ಎಲೆಯುದುರುವ ಸದ್ದು ..
– ಡಾ ಶಿವಾನಂದ ಕುಬಸದ
ಎಲೆಯುದುರುವ ಸದ್ದು
ಎದೆ ನಡುಗಿಸುತ್ತಿದೆಯಲ್ಲ
ಎಲೆಬಿಚ್ಚಿ ಬೀಳುವ ಶಬ್ದ
ಇಷ್ಟೊಂದು ಭಯಂಕರವೇ..?
ಇನ್ನೂ ಹಸಿರಾಗಿದೆ ನೆನೆಪು
ಚಿಗುರಿ ಮೊಳೆತದ್ದು ಚೆಂದಗೆ ಬೆಳೆದದ್ದು
ಪಂಚಮದ ಕೋಗಿಲೆಗೆ ಮರೆ ಒದಗಿಸಿದ್ದು
ನವಿರಾದ ಮಾರುತಕೆ ಮನಸು ನೀಡಿದ್ದು
ಒಯ್ಯಾರದಿ ತೊನೆದು ಜೋಕಾಲಿಯಾಡಿದ್ದು

ಇರುವೆಗಳು ಮೈಯೆಲ್ಲಾ ಹರಿದಾಡಿದ ಕಚಗುಳಿ
ಬದಿಯ ಎಲೆಯೆಡೆಗೆ ನೋಡಿ ಮೋಹಗೊಂಡು
ಮೆಲ್ಲಗೆ ನೇವರಿಸಿ ಪಡೆದ ಸುಖದ ಅಮಲು
ಸೂರ್ಯ ಶಾಖಕೆ ಒಡ್ಡಿಕೊಂಡು ಹೂವು ಕಾಯಿ
ಹಣ್ಣು ಬೀಜಕೆ ಮೂಲಾಧಾರವಾದದ್ದು ಎಂಥ
ಸುಖವಿತ್ತಾಗ ಜಗದ ಜೀವನಚಕ್ರ ನನ್ನಿಂದಲೇ
ಬೇರು ಸಡಿಲಗೊಂಡಿದೆಯಂತೆ ಯಾರೋ
ಅಂದ ಹಾಗೆ ಎಲ್ಲೋ ಕೇಳಿದ ಹಾಗೆ
ಕನಸಿರಬೇಕು ….
ಕಾಂಡ ನರಳುತ್ತಿದೆಯೇ ನೀರಿಲ್ಲದೆ
ಬದಿಯಲ್ಲಿನ ಎಲೆ ಕಾಣುತ್ತಿಲ್ಲ
ಯಾವಾಗ ಉದುರಿತೋ ಗೊತ್ತಾಗಲಿಲ್ಲ..
ಇಷ್ಟೇನಾ ಜೀವನ …?
ಧಿಗ್ಗನೆದ್ದು ನಿಂತು ಅಂದುಕೊಳ್ಳುತ್ತಿರುವಾಗಲೇ
ಕಣ್ಣು ಮಂಜು ಕಿವಿ ಕೇಳದು ಎಲ್ಲ ಮಸುಕು
ಯಾರೋ ಕಾಲು ಅಪ್ಪಿಕೊಂಡಂತೆ
ಕೆಳಗೆ ದಿಟ್ಟಿಸಿದರೆ “ತಾತಾ..”
ಎಂದು ತೊದಲುತ್ತ ನುಡಿಯುತ್ತಿರುವ
ಮೊಮ್ಮಗ….!!






thumba chendada,arthagarbhitha kavite-smitha
ಚನ್ನಾಗಿದೆ.
nice..very very nice..