ರಂಗಭೂಮಿ ಹಾಗೂ ಕ್ಯಾಮೆರಾ ಎರಡನ್ನೂ ಸಮಾನವಾಗಿ ಪ್ರೀತಿಸುವವರು ನಾಗರಾಜ ಸೋಮಯಾಜಿ.
ಇತ್ತೀಚಿಗೆ ತಾನೇ ‘ಫೋಕಸ್’ ಎನ್ನುವ ತಮ್ಮದೇ ಕನಸಿಗೆ ಗರಿ ಕಟ್ಟಿದ್ದಾರೆ.
ಸೋಮಯಾಜಿ ತೆಗೆದ ಒಂದು ಫೋಟೋ ‘ಅವಧಿ’ಯಲ್ಲಿ ಪ್ರಕಟಿಸಿದ್ದೆವು. (ಮೇಲಿನ ಫೋಟೋ)
ಈ ಚಿತ್ರ ಗೀತಾ ಹೆಗ್ಡೆ ಅವರ ಮನದಲ್ಲಿ ಹುಟ್ಟು ಹಾಕಿದ ಭಾವನೆಗಳಿವು

ಗೀತಾ ಹೆಗ್ಡೆ ಕಲ್ಮನೆ
ಓ ಹೆಣ್ಣೆ
ನಿನ್ನ ಗೆಜ್ಜೆ ಕಟ್ಟಿದ ಕಾಲುಗಳ
ಮುಂದಿಟ್ಟುಕೊಂಡು ಅದ್ಯಾವ
ಪರಿಯಲ್ಲಿ ಮೋಡಿ ಮಾಡುವ
ಹವಣಿಕೆಯ ಹುನ್ನಾರ?
ಅರೆ..
ಸಾಕಾಗಲಿಲ್ಲವೆ ಸೂರ್ಯ ರಶ್ಮಿ
ಇರುವುದದೊಂದೇ ಕಾಲಿಗೆ?
ಮತ್ತೊಂದು ಎಲ್ಲಿ ಬಚ್ಚಿಟ್ಟೆ
ಇರುವುದೊಂದೆ ಗೆಜ್ಜೆಯ?
ಅಯ್ಯೋ.
ನೋಡಲ್ಲಿ ಬಣ್ಣ ಬಳಿದೂ ಬಳಿದೂ
ಕಳಕೊಂಡಿತಲ್ಲೆ ಹಳೆತನ
ಅಮ್ಮ ಗದರಲಿಲ್ಲವೇನೆ?
ಕಾಲ ಗತಿ ಕಂಡು.
ಹಾ!
ನೆನಪಿದೆಯೆನೆ ನಿನಗೆ
ಮಿರಿ ಮಿರಿ ಮಿಂಚುವ
ಬಿಳಿ ಚಮ೯ದ ಮೃದುತ್ವ?
ಕಾಲಂದುಗೆಯಲ್ಲಿ ಕುಣಿದ
ಮುದ್ದು ಮುದ್ದಾದ ಕಾಲು.
ದೇವರೆ…
ಕಾಲನೊಂದಿಗೆ ಹೆಜ್ಜೆಯಿಡುವ
ಕಾಲೂ ಕೂಡಾ ಬಣ್ಣದ ಪ್ರಪಂಚಕ್ಕೆ
ಬಲಿಯಾಯಿತಲ್ಲೆ
ನೀ ಬಿಟ್ಟು ಬಿಡೆ
ಬಣ್ಣ ಹಚ್ಚಿ ಮೆರೆಯುವ ವೈಯ್ಯಾರ.
ನೀ ಕೇಳು
ಮದುರಂಗಿಯಲಿ ಮುಳುಗೇಳು
ನೋಡು ನಿನ್ನಂದ ಚಂದ
ಚಂದ್ರನ ಬೆಳಕೆ ಸಾಕೆ
ಥೈ ತಕ ಥೈ ತಕ ತಾಳಕ್ಕೆ ತಕ್ಕಂತೆ
ಗೆಜ್ಜೆಯ ನಾದದಲಿ ಹೆಜ್ಜೆ ಹಾಕಲು
ಪ್ರೇಕ್ಷಕನ ಮನ ಗೆಲ್ಲಲು!
ಗೊತ್ತು…
ನಟನಾಂಗಿ ಬೆಡಗಿನ
ಬಿನ್ನಾಣಗಿತ್ತಿ ನೀ ಚೆಲುವೆ
ಮತ್ತೆ ನಾಟ್ಯ ಮಾಡಲು
ಈ ಕೃತಕ ಬಣ್ಣ ಬೆಳಕು
ನಿಂಗ್ಯಾಕೆ ಹೇಳು?





Beautiful
Thank you Shaman☺
ಹಾಗೆ ನಿಮ್ಮಿಂದ ಇದಕ್ಕೊಂದು ಕವನದ ನರೀಕ್ಷಿಸಲೆ?