ದೀಪಗಳೆರಡು
ಸಂದೀಪ್ ಈಶಾನ್ಯ
ರಾತ್ರಿಯಾಗುವ ಮೊದಲು
ಹದವಾಗಿ ಒಂದೂ ಕೊಂಕಿಲ್ಲದೆ
ಹರಡಿಕೊಂಡಿದ್ದ ಹಾಸಿಗೆ ದಿಂಬು ಬೆಡ್ ಶೀಟುಗಳು
ಬೆಳಕು ಚೆಲ್ಲುವ ಮೊದಲೇ
ಎರಡು ದೇಹಗಳ ನಿರಂತರ ಹೊರಳಾಟದಿಂದ
ಸುಕ್ಕುಸುಕ್ಕಾಗಿ ಹೋಗಿತ್ತು

ಅವರಿಬ್ಬರು ಒಂದೆಡೆ ಸೇರಿದ್ದರೆ
ಅವರೇ ಆರಿಸಿದ ದೀಪಗಳೆರಡು ಬಾಗಿಲ ಮುಂದೆ
ಹರಟೆಗೆ ಜಾರಿದ್ದವು
ಕುತೂಹಲ ಅನುಮಾನ ಕೋಪ
ಎಲ್ಲವೂ ತುಂಬಿಕೊಂಡಿದ್ದರೂ
ಆ ದೀಪಗಳೆರಡು ಆ ಇಬ್ಬರನ್ನೆ ದಿಟ್ಟಿಸುತ್ತಿದ್ದವು
ಅವರಿಬ್ಬರ ಮಾತುಗಳ ಕದ್ದು ಕೇಳುತ್ತಿದ್ದವು
ಅದ ಕೇಳಿ ನಾಚುತ್ತಿದ್ದವು ನಗುತ್ತಿದ್ದವು ಮೌನವಾಗುತ್ತಿದ್ದವು
ಅವಳು ಅವನ ಹೆಸರು ಕೇಳಿದಾಗ
ಅವನು ಅವಳ ಬೆಂಡೋಲೆ ಬಿಚ್ಚಿಟ್ಟಾಗ
ನೆಲದ ಮೇಲೆ ಕಳಚಿ ಬಿದ್ದ ಉಡುಪಿನ ಸದ್ದಾದಾಗ
ಆ ದೀಪಗಳಿಗೆ ಏನೊ ಅಸೂಯೆ
ಮೊದಲೇ ಕತ್ತಲು ದೀಪಗಳಿಗೂ
ಅವರ ಅನುಮತಿ ಇಲ್ಲದೆ ಬೆಳಗುವ ಹಕ್ಕಿಲ್ಲ
ಮಾತಿಲ್ಲ ಪಿಸುನುಡಿಗಳು ಇಲ್ಲಾ
ಬರೀ ಉಸಿರಿನ ಸದ್ದಷ್ಟೇ ಗಾಳಿಯಲ್ಲಿ ತೇಲುತಿತ್ತು
ಚೆಲಿಸುವ ಗಡಿಯಾರದ ಮುಳ್ಳುಗಳ
ತಡೆಹಿಡಿದು ಕಾಲಕ್ಕೆ ಕಾಲು ಕೊಡುವ ಹಟವಾಯಿತು
ದೀಪಗಳಿಗೆ
ಕಾಲ ನಿಂತಿತೆ?
ದೀಪವೊಂದು ಹೇಳಿತು ಅಸಹನೆಯಿಂದ
ದೇಹಗಳೆರಡು ಸೇರಿತು ಅದಕ್ಕೆ ಸದ್ದಿಲ್ಲ
ಇನ್ನೊಂದು ದೀಪ ತನಗೆ ತಾನೇ
ನಗುತ್ತಲೆ ಹೇಳಿಕೊಂಡಿತು
ಸೇರಿದ್ದು ದೇಹಗಳೆರಡಲ್ಲ ಜಗದ ಜಾತಿಗಳೆರಡು
ಒಂದು ಗಂಡು ಒಂದು ಹೆಣ್ಣು





ಆತ್ಮಗಳ ಮಿಲನ ಚೆನ್ನಾಗಿದೆ.
ಚೆನ್ನಾಗಿದೆ
ಸರಳ ಸುಂದರ ಕವಿತೆ
ನನ್ನ ಕವಿತೆಯನ್ನು ಪ್ರಕಟಿಸಿದ ಅವಧಿ ಪತ್ರಿಕೆಗೆ ಮತ್ತು ಓದುಗರಿಗೆ ಧನ್ಯವಾದಗಳು …
*ದೀಪದ ದೂರು*
ಮಕಾಡೆ ಮಲಗಿಕೊಂಡವನ
ಬುಡದಿಂದ
ಬಿರಡೆ ಬಿಚ್ಚಿಕೊಂಡು
ಒಂದಷ್ಟು ತೆವಲುಗಳು
ತೆವಳುತ್ತಾ ಲ್ಯಾಂಡಾಗುತ್ತಿದ್ದವು.
ಉಗುರುಗಳಿಗೆ ಗೋರಂಟಿ
ಹಾಕಿಕೊಂಡ ಮೆತ್ತನೆಯ ಚಿರತೆಯೊಂದು
ಬೆನ್ನ ಪಾಟಿಯ ಮೇಲೆ
ಗೀರಿ ಗೀರಿ ರಕ್ತಸ್ರಾವ ಮಾಡಿ
ತಿರುಗಾಮುರುಗಾ ಒಂದೇ ಸಾಲನ್ನು
ತಿದ್ದುತ್ತಿತ್ತು.
ಬರಗೆಟ್ಟ ದರವೇಸಿ
ಅನಕ್ಷರಸ್ಥ ಅಕ್ಷಿಗಳು
ಬಾಯಿ ಬಿಟ್ಟುಕೊಂಡು
ಹೊಸ ಭಾಷೆಯೊಂದನ್ನು
ಕಲಿಯಲು ಅರ್ಜಿ ಹಿಡಿದು ನಿಂತು
ವಲಸೆಬಂದ ಪಕ್ಷಿಗಳಂತೆ
ಪಟ ಪಟ ರೆಕ್ಕೆ ಬಡಿಯುತ್ತಿದ್ದವು.
ದಿನನಿತ್ಯದ ಲೆಕ್ಕಗಳನ್ನು ಬರೆದು
ಬೇಸತ್ತು ಬೋರುಹೊಡೆಸುಕೊಂಡಿದ್ದ
ಬೆರಳುಗಳೆಲ್ಲವೂ ಗುಪ್ತಚರ ದಳದ
ತನಿಖಾಧಿಕಾರಿಗಳಂತೆ ತದೇಕಚಿತ್ತದಿಂದ
ತಡಕಾಡುತ್ತಿದ್ದವು.
ನಾಲಿಗೆಗಳಂತು
ನಾಗರಹಾವುಗಳಿಗೂ ಸೆಡ್ಡು
ಹೊಡೆಯುವಂತೆ ಸುರುಳಿ ಸುತ್ತಿ
ಸಮೂಹಗಾನದ ಹಾಡುಗಾರಂತೆ
ಮೇಳೈಸಿಕೊಂಡು ಪೋಲಿಗೀತೆಗಳನ್ನು
ಸ್ತುತಿಸುತ್ತಿದ್ದವು.
ಕಾಲಿನ ಬೆರಳುಗಳೆಲ್ಲವೂ
ಪ್ರೈಮರೀ ಶಾಲೆಯ ಪೋರರಂತೆ
ನುಣುಪಾದ ಕಾಲಿನ ಮೇಲೆ
ಜಾರೋ ಬಂಡಿಯಾಟ ಆಡುವದರಲ್ಲಿ
ತಲ್ಲೀನವಾಗಿದ್ದವು.
ಮುಂದೇನಾಗಬಹುದು
ಅಂತ ನಾನೂ ಕೂಡ ಎಣ್ಣೆ
ಕುಡಿದು ಮತ್ತಿನಿಂದ
ಪ್ರಖರವಾಗಿ ನೋಡುತ್ತಿರಲು
ಮಾನಕ್ಕಂಜಿದ ಅವಳು ಬಂದು
ನನ್ನ ಉಫ್ ಅಂತ ಆರಿಸಿಬಿಟ್ಟಳು.
ನನ್ನ ಉಪಸ್ಥಿತಿಯಲ್ಲಿ
ಉಪಹಾರ ಸೇವಿಸಿಕೊಂಡ
ಆ ಹಸಿದ ಉದರಗಳು
ರಸಗವಳ ತಿಂದು ತೇಗಿ
ಹೊಟ್ಟೆ ತುಂಬಿಸಿಕೊಳ್ಳುವ
ದೃಶ್ಯವನ್ನು ನನಗೆ ನೋಡುವ
ಅವಕಾಶ ದಕ್ಕದ್ದಿದ್ದಕ್ಕೆ
ನನಗೆ ಅವರಿಬ್ಬರ ಮೇಲೂ
ನಖಶಿಕಾಂತ ಕೋಪವಿದೆ.
-ಮಹೀ