’ಎಲ್ಲೋ ಇದ್ದೀಯಾ ನೀನು’ ಎಂಬ ಪ್ರೀತಿಯ ಹುಡುಕಾಟದಲ್ಲಿ…

ಸಿದ್ಧರಾಮ ಕೂಡ್ಲಿಗಿ

ಮನಸು ತುಂಬಾ ಸೂಕ್ಷ್ಮ. ಮನಸಿನ ಮನಸನ್ನು ಅರಿಯುವುದು ತುಂಬಾ ಕಷ್ಟವೂ ಹೌದು. ಹೊರಗಿನ ಪ್ರಪಂಚಕ್ಕೆ ತೋರುವ ಮನಸೇ ಬೇರೆ, ತೋರಲಾಗದ ಹಾಗೆ ಇರುವ ಒಳಮನಸೇ ಬೇರೆ. ಎರಡೂ ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುತ್ತವೆ, ಅದು ಸಹಜವೂ ಕೂಡ.

ಸದಾ ನಾವು ನಮ್ಮ ಮನಸಿಗೆ ಸಂತೋಷವನ್ನು ಕೊಡುವುದರ ಹುಡುಕಾಟದಲ್ಲೇ ಇರುತ್ತೇವೆ. ಅದು ವಸ್ತು ಇರಬಹುದು, ವ್ಯಕ್ತಿ ಇರಬಹುದು, ಪ್ರಕೃತಿ ಇರಬಹುದು ಏನೇ ಇದ್ದರೂ ಅದು ನಮ್ಮ ಮನಸಿಗೆ ಸಂತೋಷವನ್ನು ಕೊಡಬೇಕು. ಯಾಕೆಂದರೆ ಇದೆಲ್ಲದರ ಹಿಂದೆ ಇರುವ ತುಡಿತವೇ ಪ್ರೀತಿ. ಪ್ರೀತಿಯ ಹುಡುಕಾಟದಲ್ಲೇ ಬಹುಶ: ಕೆಲವೊಮ್ಮೆ ಇಡೀ ಬದುಕೇ ಕಳೆದುಹೋಗುತ್ತದೇನೋ ಎಂಬಷ್ಟು ಆಳವಾದದ್ದು ಈ ಪ್ರೀತಿ. ಪ್ರೀತಿ ಬದುಕಿನಲ್ಲಿ ಕಾಡಿದಷ್ಟು ಯಾವ ಭಾವವೂ ಕಾಡಲಾರದೇನೋ. ಆ ಪ್ರೀತಿಯ ಹುಡುಕಾಟ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದು ಗಂಡೇ ಇರಬಹುದು ಹೆಣ್ಣೇ ಇರಬಹುದು. ಕೆಲವರು ಮುಕ್ತವಾಗಿ ಹೇಳುತ್ತಾರೆ ಕೆಲವರು ಹೇಳುವುದಿಲ್ಲ, ಕೆಲವರು ಹೇಳದೇ ಒದ್ದಾಡುತ್ತಾರೆ, ಕೆಲವರು ಹೇಳಿದರೆ ಹೇಗೋ ಏನೋ ಎಂಬ ತೂಗುಯ್ಯಾಲಯಲ್ಲಿರುತ್ತಾರೆ, ಇನ್ನು ಕೆಲವರಂತೂ ನಾವು ಇಂಥದರಿಂದ ’ಮುಕ್ತ’ ಎಂದು ಹೇಳಿಕೊಳ್ಳುತ್ತಲೇ ತಮ್ಮ ಮನಸಿಗೆ ತಾವೇ ಮೋಸ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಒಂದಂತೂ ನಿಜ ಎಲ್ಲರೂ ತಮ್ಮ ಮನಸನ್ನು ಪ್ರೀತಿಯ ಹುಡುಕಾಟದಲ್ಲೇ ತೊಡಗಿಸಿಕೊಂಡಿರುತ್ತಾರೆ.

ಈ ಹಿನ್ನೆಲೆಯಲ್ಲಿ ಕವಿ ತೇರಳಿ ಎನ್ ಶೇಖರ್ ಅವರ ’ಎಲ್ಲೋ ಇದ್ದೀಯಾ ನೀನು’ ಕವಿತೆಯನ್ನು ಅವಲೋಕಿಸಬಹುದು. ತಲೆಬರಹವೇ ಸೂಚಿಸುತ್ತದೆ ಪ್ರೀತಿಯನ್ನು ಹುಡುಕುವ ಅರ್ಥವನ್ನೇ ಧ್ವನಿಸುವಂಥಹ ಸಾಲಿದು.

ತುಂಬಾ ಸುದೀರ್ಘವಾದ ಕವಿತೆಯಿದು. ಈ ಸುದೀರ್ಘತೆ ಹುಡುಕಾಟಕ್ಕೆ ಪೂರಕವಾಗಿಯೂ ಇದೆ ಎಂಬುದೂ ಸಹ ಇಲ್ಲಿ ವಿಶೇಷ. ಕವಿಯ ಜೊತೆ ಜೊತೆಗೇ ನಾವೂ ಸಹ ಹುಡುಕಾಟದಲ್ಲಿಯೇ ತೊಡಗಿಸಿಕೊಂಡುಬಿಡುತ್ತೇವೆಂಬುದು ಇಲ್ಲಿನ ವಿಶೇಷತೆ. ಕವಿತೆಯ ಎಲ್ಲ ಮಗ್ಗುಲುಗಳು, ತಿರುವುಗಳು, ಜಾಡುಗಳಲ್ಲಿ ನಾವೂ ಹೆಜ್ಜೆ ಹಾಕುತ್ತ ಹೋಗುತ್ತೇವೆ. ಪ್ರೀತಿ ಸಿಕ್ಕಿತಾ ? ಎಂಬ ನಿರೀಕ್ಷೆಯಲ್ಲೇ ಕವಿತೆಯನ್ನು ಓದುತ್ತಾ ಹೋಗುತ್ತೇವೆ.

ಕವಿತೆಯ ಮೊದಲ ಸಾಲುಗಳಲ್ಲಿಯೇ ರಮ್ಯ ಕಥಾ ಲೋಕದಲ್ಲಿ ವಿಹರಿಸುವ, ಪ್ರೀತಿಯನ್ನೇ ಕೊಡುವ ಪ್ರಿಯತಮೆ ಇರುವಳೇ ಎಂಬಲ್ಲಿಂದ ಕವಿತೆ ಆರಂಭವಾಗುತ್ತದೆ. ಮೊದಲ ಕೆಲವು ಸಾಲುಗಳಲ್ಲಿ ಕವಿ ತಮ್ಮ ಮನೋವೇದನೆ ಹಾಗೂ ಪ್ರೇಮದ ನಿವೇದನೆಯನ್ನು ಬಿತ್ತರಿಸುತ್ತಾ ಹೋಗುತ್ತಾರೆ.

ತೇರಳಿ ಎನ್ ಶೇಖರ್ ಅವರ ಹಲವಾರು ಕವಿತೆಗಳಲ್ಲಿ ಕಂಡಂತೆ ಅವರು ಥಟ್ಟನೆ ನದಿ ತನ್ನ ಪಾತ್ರ ಬದಲಿಸಿದಂತೆ ಕವಿತೆಯ ಮಗ್ಗುಲನ್ನು ಬದಲಿಸಿಬಿಡುತ್ತಾರೆ. ಇದೇ ಕವಿತೆಯ ಸೊಗಸು. ಅದುವರೆಗೂ ರಮ್ಯ ಕಥಾ ಲೋಕದಲ್ಲಿ ವಿಹರಿಸಿ, ತಮ್ಮ ಪ್ರೇಮದ ನಿವೇದನೆಯನ್ನು ಹೇಳುತ್ತಾ, ಮುಂದೆ ನಮ್ಮನ್ನು ವಾಸ್ತವ ಪ್ರಪಂಚಕ್ಕೆ ತಂದಿಳಿಸಿಬಿಡುತ್ತಾರೆ. ಇಲ್ಲಿ ದಿನನಿತ್ಯದ ಬದುಕಿನ ಚಿತ್ರಗಳನ್ನು ಕಟ್ಟಿಕೊಡುತ್ತಲೇ ಅಲ್ಲಿ ಪ್ರೀತಿಯನ್ನು ಹುಡುಕುತ್ತಾ ಹೋಗುತ್ತಾರೆ. ಅಲ್ಲೆಲ್ಲಾದರೂ ಇರಬಹುದೇ ಎಂದು ನಮ್ಮನ್ನು ಕೈಹಿಡಿದು ಅಲ್ಲೆಲ್ಲಾ ಸುತ್ತಿಸಿಬಿಡುತ್ತಾರೆ. ಮತ್ತೆ ಎಲ್ಲೋ ಇದ್ದೀಯಾ ನೀನು…………. ಎಂದು ನಮ್ಮ ಕುತೂಹಲ ಮುಕ್ಕಾಗದಂತೆ, ಕವಿತೆಯಲ್ಲಿ ಆಸಕ್ತಿ ಕುಂದದಂತೆ ಮಾಡಿಬಿಡುತ್ತಾರೆ.

ಮುಂದೆ ಕವಿ ಯಾವ ಬಗೆಯ ಪರಿಪೂರ್ಣ ಪ್ರೀತಿಯ ಹೃದಯ ಬೇಕು ಎಂಬುದನ್ನು ಪ್ರಸ್ತುತಪಡಿಸುತ್ತಾ ಹೋಗುತ್ತಾರೆ. ಆ ಹುಡುಕಾಟ ನಿರಂತರವಾಗಿರುತ್ತದೆ ಎಂಬುದನ್ನು ಮುಂದಿನ ಸಾಲುಗಳು ಕವಿತೆಯನ್ನು ಬೆಳೆಸುತ್ತಾ ಹೋಗುತ್ತವೆ. ಕವಿ ಹುಡುಕಾಟದ ಬಗೆಯನ್ನು ಹೇಳುತ್ತಾ ಕವಿತೆಯ ಕೊನೆಯ ಘಟ್ಟಕ್ಕೆ ಬರುತ್ತಾರೆ. ಇಲ್ಲಿ ಕವಿಯಲ್ಲಿ ಒಂದು ನಿರೀಕ್ಷೆ ಇದೆ. ಕವಿಯ ಹುಡುಕಾಟ ಕವಿತೆಯ ಹಿಂದಿನ ಹಂತಗಳಲ್ಲಿ ಮುಗಿದು, ಈಗ ಕವಿಯ ಇಷ್ಟೆಲ್ಲ ಮನಸಿನ ಒಳತೋಟಿಯನ್ನು ನಿರೀಕ್ಷಿಸುವ, ಮಿಡಿಯುವ ಒಂದು ಹೃದಯ ಎಲ್ಲೋ ಒಂದು ಕಡೆ ಇರಬಹುದು ಎಂಬ ’ಭರವಸೆ’ ಕವಿತೆಯ ಕೊನೆಯ ಸಾಲುಗಳಲ್ಲಿ ಮೂಡಿಬಂದಿದೆ. ನಿರೀಕ್ಷೆ ಇಲ್ಲಿ ಭರವಸೆ ಆಗಿದೆ. ’ಅಲ್ಲೆಲ್ಲೋ ಇರಬಹುದು’ ಎಂಬ ಭರವಸೆಯೇ ಕವಿಗೂ ಒಂದು ಭರವಸೆಯನ್ನು ನೀಡುತ್ತದೆ.

ಆ ಎಲ್ಲೋ ಇರುವವಳು ಇಂಥಲ್ಲೂ ಇರಬಹುದು ಎನ್ನುವುದನ್ನು ಹೇಳುತ್ತಾ ಕವಿ ಹೆಣ್ಣಿನ ವಿವಿಧ ನೋವು, ಕಾರ್ಪಣ್ಯಗಳನ್ನು ಸಹ ನಮ್ಮ ಮುಂದೆ ಬಿಚ್ಚಿಡುತ್ತ ಹೋಗುತ್ತಾರೆ. ನಿತ್ಯ ಸುಮಂಗಲೆ, ವಿಧವೆ, ಗೃಹಿಣಿ ಇವರೆಲ್ಲರಲ್ಲೂ ಇರುವ ನೋವಿಗೆ ಒಂದು ಸಾಂತ್ವನ ಬೇಕಿರುತ್ತದೆ. ಅಂತಹ ಹೃದಯ ಪ್ರೀತಿಯ, ಪ್ರೀತಿಸುವ ಹೃದಯವನ್ನೇ ಬಯಸುತ್ತಿರುತ್ತದೆ…… ಎಲ್ಲೋ ಇದ್ದೀಯಾ ನೀನು ಎಂಬ ಕವಿಯ ಆಶಯದಂತೆಯೇ, ಈ ಹೆಣ್ಣುಗಳ ಹೃದಯದಲ್ಲೂ ’ಎಲ್ಲೋ ಇದ್ದೀಯಾ ನೀನು’ ಎಂಬುದೇ ಮಿಡಿಯುತ್ತಿರುತ್ತದೆ. ಅದೇ ಕವಿಯ ನಿರೀಕ್ಷೆ ಹಾಗೂ ಭರವಸೆ. ಪ್ರೀತಿಯನ್ನು ಹಂಚಿಕೊಳ್ಳುವ ಅಂಥ ಒಂದು ಮನಸು ತನಗಾಗಿ ಎಲ್ಲೋ ಇದೆ ಎಂಬುದೇ ಕವಿಗೆ ಒಂದು ನಂಬಿಕೆ.

ಕವಿತೆಯ ಉತ್ತರಾರ್ಧ ಪ್ರೀತಿಯ ಹುಡುಕಾಟದಲ್ಲಿದ್ದರೆ, ಕವಿತೆಯ ಕೊನೆಯ ಭಾಗ ಭರವಸೆಯಲ್ಲಿ ಅಂತ್ಯಗೊಳ್ಳುತ್ತದೆ. ಕವಿತೆ ಯಶಸ್ವಿಯಾಗಬೇಕಾದರೆ ಭರವಸೆಯನ್ನು ಮೂಡಿಸುವಂತಿರಬೇಕೇ ಹೊರತು ಋಣಾತ್ಮಕ ಅಂಶಗಳನ್ನಲ್ಲ. ಇಲ್ಲಿ ಓದುಗನಿಗೆ ಕವಿ ಪ್ರೀತಿಯ ಬಗ್ಗೆ ನಂಬಿಕೆಯನ್ನು ಮೂಡಿಸಿದ್ದಾರೆ. ಇದೇ ಈ ಕವಿತೆಯ ಸೊಗಸು.

ಪ್ರತಿ ಮನಸಿನೊಳಗೊಂದು ಪ್ರೀತಿಯ ಹುಡುಕಾಟ ಇದ್ದೇ ಇರುತ್ತದೆ, ಕಾಯುವಿಕೆ ಇರುತ್ತದೆ, ಸಿಗಬಹುದೆಂಬ ಅಪ್ಪಟ ನಿರೀಕ್ಷೆ ಇರುತ್ತದೆ. ಸಮಾಜದ ಕಟ್ಟುಪಾಡುಗಳು, ವ್ಯಕ್ತಿಯ ನಡೆನುಡಿಗಳನ್ನು ನಿಯಂತ್ರಿಸಬಹುದು, ಮನಸುಗಳನ್ನಲ್ಲ. ಎಂದಿಗೂ ಯಾವುದೇ ಕಟ್ಟುಪಾಡುಗಳಿಗೂ ಒಳಗಾಗದ್ದು ಮನಸು. ಎಷ್ಟು ಬಂಧಿಸಲ್ಪಡುತ್ತದೆಯೋ ಅಷ್ಟು ಕಟ್ಟುಗಳನ್ನು ಬಿಚ್ಚಿ ಸ್ವತಂತ್ರವಾಗಲು ಬಯಸುತ್ತದೆ. ಅದೊಂದು ಸ್ವಚ್ಛಂದ ಹಕ್ಕಿ. ಅದೆಷ್ಟೇ ಪಂಜರದಲ್ಲಿಟ್ಟರೂ ಅದು ಸ್ವತಂತ್ರವಾಗಿ ಹಾರಲು ಸದಾ ಆಗಸದತ್ತಲೇ ನೋಡುತ್ತಿರುತ್ತದೆ.

ಹಕ್ಕಿಯಂತಹ ಮನಸಿನ ಸ್ವಚ್ಛಂದತೆ ಹಾಗೂ ಪ್ರೀತಿಯ ಹುಡುಕಾಟ ಈ ಕವಿತೆಯ ಅಂತ:ಸತ್ವ. ಈ ವಿಷಯವನ್ನು ಕವಿ ಇಲ್ಲಿ ತುಂಬಾ ಸೂಚ್ಯವಾಗಿಯೇ ಪ್ರಸ್ತಾಪಿಸಿದ್ದಾರೆ. ಮತ್ತೊಮ್ಮೆ ಮತ್ತೊಮ್ಮೆ ಓದಿದರೆ ಈ ಒಳಸುಳಿ ಓದುಗನಿಗೆ ಅರಿವಾಗುತ್ತದೆ. ಕವಿ ಇಲ್ಲಿ ಗೆಲ್ಲುತ್ತಾನೆ.

ಪ್ರತಿಯೊಂದು ಗಂಡು ಹೆಣ್ಣಿನ ಮನಸಿನೊಳಗೆ ಒಂದು ರಮ್ಯ ಕಲ್ಪನೆ ಇರುತ್ತದೆ. ತಾವು ಕಲ್ಪಿಸಿದ ಒಂದು ಪರಿಪೂರ್ಣ ವ್ಯಕ್ತಿಯನ್ನೇ ಬಯಸುತ್ತಾರೆ. ಆದರೆ ಆ ರೀತಿ ಬದುಕಿನಲ್ಲಿ ದೊರೆಯದೇ ಅನಿವಾರ್ಯತೆಯ ಜೊತೆಯಲ್ಲಿಯೇ ಬದುಕಬೇಕಾದುದು ಜೀವನದ ದುರಂತವೇ ಆಗಿದೆ ಎಂಬುದೂ ಅಷ್ಟೇ ಸತ್ಯವಾಗಿದೆ.

ಎಲ್ಲೋ ಇದ್ದೀಯಾ ನೀನು

ತೇರಳಿಎನ್ ಶೇಖರ್

ಎಲ್ಲೋ ಇದ್ದೀಯಾ ನೀನು
ನನ್ನ ಗೆಣೆಗಾತಿ
ಪ್ರೀತಿ ಹಂಚಿಕೊಳ್ಳುವ
ಭಾವಿ ಮದುವಣಗಿತ್ತಿ
ಅಡುಗೂಲಜ್ಜಿ ಕಥೆಯ
ರಾಜಕುಮಾರಿಯ ಹಾಗೆ
ಸ್ವರ್ಣದರಮನೆಯ ನಂದನದಲ್ಲಿ
ಮಾಂತ್ರಿಕನ ಗುಹೆಯ ಬಂಧನದಲ್ಲಿ
ನಲ್ಲೆ
ನಾನು
ಕಂಡಿಲ್ಲ, ಭೇಟಿಯಾಗಿಲ್ಲ
ನಿನ್ನ
ಇದುವರೆಗೆ
ಆದರೆ
ಅದೆಷ್ಟೋ ಸಲ
ಮನೋಮಂಡಲದಲ್ಲಿ
ಗಂಟೆಗಟ್ಟಲೆ ನಿನ್ನೊಂದಿಗೆ
ಎದೆಯ ತೋಡಿ ಮಾತನಾಡಿದ್ದೇನೆ
ಬಾಯಿ ಬಳಲುವವರೆಗೆ
ಅದೆಷ್ಟೋ ಸಲ
ಹೃದಯದಂಗಣದಲ್ಲಿ
ದಿನಗಟ್ಟಲೆ ನಿನ್ನೆದುರಿಗೆ
ಪ್ರೇಮ ಚಿತ್ತಾರಗಳ ಬಿಡಿಸಿದ್ದೇನೆ
ಕಣ್ಣು ನೋಯುವವರೆಗೆ
ಸಕಲ
ಏಕಾಂತತೆಗಳ ಅಹೋ ರಾತ್ರಿಗಳಲ್ಲಿ
ಸೊಗದ ಕನಸುಗಳ ದಟ್ಟ ಕಾಡಿನಲ್ಲಿ
ಹಾವು ನವಿಲುಗಳ ಸಂಗದಲ್ಲಿ
ಏಕಾಕಿ
ಉಗ್ರ ತಪಸ್ವಿಯ ಹಾಗೆ
ಅದೆಷ್ಟೋ ಸಲ
ಬದುಕು ತುಂಬುವ
ನಿನ್ನಾಗಮನಕ್ಕೆ
ಏಕಾಗ್ರತೆಯಿಂದ ಧ್ಯಾನಿಸಿದ್ದೇನೆ
ಇಡೀ
ದೇಹ ದಣಿಯುವವರೆಗೆ
ಎಲ್ಲೋ ಇದ್ದೀಯಾ ನೀನು…..
ಅರೂಪಿಯಾಗಿ
ಪ್ರೀತಿಯ ಹಾಗೆ
ಪರಕಾಯ ಪ್ರವೇಶ ಮಾಡಿ
ಯಾವುದೋ ಜೀವದೊಳಗೆ :
ಪಾಠಶಾಲೆಯ ಕಪ್ಪು ಹಲಗೆ ಮೇಲೆ
ಸೀಮೆಸುಣ್ಣಗಳ ಸವೆಸುತ್ತ
ಸರಕಾರಿ ಕಛೇರಿಯ ಕುರ್ಚಿ ಮೇಲೆ
ಕಂಪ್ಯೂಟರಿನ ಗುಂಡಿಗಳ ಒತ್ತುತ್ತ;
ವೃತ್ತ ಪತ್ರಿಕೆಯ ಪ್ರತಿನಿಧಿಯಾಗಿ
ಆತ್ಮಹತ್ಯೆಗಳ ವರದಿ ಬರೆಯುತ್ತ
ಆಸ್ಪತ್ರೆಗಳಲ್ಲಿ ಶ್ವೇತವಸ್ತ್ರಗಳ ಧರಿಸಿ
ಗಾಯಗೊಂಡವರ ಶುಶ್ರೂಷೆ ನಡೆಸುತ್ತ;
ಮನೆ ಜಗಲಿ ಮೇಲೆ ಪದ್ಮಾಸನದಲ್ಲಿ
ಹೂವು ಬೀಡಿಗಳ ಕಟ್ಟುತ್ತ
ಚೌಕಾಶಿ ಮಾಡುವ ಬಜಾರುಗಳಲ್ಲಿ
ಹಣ್ಣು ಸೊಪ್ಪು ತರಕಾರಿಗಳ ಮಾರುತ್ತ;
ಹೊಲ ಗದ್ದೆ ತೋಟಗಳಲ್ಲಿ
ಮೈಬಗ್ಗಿಸಿ ಬೇಸಾಯ ಮಾಡುತ್ತ
ಬೆಟ್ಟ ಕಾಡು ಕಣಿವೆಗಳಲ್ಲಿ
ಆಡು ಕುರಿ ಆಕಳುಗಳ ಮೇಯಿಸುತ್ತ;
ಅಗ್ರಹಾರದ ಮಠಗಳೊಳಗೆ
ಮೊಹಲ್ಲಾದ ಬುರುಕಿಗಳೊಳಗೆ
ಹೊಲಗೇರಿಯ ಕುಟೀರಗಳೊಳಗೆ
ಇಗರ್ಜಿಯ ಆಶ್ರಮಗಳೊಳಗೆ;
ಮನದ ಹಲಸು ಮಾವುಗಳಲ್ಲಿ
ಹದಬಂದ ಫಳಗಳ ತೂಗುತ್ತ
ರೆಂಬೆ ಕೊಂಬೆ ಗೆಲ್ಲುಗಳಲ್ಲಿ
ಕಾವ್ಯದ ಗೂಡುಗಳ ಕಟ್ಟುತ್ತ;
ಕನ್ನಡಿಯ ಹೊರಗೆ ನಿಂತು
ಕನ್ನಡಿಯ ಒಳಗೆ ನಿನ್ನ ಸಿಂಗರಿಸುತ್ತ
ಎಲ್ಲೋ ಇದ್ದೀಯಾ ನೀನು……
ಕಾಯಾ ವಾಚಾ ಮನಸಾ :
ಎದುರಾಗುವ ಕಷ್ಟ ಕಾರ್ಪಣ್ಯಗಳಿಗೆ
ಎದೆಗುಂದದೆ ಜೊತೆಗೆ
ನಿಲ್ಲಬಲ್ಲವಳು
ಎದೆಯ ತಾಳಕ್ಕ ತಕ್ಕಹಾಗೆ
ಎಡವದೆ ಜೊತೆಗೆ
ಕುಣಿಯಬಲ್ಲವಳು
ಎಣಿಸದೆ ಮಾಡಿದ ತಪ್ಪುಗಳಿಗೆ
ಎದುರಾಡದೆ ಭೂ ತಾಯಿಯ ಹಾಗೆ
ಕ್ಷಮಿಸಬಲ್ಲವಳು
ಎಲ್ಲ ಬಾಯಾರಿಕೆ ಬಯಕೆಗಳ ಗ್ರಹಿಸಿ
ನೀರು ಮದಿರೆಗಳ ಸುರಿದು
ತಣಿಸಬಲ್ಲವಳು
ಎಲ್ಲ ಹಸಿವು ಆಸಕ್ತಿಗಳ ತಿಳಿದು
ಸಸ್ಯ ಮಾಂಸ ಮತ್ಸ್ಯಗಳ ಭೋಜ್ಯ
ಬಡಿಸಬಲ್ಲವಳು
ಎಲ್ಲ ಋತುಕಾಲಗಳ ಬೆದೆಯರಿತು
ಹಾಸಿ ಬೆಚ್ಚಗೆ ತಬ್ಬಿ ಒತ್ತಿ
ಮಲಗಬಲ್ಲವಳು
ಎಲ್ಲೋ ಇದ್ದೀಯಾ ನೀನು…..
ನಿನ್ನ
ಹುಡುಕಿದ್ದೇನೆ ನಾನು :
ನನ್ನ
ಬಾಲ್ಯಕಾಲ ಸಖಿಯರಲ್ಲಿ
ಕಾಲೇಜು ಕಛೇರಿ ಸಹಪಾಠಿ ಸಹ ಕರ್ಮಿಗಳಲ್ಲಿ
ಚಿರಪರಿಚಿತರಲ್ಲಿ ಅಪರಿಚಿತರಲ್ಲಿ
ಅಂಗನೆಯರ ಸ್ಪರ್ಶದಲ್ಲಿ ಗೆಳತಿಯರಲ್ಲಿ
ಬಸ್ಸಿನಲ್ಲಿ ರೈಲಿನಲ್ಲಿ ಪಾರ್ಕಿನಲ್ಲಿ
ಗುಡಿಯಲ್ಲಿ ಜಾತ್ರೆಯಲ್ಲಿ ಮದುವೆಯಲ್ಲಿ
ಜನನಿಬಿಡ ನಿರ್ಜನ ತಾಣಗಳಲ್ಲಿ
ಎದುರಾದವರಲ್ಲಿ ಹಾದು ಹೋದವರಲ್ಲಿ
ಡಿಕ್ಕಿ ಹೊಡೆದ ಎದೆಗಳಲ್ಲಿ ಕಣ್ಣುಗಳಲ್ಲಿ
ಹಸ್ತಿನಿ ಚಿತ್ತಿನಿ ಶಂಕಿನಿ ಪದ್ಮಿನಿ
ಯಾರಲ್ಲೂ ಎಲ್ಲೂ ನೀನಿರಲಿಲ್ಲ
ಆದರೂ
ನಿರಂತರ ನಿನ್ನ
ಹುಡುಕುತ್ತಲೇ ಇದ್ದೇನೆ ನಾನು
ಎಲ್ಲೋ ಇದ್ದೀಯ ನೀನು :
ಹದಿಹರೆಯದ ಕನ್ಯೆ
ನೂರು ಸ್ವಪ್ನಗಳ ನಡುವೆ
ರಂಗುರಂಗಿನ ಹೂಗಳ ನಡುವೆ
ನನಗಾಗಿ
ಅರಳುತ್ತಿರಬಹುದು
ನಿತ್ಯ ಸುಮಂಗಲೆ
ನೂರು ಜಾರರ ನಡುವೆ
ಸಜ್ಜನರ ನಿಂದೆಯ ನಡುವೆ
ನನಗಾಗಿ
ನಲುಗುತ್ತಿರಬಹುದು
ಗಂಡನಿಲ್ಲದ ವಿಧುವೆ
ನೂರು ದುಃಖಗಳ ನಡುವೆ
ನಿಷಿದ್ಧ ಅಪೇಕ್ಷೆಗಳ ನಡುವೆ
ನನಗಾಗಿ
ಬಿಕ್ಕುತ್ತಿರಬಹುದು
ಎಲ್ಲೋ…..
ಯಾರಿಗೋ ಮಣಿದು ಗೃಹಿಣಿ
ಅಮೃತದಲ್ಲಿ ನಂಜು ತಡಕುವ
ಒಲ್ಲದ ಗಂಡನಿಗಂಜಿ;
ಹೂಂ ಎಂದರೆ
ಕೊರಳು ಕತ್ತರಿಸುವ
ಪರಶುರಾಮರಂಥ ಪುತ್ರರಿಗಂಜಿ;
ಮುಟ್ಟಿದ್ದಕ್ಕೆಲ್ಲ
ಮುನಿದು ಜಗಳ ಕಾಯುವ
ಅತ್ತೆ ಮಾವ ನಾದಿನಿಯರಿಗಂಜಿ;
ಸ್ವಂತ
ಮನೆ ಮನ ಹುಳುಕಾದರೂ
ಇದಿರ ಹಳಿಯುವ ಸುತ್ತೇಳು ನೆರೆಗಂಜಿ;
ಅಂಜಿ,
ಎಲ್ಲ ನೋವುಗಳ ನುಂಗಿ
ನನಗಾಗಿ
ಮಿಡಿಯುತ್ತಿರಬಹುದು
ಎಲ್ಲೋ
ಇದ್ದೀಯಾ ನೀನು !
ನನ್ನ ಗೆಣೆಗಾತಿ
ಪ್ರೀತಿ ಹಂಚಿಕೊಳ್ಳುವ
ಭಾವಿ ಮದುವಣಗಿತ್ತಿ
ಕನ್ನಡಿಯ ಹೊರಗೆ ನಿಂತು
ಕನ್ನಡಿಯ ಒಳಗೆ ನನ್ನ ಬಿಡಿಸುತ್ತ
ಹೂವು ತಾರೆ ಕವಿತೆಗಳಲ್ಲಿ
ಹೋರಾಟಗಾತಿಯ ಎದೆಯಲ್ಲಿ…..

‍ಲೇಖಕರು Admin

July 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: