ಸಿಕ್ಕೀತು ಸುಳಿವು
ಸರೋಜಿನಿ ಪಡಸಲಗಿ
ಹಗಲಿನ ಕೊನೆ ಅಂಚಿನಲಿ ಹೊಂಗಿರಣ ಮಾತನೊಂದುಲಿದಿದೆ
ತೊರೆಯ ತೆರೆಯ ಮಿಂಚು ಬೆಳಕಲಿ ಸಣ್ಣ ಗುಂಜನ ಮೂಡಿದೆ
ದೂರದಲ್ಲೆಲ್ಲೋ ಉಸುರಿದ ಗೆಳತಿ ಮಾತು ತೊರೆ ತುಂಬ ನಾದ ಮೂಡಿಸಿದೆ
ಆ ಧ್ವನಿಯ ಅರಸಿ ಮತ್ತ ಹಂಸ ಮಂದ ಮಂದ ಸಾಗಿದೆ
ಅರಿಯದೀ ದಾರಿ ಎತ್ತ ಸುತ್ತಿ ಸುತ್ತಿ ಸಾಗಿದೆ
ತೊರೆಯ ತೆರೆಯ ಬಡಿತಕೆ ಎದೆ ಮೆಲ್ಲ ಮೆಲ್ಲ ಮಿಡಿದಿದೆ
ಆ ಮಿಡಿತದ ತಾಳಕೆ ಹಂಸ ಮೈಮರೆತು ಮುಂದೆ ಸಾಗಿದೆ
ಸಿಗಲಹುದೇ ಆ ನಾದದ ಸುಳಿ ಹುಡುಕಿ ಹುಡುಕಿ ಸೋತಿದೆ

ಎಲ್ಲಿಹಳು ಅವಳು ಹೃದಯ ವೀಣೆ ಮೀಟಿ ಮರೆಯಾದಳೆ
ಎದೆಯಲರಳಿದ ಹೂವು ಮುದುಡಿ ಸೌಗಂಧ ಕಳಚಿ ನಿಂದಿತೆ
ಇದೇನು ಮೋಹ ಎಂಥ ಮಾಯೆ ಅಲ್ಲೆ ಕತ್ತಲಲ್ಲೇ ಅರಸುತಿದೆ
ವಿಚಿತ್ರ ಭ್ರಾಂತಿ ಆವರಿಸಿ ಮನ ಮಬ್ಬಿನಲಿ ಮುಳುಗಿದೆ
ದೂರ ತೀರದಿಂದ ಒಂದು ಸಣ್ಣ ಬೆಳ್ಳಿ ತಾರಕೆ ಮಿನುಗಿದೆ
ಅದರ ಹೊಳಪಿಗೆ ಮನದ ತುಂಬ ಯಾವುದೋ ಮುದ ತುಂಬಿದೆ
ಕಳೆಯದಿರು ಈ ಸಮಯ ಅದನ ನಿಲಿಸೆಂಬ ಸೊಲ್ಲು ಕೇಳಿ ಓಡಿದೆ
ಆಸೆ ಕುದುರೆ ಏರಿ ಹಂಸ ಅದು ಹುಚ್ಚು ಭ್ರಾಂತಿ ಎಂದು ಮರೆತಿದೆ
ಸಿಕ್ಕೀತು ಸುಳಿವು ಎಂದು ಹೊರಟಿದೆ






0 Comments