ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲದರಲ್ಲೂ ಅವಳು ಲೇಟು, ಯಾವಾಗಲೂ..

ಚಂದ್ರಪ್ರಭ

ಅವರೆಲ್ಲ ಹೇಳುತ್ತಾರೆ
ಎಲ್ಲದರಲ್ಲೂ ಅವಳು ಲೇಟು
ಯಾವಾಗಲೂ

ಅವಲೋಕಿಸುತ್ತಾಳೆ ಆಕೆ
ಮೂವ್ವತ್ತು ವಸಂತಗಳಷ್ಟು ಹಿಂದೆ
ಹುಡುಕಲು ಯತ್ನಿಸುತ್ತಾಳೆ
ಯಾರೂ ಒಮ್ಮೆ ತಿರುಗಿ ನೋಡುವಂತಿದ್ದ
ರೂಪವತಿಯ ಕಣ್ಣ ಕನಸುಗಳನ್ನು

ಮ್ಯಾಟ್ರಿಕ್ ಆದೊಡನೆ
ದಾಂಪತ್ಯ ಅಪ್ಪಿಕೊಂಡವಳ ಕಂಗಳಲಿ
ಕಾಣುತ್ತದೆ ಕನಸುಗಳ ಕಲಸುಮೇಲೋಗರ

ಅವಳಿಗೆ ಮನೆಯವರ ಬೆಂಬಲ ಇತ್ತಲ್ಲವೇ?                                                                                                          ನೌಕರಿಯೊಂದು ಮನೆ ಬಾಗಿಲ ತಟ್ಟುವಾಗ
ಕಂಕುಳಲ್ಲೊಂದು ಮಗುವೂ ಇತ್ತು…

ಅವಳಿಗೆ ಅಭ್ಯಾಸವಾಗಿ ಹೋಗಿತ್ತಲ್ಲ ಓಟ
ಹೆಗಲ ಮೇಲೆ ಮಗುವಿರಿಸಿಕೊಂಡು
ಆಕೆ ಪಾಠ ಮಾಡಿದಳು ಆಟ ಆಡಿಸಿದಳು
ನಿರೂಪಕಿ ಸಂಯೋಜಕಿ.. ಎಲ್ಲ ಆದಳು

ಮಗುವಿಗೊಂದು ಮಗು ಜೊತೆಗೂಡುವಾಗ
ಕಳಕೊಂಡಳಾಕೆ ಒಂದೆರಡನ್ನು
ಆಗ
ಸಂತೈಸುವ ಪುಸ್ತಕಗಳಿಗೆ ತೆರಳಿ ಬೀಗಿದಳು
ಇನ್ನೊಂದು ಮತ್ತೊಂದು ಪದವಿ ಅರ್ಜಿಸಿ

ಸಂತೈಸಿದಳಾಕೆ ಆಗಾಗ
ತನ್ನತ್ತ ನೋಟ ಹರಿಸಿದ ಪುಸ್ತಕ ಪೆನ್ನು
ಕುಂಚ ಬಣ್ಣಗಳನ್ನೂ
ಎದೆಯ ಒರತೆ ಧಾರೆಗಟ್ಟುತ್ತಲೇ ಹೋಯ್ತು

ಅವಳಿಗೀಗ ಕೊಂಚ ಬಿಡುವಾಗಿದೆ
ತೆರೆದುಕೊಳ್ಳುತ್ತಾಳೆ ಆಗಾಗ ಪುಸ್ತಕಗಳಿಗೆ
ಕ್ವಚಿತ್ತಾಗಿ ಲೇಖನಿಗೂ
ಕುಂಚ ಬಣ್ಣಗಳ ಸರದಿಯಿನ್ನೂ ದೂರ

ನಿಲುಕುತ್ತದೆ ಹೊಸ್ತಿಲಾಚೆ ಚಾಚಿಕೊಂಡ
ಸಂಜೆ ಸೂರ್ಯನ ಹೊಂಬಣ್ಣ
ಕನವರಿಸುತ್ತದೆ ಎದೆ ‘ಕೆಂಪು ಕವಿದು
ಕಪ್ಪು ಚಿಗುರೊಡೆಯಲು ಸಮಯವಿನ್ನೂ ಇದೆ.

‍ಲೇಖಕರು avadhi

30 September, 2019

1 Comment

  1. Chandraprabha

    Thank you Avadhi..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading