ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಾ ಪ್ರೇಮಿಗಳು ಸೋತು!

-ಸದಾಶಿವ ಸೊರಟೂರು

ನೀ ಹೂವು ಬಿಡಿಸುವಾಗ
ಗಿಡವೆಲ್ಲಿ ನೊಂದುಕೊಳ್ಳುತ್ತದೊ
ಎಂದು ಅಂಜುವೆಯಲ್ಲಾ
ಆ ಸಣ್ಣ ಭಯದಲ್ಲೇ
ಎರಡಾಗುತ್ತದೆ ನಿನ್ನ ಚೆಲುವು

ಮನೆಯ ಮೆಟ್ಟಿಲುಗಳನ್ನಿಳಿಯುವಾಗ
ಅವುಗಳಿಗೆಲ್ಲಿ ಭಾರವೊ
ಎಂದು
ಚೂರು ತಲ್ಲಣಿಸುವೆಯಲ್ಲಾ
ಆ ಅಳುಕಿನಲ್ಲೇ
ಬಳಕುವ ನಿನ್ನ ಮೈಮಾಟಕ್ಕೆ
ಕರುಬುತ್ತದೆ ಭೂಮಿ ಮೇಲಿನ
ಎಲ್ಲಾ ಹೆಣ್ಣು ಕುಲ

ಹೆರಳನ್ನು ಆಗಾಗ ಅಲುಗಿಸಿ
ಮುಖದ ಮೇಲೆ
ಮುಂಗುರುಳನ್ನು ಚೆಲ್ಲಿ ಹೋಗುವ
ಗಾಳಿಯನ್ನು
ಮನದಲ್ಲೇ ಶಪಿಸಿ ಬೈದು ಬಳಿಕ
ಸಣ್ಣಗೆ ಲೊಚಗುಟ್ಟುವೆಯಲ್ಲ
ಆ ಪುಟ್ಟ ಸಂಕಟದಲ್ಲೇ
ನಿನ್ನ ಕತ್ತಿನ ಬಳುಕಿನಲಿ
ಜಾರಿ ಬೀಳುತ್ತದೆ ಜಗದ ಲೆಕ್ಕಚಾರ

ನನ್ನ ನೂರು ಮುತ್ತು ಮರಳಿಸುವ
ಗಡಿಬಿಡಿಯಲ್ಲಿ
ತೊಂಬತ್ತೊಂಬತ್ತಕ್ಕೆ
ನೂರೆಂದು ಎಣಿಸಿ ಸೋಲುವ
ನಿನ್ನ ಗಣಿತವನು ನೀನೆ ನೆನೆದು
ತುಟಿ ಕಚ್ಚಿ
ಬಾಕಿಯೊಂದನು ಕೊಡಲು ಮುಂದಾಗಿ
ನೂರಾವೊಂದು
ಕೊಡುವೆಯಲ್ಲ
ಆಗ ಮಂಡಿಯೂರುತ್ತಾರೆ
ಜಗತ್ತಿನ ಎಲ್ಲಾ ಪ್ರೇಮಿಗಳು ಸೋತು!

‍ಲೇಖಕರು Admin

6 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading