ಮದುವೆ ಏಕೆ ಆಗಬೇಕು?

ಸಂತೋಷ ತಾಮ್ರಪರ್ಣಿ
ಎಲ್ಲರಿಗೂ ಮದುವೆಯಾಗಬೇಕು ಅಂತ ಒಮ್ಮೆಯಾದರೂ ಅನಿಸುತ್ತದೆ, ಅಲ್ಲವೇ? ಕೆಲವರಿಗೆ ಒಂದಲ್ಲಾ ಒಂದು ವಯಸ್ಸಿನಲ್ಲಿ ಅನ್ನಿಸಿದರೆ ಮತ್ತೆ ಕೆಲವೊಬ್ಬರಿಗೆ ವಯಸ್ಸಲ್ಲದ ವಯಸ್ಸಿನಲ್ಲಿ ಅನ್ನಿಸುತ್ತದೆ. ಇನ್ನು ಕೆಲವರಿಗಂತೂ ಅನ್ನಿಸುವುದೇ ಇಲ್ಲ. ಬೇರೆ ಯಾರಾದರೂ ಹಾಗೆ ಅನ್ನಿಸುವಂತೆ ಮಾಡಬೇಕು. ಅದಕ್ಕೇ ಅಲ್ಲವೇ ದೇವರು ಅಜ್ಜಿ-ತಾತಂದಿರನ್ನು ಸೃಷ್ಟಿ ಮಾಡಿರೋದು.
ಮದುವೆ ಆಗಲಿಕ್ಕೆ ಅಥವಾ ಮಾಡಲಿಕ್ಕೆ ಕಾರಣ ಬೇಕೇ? ಕೆಲವರಿಗೆ ದುಡಿಯಲು ಶುರು ಮಾಡಿದ್ದಕ್ಕೆ, ಮತ್ತೆ ಕೆಲವರಿಗೆ ಇನ್ನೂ ಶುರು ಮಾಡದೇ ಇದ್ದಿದ್ದಕ್ಕೆ, ಹುಚ್ಚು ಬಿಡಲು (ಬೇರೆ ಹುಚ್ಚು ಹತ್ತಲು), ಹಾಳಾದ ಮಗನನ್ನು ಸರಿದಾರಿಗೆ ತರಲು (ಮತ್ತು ಅದರಿಂದ ಸರಿಯಿದ್ದ ಹುಡುಗಿಯ ಜೀವನವನ್ನ ಹಾಳು ಮಾಡಲು), ದುಡ್ಡು ಉಳಿಸಲು ಅಥವಾ ಗಳಿಸಲು, ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳಲು, ಅಧಿಕಾರವನ್ನು ಚಲಾಯಿಸಲು, ಒಳ್ಳೆ ಹುಡುಗಿ ಕೈ ತಪ್ಪಿ ಹೋಗುತ್ತಾಳೆಂಬ ಭಯದಿಂದ, ತಲೆಗೂದಲು ಸ್ವಲ್ಪ ಸ್ವಲ್ಪವಾಗಿ ಉದುರಲು ಪ್ರಾರಂಭವಾಗಿದೆ, ತಲೆಗೂದಲು ಸ್ವಲ್ಪವೇ ಉಳಿದಿದೆ,…… ಹೀಗೆ ಅವರವರಿಗೆ ಅವರವದೇ ಆದ ಕಾರಣಗಳಿವೆ.
ಇವಿಷ್ಟು ಹುಡುಗರಿಗೆ ಮದುವೆ ಮಾಡಲು ಇರುವ ಕಾರಣಗಳಾದರೆ, ಹುಡುಗಿ ಮದುವೆ ಮಾಡಲು ಅವಳಿಗೆ ವಯಸ್ಸಾಗಿರುವುದಕ್ಕಿಂತಲೂ ಬಲವಾದ ಕಾರಣ ಬೇಕೆ ? ಹುಡುಗಿಗೆ ವಯಸ್ಸಾಗಿದ್ದರೆ ಸಾಕು. ಪಾಪ, ಎಷ್ಟಾದರೇನು? ಹೊರೆ ಇಳಿಸಿಕೊಳ್ಳಲು, ಜವಾಬ್ದಾರಿಂದ ಮುಕ್ತರಾಗಲು, ಕನ್ಯಾ ಸೆರೆ ಬಿಡಿಸಿಕೊಳ್ಳಲು, ಅವಳ ಮದುವೆ ಮಾಡಬೇಕು. ಅವಳ ಅಣ್ಣ ಅಥವಾ ತಮ್ಮ ಇದ್ದರೆ, ಅವರ ಮದುವೆ ಮಾಡೋಕು ಮುಂಚೆ ಹುಡುಗಿಯ ಮದುವೆ ಮಾಡಿ ಮುಗಿಸಲೇ ಬೇಕು. ಆಮೇಲೆ ಅತ್ತಿಗೆ- ನಾದಿನಿ ಗೆ ಹೊಂದಾಣಿಕೆ ಆಗದಿದ್ದರೆ?
ಇನ್ನು ಕೆಲವು ಸಲ ಅಜ್ಜಿ-ತಾತಂದಿರನ್ನ ನಂಬಿ ಮೋಸ ಹೋಗಿ ಮದುವೆಯಾದ ಉದಾಹರಣೆಗಳೂ ಉಂಟು. ಯಾಕೆಂದರೆ, ‘ನಿನ್ನ ಮದ್ವಿ ನೋಡಿ ಸಾಯ್ಬೇಕಂತ ಜೀವ ಹಿಡ್ಕೊಂಡ್ ಕುತ್ತೇನಿ’ ಅನ್ನೋ ಮುಕ್ಕಾಲಕ್ಕೂ ಹೆಚ್ಚು ಅಜ್ಜಿ-ತಾತಂದಿರು ಎಷ್ಟನೇ ಮದುವೆ ಅಂತ ನಿಖರವಾಗಿ ಹೇಳಿರುವುದಿಲ್ಲವಾದ್ದರಿಂದ, ಮದುವೆಯಾಗಿ, ಮಕ್ಕಳಾಗಿ, ಅವರಿಗೆ ಮಕ್ಕಳಾದರೂ ಅವರಿನ್ನೂ ಗಟ್ಟಿಮುಟ್ಟಾಗೇ ಇರುತ್ತಾರೆ ಮತ್ತು ತಾವು ಹೇಳಿದ್ದನ್ನು ಸಂಪೂರ್ಣವಾಗಿ ಮರೆತು ಬಿಟ್ಟಿರುತ್ತಾರೆ. ಅದಕ್ಕೆ ಹೇಳೋದು, ಮುದುಕರಿಗೆ ನೆನಪಿನ ಶಕ್ತಿ ಕಮ್ಮಿ ಅಂತ. ಆದರೂ, ಹಿರಿಯರಾದವರು ಹೀಗೆ ಮೋಸ ಮಾಡಬಹುದಾ?
ಮದುವೆ ಯಾವಾಗ ಆಗಬೇಕೆನ್ನುವುದಕ್ಕೆ ಉತ್ತರಿಸುವುದು ಎಷ್ಟು ಕಷ್ಟವೋ, ಅಷ್ಟೇ ಕಷ್ಟ ಯಾಕೆ ಆಗಬೇನ್ನುವುದಕ್ಕೆ ಉತ್ತರಿಸುವುದು. ಮೇಲಿನ ಯಾವುದೇ ಕಾರಣಗಳೂ ಸಕಾರಣಗಳಲ್ಲ ಹಾಗಂತ, ಅಕಾರಣಗಳೂ ಅಲ್ಲವಲ್ಲ. ದೇಹದ ಹಸಿವು ನೀಗಿಸಿಕೊಳ್ಳುವುದಕ್ಕೆ ಮದುವೆ ಆಗುವುದು ಒಂದು ಕಾರಣ ಆದರೂ, ಅದೊಂದೇ ಕಾರಣವಾಗಬಾರದಲ್ಲ. ಯಾಕೆಂದರೆ, ಅದೊಂದೇ ಕಾರಣಕ್ಕಾದರೆ ಮದುವೆಯೇ ಆಗಬೇಕೆಂಬ ಅನಿವಾರ್ಯತೆ ಇಲ್ಲವಲ್ಲ. ಜಾಸ್ತಿ ಧೈರ್ಯ, ಕಮ್ಮಿ ನಾಚಿಕೆ, ಮತ್ತು ಸಿಕ್ಕಿ ಬಿದ್ದಾಗ ತಪ್ಪಿಸಿಕೊಳ್ಳುವ ಜಾಣತನಗಳಿದ್ದರೆ, ‘ಆ’ ಕೆಲಸವನ್ನು ಮದುವೆ ಇಲ್ಲದೆಯೇ ಪೂರೈಸಿಕೊಳ್ಳಬಹುದು.
ಹಾಗಿದ್ದರೆ ಮತ್ಯಾಕೆ ಮದುವೆಯಾಗಬೇಕು? ನಮಗೆ ಭಾವನೆಗಳನ್ನು ಹಂಚಿಕೊಳ್ಳಲು, ಒಬ್ಬ ಸಂಗಾತಿ ಬೇಕು. ಅದೇ ಸಂಗಾತಿ, ನಮಗೆ moral support system ನಂತೆಯೂ ಕೆಲಸ ಮಾಡುತ್ತಾಳೆ/ನೆ. ಡಿಸಿಷನ್ ಮೇಕಿಂಗ್ ನಲ್ಲಿ ನೆರವಾಗುವ, ತಪ್ಪಿದ್ದಾಗ ತಿದ್ದುವ, ಆರ್ಥಿಕವಾಗಿ ಬೆಂಬಲ ನೀಡುವ ಕೆಲಸ ಸಂಗಾತಿಯದು. ಅಪ್ಪ- ಅಮ್ಮ ಎಷ್ಟು ದಿನ ಅಂತ ಇನ್ನೂ ನಮಗೆ ದಾರಿ ತೋರಿಸುತ್ತಾ ಕೂಡಲು ಸಾಧ್ಯ? ಅವರಿಗೇನು ನಮ್ಮನ್ನು ಮಕ್ಕಳನ್ನಾಗಿ ಪಡೆದಿರುವುದು ಕಾಲಾ-ಪಾನಿ ಸಜಾ ಅಲ್ಲವಲ್ಲ. ಇದಲ್ಲದೆ ಸೊ ಕಾಲ್ಡ್ ವಂಶದ ಕುಡಿಯನ್ನು ದಯಪಾಲಿಸುವ ಮಹತ್ತರ ಜವಾಬ್ದಾರಿಯೂ ಸಂಗಾತಿಯ ಮೇಲಿರುತ್ತದೆ.
‘ಯಾರನ್ನು ಮದುವೆಯಾಗಬೇಕು?’ ಅಂತ ಯಾರನ್ನಾದರೂ ಕೇಳಿದರೆ ನಮಗಿಂತ ದಡ್ಡ ಬೇರೊಬ್ಬನಿಲ್ಲ. ಯಾವ/ಎಂತಹ ಹುಡುಗಿಯನ್ನು ಮದುವೆಯಾಗಬೇಕು, ಯಾವ ಸಿನಿಮಾ ನೋಡಬೇಕು, ಯಾವ ತಿಂಡಿ ತಿನ್ನಬೇಕು, ಯಾವ ಊರಿಗೆ ಪ್ರವಾಸ ಹೋಗಬೇಕು, ಕಲಿಯಲು ಯಾವ ಕೋರ್ಸ್ ಆರಿಸಿಕೊಂಡರೆ ಒಳ್ಳೆಯದು ಇವೆಲ್ಲ ಒಂದೇ ವರ್ಗಕ್ಕೆ ಸೇರುವ ಪ್ರಶ್ನೆಗಳು. ಇವುಗಳಿಗೆ ಸಿಗುವ ಉತ್ತರ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತೆ.
ಉದಾಹರಣೆಗೆ, ಯಾವ ಪುಸ್ತಕ ಓದಬೇಕು ಅಂತ ಕೇಳಿದರೆ, ಲಕ್ಷಾನುಗಟ್ಟಲೆ ಇರುವ ಪುಸ್ತಕಗಳಲ್ಲಿ ಯಾವುದು ಓದಬೇಕೆಂದು ಹೇಳಲು ಸಾಧ್ಯ? ನಾಟಕ, ಕವಿತೆ, ಕಥೆ, ಮಕ್ಕಳ ಪುಸ್ತಕ, ಸಿನೆಮಾಗೆ ಸಂಬಂಧಿಸಿದ ಪುಸ್ತಕ, ಅಡುಗೆ ಬಗ್ಗೆ ಗುಂಡಿನ ಬಗ್ಗೆ, ಗಂಡಿನ ಬಗ್ಗೆ, ಹೀಗೆ ಹಲವಾರು ಪುಸ್ತಕಗಳಿವೆ. ಕಥೆಯೊಂದಕ್ಕೆ ಸಂಬಂಧಿಸಿದಂತೆಯೇ ಅದರಲ್ಲಿ ನೀಳ್ಗತೆ, ಸಣ್ಣ ಕಥೆ, ಅತೀಸಣ್ಣ ಕಥೆ,…. ಎಂಬ ಹತ್ತು ಹಲವಾರು ವಿಧಗಳಿವೆ. ಪರಿಸ್ಥಿತಿ ಹೀಗಿರುವಾಗ ನಮಗೆ suitable ಆಗಿರುವ ಪುಸ್ತಕ ಯಾವುದು ಅಂತ ಬೇರೆಯವರು ಹೇಳಲು ಹೇಗೆ ಸಾಧ್ಯ? ಅಬ್ಬಬ್ಬಾ ಅಂದರೆ, ನಾಟಕದಲ್ಲಿ ಇಂತಿಂಥವರ ಪುಸ್ತಕ, ಕಥೆಗಳಲ್ಲಿ ಇವರ ಪುಸ್ತಕ ಓದು ಅಂತ ಹೇಳಬಹುದಾದರೂ, ಅದು ಹೇಳಿದವರ ಅಭಿಪ್ರಾಯವೇ ಹೊರತು general opinion ಆಗಲು ಸಾಧ್ಯವಿಲ್ಲ.
ಅದೇ ರೀತಿ,ಯಾವ ತಿಂಡಿ ತಿನ್ನಬೇಕೆಂದು ಅವರನ್ನು ಕೇಳಿದರೆ, ಅವರಿಗೆ ನಿಮ್ಮ taste ಬಗ್ಗೆ ಎಷ್ಟು ಗೊತ್ತು? ಅವರಿಗೆ ಚಿಕನ್ ಇಷ್ಟವಿರಬಹುದು, ನೀವು ಸಂಪೂರ್ಣ ಶಾಖಾಹಾರಿಯಾಗಿರಬಹುದು. ನೀವೇ ಯೋಚನೆ ಮಾಡಿ, ನಿಮಗೆ ಎಷ್ಟೇ ಇಷ್ಟವಿದ್ದರೂ ಪಾವ್ ಭಾಜಿ ಸಾಯಂಕಾಲಕ್ಕೇ ಬೇಕಿರಬಹುದು, ಬೆಳಿಗ್ಗೆಯಲ್ಲಿ ಆದರೆ ಕಷ್ಟ. ಇಡ್ಲಿ- ದೋಸೆ ಊಟದಲ್ಲಿ ಬೇಡ. ಕೆಲವೊಬ್ಬರಿಗೆ ಬೆಳಿಗ್ಗೆ ತಿಂಡಿಯಲ್ಲಿ ಅನ್ನ ಇಷ್ಟ ಇನ್ನು ಕೆಲವೊಬ್ಬರಿಗೆ ಕಷ್ಟ. ಹೀಗೆ, ಎಲ್ಲರಿಗೂ ತಮ್ಮದೇ ಆದ ಇಷ್ಟ-ಕಷ್ಟಗಳಿವೆ.
ನಿಮಗೆ ಬೇಕಾದ ಹುಡುಗಿಯನ್ನು ಆದಷ್ಟೂ(?) ನೀವೇ ಆರಿಸಿದರೆ ಉತ್ತಮ, ಯಾರಿಗೆ? ನಿಮಗೂ, ಹುಡುಗಿಗೂ ಹಾಗೂ ನಿಮ್ಮಿಬ್ಬರ ಮನೆಯವರಿಗೂ. ಅದರರ್ಥ ಅವಳು ನಿಮಗಷ್ಟೇ ಇಷ್ಟವಾದರೆ ಸಾಕು ಅಂತಲ್ಲ. ನಿಮ್ಮ ಮನೆಯಲ್ಲಿಯೂ ಇಷ್ಟವಾಗ ಬೇಕು. ಇದಕ್ಕೆ arranged ಅಥವಾ love marriage ಅನ್ನೋ ಭೇದವಿಲ್ಲ. ಒಂದಲ್ಲಾ ಒಂದು ದಿವ್ಸ ಹಳ್ಳಕ್ಕೆ ಬೀಳಲೇ ಬೇಕಾಗಿರುವುದರಿಂದ ಮತ್ತು ಮದುವೆಗೆ ಸರಿಯಾದ ವಯಸ್ಸು ಅಂತೇನೂ ಇಲ್ಲವಾದ್ದರಿಂದ ನಿಮ್ಮ ವಯಸ್ಸಿಗೆ ಮತ್ತು ಮನಸ್ಸಿಗೆ ಸರಿ ಎನ್ನಿಸುವ ಹುಡುಗಿಯನ್ನು ಹುಡುಕಿ ಮದುವೆಯಾದಿರೋ, ಬಚಾವ್. ಇಲ್ಲವಾದರೆ, ಯಾರ್ಯಾರೋ ಬಂದು ತಮಗೆ ಸರಿ ಅನ್ನಿಸುವ ಹುಡುಗಿಯನ್ನು ತಂದು ಗಂಟು ಹಾಕುವುದರಲ್ಲಿ ಸಂದೇಹವೇ ಇಲ್ಲ.
ವಿ.ಸೂ. ಇಲ್ಲಿ ಸರಕಾರದವರು ನಿಗದಿಪಡಿಸಿದ ವಯಸ್ಸನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು, ಜೈಲಿಗೆ ಹೋಗದ ಹಾಗೆ ಮದುವೆಯಾಗುವ ಸಂಪೂರ್ಣ ಜವಾಬ್ದಾರಿ ನಿಮಗೇ ಬಿಟ್ಟಿದ್ದು!





ಒಳ್ಳೆಯ ಲೆಖನ ಸ೦ತೊಶ್. ನಿಮ್ಮ ಬರವಣಿಗೆ ಮು೦ದೆ ಸಾಗಲಿ.
ಪ್ರಮೊದ್ ಹಾವನೂರ್
ಧನ್ಯವಾದಗಳು.
Abbooo sooo deep le, goodarth jasti ada, it’s nature’s prabhav which made and make us to change and makes us to act acoordingly, santy absolutely brilliantly delivered and represented your thoughts on paper, it’s difficult task. But you simply……………….
Best of luck, nammantaha pamarannu uddaharisalu avatarasi bandanthaha mahapurusha
ಲೇಖನವನ್ನು ಮೆಚ್ಚಿ, ನಿನ್ನ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಸುತ್ತಮುತ್ತಲಿನ ಪರಿಸರ ಪ್ರಭಾವ ಬೇರುವುದು ನಿಜವಾದರೂ, ಮದುವೆ ವಿಷಯದಲ್ಲಿ ಸ್ವಲ್ಪ ಮುತುವರ್ಜಿ ವಹಿಸಬೇಕು, ಅಲ್ಲವೇ?
Madavi aagukina madla madavi aagbeku anasad, madavi aadmyal ayyo eed en aatpa ansatada!
Aadru cholo points list maadi , Sanotsh. keep writing
Thank you, Susheel
Completely agree buddy!!! Nice one!!!
Thank you.