ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಎಲ್ಲಿಹೋದ? ಇಲ್ಲೆ ಇದ್ದನೆಂದುಕೊಂಡೆದ್ದೆನಲ್ಲಾ…’ ನಳಿನ

ಅವನು -ಗಾಂಧಿ-ಹೂವು

ನಳಿನ

೧. ನೆನಪಾಗುತ್ತದೆ ಆಗಾಗ,
ಬೀದಿಯಲಿ ಸರಿದು ಹೋಗುವ
ಜನರ ನದಿಯ ನಡುವೆ
ನನ್ನವನ ಹುಡುಕುವಾಗ,
 
ಎಲ್ಲಿಹೋದ? ಇಲ್ಲೆ ಇದ್ದನೆಂದುಕೊಂಡೆದ್ದೆನಲ್ಲಾ.
ಅವನಾ? ಅವನಲ್ಲವೇ ಅಲ್ಲ?
ಬರುವನಾ? ಬಾರದೆ ಇನ್ನೆಲ್ಲಿ ಹೋಗುವವ?
 
೨.
 
ಬೆಕ್ಕಸಬೆರಗಾಗುವಂತೆ ಕಾಣುತ್ತಲೇ ಇರುವಾಗ…
ಬೊಗಸೆ ತುಂಬಾ
ಪ್ರೀತಿಯ ತುಂಬಿಕೊಂಡು
ಕಣ್ಣರಳಿರಿಸಿ
ಅರಳಿಸುತ್ತಾನೆ
ಮುದುಡಿದ ಮೊಗ್ಗ.
 
ಜಗದ ತುಂಬೆಲ್ಲಾ ಪ್ರೀತಿ ಭಿತ್ತಿದ
ಚಂದ್ರನ ಮುಂದೆ,
ಹೂಮಂಚದಲಿ ಒಂದೊಂದೇ ಕನಸ
ಎತ್ತಿ ಜೋಪಾನ ಮಾಡುತ್ತಾನೆ.
ಇಷ್ಟು ದಿನದಲ್ಲಿ ಮರೆತೋದ
ಪದಗಳ ಕಟ್ಟಿ ಹಾಡುತ್ತಾನೆ….
ಅವನ ಬಣ್ಣದ ಮಾತಿನ ಖಜಾನೆಯ
ಝಣಝಣಕ್ಕೆ ಬೆಸೆಗೊಳ್ಳುವುವು
ರಾತ್ರಿಯಲಿ ಚಕೋರನೊಂದಿಗೆ ಚಂದ್ರನೂ ಸೇರಿದಂತೆ
ನಾನೂ ಅವನೂ.

೩.
ಕಡೆಗೆ ಎಚ್ಚರವಾಗುತ್ತದೆ,
ನಾನು ನಿಂತದ್ದು ನಿಂತಲ್ಲೇ
ಸುತ್ತಲೂ ಬಸಿದು ಹೋಗಿದೆ
ಊರಜನ ತಂತಮ್ಮ ಮನೆಗಳಿಗೆ
ಎಂದಿನಂತೆ..
ಒಗ್ಗರಣೆ ಸಾರು ರೊಟ್ಟೆ ಚಟ್ನಿ
ಎಲ್ಲರ ಅಡುಗೆ ಮನೆಯ ಕಿಟಕಿ
ರುಚಿ ಸುದ್ಧಿಯ ಮೂಗಿಗೆ ಬಡಿದು
ಮುನ್ನೋಡುತ್ತಿದೆ.
ಇನ್ನಷ್ಟು ಹೊತ್ತಿಗಾಗಲೆ
ಅವಳ ಕೊರಳ ಬೆವರು ಒರೆಸಿದ
ಅವನ ಕಣ್ಣುಗಳ ಈಕ್ಷಿಸುತ್ತಾ
ಇಬ್ಬರೂ ದಿಂಬಿಗೆ ಬಾರವಾಗಿ
ರತಿಹಬ್ಬಕ್ಕೆ ಹಾಜರಿಹಾಕಿ
ಮಗ್ಗುಲಾಗುತ್ತಾರೆ.
 
೩.
ಬೇವರ್ಸಿ ಬಿಸಿಲು ಸೂರಿನ ಮೇಲೆ
ಬಂದೇ ಬಿಟ್ಟಿದೆ. ಊರ ಕಡೆ ತಲೆ ಹಾಕದೆ
ಊರುಬಿಟ್ಟವರು ನಾವು, ಆಗಾಗ ಅಲ್ಲಿನ ಸುದ್ಧಿಗಳು
ಪ್ರಕಟವಾದ ಪತ್ರಿಕೆಗಳ ಮುಂದೆ
ಕಣ್ಣೀರು ಒಸರಿ ಹಿಂಗುತ್ತವೆ.
ಜಾತಿ ಗೊಂದಲದ ’ಮೂರೂ’ ಬಿಟ್ಟವರು
ಆಗೀಗ ಯಾರೋ ಏನೋ ಗುರುತಿಸದೇ
ಹೋದದ್ದೇ ಒಳ್ಳೇದು ಸ್ವಾಮಿ’ ಅಂತ
ಭುಜ ಉಬ್ಬಿಸುತ್ತೇವೆ.
 
೩. ಬ್ಯಾಸರಾಗುತೀತಿ ಹೇಳಲು,
ಸತ್ತವರು ಬದುಕುವುದೆಂಥಾ ಕಷ್ಟದ ಕೆಲಸ,
ಹಾಗೆಯೇ ಬದುಕಿದವರನ್ನ ಗುಂಡಿಗಿಡುವ ಜನರ ನಡುವೆ.
ಮತ್ತೆ ಬದುಕಲು ಬೇಕು ಕಣೋ
ಅದೇ ಪ್ರೀತಿ, ಹಿತವಾದ ನಗು,
ಜೀವನ ಪೂರ್ತಿಬಾಳುತ್ತೇವೆಂಬ ಸ್ಫೂರ್ತಿ.
ಜೊತೆಜೊತೆಗೆ ಹೆಜ್ಜೆ ಇಡುವಾಗಿನ ಗುರುತುಗಳ,
ಮತ್ತೆ ಹಿಂದಿಂದೆ ನೋಡಿ ಸಾಗುವ ಖುಷಿ.
 
೪.ಬಂದೇ ಬರುತಾವ ಮತ್ತೆ ಕರಿಯರು ಬಿಳಿಯರೇ ಆಗಿಹೋಗುವ ಕಾಲ,
ಗಾಂಧಿಯೂ ಗೂಡ್ಸೆಯೂ ಪ್ರಾರ್ಥನಾ ಮಂದಿರದೊಳಗೆ ಕೂತು
ಆತ್ಮವಿಮರ್ಶೆಗಿಳಿದು ಮತ ಧರ್ಮ ಮತಾಂತರ, ಹೆಂಗಸರು,
ವೇಶ್ಯೆಯರು, ಕೊಲೆಗಳು, ಹಂತಕರು, ನಿರಾಶ್ರಿತರು, ಪಾಕಿಸ್ತಾನ,
ಭಾರತ ಎಂದೆಲ್ಲಾ ಚಚ್ಚಿ, ಬೇಧ ಬೇಧಿಸಿಕೊಂಡು,
ಅಣ್ಣ ತಮ್ಮಂದಿರಂತೆ ಬಾಳುವ ದಿನ.
 
೫. ಸುತ್ತ ಕೋಮಿನ ಹೊಗೆ, ಬೆಲೆ ಏರಿತದ ಬಿಸಿ,
ಸಂಸಾರದೊಳಗೆ ಕೂತು ನಾನ್ಹೇಗೆ ಸರಸಕ್ಕಿಳಿಯುವುದು,
ಯಾರ ಹೊಟ್ಟೆಯೂ ತಣ್ಣಗಿಲ್ಲದೆ
ನೆತ್ತಿಯ ಮೇಲೆ ನಾಯಕರು ಇಟ್ಟ
ಟೊಪ್ಪಿಗಳೊಂದಿಗೆ ಖಾಲಿ ಜೀವನ ಮಾಡುವಾಗ,
ವಿವೇಕ, ಸುಭಾಷರ ಆವೇಶ ಬಂದರೆ
ಈ ಹೊತ್ತಿನಲ್ಲಿ ನಾನು ಎದೆಯೊಡೆದು ಸಾಯಬಲ್ಲೆ,
ಇಲ್ಲವೇ ಪಾರ್ಶ್ವವಾಯುವಿನೊಂದಿಗೆ
ಮಲಗಬಲ್ಲೆ. ಇದೆಲ್ಲಾ ಬೇಡವೆಂದರೆ
ಅರೆಹೊಟ್ಟೆಯಲಿ ನಾಳೆಯ ದಿನಕ್ಕೆ
ಬದುಕಿ, ನಾಡಿದ್ದು ಮಕ್ಕಳ
ಹಡೆಯಲು ಜತನವಾಗಿರಿಸಿಕೊಳ್ಳುವೆ
ಮಾರಾಟಮಾಡದೆ ನನ್ನ ಗರ್ಬದಿ
ಹಡೆವ ಮಕ್ಕಳ.
 
೬. ಅವನಿನ್ನು ಮರಳಿ ಬಂದಾಗ ತಾನೇ ಆ ಮಾತು,
ಅಲ್ಲಿಯವರೆಗೆ ಭವಿಷ್ಯದ ಗಂಟಿಗೆ ಒಂದೊಂದೆ
ವಿಷದ ಮುಳ್ಳುಗಳು ಓಡಿಸುತ್ತವೆ
ಸುಸ್ತಾಗಿ ಸಾಯುವಂತೆ,
ಜೀವನ ಜಂಜಾಟ ಬ್ಯಾಡ್ರಪ್ಪೋ ಅಂತ ಹಿಂದೇಟು ಹಾಕಿಸಲು,
ಕಾಡುವ ಪ್ರತಿ ನೆನಪು ಹೂವು ಭಿತ್ತಿನ
ಪುಟ್ಟ ಸಸಿಗಳು, ಅವನು ಬರುವಾಗ
ಇಲ್ಲಿ ಹೂಗಿಡಬಿಡಲಿ.
ಬರುವ ಅವನು ಸತ್ಯದ ಕತ್ತು ಹಿಸುಕದಿರಲಿ.
 
 

‍ಲೇಖಕರು G

6 October, 2014

4 Comments

  1. Arathi ghatikar

    Bhahala arthagarbhita kavana . Illi preethi , hatashe ,katu satya da vimarshe chennagide .

  2. mmshaik

    tumbaane oLLeya kavana ..vaastavikateyondige heNeda sundara kavana…

  3. nalina

    thank you for your valuable comments.

  4. Rahil Zubin

    Tumba chennagide. Keep writing.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading