
ಎಚ್.ಆರ್. ರಮೇಶ
ಎಲ್ಲಿ ನಿನ್ನ ಸಖಿಯರು
ನೀನೇ ತೊರೆದೆಯೋ ಅವರೇ ತೊರೆದರೋ
ತೀರದಲ್ಲಿ ಅಲೆಗಳು
ಬರುತ್ತಾ ಹೋಗುತ್ತಾ ಇದ್ದರೂ
ನಿನ್ನ ಅವರ ತೊಡೆಗಳು
ಸರ್ಪದಂತೆ ಬಳ್ಳಿಯಂತೆ
ಮರಳ ಅಣು-ಕಣಗಳಲ್ಲಿ
ಸೆರೆಯಾಗಿದೆ
ಮೈಯ ಗಂಧ
ನೆನಪಾಗಿ ಸಾಕ್ಷಿಯಾಗಿ
ವಿಚಾರವಾದದ ಕನ್ನಡಕದ ಹಿಂದೆ
ಸಖಿಯರ ಸಖ್ಯದ ಕ್ಷಣಗಳು
ಕಣ್ಣ ಅಡಿಯಲ್ಲೇ
ಗೆರೆಮಾಡಿಕೊಂಡು ಕುಳಿತಿವೆ
ಹಿಮಾಲಯದ ತಪ್ಪಲಲ್ಲಿ
ಐಹಿಕ ಸುಖಗಳ
ತೊರೆದು ಸಾವಿರಾರು ವರ್ಷ ಮಾಡಿದ ತಪಸ್ಸಿನಂತೆ
ಲೌಕಿಕದ ಸುಖವ ಗಸಿಯನ್ನೂ ಬಿಡದೇ ಹೀರಿ
ಮೌನ ವಹಿಸಿರುವುದು ನಟನೆಯೆಂಬುದ
ನಿನ್ನ ಎದೆ
ಸಾಬೀತು ಪಡಿಸಿದೆ

ನಿನ್ನ ಸುಪ್ತ ಪ್ರಜ್ಞೆಯನ್ನು
ನಿನ್ನ ಜಾಗೃತ ಪ್ರಜ್ಞೆಯನ್ನು ಮೀರಿ
ಅವರ ಮಿಂಚುವ ದೇಹ
ಜಾರುವ ದೇಹ
ಆತ್ಮವ ಆವರಿಸಿಕೊಂಡಿದೆ
ಸಭ್ಯತೆಯ ಛಧ್ಮವೇಶದಡಿಯಲ್ಲಿ
ಆತ್ಮವಂಚನೆಯ ಏದುಸಿರುಗಳು
ಒಂದೇ ಸಮನೆ
ಎಲ್ಲಿ ನಿನ್ನ ಸಖಿಯರು
ನಿನ್ನ ದೇಹ ಮತ್ತು ಮನಸು ಎರಡರಲ್ಲೂ
ಸಲೀಸಾಗಿ ಸಂಚರಿಸುತ್ತಿದ್ದವರು
ಆಸೆಯಾಗಿ ಕಾಡಿದವರು
ವ್ಯಾಮೋಹವ ಬಿತ್ತಿದವರು
ನಿವ್ರ್ಯಾಮೋಹವ ಬೆಳೆಸಿದವರು
ಎಲ್ಲಿ ಎಲ್ಲಿ
ಎಲ್ಲಿ ನಿನ್ನ ಸಖಿಯರು
ಎಲ್ಲಿ ತೊರೆದು ಹೋದರು
ಸಾವನ್ನೇ ಸತಾಯಿಸುತ್ತಿದ್ದವರು
ಬೆರಳಂಚಿನಲ್ಲೇ ಬದುಕ ತಿರುಗಿಸುತ್ತ
ಆಕಾಶದಾಚೆ ಚಿಮ್ಮುತಿದ್ದವರು
ನಿನ್ನ ಸಖಿಯರು
ನಿನ್ನ ಮುಂದಿನ ತುಂಬಿ ತುಳುಕುತ್ತಿರುವ
ಗಾಜಿನ ಶೀಷೆಯಲ್ಲಿ
ಫಳಫಳ ಮೀಯುತ್ತಿದ್ದಾರೆ ವೀರ್ಯದ ನದಿಯಲ್ಲಿ ಈಜಿದಂತೆ
ಎಲ್ಲಿ ನಿನ್ನ ಸಖಿಯರು
ಎಲ್ಲಿ ಎಲ್ಲಿ ಎಲ್ಲಿ
ತೊರೆದೆಯೋ ತೊರೆದರೋ
ಬೆಳದಿಂಗಳಿಗೆ ಬೆಂಕಿಯಿಟ್ಟು
ತನುವ ಸುಟ್ಟವರು
ತನುವ ತತ್ವವ ಮಾಡಿದವರು
ನವಿಲಾಟವಾಡಿದವರು
ಎಲ್ಲಿ ತೊರೆದು ಹೋದರು
ಅನುಭಾವದ ಹಾಡ ಹಾಡಿದವರು
ಬೆತ್ತಲಾಗಿ ದೃಷ್ಟಿಪೊರೆಯ ಹರಿದವರು
ಎಲ್ಲಿ ಎಲ್ಲಿ
ನಿನ್ನ ಸಖಿಯರು

ಸಾಂಗತ್ಯವ ತೊರೆದರೋ ತೊರೆದೆಯೋ
ಬೆನ್ನ ಮಣಿಯ ಕಿತ್ತು ಒಂದೊಂದೇ
ಮಿಥುನವ ಬರೆದವರು
ಕಾಲದ ಖಡ್ಗದ ತುದಿಯಲ್ಲಿ
ನಭದ ಸೂರ್ಯನ ಮೊಲೆಗಳಿಗೆ ನೇತುಹಾಕಿ
ನಕ್ಷತ್ರಗಳ ಚಾಚಿದವರು
ತೊರೆದರೋ ತೊರೆದೆಯೋ
ಎಲ್ಲಿ ನಿನ್ನ ಸಖಿಯರು ಎಲ್ಲಿ ಎಲ್ಲಿ
ಸಮಾಜದ ಮುಳ್ಳ ಬೇಲಿಯ ಧಗ್ಗೆಂದು ಉರಿಸಿ
ಕುಡಿನೋಟದಲಿ
ಬಯಲಾಗಿಸಿದವರು ಬಯಲಾಗಿ
ಕಾಡ ಹೂವ ಅರಳಿಸಿದವರು
ಎಲ್ಲಿ ಎಲ್ಲಿ
ತೊರೆದೆಯೋ ತೊರೆದರೋ
ಜೀವ ಉಕ್ಕಿಸುವ ಪ್ರೀತಿಯ ಸ್ಫುರಿಸಿದವರು
ಧರ್ಮವ ಸುಟ್ಟವರು
ಜಾತಿಯ ಅಳಿಸಿದವರು
ಎಲ್ಲಿ ಎಲ್ಲಿ
ಹುಳ ತುಂಬಿದ ಅನ್ನದಲ್ಲಿ ಕ್ರಾಂತಿ ಕಿಡಿಯ
ಸ್ಪೋಟಿಸಿದವರು
ಹರಿವ ನೆತ್ತರಿನ ಕೋಡಿಯಲ್ಲಿ
ಕಬೂತರುಗಳ ಹಾರಿಸಿದವರು
ತೋಳ ತೆಕ್ಕೆಯಲ್ಲಿ ಪಿಸುನುಡಿಗಳ ಆಲಿಸುತ್ತಿದ್ದವರು
ದುಃಖ ದುಮ್ಮಾನಗಳ ಮಾಯಮಾಡುತ್ತಿದ್ದವರು
ಇಟ್ಟವರು ಜತನದಲಿ ಭಾಷೆಯ ಉಪ್ಪಾಕಿ ಕೆಡದಂತೆ
ಎಲ್ಲಿ ಎಲ್ಲಿ
ಎಲ್ಲಿ ನಿನ್ನ ಸಖಿಯರು
ವಿಕಾಸದ ಹಾದಿಯಲ್ಲಿ ಒಂದನೊಂದು ಸೇರಿಸುತ್ತ
ಸರಿಯುತ್ತ ಇದ್ದವರು ಕೈ ಹಿಡಿದು ನಡೆದವರು
ಮನುಷ್ಯರಾಗದೇ ಇರುವ ಮನುಷ್ಯರ
ಮನುಷ್ಯರನ್ನಾಗಿಸುತ ಎತ್ತಿ ಹಿಡಿಯುತ್ತಿದ್ದವರು
ಎಲ್ಲಿ ನಿನ್ನ ಸಖಿಯರು
ತೊರೆದರೋ ತೊರೆದೆಯೋ






A tender feeling