆ ಬರಬೇಡಿ ಅಷ್ಟೆ ಅಂತ ಧೈರ್ಯ ತುಂಬುವವರು ನಮಗೀಗ ಬೇಕು. ಇನ್ನು ಈ ಟಿ.ವಿ ಹಚ್ಲೇಬಾರದು ಅಂತ ತೀರ್ಮಾನಿಸಿ
‘ಆನಂದ ಮಯ ಈ ಜಗಹೃದಯ
ಏತಕೆ ಭಯಮಾಣೊ
ಸೂರ್ಯೋದಯ, ಚಂದ್ರೋದಯ
ದೇವರ ದಯ ಕಾಣೋ’…
ಶಿವಮೊಗ್ಗ ಸುಬ್ಬಣ್ಣರು ಹಾಡಿದ ಕುವೆಂಪು ಹಾಡನ್ನು ಗುನುಗುತ್ತ ಬಾಲ್ಕನಿಗೆ ಬಂದೆ.
ಇಡೀ ರಸ್ತೆಯಲ್ಲಿ ನರಪಿಳ್ಳೆಗಳೂ ಇರಲಿಲ್ಲ. ಸ್ವಚ್ಛ ಸ್ವಚ್ಛ ರಸ್ತೆ. ಮನೆ ಎದುರು ಕಸ ಹಾಕುವವರನ್ನು ಇವತ್ತು ಕಂಡು ಹಿಡಿದೇ ಬಿಡುತ್ತೇನೆ ಅಂತ ಹೊರಡುವ ನನಗೀಗ ಆ ಕೆಲಸ ಇಲ್ಲ. ವಾಹನಗಳ ಓಡಾಟ, ಮಕ್ಕಳ ಆಟ ಏನೂ ಇರಲಿಲ್ಲ. ಸಾಲು ಸಂಪಿಗೆ ಮರಗಳು ನಿಚ್ಚಳವಾಗಿ ಕಾಣಿಸುತ್ತಿತ್ತು. ಈಗ ಗೆಳತಿಯರ್ಯಾರಾದರೂ ಬಂದಿದ್ದರೆ ಕಂಬ ಕಂಬ ಆಟವಾಡಬಹುದಿತ್ತು. ಅಥವಾ ಈ ತುದಿಯಿಂದ ಆ ತುದಿವರೆಗೆ ಓಡು ಮುಟ್ಟಾಟವಾಡಬಹುದಿತ್ತು. ಪೊಲೀಸರು ಈ ಕಾಲನಿಯಲ್ಲಿರುವವರೆಲ್ಲ ಖಂಡಿತ ತಮ್ಮ ಮನೆ ಬಿಟ್ಟು ಆಚೆ ಬರುವುದಿಲ್ಲ ಎಂದು ಇತ್ತ ಕಡೆ ಸುಳಿಯುವುದಿಲ್ಲ.!

ಥೇಟ್ ಊರಲ್ಲಿರುವ ಶಾಂತ ವಾತಾವರಣವನ್ನು ಅನುಭವಿಸುತ್ತಾ ಕುಳಿತಾಗ ಹಕ್ಕಿಗಳ ಕಲರವ ಶುರುವಾಯಿತು. ಒಂದೊಂದೇ ಸ್ವರ ಹಿಡಿದು ಶುರುವಾದ ವಿಲಂಬಿತ ಆಲಾಪ ಮಧ್ಯಲಯಕ್ಕೇರಿತು. ಹಾಗೆ ಹಾಗೇ
ಹಕ್ಕಿಗಳ ಧ್ವನಿ ತಾರಕಕ್ಕೇರಿದ್ದು ಲಕ್ಷ್ಯಕ್ಕೆ ಬಂತು. ಇದು ನನ್ನ ಕಲ್ಪನೆಯಲ್ಲ ಅಂತ ಅರಿವಾದಾಗ ತಕ್ಷಣ ವಿಡಿಯೋ ಮಾಡಿದೆ. ನಿಜಕ್ಕೂ ಗಾಬರಿಯಾಯ್ತು. ಎರಡು ಹಕ್ಕಿಗಳು ಜಗಳವಾಡುತ್ತಿದ್ದವು. ಕೊಕ್ಕನ್ನು ಮೇಲೆ ಮಾಡಿ ನಾ ಹೇಳಿದ್ದ ಕೇಳು ಸುಮ್ನೆ ಈ ಮರ ಬಿಟ್ಟು ಹೋಗೋದು ಬೇಡ ಅನ್ನುತ್ತಿರಬಹುದೇ!?
ಗಂಡು ಹೆಣ್ಣನ್ನು ಓಡಿಸಿತೊ, ಹೆಣ್ಣು ಗಂಡನ್ನು ಓಡಿಸಿತೋ ಗೊತ್ತಾಗಲಿಲ್ಲ. ಅವುಗಳು ಕೂಡ ಕಚ್ಚಾಡುತ್ತಿವೆ. ಮನುಷ್ಯರೊಂದೇ ಅಲ್ಲ ಹಕ್ಕಿಗಳೂ ಸಹ ಅಶಾಂತಿಯ ಮನ:ಸ್ಥಿತಿಯಲ್ಲಿವೆ. ನೋಡಿ ಬೇಸರವಾಯಿತು.
ಒಂದು, ಹಣ್ಣು ಕುಕ್ಕಿ ಹೆಕ್ಕಿ
ತಿನ್ನುತ್ತಿದೆ.ಹಸಿವು, ದಾಹ
ಮತ್ತೊಂದು ಸುಮ್ಮನೆ ಕೂತು
ನೋಡುತ್ತಿದೆ ಮೈಯೆಲ್ಲ ಕಣ್ಣು’
-ಎ.ಕೆ. ರಾಮಾನುಜನ್
ಇದು ಗೆಳತಿಯ ಸಂಸಾರದ ಕತೆಯಂತನಿಸಿದರೆ,
ನಮ್ಮ ಈ ದೊಡ್ಡ ಮರದಲ್ಲಿ
ಎರಡು ಹಕ್ಕಿಗಳು.
ಒಂದು :
ತಿನ್ನುತ್ತಿದೆ ಹಣ್ಣನ್ನು
ಇನ್ನೊಂದು:
ನೋಡುತ್ತಿದೆ ಹಣ್ಣನ್ನು
ತಿನ್ನುವ ಹಕ್ಕಿಯು ಸುತ್ತಲು
ಎಲ್ಲೂ ನೋಡುವುದೇ ಇಲ್ಲ
ನೋಡುವ ಹಕ್ಕಿಗೆ ತಿನ್ನಲು
ಏನೂ ಸಿಕ್ಕುವುದೇ ಇಲ್ಲ
-ಸುಬ್ರಾಯ ಚೊಕ್ಕಾಡಿ
ಇದು ಜಗದ ಕತೆ. ಅನಿಸಿತು

“ಮರದ ತುದಿ ಮೇಲೆರಡು
ಮೆರೆಯುತಿವೆ ಎಳೆವಕ್ಕಿ
ಒಂದು ಫಲ ತಿನ್ನುತಿದೆ
ಒಂದು ನಗೆ ಬೀರುತಿದೆ.
ಹಸಿದರುಣ್ಣುವ ಆಸೆ
ಹಸಿಯದಿರೆ ಎಲ್ಲಿಯಾಸೆ
ಜೀವಕಿದೆ ಭವದಾಸೆ
ದೇವಗೆಲ್ಲಿದೆ ಆಸೆ….. ( ಬರೆದಿದ್ದು ಯಾರೆಂದು ನೆನಪಿಲ್ಲ)
ಭವದಾಸೆ ಮುಗಿಯದಂತೆ ಈ ಜೀವಗಳ ಕಾಪಾಡಲಿ. ಬೀದಿಯಲ್ಲಿ ಜನರೆಲ್ಲ ಓಡಾಡಲಿ
ನಮ್ಮ ತಾರಸಿಯ ತೋಟದಲ್ಲಿ ಕೊರೊನಾ ವೈರಸ್ಸಿನ ಭಯವಿಲ್ಲದೆ ಅರಳುತ್ತಿರುವ ಹೂಗಳು ಹಾರಿ ಇಲ್ಲಿ ನಡೆಯುವವರ ತಲೆಯ ಮೇಲೆ ಬೀಳಲಿ. ಮಕ್ಕಳು ಹಗಲು ರಾತ್ರಿಯೆನ್ನದೆ ಕೇಕೆ ಹಾಕುತ್ತಾ ಆಡಲಿ. ಎಲ್ಲ ಎಲ್ಲ ಮೊದಲಿನಂತಾಗಲಿ.






ಗಂಡ ಹೆಂಡತಿ ನಾಣ್ಯದ 2 ಮುಖ ಅನ್ನೋದನ್ನೇ ಮರೆತುಬಿಟ್ಟಿದೀವ, ಹೆಂಡತಿ ಗಂಡನ್ನ ಭಾರ, ತಲೆನೋವು, ಅನ್ನೋದು ಶುರುವಾದ್ರೆ ಅದು henabhara, ತಲೆಶೂಲೆ, ಪರಕೀಯ ಅನ್ನೋ ಹಾಗೇ ಆಗ್ಬಿಡತ್ತೆ. ಅದರ ಬದಲು ಒಟ್ಟಿಗೆ ಇರೋದಕ್ಕೆ ಒಂದು ಅನುಕೂಲ ಸನ್ನಿವೇಶ ಅಂತ ಅಂದ್ಕೊಂಡ್ರೆ ಬದುಕು, ಮನೆ ಎಲ್ಲಾ ಸಹನೀಯವಾಗತ್ತೆ.
ಕುವೆಂಪು ಅವರ ನಮ್ಮ ಮನೆ ಕವನ ಓದಿದ್ರೆ ಒಂದು ಮನೆಯಲ್ಲಿ ಎಷ್ಟೆಲ್ಲ ಆಟವಾಡಿ, ಜಗಳವಾಡಿ, ಬಿದ್ದು ಎದ್ದು ಕಳೆದಿರ್ತೀವಿ, ಈಗ ನಾವು ಈ ಸನ್ನಿವೇಶದಲ್ಲಿ ಖುಷಿಯಾಗಿ ಕಳೆದಿದ್ದು ಮುಂದೆ ಸಂತೋಷದ ಚಿಲುಮೆಯಾಗಿ ಹರಿಯುತ್ತೆ.
ಸಮರಸವೇ ಜೀವನ….
ಲೇಖನ ಚೆನ್ನಾಗಿದೆ ವಿದ್ಯಾ,ಖುಶಿಯಾಯಿತು
Thank you Sir. ನೀವು ಓದಿದಿರಿ ಅನ್ನೋದು ನನ್ನ ಸೌಭಾಗ್ಯ.